ಮಾಜಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಹಿರಂಗವಾದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಟಿ ಕರೆದ ಜಾರಕಿಹೊಳಿ ಅವರು, ತಾನು ನಿರಪರಾಧಿ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.
“ಈ ಸಿ.ಡಿ. ಮಾಡಲು ರೂ. 20 ಕೋಟಿ ಖರ್ಚು ಮಾಡಲಾಗಿದೆ. ಇದು ನನ್ನ ವಿರುದ್ದ ಮಾಡಲಾದ ರಾಜಕೀಯ ಷಡ್ಯಂತ್ರ. ಯಶವಂತಪುರ ಹಾಗೂ ಹುಳಿಮಾವು ಎರಡೂ ಕಡೆಗಳಲ್ಲಿ ಷಡ್ಯಂತ್ರವನ್ನು ರೂಪಿಸಲಾಗಿದೆ. ದಯವಿಟ್ಟು ನನಗೆ ಬೆಂಬಲ ನೀಡಿ,” ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಬೆಂಗಳೂರಿನ ಒರಾಯನ್ ಮಾಲ್‌ನ 4,5ನೇ ಮಹಡಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಷಡ್ಯಂತ್ರ ರೂಪಿಸಿದ್ದಾರೆ. ಯುವತಿಗೆ 5 ಕೋಟಿ ಕೊಟ್ಟಿದ್ದಾರೆ. ವಿದೇಶದಲ್ಲಿ ಎರಡು ಫ್ಲ್ಯಾಟ್ ಕೂಡಾ ಕೊಡಲಾಗಿದೆ. ನನ್ನ ವಿರುದ್ದ ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಅಟ್ಟುತ್ತೇನೆ, ಎಂದು ಗುಡುಗಿದ್ದಾರೆ.

ಇನ್ನು ಈ ಸಿ.ಡಿ. ಯ ಹಿಂದೆ ರಾಜ್ಯದ ʼಮಹಾನ್ʼ ನಾಯಕರ ಕೈವಾಡವನ್ನು ಶಂಕಿಸಿರುವ ಜಾರಕಿಹೊಳಿ ಅವರು, ನಾನು ಸಚಿವನಾದ ಮೇಲೆ 3 ತಿಂಗಳು ಕೂಡಾ ಅಧಿಕಾರ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸವಾಲು ಹಾಕಿದ್ದ ನಾಯಕನ ಮೇಲೆ ಅನುಮಾನವಿದೆ. ಆದರೆ, ಆತನ ಹೆಸರು ಮಾತ್ರ ನಾನು ಹೇಳಲು ಇಚ್ಚಿಸುವುದಿಲ್ಲ, ಎಂದಿದ್ದಾರೆ.
ಇನ್ನು ಈ ಸಿ.ಡಿ. ಯ ಕುರಿತಾಗಿ 4 ತಿಂಗಳ ಮೊದಲೇ ನನಗೆ ತಿಳಿದಿತ್ತು. ಸಿ.ಡಿ. ಹೊರಬರುವ 26 ಗಂಟೆ ಮುಂಚಿತವಾಗಿ ಹೈಕಮಾಂಡ್‌ಗೂ ತಿಳಿದಿತ್ತು. ನಾನು ತಪ್ಪು ಮಾಡಿಲ್ಲ. ಹಾಗಾಗಿ ನಾನು ಹೆದರಲಿಲ್ಲ, ಎಂದುಅವರು ಹೇಳಿದ್ದಾರೆ.









