ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಕೋರಿ ಕರ್ನಾಟಕ ರಕ್ಷಣಾ ವೇದಿಕೆ ನಿಯೋಗ, ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗು ಹಂಪಿ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ.
ಕನ್ನಡ ವಿಶ್ವವಿದ್ಯಾಲಯಕ್ಕೆ ಅಭಿವೃದ್ಧಿ ಅಂದಾಜುಗಳ ಅಂದಾಜು ವೆಚ್ಚ ಆರು ಕೋಟಿ ರುಪಾಯಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗು ತಾತ್ಕಾಲಿಕ ಸಿಬ್ಬಂದಿ ಮತ್ತು ಖಾಯಂ ಸಿಬ್ಬಂದಿಗಳಿಗೆ ಕೂಡಲೇ ಬಾಕಿ ವೇತನಗಳನ್ನು ನೀಡಬೇಕು ಎಂದು ಒತ್ತಾಯಿಸಲಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಗಳನ್ನು ನೀಡಬೇಕು, ಸ್ಥಗಿತಗೊಂಡಿರುವ ಎಲ್ಲ ಕೋರ್ಸ್ಗಳನ್ನು ಪುನರಾರಂಭಿಸಬೇಕು, ಪ್ರವೇಶಾತಿ ಪ್ರಾರಂಭಗೊಳ್ಳಬೇಕು ಮತ್ತು ವಸತಿ ನಿಲಯಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಬೇಕು, ದೂರಶಿಕ್ಷಣ ಕೋರ್ಸ್ಗಳನ್ನು ಪುನರಾರಂಬಿಸಬೇಕು ಎಂದು ಒತ್ತಾಯಿಸಲಾಯಿತು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಡಳಿತ ಯಂತ್ರ ಚುರುಕುಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯವನ್ನು ಬೆಳೆಸುವುದು ಎಂದರೆ ಕೇವಲ ಕಟ್ಟಡಗಳನ್ನು ಕಟ್ಟುವುದಲ್ಲ, ಜ್ಞಾನವನ್ನು ಬೆಳೆಸುವುದು. ಜ್ಞಾನವನ್ನು ಬೆಳೆಸುವೆಡೆಗೆ ವಿಶ್ವವಿದ್ಯಾಲಯ ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಮನವಿಯನ್ನು ಸ್ವೀಕರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ್, ಕೋವಿಡ್ ಕಾರಣದಿಂದ ಪ್ರಸಾರಾಂಗದ ಚಟುವಟಿಕೆಗಳು ಸ್ಥಗಿತಗೊಂಡು, ಆದಾಯವಿಲ್ಲದಂತಾಗಿದೆ. ಹೀಗಾಗಿ ಅನುದಾನ ನೀಡಿಕೆಯಲ್ಲಿ ವಿಳಂಬವಾಗಿದೆ. ಆದರೆ ಆಗಿರುವ ಸಮಸ್ಯೆಗಳನ್ನು ಗಮನಿಸಿ, ಅನುದಾನ ಬಿಡುಗಡೆ ಮಾಡಲು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ (18-12-2020) ನಡೆಸಿದ ಟ್ವಿಟರ್ ಆಂದೋಲನವನ್ನು ಉಲ್ಲೇಖಿಸಿದ ಸಚಿವರು, ಕನ್ನಡ ಜನತೆಯ ಅಹವಾಲವನ್ನು ಗಮನಿಸಿದ್ದು, ತಮ್ಮ ಸರ್ಕಾರ ಕನ್ನಡ ನಾಡು, ನುಡಿ ಹಿತಾಸಕ್ತಿ ರಕ್ಷಣೆಗೆ ಬದ್ಧವಾಗಿದೆ. ಹಂಪಿ ವಿಶ್ವವಿದ್ಯಾಲಯದ ಸಮಸ್ಯೆಗಳ ಕುರಿತು ಖಂಡಿತ ಗಮನಹರಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಕರವೇ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರೊಂದಿಗೆ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಅಶ್ವಿನಿಗೌಡ, ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ್, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್, ಕರವೇ ಸಾಮಾಜಿಕ ಜಾಲತಾಣ ಘಟಕದ ಪ್ರಧಾನ ಸಂಚಾಲಕ ದಿನೇಶ್ ಕುಮಾರ್ ಎಸ್.ಸಿ. ಉಪಸ್ಥಿತರಿದ್ದರು.