ಆರು ವರ್ಷಗಳ ಹಿಂದೆ ಭಾರತೀಯರಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದ ಪ್ರಧಾನಿ ಮೋದಿಯವರ ಭರವಸೆಯ ಅಚ್ಛೇದಿನಗಳು ಈಗ ಮತ್ತೆ ಚರ್ಚೆಗೆ ಬಂದಿವೆ.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರಗಳು ಹಿಂದೆಂದೂ ಕಂಡುಕೇಳರಿಯದ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮತಬ್ಯಾಂಕ್ ಮಧ್ಯಮವರ್ಗಕ್ಕೆ ಬೆಲೆ ಏರಿಕೆಯ ಬಿಸಿ ತಾಗಿದೆ. ಹಾಗಾಗಿ ಸಜಜವಾಗೇ ತಾವು ಮೊದಲ ಬಾರಿ ಮೋದಿಯವರನ್ನು ತಮ್ಮ ಎಲ್ಲಾ ಸಂಕಷ್ಟ ದೂರ ಮಾಡುವ, ಆ ಮೂಲಕ ನಿಜವಾಗಿಯೂ ಅಚ್ಛೇದಿನ ಎಂಬ ಸ್ವರ್ಗವನ್ನೇ ಧರೆಗಿಳಿಸುವ ಮಾಂತ್ರಿಕ ಎಂದುಕೊಂಡು ಮತ ಹಾಕಿದ ದಿನಗಳನ್ನು ನೆನೆದು ಈಗ ಪರಿತಪಿಸುತ್ತಿದ್ದಾರೆ.
ಒಂಭತ್ತು ವರ್ಷಗಳ ಹಿಂದೆ; 2012ರ ಮೇನಲ್ಲಿ ದೇಶ ಮೊಟ್ಟಮೊದಲ ಬಾರಿ ದುಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಂಡಿತ್ತು. ಆಗ ಲೀಟರ್ ಪೆಟ್ರೋಲ್ ಬೆಲೆ ಒಂದೇ ಬಾರಿಗೆ 7.54 ರೂ. ಏರಿಕೆಯೊಂದಿಗೆ ಬರೋಬ್ಬರಿ 73.18 ರೂ.ಗೆ ಏರಿತ್ತು. ಕಚ್ಛಾ ತೈಲ್ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ ಶೇ.14.5ರಷ್ಟು ಏರಿಕೆಯಾಗಿದ್ದು ಮತ್ತು ಅದೇ ಹೊತ್ತಿಗೆ ದೇಶದ ರೂಪಾಯಿ ಮೌಲ್ಯ ಶೇ.3.2ರಷ್ಟು ಅಪಮೌಲ್ಯಗೊಂಡಿದ್ದು ಈ ದಿಢೀರ್ ಬೆಲೆ ಏರಿಕೆಗೆ ಕಾರಣವೆಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿತ್ತು.
ಅಂದಿನ ಸರ್ಕಾರದ ಆ ಸಮರ್ಥನೆಗೆ ಪ್ರತಿಯಾಗಿ, ಅಂದಿನ ಗುಜರಾತ್ ಮುಖ್ಯಮಂತ್ರಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, “ಪೆಟ್ರೋಲ್ ಬೆಲೆಯಲ್ಲಿ ಆಗಿರುವ ಈ ದಿಢೀರ್ ಏರಿಕೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯದ ದೊಡ್ಡ ನಿದರ್ಶನ. ಈ ಬೆಲೆ ಏರಿಕೆ ಗುಜರಾತಿನ ಮೇಲೆ ನೂರಾರು ಕೋಟಿ ರೂಪಾಯಿ ಹೊರೆ ಹಾಕಲಿದೆ” ಎಂದು ಟೀಕಿಸಿದ್ದರು. ಅದಾದ ಒಂದೇ ವಾರದಲ್ಲಿ ಇಂಧನ ಬೆಲೆ ಏರಿಕೆ ವಿರೋಧಿಸಿ ಎಡಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಬಿಜೆಪಿಯೂ ಕೈಜೋಡಿಸಿತ್ತು. ಅದಾಗಿ ಕೆಲವೇ ತಿಂಗಳಲ್ಲಿ ಮತ್ತೊಮ್ಮೆ ಬೆಲೆ ಏರಿಕೆಯಾದಾಗ ಸಂಸತ್ತಿನಲ್ಲಿ ದೊಡ್ಡ ರಾದ್ಧಾಂತವನ್ನೇ ಮಾಡಿದ್ದ ಬಿಜೆಪಿ, ಕಳೆದ ಒಂಭತ್ತು ವರ್ಷಗಳ ಯುಪಿಎ ದುರಾಡಳಿತ ಮತ್ತು ಅನಾಹುತಕಾರಿ ಆರ್ಥಿಕ ನೀತಿಗಳ ಫಲ ಈ ಬೆಲೆ ಏರಿಕೆ ಎಂದು ಗುಡುಗಿತ್ತು.
ಬಳಿಕ 2014ರ ಲೋಕಸಭಾ ಚುನಾವಣೆಯಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರದ ಅದೇ ವೈಫಲ್ಯಗಳನ್ನೇ ಮುಂದಿಟ್ಟುಕೊಂಡು, ಬೆಲೆ ಏರಿಕೆ, ಭ್ರಷ್ಟಾಚಾರ, ಕಪ್ಪುಹಣ ಮುಕ್ತ ಭಾರತವನ್ನು, ಅಚ್ಛೇದಿನವನ್ನು ತರುವ ಭರವಸೆ ನೀಡಿ ನರೇಂದ್ರ ಮೋದಿಯವರು ಮತ ಯಾಚಿಸಿದ್ದರು. ಭರ್ಜರಿ ಬಹುಮತದೊಂದಿಗೆ ಗುಜರಾತಿನ ಮುಖ್ಯಮಂತ್ರಿ ಸ್ಥಾನದಿಂದ ದೇಶದ ಪ್ರಧಾನಿಯಾಗಿ ಬಡ್ತಿಯನ್ನೂ ಪಡೆದಿದ್ದರು. ಈಗ ಅದೆಲ್ಲಾ ರೋಚಕ ಇತಿಹಾಸ.
ಆದರೆ, ನೋಟು ರದ್ದತಿ, ಜಿಎಸ್ ಟಿಯಂತಹ ಅವಸರದ, ವಿವೇಚನಾಹೀನ ನಡೆ-ನೀತಿಗಳು ಈ ಆರು ವರ್ಷಗಳಲ್ಲಿ ದೇಶದ ಜನತೆಗೆ ಕರುಣಿಸಿರುವ ಅಚ್ಛೇದಿನಗಳು ಎಂಥವು ಎಂಬುದು ಕನಿಷ್ಟ ವ್ಯಾವಹಾರಿಕ ಪ್ರಜ್ಞೆ ಇರುವವರಿಗೆಲ್ಲಾ ಗೊತ್ತೇ ಇದೆ. ಇದು ಸದ್ಯ, ಮಧ್ಯಮವರ್ಗದ ಪಾಲಿಗೆ ಹೇಳಲೂ ಆಗದ, ಅನುಭವಿಸಲೂ ಆಗದ ವರ್ತಮಾನ. ಬಳಿಕ ಕಳೆದ ವರ್ಷ ಇಡೀ ಜಗತ್ತನ್ನೇ ಮಕಾಡೆ ಮಲಗಿಸಿದ ಕರೋನಾ ಸಂಕಷ್ಟ ಭಾರತವನ್ನೂ ಕಾಡಿ ಕಂಗಾಲಾಗಿಸಿದೆ. ಅದರಲ್ಲೂ ಜಗತ್ತಿನ ಇತರೆ ರಾಷ್ಟ್ರಗಳಿಗಿಂತ ಭಾರತದಲ್ಲಿ ಕರೋನಾ ಹೆಚ್ಚಿನ ಸಾವು-ನೋವು, ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು ಮತ್ತು ಆಳುವ ಸರ್ಕಾರದ ತಪ್ಪು ನಡೆಗಳು ಬಹುತೇಕ ಇಂತಹ ಅನಾಹುತಗಳಿಗೆ ಕಾರಣ ಎಂಬುದು ಕೂಡ ಗೊತ್ತಿರುವ ಸಂಗತಿಯೇ.
ಹೀಗೆ ‘ಅಚ್ಛೇದಿನ’ಗಳ ಹೆಸರಿನ ‘ಬುರೇದಿನ’ಗಳ ಸರಣಿ ಸಂಕಷ್ಟಗಳ ಸಾಲಿಗೆ ಈಗ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆ ಹೊಸ ಸೇರ್ಪಡೆಯಾಗಿದೆ.
2014ರಲ್ಲಿ ಅಚ್ಛೇದಿನದ ಭರವಸೆ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದು ಕೇವಲ ಮೂರೂವರೆ ವರ್ಷದಲ್ಲಿ; 2018ರ ಹೊತ್ತಿಗೆ ಪೆಟ್ರೋಲ್ ಬೆಲೆ ಲೀಟರಿಗೆ 84 ರೂಪಾಯಿಗೆ ಏರಿಕೆಯಾಗಿ ಹೊಸ ಇತಿಹಾಸ ಬರೆಯಿತು. ಮೋದಿಯವರು ಮನಮೋಹನ ಸಿಂಗ್ ಅವರ ದುರಾಡಳಿತವನ್ನು ಶಪಿಸಿ ಪೆಟ್ರೋಲ್ ಬೆಲೆ ಏರಿಕೆ ಗುಜರಾತಿಗೆ ಹಾನಿ ಮಾಡುತ್ತಿದೆ ಎಂದು ಟ್ವೀಟ್ ಮಾಡಿದಾಗ, ಬ್ಯಾರೆಲ್ ಗೆ 113 ಡಾಲರ್ ಇದ್ದ ಕಚ್ಛಾ ತೈಲದ ಬೆಲೆ, 2018ರಲ್ಲಿ ಮೋದಿಯವರ ಆಡಳಿತದಲ್ಲಿ ಪೆಟ್ರೋಲ್ ಬೆಲೆ ಹೊಸ ದಾಖಲೆ ಬರೆದಾಗ ಕೇವಲ 65 ಡಾಲರ್ ಇತ್ತು!
ಆ ಬಳಿಕ ಕರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಉದ್ಯಮ ಮತ್ತು ಸಾರಿಗೆ ಚಟುವಟಿಕೆಗಳು ಬಹುತೇಕ ಸ್ಥಗಿತವಾದ ಹಿನ್ನೆಲೆಯಲ್ಲಿ ಕಚ್ಛಾ ತೈಲ ಬೆಲೆ ಉತ್ಪಾದನಾ ವೆಚ್ಛಕ್ಕಿಂತಲೂ ಕಡಿಮೆ ಮಟ್ಟಕ್ಕೆ ಕುಸಿದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸೇರಿದಂತೆ ಹಲವು ತೈಲ ರಾಷ್ಟ್ರಗಳು ಉತ್ಪಾದನೆಯನ್ನೇ ಗಣನೀಯವಾಗಿ ಕಡಿತ ಮಾಡಿದವು. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಉತ್ಪಾದಕನಿಗೆ ಅಸಲೂ ದಕ್ಕದ ಮಟ್ಟಿಗೆ ಬೆಲೆ ಕುಸಿದರೂ ಭಾರತದಲ್ಲಿ ಮಾತ್ರ ಕಳೆದ ಮೂರ್ನಾಲ್ಕು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರ ಏರುಗತಿಯಲ್ಲೇ ಸಾಗಿದೆ.
ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 85 ರೂ. ಆಗಿದ್ದರೆ, ಮುಂಬೈನಲ್ಲಿ 91.80 ರೂ. ಬೆಂಗಳೂರಿನಲ್ಲಿ 88.07 ರೂ. ಡೀಸೆಲ್ ಬೆಲೆಯಂತೂ ಆಘಾತಕಾರಿ ಏರಿಕೆ ಕಂಡಿದ್ದು, ದೆಹಲಿಯಲ್ಲಿ ಲೀಟರಿಗೆ 75.38 ರೂ. ಆಗಿದ್ದರೆ, ಮುಂಬೈನಲ್ಲಿ 82.13 ರೂ. ಬೆಂಗಳೂರಿನಲ್ಲಿ 79.67 ರೂ. ಆಗಿದೆ. ಅಡುಗೆ ಅನಿಲ ದರ ಬರೋಬ್ಬರಿ 697 ರೂಗೆ ಏರಿಕೆಯಾಗಿದೆ. ಆದರೆ, ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಬ್ಯಾರೆಲ್ ಗೆ 55 ಡಾಲರ್ ಆಸುಪಾಸಿನಲ್ಲಿದೆ. ಅಂದರೆ; 2012ರಲ್ಲಿ ಇದ್ದ ಬೆಲೆಗಿಂತ ಅರ್ಧದಷ್ಟು ಕಡಿಮೆ ಬೆಲೆಯಲ್ಲಿ ಕಚ್ಛಾತೈಲ ಸಿಗುತ್ತಿದ್ದರೂ, ದೇಶದಲ್ಲಿ ಇಂಧನ ಬೆಲೆ ಅಂದಿಗಿಂತ ಸುಮಾರು ಶೇ.40ರಷ್ಟು ಅಧಿಕವಿದೆ!
ಇದಕ್ಕೆ ಮುಖ್ಯ ಕಾರಣ; ಜಿಎಸ್ ಟಿಯಂತಹ ‘ತೆರಿಗೆ ಕ್ರಾಂತಿ’ಯ ಘೋಷಣೆಯ ಹೊರತಾಗಿಯೂ ದೇಶದ ತೆರಿಗೆ ಆದಾಯ ಮತ್ತು ಇತರೆ ಮೂಲಗಳ ಆದಾಯ ಕುಸಿದ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಸುಲಭ ಮತ್ತು ಮಹತ್ವದ ಮಾರ್ಗವಾಗಿ ಬಿಜೆಪಿ ಸರ್ಕಾರ ಇಂಧನಗಳ ಮೇಲೆ ತೆರಿಗೆ ಮತ್ತು ಶುಲ್ಕ ಪ್ರಮಾಣವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿರುವುದು. ಅದೂ ಕರೋನಾ ಸಂಕಷ್ಟದಲ್ಲಿ ಉದ್ಯಮ, ಉತ್ಪಾದನೆ, ವ್ಯವಹಾರ, ಕೃಷಿ, ಉದ್ಯೋಗ ಸೇರಿದಂತೆ ದೇಶದ ಆರ್ಥಿಕತೆಯೇ ತಲೆಕೆಳಗಾಗಿರುವ ಹೊತ್ತಿನಲ್ಲೂ ಮೋದಿಯವರ ಸರ್ಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರೂ.13ರಿಂದ 32.98ಕ್ಕೆ ಏರಿಸಿದೆ. ಜೊತೆಗೆ ಮೌಲ್ಯವರ್ಧಿತ ತೆರಿಗೆಯೊಂದಿಗೆ ಹಾಲಿ ಹಣಕಾಸು ವರ್ಷದಲ್ಲಿ ಒಟ್ಟಾರೆ ಸರ್ಕಾರ ಬರೋಬ್ಬರಿ 1.4 ಲಕ್ಷ ಕೋಟಿ ರೂ. ಆದಾಯ ಬಾಚುವ ಲೆಕ್ಕಾಚಾರದಲ್ಲಿದೆ.
ಇಂಧನ ಬೆಲೆ ವಿಶ್ಲೇಷಣೆ ನಡೆಸುವ ಕ್ರಿಸಿಲ್ ಸಂಶೋಧನಾ ವರದಿಯ ಪ್ರಕಾರ, ದೇಶದಲ್ಲಿ ಪೆಟ್ರೋಲ್ ಮಾರಾಟ ದರದ ಶೇ.60ರಷ್ಟು ತೆರಿಗೆ ಪ್ರಮಾಣವೇ ಇದ್ದು, 2019ರಲ್ಲಿ ಆ ಪ್ರಮಾಣ ಶೇ.47ರಷ್ಟಿತ್ತು. ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲ್ ತಂದರೆ; ಈಗಿನ ಹತ್ತಾರು ತೆರಿಗೆಗಳ ಭಾರ ಕಳಚಿ ಕೇವಲ 38 ರೂ ಆಸುಪಾಸಿನಲ್ಲಿ ಲೀಟರ್ ಪೆಟ್ರೋಲ್ ದೊರೆಯಲಿದೆ. ಆದರೆ, ಅಚ್ಛೇದಿನದ ಭರವಸೆಯ ಸರ್ಕಾರ, ಹಾಗೆ ಜನರ ಹೊರೆ ತಗ್ಗಿಸಲು ಸಿದ್ಧವಿಲ್ಲ!