ಡಿಸೆಂಬರ್11, 2019 ರಂದು ಪೌರತ್ವ ಕಾಯ್ದೆ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡಂತೆ ದೇಶದೆಲ್ಲೆಡೆ ಪ್ರತಿಭಟನೆಯ ಕಿಚ್ಚು ಹತ್ತಿತು. ಅಸಂಖ್ಯಾತ ವಿದ್ಯಾರ್ಥಿಗಳು, ಹೋರಾಟಗಾರರು, ಜೀವಪರರು ಕಾನೂನಿನ ವಿರುದ್ಧ ರಸ್ತೆಗಿಳಿದರು. ಕೆಲವೇ ದಿನಗಳಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ನಾವು ಪೌರತ್ವ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿಕೆ ನೀಡಿದರು . ಅದರಲ್ಲೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು “ನಾನು ಬದುಕಿರುವವರೆಗೂ ಪಶ್ಚಿಮ ಬಂಗಾಳದಲ್ಲಿ ಪೌರತ್ವ ಕಾಯ್ದೆ ಜಾರಿಗೆ ಬರುವುದಿಲ್ಲ. ಬಂಗಾಳದ ಯಾರೂ ದೇಶ, ರಾಜ್ಯ ಬಿಡಬೇಕೆಂದಿಲ್ಲ. ಇಲ್ಲಿ ಯಾವ ಡಿಟೆಂಷನ್ ಸೆಂಟರ್ಗಳನ್ನೂ ಮಾಡುವುದಿಲ್ಲ” ಎಂದರು.
ದೇಶಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ, ಅನೇಕ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಕಟುವಾಗಿ ಸರ್ಕಾರದ ವಿಮರ್ಶೆಗಿಳಿದಂತೆ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಆತುರಾತುರವಾಗಿ ಕಾಯ್ದೆಯ ಪರವಾಗಿ ಆಫ್ಲೈನ್ ಮತ್ತು ಆನ್ಲೈನ್ ಪ್ರಚಾರ ಮಾಡಲು ಪ್ರಾರಂಭಿಸಿತು. ಸಾರ್ವಜನಿಕರ ಬೆಂಬಲ ಪಡೆದುಕೊಳ್ಳಲು ಸೋಶಿಯಲ್ ಮೀಡಿಯಾ ಅಭಿಯಾನ, ಮಿಸ್ ಕಾಲ್ ಅಭಿಯಾನ ಮತ್ತು ರಾಷ್ಟ್ರೀಯ ಜನಜಾಗೃತಿ ಅಭಿಯಾನವನ್ನೂ ಆರಂಭಿಸಿತು. ಇಷ್ಟಕ್ಕೂ ಈ ಸರ್ಕಾರ ಅಧಿಕಾರಕ್ಕೆ ಬಂದದ್ದೇ ಸೋಶಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರಿಂದ ಅಥವಾ ದುರ್ಬಳಕೆ ಮಾಡಿಕೊಂಡಿದ್ದರಿಂದ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಿಸ್ ಕಾಲ್ ಅಭಿಯಾನದಲ್ಲಿ ಹೆಚ್ಚು ಸಂಖ್ಯೆಯ ಮಿಸ್ ಕಾಲ್ ಪಡೆಯಲು ಬಿಜೆಪಿ ಐಟಿ ಸೆಲ್ ಮತ್ತು ಮೋದಿ ಭಕ್ತರು ತುಳಿಯದ ದಾರಿಗಳಿಲ್ಲ. ಉಚಿತ ನೆಟ್ಫ್ಲಿಕ್ಸ್, ಉದ್ಯೋಗ, ಸೆಕ್ಸ್, ಉಚಿತ ಮೊಬೈಲ್ ಡಾಟಾ ಹೀಗೆ ನಾನಾ ರೀತಿಯ ಆಮಿಷವನ್ನು ಒಡ್ಡಿತ್ತು. ಇದಕ್ಕೂ ಮುನ್ನ ಕೋಟ್ಯಾಂತರ ಅನುಯಾಯಿಗಳಿರುವ ಸದ್ಗುರು ಗಳಿಂದ ಸಿ.ಎ.ಎ ಪರವಾಗಿ ವಿಡಿಯೋ ಮಾಡಿಸಿ ಸೋಶಿಯಲ್ ಮಿಡಿಯಾದಲ್ಲಿ ಹರಿಯಬಿಟ್ಟಿದ್ದರು. ಸ್ವತಃ ಪ್ರಧಾನಿ ಮೋದಿಯವರು ಜಗ್ಗಿ ವಾಸುದೇವ್ ಅವರ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಅಕೌಂಟಿನಲ್ಲಿ ಶೇರ್ ಮಾಡಿ #India supports CAA ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಡಿಸೆಂಬರ್ 30 ರಿಂದ ಬಿಜೆಪಿಯು ಸದ್ಗುರು ಅವರ ವಿಡಿಯೋವನ್ನು ಪ್ರಚಾರ ಮಾಡಲು ಆರಂಭಿಸಿತ್ತು. ಅದೇ ವಿಡಿಯೋವನ್ನು ಬಳಸಿಕೊಂಡು ಬಿಜೆಪಿಯ ಅಧಿಕೃತ ಫೇಸ್ಬುಕ್ ಪೇಜ್ ಅದನ್ನು ಹಿಂದಿ ಭಾಷೆಗೆ ಡಬ್ ಮಾಡಿ ಮೂರು ಜಾಹಿರಾತುಗಳನ್ನು ಬಿಡುಗಡೆ ಮಾಡಿತು. ಈ ಜಾಹೀರಾತು ಡಿಸೆಂಬರ್ 30ರಿಂದ ಜನವರಿ 23, 2020ರ ವರೆಗೆ ಚಾಲ್ತಿಯಲ್ಲಿತ್ತು. ಫೇಸ್ಬುಕ್ ಪೇಜ್ ಮಿಸ್ ಕಾಲ್ ಅಭಿಯಾನಕ್ಕೆ ಸಂಬಂಧಪಟ್ಟಂತೆ ಮತ್ತೆರಡು ಜಾಹಿರಾತುಗಳನ್ನು ಜನವರಿ ಏಳರಂದು ಹರಿಯ ಬಿಟ್ಟು ಜನವರಿ 23ರವರೆಗೆ ಚಾಲ್ತಿಯಲ್ಲಿಟ್ಟಿತ್ತು. ಡಿಸೆಂಬರ್ 30, 2019ರಿಂದ ಜನವರಿ 2020ರ ವರೆಗೆ ಬಿಜೆಪಿ ಯು ಫೇಸ್ಬುಕ್ ಜಾಹಿರಾತಿಗಾಗಿ 15-17ಲಕ್ಷ ಖರ್ಚು ಮಾಡಿದೆ. ಫೇಸ್ಬುಕ್ನಲ್ಲಿ ಹತ್ತು ಮಿಲಿಯನ್ಗಿಂತಲೂ ಅಧಿಕ ಜನ ಆ ಜಾಹಿರಾತುಗಳನ್ನು ವೀಕ್ಷಿಸಿದ್ದಾರೆ. ಅದರಲ್ಲೂ ವಿಧಾನಸಭಾ ಚುನಾವಣೆಗಳಿರುವ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಇತ್ತೀಚೆಗೆ ಚುನಾವಣೆ ಮುಗಿದ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ವೀಕ್ಷಣೆ ಕಂಡು ಬಂದಿತ್ತು.
ಬಿಜೆಪಿಯ ಅಧಿಕೃತ ಫೇಸ್ಬುಕ್ ಪೇಜ್ ಮಾತ್ರ ಅಲ್ಲದೆ ಹಲವು ನಾಯಕರು ಡೊಡ್ಡ ಮಟ್ಟದ ಮೊತ್ತವನ್ನು ಇದರಲ್ಲಿ ತೊಡಗಿಸಿದ್ದರು. ಬಿಜೆಪಿ ನಾಯಕ, ಗುಜರಾತಿನ ಶಾಸಕರಾದ ಜಿತು ವಾಘಾನಿ ಅವರು ಸರಿಸುಮಾರು 90,000 ದಿಂದ ಒಂದು ಲಕ್ಷದ ವರೆಗೆ ಖರ್ಚು ಮಾಡಿದ್ದರು. ಮಾಜಿ ರಾಜ್ಯ ಸಭಾ ಸದಸ್ಯರಾದ ಬಿಹಾರದ ಆರ.ಕೆ.ಸಿನ್ಹಾ ಅವರೂ ದೊಡ್ಡ ಮೊತ್ತದ ಹಣ ಸಲ್ಲಿಸಿದ್ದಾರೆ ಎಂದು ವರದಿಗಳಿವೆ.
ಡಿಸೆಂಬರ್ 16, 2019ರಿಂದ ಮಾರ್ಚ್ 9, 2020ರ ವರೆಗೆ ಸುಮಾರು 99 ಫೇಸ್ಬುಕ್ ಪೇಜ್ಗಳು, ಬಿಜೆಪಿಯ ನಾಯಕರ ಪೇಜ್ಗಳು, ರಾಜ್ಯ ನಾಯಕರ ಪೇಜ್ಗಳು, ಬಿಜೆಪಿ ಬೆಂಬಲಿಗರ ಪೇಜ್, ಬಿಜೆಪಿ ಪರ ಮಾಧ್ಯಮಗಳ ಅಧಿಕೃತ ಪೇಜ್ ಒಟ್ಟಾಗಿ 220 ಫೇಸ್ಬುಕ್ ಜಾಹಿರಾತುಗಳನ್ನು ನಿರ್ಮಿಸಿ ಹರಿಯ ಬಿಟ್ಟಿದ್ದರು.
CAA ಪರ, ಸರ್ಕಾರದ ಪರ ಫೇಸ್ಬುಕ್ ನಲ್ಲಿ ಒಟ್ಟು 11,348 ಬರಹ/ವಿಡಿಯೋ ಪೋಸ್ಟ್ ಆಗಿದ್ದವು ಮತ್ತು 10,469,748 ಇಂಟರಾಕ್ಷನ್ಗಳು ನಡೆದಿದ್ದವು. ಅದರಲ್ಲಿ ಡಿಸೆಂಬರ್ 30ರಿಂದ ಜನವರಿ 23ರವರೆಗೆ ಒಟ್ಟು 10,175 ಪೋಸ್ಟ್ಗಳು ಮತ್ತು 8,778,476 CAA ಪರ ಚರ್ಚೆಗಳು ನಡೆದಿದ್ದವು. ಆದರೆ ಇದೇ ಚರ್ಚೆ ಹದಿನೇಳು ದಿನಗಳ ನಂತರ ಅನುಕ್ರಮವಾಗಿ 1,173 ಮತ್ತು 1,691,373ಕ್ಕೆ ಇಳಿದಿತ್ತು.
ಬಿಜೆಪಿ ಹಣ ತೊಡಗಿಸುತ್ತಿದ್ದಾಗ ದಿನವೊಂದಕ್ಕೆ ಸರಾಸರಿ 356 ಪೋಸ್ಟ್ ಗಳು ಮತ್ತು 3,02,092 ಪೋಸ್ಟ್ಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿದ್ದವು. ಪಕ್ಷದ ನಾಯಕರು ಹಣ ಪಾವತಿಸುವುದನ್ನು ನಿಲ್ಲಿಸಿದ ಬಳಿಕ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರಚಾರವನ್ನು ಮುಂದುವರಿಸಿದರು. ಆದರೆ ಆ ಸಮಯದಲ್ಲಿ ದಿನವೊಂದಕ್ಕೆ ಕೇವಲ 26 ಪೋಸ್ಟ್ಗಳು ಮಾತ್ರ ಅಪ್ಡೇಟ್ ಆಗುತ್ತಿದ್ದವು.
CAA ಪರವಾಗಿ ಮತ್ತು ವಿರುದ್ಧವಾಗಿ ದೇಶಾದ್ಯಂತ ನಡೆಯುತ್ತಿದ್ದ ರ್ಯಾಲಿಗಳು, ಸಭೆಗಳು ಕೊರೋನಾ ಲಾಕ್ಡೌನ್ ಕಾಲದವರೆಗೂ ಮುಂದುವರೆದಿದ್ದವು. ಬಿಜೆಪಿ ತೊಡಗಿಸಿದ ದೊಡ್ಡ ಮಟ್ಟದ ಆರ್ಥಿಕ ಸಹಾಯದ ಹೊರತಾಗಿಯೂ ಟ್ಟಿಟ್ಟರ್ನಲ್ಲಿ #India doesn’t support CAA ಟ್ರೆಂಡ್ ಆಗಿತ್ತು. ಕೃತಕವಾಗಿ ಸೃಷ್ಟಿಸಿದ #India supports CAA ಸುಸ್ಥಿರವಾಗಿರಲಿಲ್ಲ, ಒಮ್ಮೆ ಬಿಜೆಪಿ ಹಣಕಾಸಿನ ನೆರವು ನಿಲ್ಲಿಸಿದಂತೆ ಟ್ರೆಂಡ್ ನಿಂತುಹೋಯಿತು, ಪರ್ಯಾಯವಾಗಿ ಪೌರತ್ವ ವಿರೋಧಿ ಹೋರಾಟ ಸಾಂಘಿಕವಾಗಿ ಹೆಚ್ಚಿನ ಪ್ರಭಾವ, ಪರಿಣಾಮ ಬೀರಿತ್ತು.
ಅಧಿಕಾರ ಮತ್ತು ಹಣಬಲವನ್ನು ಬಳಸಿ ಸರ್ಕಾರದ ನಿರ್ಧಾರವನ್ನು ಬಲವಂತವಾಗಿ ನಾಗರಿಕರ ಮೇಲೆ ಆಡಳಿತ ಹೇರಲೆತ್ನಿಸಿತು. ಅದಕ್ಕಾಗಿಯೇ ಒಂದು ವರ್ಗದ ಜನರ ಭಾವನೆಗಳನ್ನು ಇನ್ನೊಂದು ವರ್ಗದ ಜನರ ಮೇಲೆ ಎತ್ತಿಕಟ್ಟುವ ಷಡ್ಯಂತ್ರವೂ ನಡೆಯಿತು. ಆದರೆ ಸುಳ್ಳು ಮಾಹಿತಿಗಳನ್ನು, ಅಪೂರ್ಣ ಸತ್ಯಗಳನ್ನು ಜನತೆಯ ಮುಂದಿಡುವ ತಂತ್ರದಲ್ಲಿ ಬಿಜೆಪಿ ಭಾಗಶಃ ಯಶಸ್ವಿಯಾಗಲು ಮಾತ್ರ ಸಾಧ್ಯವಾಯಿತು. ಆದರೆ ಮುಂದೊಮ್ಮೆ ಅದು ಇಂತಹ ವಿಷಯದಲ್ಲಿ ಯಶಸ್ವಿಯಾಗದೇ ಇರಬಹುದು ಎಂದು ಭಾವಿಸುವ ಸ್ಥಿತಿ ಸದ್ಯಕ್ಕಿಲ್ಲ.
ಯಥೇಚ್ಛವಾಗಿ ಹಣ ಸುರಿದು ಸೋಶಿಯಲ್ ಮಿಡಿಯಾದ ಮೂಲಕ ಜನತೆಯ ಯೋಚನೆಯನ್ನು ಪ್ರಭಾವಿಸುವುದು, ವಿಭಜಕ ನೀತಿಯನ್ನ, ದ್ವೇಷವನ್ನು ಬೆಳೆಸುವುದು ಈಗ ಹಿಂದೆಂದಿಗಿಂತಲೂ ಸುಲಭ. ಹಾಗಾಗಿಯೇ ಸಾಮಾಜಿಕ ಜಾಲತಾಣಗಳು ಸೃಷ್ಟಿಸುವ ಅಸಹನೆಯನ್ನು, ಪೂರ್ವಗ್ರಹ ಪೀಡಿತ ಯೋಚನೆಗಳನ್ನು ಎದುರಿಸುವುದು ಹೇಗೆಂದು ಪ್ರಜ್ಞಾವಂತರು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಬೇಕಾಗಿದೆ.