ರಾಜ್ಯದ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಗಳು ಸಂಭವಿಸಿದ ಬೆನ್ನಲ್ಲೆ ಕೊಡಗು ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಕಡಿಮೆಯಾಗಿವೆ. ಇದರ ಪರಿಣಾಮವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ಸೈಜು ಕಲ್ಲು, ಜೆಲ್ಲಿ, ಎಂ.ಸ್ಯಾಂಡ್, ಡಸ್ಟ್ ಪೂರೈಕೆಯಲ್ಲಿ ಅಭಾವ ಸೃಷ್ಟಿಯಾಗಿದೆ. ರಾಜ್ಯದ 2 ಕಡೆಗಳ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟಗೊಂಡು ಅನಾಹುತ ಸಂಭವಿಸಿದ ಹಿನ್ನೆಲೆ ಜಿಲೆಟಿನ್ ಸಾಗಾಟವನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ರಾಜ್ಯ ಸರ್ಕಾರ ಬಿಗಿ ಕ್ರಮ ವಹಿಸಿದೆ. ಅಧಿಕೃತ ಕ್ವಾರಿಗಳಲ್ಲಿ ನಿಗಾ ವಹಿಸಿದ್ದರೆ, ಅನಧಿಕೃತ ಕ್ವಾರಿ, ಕ್ರಷರ್ ಗಳ ಮೇಲೆ ಇಲಾಖೆ ಕಣ್ಣಿಟ್ಟಿದೆ. ಇದರಿಂದ ಕ್ವಾರಿ ಮತ್ತು ಕ್ರಷರ್ ಗಳಲ್ಲಿ ಕಲ್ಲು, ಜೆಲ್ಲಿಕಲ್ಲು ಸೇರಿದಂತೆ ಇನ್ನಿತರ ಕಚ್ಛಾವಸ್ತುಗಳ ಉತ್ಪಾದನೆ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಪುಟ್ಟ ಜಿಲ್ಲೆ ಕೊಡಗಿನಲ್ಲಿ 4-5 ತಿಂಗಳವರೆಗೆ ಭರ್ತಿ ಮಳೆಗಾಲ ಇದ್ದೇ ಇರುತ್ತದೆ. ಇದರಿಂದಾಗಿ ಈ ಸಮಯದಲ್ಲಿ ರಸ್ತೆ ಅಥವಾ ಇನ್ನಿತರ ಹೊರಾಂಗಣ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದು ಸಾದ್ಯವಿಲ್ಲ ಹಾಗಾಗಿ ಜಿಲ್ಲೆಯ ಗುತ್ತಿಗೆದಾರರು ಮಳೆಗಾಲ ಪ್ರಾರಂಭಗೊಳ್ಳುವ ಜೂನ್ ತಿಂಗಳ ಮೊದಲೇ ತೆಗೆದುಕೊಂಡಿರುವ ಕಾಮಗಾರಿಗಳನ್ನು ಮುಗಿಸಲು ಪ್ರಯತ್ನಿಸುತಿದ್ದಾರೆ. ಆದರೆ ಕಲ್ಲುಗಳ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಪೂರ್ಣಗೊಳ್ಳುತ್ತಿಲ್ಲ. ಜಿಲ್ಲೆಯ ಮೂರು ತಾಲೂಕಿನ 23 ಕಡೆಗಳಲ್ಲಿ ಕ್ವಾರಿಗಳಿದ್ದು, ಕೆಲವೆಡೆ ಯಾವುದೇ ಸ್ಫೋಟಕ ಬಳಸದೆ ಸ್ವತಃ ಕಾರ್ಮಿಕರೇ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದ ಕಡೆಗಳಲ್ಲಿ ಒಪ್ಪಂದದ ಆಧಾರದಲ್ಲಿ ಸಂಬಂಧಪಟ್ಟ ಇಲಾಖೆಯೊಂದಿಗೆ ಅನುಮತಿ ಪಡೆದು ಪರವಾನಿಗೆ ಹೊಂದಿದವರು ಕ್ವಾರಿಗಳಲ್ಲಿ ಸ್ಫೋಟಕ ಬಳಸಿ ಕಟ್ಟಡ ಕಟ್ಟಲು ಬೇಕಾದ ವಿವಿಧ ಗಾತ್ರದ ಕಲ್ಲುಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ. ಜೊತೆಗೆ ಜಿಲ್ಲೆಯ 10 ಕಡೆಗಳಲ್ಲಿ ಕ್ರಷರ್ ಗಳಿವೆ. ಸೋಮವಾರಪೇಟೆ ತಾಲೂಕಿನ ಸಿದ್ದಲಿಂಗಪುರದಲ್ಲಿ 2, ಯಲಕನೂರಿನಲ್ಲಿ 9, ಹೊಸಳ್ಳಿಯಲ್ಲಿ 3, ನೇರುಗಳಲೆ 2, ಚೌಡ್ಲು, ಗುಮ್ಮನಕೊಲ್ಲಿ, ಅರೆಯೂರು, ವೀರಾಜಪೇಟೆ ತಾಲೂಕಿನ ಹೆಗ್ಗಳದಲ್ಲಿ ತಲಾ 1, ಕಳತ್ಮಾಡಿನಲ್ಲಿ 2, ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಒಂದು ಕ್ವಾರಿಗಳಿವೆ . ಇವುಗಳಲ್ಲಿ ಕಟ್ಟಡಕ್ಕೆ ಬಳಸುವ ಕಲ್ಲುಗಳನ್ನು ಉತ್ಪಾದಿಸಲಾಗುತ್ತದೆ.

ಇದಲ್ಲದೆ ಸೋಮವಾರಪೇಟೆ ತಾಲೂಕಿನ ಅವರೆದಾಳು, ಶಿರಂಗಾಲದಲ್ಲಿ ಆಲಂಕಾರಿಕ ಶಿಲಾ ಗಣಿಗಾರಿಕೆ ಕೇಂದ್ರವಿದ್ದು ಇಲ್ಲಿ ಕಪ್ಪುಶಿಲೆ ದೊರಕುತ್ತವೆ. ಕ್ವಾರಿಯಲ್ಲಿ ದೊರೆತ ಕಲ್ಲುಗಳನ್ನು ಬಳಸಿಕೊಂಡು ಕ್ರಷರ್ನಲ್ಲಿ ಜೆಲ್ಲಿ, ಎಂ.ಸ್ಯಾಂಡ್ ಹಾಗೂ ಪೌಡರ್ ಆಗಿ ಪರಿವರ್ತನೆಯಾಗುವುದರಿಂದ ಇದರ ಉತ್ಪಾದನೆ ಕೂಡ ಕಡಿಮೆಯಾಗಿವೆ. ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ಗಣಿ ಗುತ್ತಿಗೆ ಪ್ರದೇಶಗಳಿಗೆ ಸ್ಫೋಟಕ ಸಿಡಿಸಲು 23 ಕ್ವಾರಿಗಳ ಪೈಕಿ 19 ಮಂದಿ ಪರವಾನಿಗೆ ಹೊಂದಿದ್ದಾರೆ. ಇದರಲ್ಲಿ ಮೂರು ಕ್ವಾರಿಗಳಲ್ಲಿ ಸ್ಫೋಟಕ ಬಳಸುವಂತಿಲ್ಲ. ಒಬ್ಬರ ಪರವಾನಿಗೆ ನವೀಕರಣಗೊಂಡಿಲ್ಲ. ಕ್ರಷರ್ಗಳು ರಾಷ್ಟಿಯ ಹೆದ್ದಾರಿಯಿಂದ ಕನಿಷ್ಟ 2 ಕಿ.ಮೀ ಅಂತರದಲ್ಲಿರಬೇಕು. ರಾಜ್ಯ ಹೆದ್ದಾರಿಯಿಂದ 1.5 ಕಿ.ಮೀ ದೂರದಲ್ಲಿರಬೇಕೆಂಬ ನಿಯಮವಿದೆ. ಇದರೊಂದಿಗೆ ಪಾಲಿಕೆ ವ್ಯಾಪ್ತಿಯಿಂದ 8 ಕಿ.ಮೀ, ಜಿಲ್ಲಾ ಕೇಂದ್ರದಿಂದ 4 ಕಿ.ಮೀ., ಹಳ್ಳಿಗಳಿಂದ 1 ಕಿ.ಮೀ ದೂರದಲ್ಲಿರಬೇಕು. ಧೂಳು ಬಾರದಂತೆ ತಡೆಗೋಡೆ ಇರಬೇಕು. ವಾಯು ಗುಣಮಟ್ಟವನ್ನು ಕ್ವಾರಿ, ಕ್ರಷರ್ಗಳಲ್ಲಿ ಕಾಯ್ದುಕೊಳ್ಳಬೇಕಾಗಿದೆ. ಸ್ಫೋಟಕ ಬಳಸುವಾಗ ಪೊಲೀಸ್ ಹಾಗೂ ಜಿಲ್ಲಾಡಳಿತದಿಂದ ಅನುಮತಿಯೊಂದಿಗೆ ಪರವಾನಿಗೆ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ನಿಯಮಾನುಸಾರವಾಗಿ ಕಾರ್ಯನಿರ್ವಹಿಸುವ ಬಗ್ಗೆ ಮೇಲ್ವಿಚಾರಣೆ ಮಾಡಬೇಕಾಗಿದೆ.

23 ಕ್ವಾರಿಗಳ ಪೈಕಿ 20 ಕಡೆಗಳಲ್ಲಿ ಸ್ಫೋಟಕ ಬಳಸಿ ಕಚ್ಛಾ ಉತ್ಪನ್ನಗಳನ್ನು ಉತ್ಪಾದನೆ ಮಾಡುವುದರಿಂದ ಸಹಜವಾಗಿ ಸೈಜ್ಗಲ್ಲು, ಜೆಲ್ಲಿ, ಎಂ.ಸ್ಯಾಂಡ್, ಪೌಡರ್ ಕೊರತೆ ಎದುರಾಗಿದೆ. ಕಾರ್ಮಿಕರು ಒಡೆದು ಉತ್ಪಾದಿಸುವ ಕಲ್ಲು ತಡವಾಗುವುದರಿಂದ ಕೂಡ ಅಭಾವಕ್ಕೆ ಕಾರಣವಾಗಿದೆ ಎಂದ ಹೇಳಲಾಗುತ್ತಿದೆ. ಸಮರ್ಪಕವಾಗಿ ಸ್ಫೋಟಕಗಳು ದೊರೆಯದ ಹಿನ್ನೆಲೆ ಅಭಾವ ಸೃಷ್ಟಿಯಾಗಿದೆ. 10 ಲೋಡ್ ಬೇಕಾದ ಕಡೆ ಒಂದು ಲೋಡ್ ಕಲ್ಲು ಸೇರಿದಂತೆ ಇನ್ನಿತರ ಕಚ್ಛಾವಸ್ತುಗಳು ಲಭ್ಯವಾಗುತ್ತಿವೆ. ಇದರಿಂದ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಪೂರೈಕೆ ಇಲ್ಲದೆ ಸಣ್ಣ ಕೈಗಾರಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಅಭಿವೃದ್ಧಿ ಕಾರ್ಯಗಳಿಗೆ ಹೊಡೆತ ಬಿದ್ದಿದೆ. ಸಿಮೆಂಟ್ ಇಟ್ಟಿಗೆ, ಕಿಟಕಿ, ಹೂಕುಂಡ, ಬಾಗಿಲು ಚೌಕಟ್ಟು, ಇಂಟರ್ ಲಾಕ್ ಸೇರಿದಂತೆ ಇತ್ಯಾದಿ ತಯಾರಿಕಾ ಘಟಕದಲ್ಲೂ ತಯಾರಿಕೆ ಕಡಿಮೆಯಾಗಿದೆ. ಜೊತೆಗೆ ಬೆಲೆಯಲ್ಲಿ ಕೂಡ ಕೊಂಚ ಮಟ್ಟದಲ್ಲಿ ಏರಿಕೆ ಕಂಡಿದೆ.
2 ಕಡೆಗಳಲ್ಲಿ ಸಂಭವಿಸಿದ ಅನಾಹುತದ ಬಳಿಕ ಜಿಲ್ಲೆಯಲ್ಲಿ ಕೂಡ ಕಲ್ಲು, ಜಲ್ಲಿ ಸೇರಿದಂತೆ ಇನ್ನಿತರ ಕಚ್ಛಾವಸ್ತುಗಳು ಲಭ್ಯವಾಗುತ್ತಿಲ್ಲ. ಅಗತ್ಯಕ್ಕಿಂತ ಕಡಿಮೆ ಸಿಗುತ್ತಿವೆ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ತೊಡಕು ಉಂಟಾಗಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್ ಹೇಳುತ್ತಾರೆ. ಆಧರೆ ಈ ಅಭಾವ ತತ್ಕಾಲಿಕವಾಗಿದ್ದು ದಿನಕಳೆದಂತೆ ಅಧಿಕಾರಿಗಳು ಈಗಿನ ಬಿಗಿ ತಪಾಸಣೆಯನ್ನು ಸಡಿಲಗೊಳಿಸುತ್ತಾರೆ. ಜನರೂ ಈ ದುರಂತವನ್ನು ಮರೆಯುತ್ತಾರೆ. ನಂತರ ಎಲ್ಲ ಕಡೆಗಳಲ್ಲಿ ಎಗ್ಗು ಸಿಗ್ಗಿಲ್ಲದೆ ಸ್ಪೋಟಕ ಬಳಸಿ ಬಂಡೆ ಒಡೆಯುವ ಕಾಯಕ ಮುಂದುವರೆಯಲಿದೆ ಎಂದು ಮತ್ತೋರ್ವ ಗುತ್ತಿಗೆದಾರ ತಿಳಿಸಿದರು.