ಕರ್ನಾಟಕ ವಿಧಾನಸಭಾ ಅಧಿವೇಶನದ ಮೊದಲನೇ ದಿನ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಕೇಂದ್ರೀಕರಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದೆ. ನೆರೆ ಪರಿಹಾರದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಮೇಲೆ ಹರಿಹಾಯ್ದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ನಷ್ಟಕ್ಕೆ ಒಳಗಾದವರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
“ಈ ವರ್ಷದ ಮೊದಲ ಬಾರಿಯ ಪ್ರವಾಹದಿಂದ 4,02,700 ಹೆಕ್ಟೇರ್ ಬೆಳೆ ನಾಶವಾಗಿತ್ತು, ಎರಡನೇ ಬಾರಿಯ ಪ್ರವಾಹದಿಂದ 5,50,819 ಹೆಕ್ಟೇರ್, 3ನೇ ಬಾರಿಯ ಪ್ರವಾಹದಿಂದ 10,49,102 ಹೆಕ್ಟೇರ್ ಬೆಳೆ ನಾಶವಾಗಿದೆ. ಅಂದರೆ ಒಟ್ಟು 49,48,237 ಎಕರೆ ಭೂಮಿಯಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಪ್ರವಾಹದಿಂದ 26,311 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹೂಳು ತುಂಬಿದೆ. ಒಟ್ಟಾರೆ ಈ ವರ್ಷದ ಬೆಳೆಯ ಶೇ.25 ಭಾಗ ಪ್ರವಾಹದಿಂದ ನಾಶವಾಗಿದೆ. ಇದರ ಒಟ್ಟು ಮೌಲ್ಯ ರೂ. 24,941 ಕೋಟಿ. ಸರ್ಕಾರ ಈ ವರೆಗೆ ಬೆಳೆ ಪರಿಹಾರವಾಗಿ ಖರ್ಚು ಮಾಡಿರುವ ಒಟ್ಟು ಹಣ ಕೇವಲ ರೂ.110 ಕೋಟಿ. ಉಳಿದ ರೈತರಿಗೆ ಪರಿಹಾರ ಸಿಗುವುದು ಯಾವಾಗ?,” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವರ್ಷ ಪ್ರವಾಹದಿಂದ 1,935 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, 48,425 ಮನೆಗಳು ಹಾನಿಗೀಡಾಗಿವೆ, 37,806 ಕಿ.ಮೀ ರಸ್ತೆ ಹಾಳಾಗಿದೆ, 4,084 ಸೇತುವೆಗಳು ಕುಸಿದಿವೆ, 650 ಕೆರೆ ಕಟ್ಟೆಗಳು ಒಡೆದಿವೆ. ಇಷ್ಟು ಭೀಕರ ಪ್ರವಾಹ ಕಳೆದ 50 ವರ್ಷಗಳಲ್ಲೇ ಸಂಭವಿಸಿರಲಿಲ್ಲ. 2019ರ ಪ್ರವಾಹ ಪರಿಹಾರ ಧನವಾಗಿ ರೂ. 35,000 ಕೋಟಿ ನೀಡುವಂತೆ ಬಿಜೆಪಿ ಸರ್ಕಾರ ಮನವಿ ಮಾಡಿತ್ತು, ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ರೂ. 1,652 ಕೋಟಿ ಮಾತ್ರ. ಈ ಬಾರಿಯೂ ಕೇಂದ್ರ ನಮಗೆ ಅನ್ಯಾಯ ಮಾಡಿದೆ. ರೂ. 24,941 ಕೋಟಿ ಪರಿಹಾರಕ್ಕಾಗಿ ಮನವಿ ಮಾಡಿದ್ದರೆ, ಈ ವರೆಗೆ ರೂ.577 ಕೋಟಿ ಹಣವನ್ನು ನೆರೆ ಪರಿಹಾರ ರೂಪದಲ್ಲಿ ನೀಡಿದೆ, ಎಂದವರು ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
“ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಅವರಿಗೆ ನೆರೆ ಪರಿಹಾರವಾಗಿ ರೂ. 2,707 ಕೋಟಿ ನೀಡಲಾಗಿದೆ. ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಸಿಎಂ ಯಡಿಯೂರಪ್ಪ, 25 ಮಂದಿ ಬಿಜೆಪಿ ಸಂಸದರು, ಸಚಿವರು ಹಾಗೂ ಶಾಸಕರು ಮಾತನಾಡದೆ ಸುಮ್ಮನಿರುವುದು ಏಕೆ? ಇವರ ಮೌನದ ತಾತ್ಪರ್ಯ ಈಗ ಸಿಕ್ಕಿರುವ ಪರಿಹಾರ ಸಾಕು ಅಂತಲೇ? ಕಳೆದ ವರ್ಷದ ಪ್ರವಾಹದಿಂದ 2.47 ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದು ಕೇಂದ್ರಕ್ಕೆ ವರದಿ ನೀಡಲಾಗಿತ್ತು. ರಾಜ್ಯ ಸರ್ಕಾರ ಹೊರಡಿಸಿದ ಜಾಹಿರಾತಿನಲ್ಲಿ 1.79 ಲಕ್ಷ ಮನೆಗೆ ಹಾನಿಯಾಗಿದೆ ಎಂದಿತ್ತು. 1.20 ಲಕ್ಷ ಮನೆಗಳಿಗೆ ಪರಿಹಾರ ನೀಡಿದ್ದೇವೆ ಅಂತ ಸರ್ಕಾರ ಮಾಹಿತಿ ನೀಡಿತ್ತು. ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದೇ ವೇಳೆ ಬೆಂಗಳೂರಿನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯ ಕುರಿತು ಪ್ರಸ್ತಾಪಿಸಿರುವ ಸಿದ್ದರಾಮಯ್ಯ ಅವರು, ನಗರದಲ್ಲಿ ಮನೆ ಹಾನಿಯಾದರೆ, ರೂ. 25 ಸಾವಿರ ನೀಡುವ ಭರವಸೆ ನೀಡಿದ್ದಾರೆ, ಆದರೆ, ಗ್ರಾಮೀಣ ಭಾಗದಲ್ಲಿ ಕೇವಲ ರೂ. 10 ಸಾವಿರದ ಭರವಸೆ ನೀಡಿದ್ದಾರೆ. ಏಕೆ ಈ ತಾರತಮ್ಯ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.