ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಪ್ರತಿಷ್ಟೆಯ ವಿಚಾರವಾಗಿ ನೋಡುತ್ತಿದೆ. ರಾಷ್ಟ್ರಮಟ್ಟದಲ್ಲಿ ನಿರಂತರವಾಗಿ ನರೇಂದ್ರ ಮೋದಿಯನ್ನು ಬಹಿರಂಗವಾಗಿ ಎದುರು ಹಾಕಿಕೊಳ್ಳುವ ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ ʼವಿಶ್ವಗುರುʼ ಇಮೇಜಿಗೆ ಆಗಾಗ್ಗೆ ತೊಂದರೆ ನೀಡುತ್ತಿರುತ್ತಾರೆ. ಹಾಗಾಗಿಯೇ ದೀದಿಯನ್ನು ಹೇಗಾದರೂ ಸೋಲಿಸಲು ಬಿಜೆಪಿ ತನ್ನೆಲ್ಲಾ ಕಾರ್ಯತಂತ್ರವನ್ನು ಪಶ್ಚಿಮ ಬಂಗಾಳದಲ್ಲಿ ವಿನಿಯೋಗಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಅಮಿತ್ ಶಾ, ಪದೇ ಪದೇ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ಪರಿವರ್ತನಾ ರಥ ಯಾತ್ರೆಯಲ್ಲಿರುವ ಅಮಿತ್ ಶಾ, ಮುಂಬರುವ ವಿಧಾನಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಾಸ್’ (ಅಭಿವೃದ್ಧಿ) ಮಾದರಿ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ‘ವಿನಾಶ್ ಮಾದರಿ’ ನಡುವಿನ ಸ್ಪರ್ಧೆಯಾಗಿರಲಿದೆ ಎಂದು ಕೇಂದ್ರ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ಸಂಪೂರ್ಣ ವೈಫಲ್ಯವನ್ನು ಕಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಯು ನರೇಂದ್ರ ಮೋದಿ ಸರ್ಕಾರದ ವಿಕಾಸ್ (ಅಭಿವೃದ್ಧಿ) ಮಾದರಿ ಹಾಗೂ ಮಮತಾ ಬ್ಯಾನರ್ಜಿ ಅವರ ವಿನಾಶ ಮಾದರಿಯ ನಡುವಣ ಸ್ಪರ್ಧೆಯಾಗಿರಲಿದೆ. ಮೋದಿ ಸರ್ಕಾರವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದರೆ ಮಮತಾ ಬ್ಯಾನರ್ಜಿ, ಸೋದರಳಿಯನ ಕಲ್ಯಾಣಕ್ಕಾಗಿ ಚಿಂತಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಕೇವಲ ಮುಖ್ಯಮಂತ್ರಿ, ಶಾಸಕ ಅಥವಾ ಸಚಿವರನ್ನು ಬದಲಾಯಿಸುವುದು ಮಾತ್ರವಲ್ಲ. ಒಳ ನುಸುಳುವಿಕೆ ಹಾಗೂ ಬಂಗಾಳದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ. ಬಂಗಾಳದಲ್ಲಿ ಬಿಜೆಪಿಗಾಗಿ ನೀವು ಮತ ಹಾಕಿದರೆ, ಅಕ್ರಮ ವಲಸಿಗರನ್ನು ಬಿಡಿ, ಗಡಿಯುದ್ಧಕ್ಕೂ ಒಂದು ಪಕ್ಷಿಯನ್ನು ಸಹ ರಾಜ್ಯಕ್ಕೆ ಪ್ರವೇಶಿಸಲು ಬಿಡಲಾರೆವು ಎಂದು ಹೇಳಿದ್ದಾರೆ.
ಟಿಎಂಸಿ ಗೂಂಡಾಗಳಿಂದ ಬಿಜೆಪಿ ಕಾರ್ಯಕರ್ತರು ಭಯಭೀತಿಗೊಳ್ಳಲಿದ್ದಾರೆ ಎಂದು ನೀವು ಭಾವಿಸುವೀರಾ? ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಕಾರಣವಾದ ಪ್ರತಿಯೊಬ್ಬ ಆರೋಪಿಯನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
‘ಜೈ ಶ್ರೀರಾಮ್’ ಘೋಷಣೆ ಮೊಳಗಿದಾಗ ಮಮತಾ ಬ್ಯಾನರ್ಜಿ ಕೋಪಗೊಳ್ಳುತ್ತಾರೆ. ಆದರೆ ವಿಧಾನಸಭಾ ಚುನಾವಣೆ ಮುಗಿಯುವ ಹೊತ್ತಿಗೆ ಸ್ವತಃ ಮಮತಾ ಅವರೇ ಜೈಶ್ರೀರಾಮ್ ಜಪಿಸಲು ಆರಂಭಿಸಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.