ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಗಜಗರ್ಭ ಕೊನೆಗೂ ಪ್ರಸವವಾಗಿದೆ. ಏಳು ಮಂದಿ ಸಚಿವರಾಗಿ ಅಧಿಕಾರಕ್ಕೇರಿದ್ದಾರೆ. ಆ ಮೂಲಕ ಈ ಹಿಂದಿನ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಬಹುತೇಕರು ಅಧಿಕಾರ ಹಿಡಿದಂತಾಗಿದೆ.
ಆದರೆ, ಮಂತ್ರಿಗಿರಿ ಪಡೆದು ಸಂಭ್ರಮಿಸುತ್ತಿರುವವರ ದುಪ್ಪಟ್ಟು ಮಂದಿ ಅವಕಾಶವಂಚಿತರಾಗಿ ಸಿಎಂ ಯಡಿಯೂರಪ್ಪ ಮತ್ತು ಅವರ ಆಪ್ತ ವಲಯದ ವಿರುದ್ಧ ಕೆಂಡಕಾರುತ್ತಿದ್ದಾರೆ. ಹಾಗಾಗಿ ನಿರೀಕ್ಷೆಯಂತೆ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಅವಕಾಶ ವಂಚಿತರ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಅಬಕಾರಿ ಸಚಿವ ನಾಗೇಶ್ ರಾಜೀನಾಮೆ ಪಡೆದುಕೊಳ್ಳಲಾಗಿದೆ.
ನಾಗೇಶ್ ಮತ್ತು ಸಚಿವ ಸ್ಥಾನವಂಚಿತ ಮುನಿರತ್ನ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಒಟ್ಟು ಎಂಟು ಖಾಲಿ ಸ್ಥಾನಗಳ ಪೈಕಿ ಏಳು ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಒಂದು ಸ್ಥಾನವನ್ನು ಖಾಲಿ ಬಿಟ್ಟುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಅಂದರೆ; ಸದ್ಯಕ್ಕೆ ಸಚಿವರಾಗಿ ಅಧಿಕಾರ ಪಡೆಯುವ ಬಹಳ ನಿರೀಕ್ಷೆಯಲ್ಲಿದ್ದ ಅರ್ಧ ಡಜನ್ ಗೂ ಅಧಿಕ ನಾಯಕರು ತೀವ್ರ ನಿರಾಶೆಗೊಂಡಿದ್ದು, ಹತಾಶೆ ಮತ್ತು ಅಸಮಾಧಾನದ ಸ್ಫೋಟಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಪೈಕಿ ಕೆಲವರು ತಾವು ಸ್ವತಃ ಸಚಿವರಾಗಿಲ್ಲ; ತಮ್ಮ ಅರ್ಹತೆ, ಹಿರಿತನಕ್ಕೆ ಸಿಎಂ ಮತ್ತು ಪಕ್ಷ ಬೆಲೆ ಕೊಟ್ಟಿಲ್ಲ ಎಂಬುದಕ್ಕಿಂತ ಬೇರೊಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂಬ ಬಗ್ಗೆಯೇ ಹೆಚ್ಚು ಆಕ್ರೋಶಗೊಂಡಿರುವಂತಿದೆ.
ಅದರಲ್ಲೂ ಸಿ ಪಿ ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡಿದ ಬಗ್ಗೆ ಹಲವು ಅತೃಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ ಮುರುಗೇಶ್ ನಿರಾಣಿಯವರಿಗೆ ಸಚಿವ ಸ್ಥಾನ ನೀಡಿದ ಬಗ್ಗೆಯೂ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ.
ಮುಖ್ಯವಾಗಿ ಈ ಎಲ್ಲಾ ಅಸಮಾಧಾನ, ಆಕ್ರೋಶದ ಮಾತುಗಳಲ್ಲಿ ಹೆಚ್ಚು ಕುತೂಹಲ ಹುಟ್ಟಿಸಿರುವುದು ಸಿಎಂ ಯಡಿಯೂರಪ್ಪ ಅವರನ್ನು ಬ್ಲ್ಯಾಕ್ ಮೇಲ್ ಮಾಡಿರುವುದು ಮತ್ತು ಸಿ ಡಿ ಯೊಂದನ್ನು ಇಟ್ಟುಕೊಂಡು ಸಚಿವ ಸ್ಥಾನ ಪಡೆದಿದ್ದಾರೆ ಎಂಬ ಗಂಭೀರ ಆರೋಪ. ಅದರಲ್ಲೂ ಬಿಜೆಪಿಯ ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಚ್ ವಿಶ್ವನಾಥ್ ಪ್ರಮುಖವಾಗಿ ಸಿಡಿ ಮತ್ತು ಬ್ಲ್ಯಾಕ್ ಮೇಲ್ ವಿಷಯವನ್ನು ಪದೇ ಪದೆ ಪ್ರಸ್ತಾಪಿಸುವ ಮೂಲಕ ಈ ಇಡೀ ಸಂಪುಟ ವಿಸ್ತರಣೆಯ ಹಿಂದೆ ರಾಜ್ಯದ ಆಡಳಿತದ ಕಾಳಜಿಯಂತೂ ಇಲ್ಲವೇ ಇಲ್ಲ; ಕನಿಷ್ಟ ಬಿಜೆಪಿಯ ಪಕ್ಷದ ಹಿತಾಸಕ್ತಿಯಾಗಲೀ, ಹೈಕಮಾಂಡ್ ಸೂಚನೆ ಪಾಲನೆಯ ಶಿಸ್ತು ಕೂಡ ಇಲ್ಲ. ಬದಲಾಗಿ ತಮ್ಮ ಸ್ವಹಿತಾಸಕ್ತಿಗಾಗಿ ಸಿಎಂ ಯಡಿಯೂರಪ್ಪ ಈ ವಿಸ್ತರಣೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. “ಸಿ ಡಿ ಇಟ್ಟುಕೊಂಡು ತಮ್ಮನ್ನು ಬ್ಲ್ಯಾಕ್ ಮಾಡುತ್ತಿದ್ದವರನ್ನು ಸಮಾಧಾನಪಡಿಸಲು, ಅವರ ಬಾಯಿ ಮುಚ್ಚಿಸಲು ಸಚಿವ ಸ್ಥಾನ ನೀಡಿದ್ದಾರೆ ಎಂಬ ಗಂಭೀರ ಆರೋಪ ಹಿರಿಯ ನಾಯಕ ಯತ್ನಾಳ್ ಅವರಿಂದ ಕೇಳಿಬಂದಿದೆ.
ಈಗ ಸಚಿವರಾಗಿರುವ ಏಳು ಮಂದಿಯ ಪೈಕಿ ಇಬ್ಬರು ಸಿಡಿ ತೋರಿಸಿ ಸಚಿವರಾಗಿದ್ದಾರೆ. ಮತ್ತೊಬ್ಬರು ಸಿಡಿಯೊಂದಿಗೆ ಭರ್ಜರಿ ಹಣವನ್ನೂ ತೋರಿಸಿ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಹಿತಾಸಕ್ತಿಗಾಗಿ ಯಡಿಯೂರಪ್ಪ ಲಿಂಗಾಯತ ಸಮುದಾಯವನ್ನು ಬಳಸಿಕೊಂಡು, ಸ್ವತಃ ಹೈಕಮಾಂಡಿಗೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅದಕ್ಕಾಗಿ ಲಿಂಗಾಯತ ಮಠಗಳಿಗೆ ಕಳೆದ ಎರಡು ತಿಂಗಳಿಂದೀಚೆಗೆ 80 ಕೋಟಿಯಷ್ಟು ಭಾರೀ ಅನುದಾನ ನೀಡಿ, ತಮ್ಮ ಪರ ದನಿ ಎತ್ತಲು ತಾಕೀತು ಮಾಡಿದ್ದಾರೆ. ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕಾಗಿ ರಾಜ್ಯದ ಲಿಂಗಾಯತ ಸಮುದಾಯದ ಘನತೆಯನ್ನೇ ಪಣಕ್ಕಿಟ್ಟಿದ್ದಾರೆ. ಆದರೆ, ಇಂತಹದ್ದಕ್ಕೆ ಕೊನೆ ಹಾಡುವ ಸಮಯ ಬಂದಿದೆ. ಸಂಕ್ರಾಂತಿಯಿಂದಲೇ ಯಡಿಯೂರಪ್ಪ ಪತನ ಆರಂಭ ಎಂದು ಯತ್ನಾಳ್ ಕಿಡಿಕಾರಿದ್ದಾರೆ. ಹಾಗೇ ಕುಟುಂಬ ರಾಜಕಾರಣದ ವಿಷಯವನ್ನೂ ಪ್ರಸ್ತಾಪಿಸಿರುವ ಯತ್ನಾಳ್, ಕುಟುಂಬ ರಾಜಕಾರಣದ ವಿರುದ್ಧ ಯಾವಾಗಲೂ ಇರುವ ಪ್ರಧಾನಿ ಮೋದಿಯವರು, ಸಿಎಂ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವನ್ನು ನಿವಾರಣೆ ಮಾಡುವ ಮೂಲಕ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣಕ್ಕೆ ತೆರೆ ಎಳೆಯಬೇಕು ಎಂದೂ ಹೇಳಿದ್ದಾರೆ.
ಹಾಗೇ, ಸಿಡಿ ಕೋಟಾ, ಸಿಡಿ ಜೊತೆ ಹಣದ ಕೋಟಾದಂತೆ ಸಚಿವ ಸ್ಥಾನ ಹಂಚಲಾಗಿದೆ. ಸಿಎಂ ಹಲವು ಹಗರಣಗಳಲ್ಲಿ ಸಿಲುಕಿದ್ದಾರೆ. ಅವರ ಅಂತಹ ಹಗರಣಗಳನ್ನೇ ಇಟ್ಟುಕೊಂಡು ಕೆಲವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ, ಈಗಾಗಲೇ ಎರಡು ಪ್ರಕರಣಗಳಲ್ಲಿ ನ್ಯಾಯಾಲಯ ದಂಡ ವಿಧಿಸಿದೆ. ಹಾಗಾಗಿ ನೈತಿಕತೆ ಇದ್ದರೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಯತ್ನಾಳ್ ನೇರ ಸವಾಲು ಹಾಕಿದ್ದಾರೆ.
ಈ ನಡುವೆ ಎಚ್ ವಿಶ್ವನಾಥ್ ಕೂಡ ಸಿಡಿ ವಿಷಯವನ್ನೇ ಮುಂದಿಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆಯ ಹಿಂದಿನ ಹಕೀಕತ್ತು ಬಯಲು ಮಾಡಿದ್ದು, ಮುಖ್ಯವಾಗಿ ಚುನಾವಣೆಯಲ್ಲಿ ಸೋತ ಸಿ ಪಿ ಯೋಗೀಶ್ವರ್ ಗೆ ಯಾವ ಆಧಾರದ ಮೇಲೆ ಸಚಿವ ಸ್ಥಾನ ನೀಡಲಾಯಿತು? ಸಿಡಿ ಕೈಯಲ್ಲಿಟ್ಟುಕೊಂಡು ಸಿಎಂಗೇ ಬ್ಲ್ಯಾಕ್ ಮೇಲ್ ಮಾಡಿ ಕೆಲವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸಂಕ್ರಾಂತಿಯ ಬಳಿಕ ಸಿಡಿ ಸಿಡಿಯಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹಾಗೇ ಚಿತ್ರದುರ್ಗದ ಹಿರಿಯ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ದಾವಣಗೆರೆಯ ಎಂ ಪಿ ರೇಣುಕಾಚಾರ್ಯ, ಕೊಳ್ಳೇಗಾಲದ ಎನ್ ಮಹೇಶ್, ಧಾರವಾಡದ ಅರವಿಂದ್ ಬೆಲ್ಲದ್ ಸೇರಿದಂತೆ ಕೆಲವು ಹಿರಿಯ ಮತ್ತು ಬಿಜೆಪಿ ಸರ್ಕಾರದ ರಚನೆಗೆ ಪ್ರಮುಖ ಪಾತ್ರ ವಹಿಸಿದ ಶಾಸಕರು ಕೂಡ ಸಂಪುಟ ವಿಸ್ತರಣೆಯಲ್ಲಿ ಸ್ಥಾನವಂಚಿತರಾಗಿದ್ದು, ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರವಿಂದ್ ಬೆಲ್ಲದ್ ಅವರಂತೂ ಪಕ್ಷನಿಷ್ಠರು ಮತ್ತು ಅರ್ಹರಿಗೆ ಅನ್ಯಾಯವಾಗಿದೆ. ಈ ವಿಷಯವನ್ನು ಹೈಕಮಾಂಡ್ ಬಳಿ ಚರ್ಚಿಸಲಾಗುವುದು ಎಂದೂ ಹೇಳಿದ್ದಾರೆ. ಯತ್ನಾಳ್ ಕೂಡ ತಮ್ಮ ಅಸಮಾಧಾನವನ್ನು ದೆಹಲಿ ನಾಯಕರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.
ಈ ನಡುವೆ, ಸಿಡಿ ವಿಷಯ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದ್ದು, ಹಾಲಿ ರಾಜ್ಯದ ಹಲವು ಅನುಭವಿ, ನಿಷ್ಠಾವಂತ ಬಿಜೆಪಿ ಮೂಲ ನಾಯಕರು, ದೆಹಲಿ ಮಟ್ಟದಲ್ಲಿ ಪ್ರಭಾವಿಗಳಿಗೂ ಅವಕಾಶ ಕೈತಪ್ಪುವಂತೆ ಮಾಡುವಲ್ಲಿ ಸಿ ಡಿ ಪ್ರಭಾವ ಕೆಲಸ ಮಾಡಿದೆ. ಹಾಗಾಗಿ ನಿಜವಾಗಿಯೂ ಸಚಿವರಾಗುವ ಅರ್ಹರಿಗೆ ಅವಕಾಶ ತಪ್ಪಿಸಿ, ಅನುಭವ, ದಕ್ಷತೆ ಮತ್ತು ಪಕ್ಷನಿಷ್ಠೆಯ ವಿಷಯದಲ್ಲಿ ಇತರೆ ಆಕಾಂಕ್ಷಿಗಳಿಗೆ ಹೋಲಿಸಿದರೆ ಹಿಂದಿರುವವರಿಗೂ ಸಚಿವಗಿರಿ, ರಾಜಕೀಯ ಕಾರ್ಯದರ್ಶಿ ಸ್ಥಾನಮಾನಗಳನ್ನು ದಯಪಾಲಿಸುವಲ್ಲಿ ಆ ಸಿ ಡಿ ಕೈವಾಡವೇ ನಿರ್ಣಾಯಕವಾಗಿದೆ. ಸಿಡಿಯ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂದರೆ; ತಮ್ಮ ನಾಯಕತ್ವವನ್ನೇ ಬದಲಾಯಿಸುವ ಲೆಕ್ಕಾಚಾರದಲ್ಲಿದ್ದ ಬಿಜೆಪಿಯ ದೆಹಲಿಯ ವರಿಷ್ಠರಿಗೆ ಲಿಂಗಾಯತ ಮೀಸಲಾತಿ ಮತ್ತು ಇತರೆ ಜಾತಿ ಬಲದ ಅಸ್ತ್ರ ಪ್ರಯೋಗಿಸಿ ಗೆದ್ದು ಬೀಗಿದ್ದ ಸಿಎಂ ಯಡಿಯೂರಪ್ಪ ಅವರನ್ನೇ ಬ್ಲ್ಯಾಕ್ ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಹಾಗೆ ನೋಡಿದರೆ ರಾಜ್ಯ ರಾಜಕಾರಣದಲ್ಲಿ ಕಳೆದ ಆರು ತಿಂಗಳಿನಿಂದ ಈ ಸಿಡಿ ಸದ್ದು ಮಾಡುತ್ತಲೇ ಇದೆ. ಈ ಹಿಂದೆ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹತ್ತಿರದ ಸಂಬಂಧಿ ಎನ್ ಆರ್ ಸಂತೋಷ್ ಆತ್ಮಹತ್ಯೆ ಯತ್ನದ ಪ್ರಕರಣದಲ್ಲಿಯೂ ಈ ಸಿಡಿ ಸಾಕಷ್ಟು ಸುದ್ದಿಯಾಗಿತ್ತು. ಹಲವು ವರ್ಷಗಳಿಂದ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿರುವ ಸಂತೋಷ್ ಮತ್ತು ಪುತ್ರ ವಿಜಯೇಂದ್ರ ನಡುವೆ ಸಿಡಿ ವಿಷಯದಲ್ಲಿ ಆದ ಸಂಘರ್ಷ ದೆಹಲಿಯ ವರಿಷ್ಠರವರೆಗೆ ತಲುಪಿತ್ತು. ಆ ಹಿನ್ನೆಲೆಯಲ್ಲೇ ಸಂತೋಷ್ ಆತ್ಮಹತ್ಯಗೆ ಯತ್ನಿಸಿದ್ದರು ಎಂಬ ವರದಿಗಳೂ ಇದ್ದವು. ಆ ಬಳಿಕ ಕೂಡ ಸಂಪುಟ ವಿಸ್ತರಣೆಯ ಹಲವು ಪ್ರಯತ್ನಗಳ ವೇಳೆ ಕೂಡ ಈ ಸಿಡಿ ವಿಷಯ ಪ್ರಸ್ತಾಪವಾಗುತ್ತಲೇ ಇತ್ತು.
ಇದೀಗ ಹಿರಿಯ ನಾಯಕರಾದ ಯತ್ನಾಳ್ ಮತ್ತು ಎಚ್ ವಿಶ್ವನಾಥ್ ಸೇರಿದಂತೆ ಹಲವು ಅತೃಪ್ತರು ಮತ್ತೆ ಸಿಡಿ ವಿಷಯವನ್ನೇ ಮುಖ್ಯವಾಗಿ ಪ್ರಸ್ತಾಪಿಸಿ ಆ ಸಿಡಿಯನ್ನೇ ಬಳಸಿಕೊಂಡು ಸಿಎಂಗೆ ಬ್ಲ್ಯಾಕ್ ಮೇಲ್ ಮಾಡಿ ಕೆಲವರು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.
ಹಾಗಾದರೆ, ರಾಜ್ಯ ರಾಜಕಾರಣದಲ್ಲಿ ಸ್ವತಃ ಸಿಎಂ ಅವರನ್ನೇ ಬ್ಲ್ಯಾಕ್ ಮೇಲ್ ಮಾಡುವ ಮಟ್ಟಿನ ಗುರುತರವಾದ ಸಂಗತಿ ಆ ಸಿಡಿಯಲ್ಲಿ ಏನಿದೆ? ಆ ಸಿಡಿ ರಾಜ್ಯ ರಾಜಕಾರಣವನ್ನೇ ನಿರ್ಧರಿಸುವ ಮಟ್ಟಿನ ಗಹನ ಸಂಗತಿಯನ್ನು ಹೊಂದಿದೆ ಎಂದಾದರೆ, ಆ ಬಗ್ಗೆ ಸರಿಯಾದ ತನಿಖೆಯಾಗಬೇಕಲ್ಲವೆ? ಇಲ್ಲದೇ ಹೋದರೆ, ಆ ವಿಷಯದಲ್ಲಿ ಈಗ ಕೇಳಿಬರುತ್ತಿರುವ ಆರೋಪಗಳ ಕುರಿತಾದರೂ ತನಿಖೆ ನಡೆಸಿ ರಾಜ್ಯದ ಜನತೆಗೆ ಸತ್ಯಾಸತ್ಯತೆ ತಿಳಿಸುವುದು ಸ್ವತಃ ಸಿಎಂ ಅವರ ಹೊಣೆಗಾರಿಕೆಯಲ್ಲವೆ?
ಮುಖ್ಯವಾಗಿ ಒಂದು ಸಿಡಿ ಸಿಎಂ ಅವರನ್ನೇ ಪ್ರಭಾವಿಸುತ್ತದೆ, ಸಚಿವ ಸಂಪುಟ ವಿಸ್ತರಣೆಯಂತಹ ಗಹನ ವಿಷಯದಲ್ಲಿ ಅವರ ನಿರ್ಧಾರಗಳನ್ನೇ ಅದು ನಿರ್ದೇಶಿಸುತ್ತೆ ಎಂದಾದರೆ, ಹಾಗೆ ಬ್ಲ್ಯಾಕ್ ಮೇಲ್ ಮಾಡಿ ರಾಜ್ಯದ ಸಚಿವರಾದವರು ನಾಳೆ ಇಡೀ ಸಿಡಿ ವಿಷಯವನ್ನೇ ಮುಂದಿಟ್ಟು ರಾಜ್ಯದ ಹಿತಾಸಕ್ತಿ ಬಲಿ ಕೊಟ್ಟು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಕೆಲಸ ಮಾಡಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಯಾವ ಖಾತರಿ? ಈ ಹಿನ್ನೆಲೆಯಲ್ಲೇ ಇದು ಗಂಭೀರ ವಿಷಯ. ಹಾಗಾಗಿ ಈ ಸಿಡಿ ವಿಷಯ ಕೇವಲ ರಾಜಕೀಯವಲ್ಲ; ಬದಲಾಗಿ ಇಡೀ ರಾಜ್ಯದ ಹಿತಾಸಕ್ತಿಯ ಗಂಭೀರ ಸಂಗತಿ. ಆದ್ದರಿಂದ ಸ್ವತಃ ಮುಖ್ಯಮಂತ್ರಿಗಳು ಈ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕಿದೆ.