ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸುವಂತೆ ಕನ್ನಡಪರ ಹೋರಾಟಗಾರರು ಸಾಮಾಜಿಕ ಜಾಲತಾಣದ ಮೂಲಕ ವ್ಯಾಪಕ ಅಭಿಯಾನ ನಡೆಸುತ್ತಿದ್ದಾರೆ. ಈ ಕುರಿತಂತೆ ಕರವೇ ನೀಡಿದ್ದ ಟ್ವಿಟರ್ ಅಭಿಯಾನಕ್ಕೆ ಕನ್ನಡ ವಿವಿ ಪರ ಮನಸ್ಸುಗಳು ಜೊತೆಗೂಡಿವೆ. ಟ್ವಿಟರಿನಲ್ಲಿ #ಕನ್ನಡವಿವಿಉಳಿಸಿ ಅಭಿಯಾನ ಸಾಕಷ್ಟು ಯಶಸ್ವಿಯಾಗಿದೆ.
ಶುಕ್ರವಾರದ ಸಂಜೆ 5 ಗಂಟೆಗೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಕರವೇ ಕರೆನೀಡಿದ್ದು, ಸಂಜೆ 6 ಗಂಟೆಯ ಹೊತ್ತಿಗೆ ಸುಮಾರು ಐದು ಸಾವಿರಕ್ಕೂ ಹೆಚ್ಚು #ಕನ್ನಡವಿವಿಉಳಿಸಿ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿವೆ.
ಮರಾಠ ಪ್ರಾಧಿಕಾರಕ್ಕೆ ಕೊಡಲು ದುಡ್ಡಿದೆ, ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡಲು ಸರಕಾರದ ಬಳಿ ದುಡ್ಡಿಲ್ಲವೇ?#ಕನ್ನಡವಿವಿಉಳಿಸಿ
— ಅರುಣ್ ಜಾವಗಲ್ | Arun Javgal (@ajavgal) December 18, 2020
ಹಂಪಿ ವಿಶ್ವವಿದ್ಯಾಲಯದ ಪರ ದನಿ ಎತ್ತಿದ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸ್ಥಿತಿ ಶೋಚನೀಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಸಂಶೋಧನೆ, ಬೋಧನೆ ಹೆಚ್ಚು ಕಡಿಮೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿಯೇ ನ್ಯಾಕ್ ಗುಣಮಟ್ಟದಲ್ಲಿ ಎ+ ಇದ್ದ ಶ್ರೇಣಿ ಮೂರು ಮೆಟ್ಟಿಲು ಕೆಳಗಿಳಿದು ಬಿ ಶ್ರೇಣಿಗೆ ಇಳಿದಿದೆ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸ.ಚಿ.ರಮೇಶ್ ರಾಜ್ಯ ಸರ್ಕಾರದಿಂದ ಅನುದಾನಗಳನ್ನು ತರಲು ವಿಫಲರಾಗಿದ್ದಾರೆ. ಬಿ ಶ್ರೇಣಿಗೆ ಇಳಿದ ಪರಿಣಾಮವಾಗಿ ಯುಜಿಸಿಯಿಂದ ಬರುವ ಅನುದಾನಗಳೂ ನಿಂತುಹೋಗಿದೆ. ಕುಲಪತಿಗಳು, ಕುಲಸಚಿವರೇ ಅಸಹಾಯಕತೆ ಪ್ರದರ್ಶಿಸುತ್ತಿರುವುದರಿಂದ ಅರಾಜಕ ವ್ಯವಸ್ಥೆ ಸೃಷ್ಟಿಯಾಗಿದೆ. ಕಳೆದ ಎರಡು ವರ್ಷಗಳಿಂದ ಕನ್ನಡ ವಿವಿಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ. ಸಂಶೋಧನಾ ಕಾರ್ಯಗಳು ಸ್ಥಗಿತಗೊಂಡಿವೆ ಅಥವಾ ವೇಗ ಕಳೆದುಕೊಂಡಿವೆ. ದೂರಶಿಕ್ಷಣ ಕೋರ್ಸ್ ಗಳು ಮುಚ್ಚಿಕೊಳ್ಳುತ್ತಿವೆ. ಇದೆಲ್ಲವನ್ನೂ ಸರಿಪಡಿಸಬೇಕಾದ ಆಡಳಿತ ಮಂಡಳಿ ನಿಷ್ಕ್ರಿಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂರಾರು ಕೋಟಿ ಅನುದಾನ ಕೊಡುವ ಸರಕಾರಕ್ಕೆ ಇರುವ ಒಂದೇ ಒಂದೇ ಕನ್ನಡ ವಿವಿಯನ್ನು ಉಳಿಸಿಕೊಳ್ಳಲು ಹಣವಿಲ್ಲವೇ ?
ಕನ್ನಡದ ಬಗೆಗಿನ ಸರಕಾರದ ಅಸಡ್ಡೆ ಸಲ್ಲದು.
#ಕನ್ನಡವಿವಿಉಳಿಸಿ— Shruthi H M । ಶ್ರುತಿ ಎಚ್ ಎಮ್ (@shruthihm1) December 18, 2020
ಹಿಂದೆ ಇದ್ದ ಕುಲಪತಿಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದವು. ಹೆಚ್ಚಿನ ಅನುದಾನ ತರುವಲ್ಲಿ ಅವರು ಆಸಕ್ತಿ ವಹಿಸಿದ್ದರು. ಆದರೆ ಈಗಿನ ಕುಲಪತಿಗಳು ಅನುದಾನ ತರುವುದು ತಮ್ಮ ಜವಾಬ್ದಾರಿಯೇ ಅಲ್ಲವೆಂಬಂತೆ ಮರೆತು ಕುಳಿತಿದ್ದಾರೆ. ಅದರ ಕೆಟ್ಟ ಪರಿಣಾಮವನ್ನು ವಿಶ್ವವಿದ್ಯಾಲಯ ಇಂದು ಎದುರಿಸುತ್ತಿದೆ. ವಿಶ್ವವಿದ್ಯಾಲಯದಲ್ಲಿ ಇಷ್ಟೆಲ್ಲ ಸಮಸ್ಯೆಗಳು ಇರುವಾಗ, ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ ಅನುದಾನ ಹೆಚ್ಚಿಸಿ ಸಂಸ್ಥೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಬೇಕಿತ್ತು. ಆದರೆ ಮೊದಲೇ ಕೆಟ್ಟ ಆಡಳಿತ ವ್ಯವಸ್ಥೆಯಿಂದ ನಲುಗಿದ್ದ ವಿಶ್ವವಿದ್ಯಾಲಯಕ್ಕೆ ಅನುದಾನಗಳನ್ನು ನಿಲ್ಲಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕಕ್ಕೆ ಇರುವುದು ಒಂದೇ ಕನ್ನಡ ವಿಶ್ವವಿದ್ಯಾಲಯ. ಕನ್ನಡ ನಾಡು, ನುಡಿ, ಸಾಹಿತ್ಯ, ಜನಪದ, ಮಹಿಳೆ, ಚರಿತ್ರೆ, ಪುರಾತತ್ತ್ವ, ಬುಡಕಟ್ಟು, ಹಸ್ತಪ್ರತಿ, ಮಾನವಶಾಸ್ತ್ರ, ಸಂಗೀತ. ಹೀಗೆ ಕನ್ನಡಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಸಂಶೋಧನೆ ನಡೆಸಲು ಇರುವ ವಿಶ್ವವಿದ್ಯಾಲಯವಿದು. ವಿಶ್ವವಿದ್ಯಾಲಯಕ್ಕೆ ಮೊದಲ ಕುಲಪತಿಗಳಾಗಿ ಡಾ.ಚಂದ್ರಶೇಖರ ಕಂಬಾರರು ಭದ್ರವಾದ ಅಡಿಪಾಯ ಹಾಕಿದ್ದರು. ಹುತಾತ್ಮರಾದ ಡಾ. ಎಂಎಂ ಕಲ್ಬುರ್ಗಿಯವರೂ ಸೇರಿದಂತೆ ಹಲವಾರು ಕುಲಪತಿಗಳು ವಿಶ್ವವಿದ್ಯಾಲಯವನ್ನು ಕಟ್ಟಿಬೆಳೆಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದರು. ಇಂಥ ವಿವಿಯ ಇಂದಿನ ಸ್ಥಿತಿಯನ್ನು ಸರ್ಕಾರ ಯಾಕೆ ನೋಡಿಕೊಂಡು ಕುಳಿತಿದೆ? ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿ, ಭಾಷಾ ಪ್ರಾಧಿಕಾರ, ನಿಗಮ ಮಂಡಳಿಗಳನ್ನು ರಚಿಸುತ್ತಿದೆ. ಅವುಗಳಿಗೆ ನೂರಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿದೆ. ಕನ್ನಡಿಗರಿಗೆ ಸಂಬಂಧವೇ ಇಲ್ಲ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂರಾರು ಕೋಟಿ ರುಪಾಯಿಗಳನ್ನು ಕೊಟ್ಟಿದೆ. ಆದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡಲು ಹಣವಿಲ್ಲವೆಂದರೆ ಏನರ್ಥ? ಎಂದವರು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ತಡಮಾಡದೇ ಹಂಪಿ ವಿಶ್ವವಿದ್ಯಾಲಯಕ್ಕೆ ಬೇಕಿರುವ ಅಗತ್ಯ ಅನುದಾನವನ್ನು ಒದಗಿಸಬೇಕು. ಅಲ್ಲಿನ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಬೇಕು. ಸರ್ಕಾರದೊಂದಿಗೆ ಸಂವಹನ ನಡೆಸಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಲು ಇಷ್ಟವಿಲ್ಲದ ಯಾರನ್ನೇ ಆಗಲಿ, ಪದಚ್ಯುತಿಗೊಳಿಸಿ ಅರ್ಹರನ್ನು ನೇಮಕ ಮಾಡಬೇಕು. ರಾಜ್ಯ ಸರ್ಕಾರ ಕೂಡಲೇ ಇತ್ತ ಗಮನಹರಿಸದೇ ಹೋದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋರಾಟಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ. ಮುಂದಿನ ಪೀಳಿಗೆಗೆ ನಾವು ಕನ್ನಡ ನುಡಿ-ಸಂಸ್ಕೃತಿಯನ್ನು ಉಳಿಸಲು ಕನ್ನಡ ವಿವಿ ಪಾತ್ರ ಮುಖ್ಯ. ಸರ್ಕಾರ ಅದನ್ನು ಮರೆಯಬಾರದು ಎಂದು ಅವರು ಆಗ್ರಹಿಸಿದ್ದಾರೆ.