ಸಾರ್ವಜನಿಕ ಹಣಕಾಸಿನ ಮೇಲೆ ಬಹುತೇಕ ಕಾರ್ಯನಿರ್ವಹಿಸುತ್ತಿದ್ದರೂ ಅದನ್ನು ಮರೆಮಾಚಿ ಅದೊಂದು ಬೆಂಗಳೂರು ಇಸ್ಕಾನ್ನ ಸಮಾಜಸೇವೆಯ ಘನ ಉದ್ದೇಶದ ಸಂಸ್ಥೆ ಎಂದೇ ಬಿಂಬಿಸಲಾಗಿದ್ದ ಅಕ್ಷಯ ಪಾತ್ರಾ ಫೌಂಡೇಷನ್ ಅವ್ಯವಹಾರಗಳು ಬಯಲಾಗತೊಡಗಿವೆ.
ಸ್ವತಃ ಸಂಸ್ಥೆಯ ಟ್ರಸ್ಟಿಗಳೇ ಅವ್ಯವಹಾರಗಳನ್ನು ಬಯಲುಮಾಡುತ್ತಿದ್ದು, ಇನ್ಪೋಸಿಸ್ ಸಹಸಂಸ್ಥಾಪಕ ಮೋಹನ್ ದಾಸ್ ಪೈ ಸೇರಿದಂತೆ ಮೂವರು ಟ್ರಸ್ಟಿಗಳು, ಸಾರ್ವಜನಿಕ ಹಣಕಾಸು ದುರ್ಬಳಕೆಯ ವಿರುದ್ಧ ಬಹಿರಂಗವಾಗಿ ದನಿ ಎತ್ತಿ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಅವ್ಯವಹಾರದ ಕುರಿತು ಉನ್ನತ ಮಟ್ಟದ ತನಿಖೆಗೂ ಒತ್ತಾಯಿಸಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತರ ಹೋರಾಟದ ಮೂಲಕ ಬಯಲಿಗೆ ಬಂದ ಈ ಅವ್ಯವಹಾರದ ಕುರಿತು ಸಂಸ್ಥೆಯ ಮೂಲ ಟ್ರಸ್ಟಿಗಳೇ ದನಿ ಎತ್ತಿದ ಹಿನ್ನೆಲೆಯಲ್ಲಿ, ಸಂಸ್ಥೆ ಪ್ರಕರಣದ ತನಿಖೆಗಾಗಿ ಮಾಜಿ ಸೆಂಟ್ರಲ್ ವಿಜಿಲೆನ್ಸ್ ಕಮೀಷನರ್ ಕೆ ವಿ ಚೌಧರಿ ಮತ್ತು ಥರ್ಮಾಕ್ಸ್ ಮಾಜಿ ಎಂಡಿ ಎಂ ಎಸ್ ಉನ್ನಿಕೃಷ್ಣನ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಕ್ಷಯಪಾತ್ರಾ ಫೌಂಡೇಷನ್ನಿನಲ್ಲಿರುವ ಇಸ್ಕಾನ್ ದೇವಾಲಯದ ಟ್ರಸ್ಟಿಗಳು ಮತ್ತು ನಾನ್ ಎಕ್ಸಿಕ್ಯೂಟಿವ್ ಟ್ರಸ್ಟಿಗಳ ನಡುವೆ ಈ ಅವ್ಯವಹಾರಗಳ ಕುರಿತು ಸಾಕಷ್ಟು ವಾಗ್ವಾದ, ಲೆಕ್ಕಪರಿಶೋಧಕರು ಲೆಕ್ಕಪತ್ರಗಳ ದಾಖಲೆಗಳಲ್ಲಿ ಆಗಿರುವ ಅವ್ಯವಹಾರ ಕುರಿತು ಗಮನ ಸೆಳೆದಾಗ ದೇವಾಲಯ ಟ್ರಸ್ಟಿಗಳು ಅವರ ಬಾಯಿಮುಚ್ಚಿಸಲು ನಡೆಸಿದ ಯತ್ನಗಳು ಕುರಿತು ಇಮೇಲ್ ಪತ್ರವ್ಯವಹಾರಗಳು ಬೆಳಕು ಚೆಲ್ಲಿದ್ದವು. ರಾಜೀನಾಮೆ ನೀಡಿರುವ ಟ್ರಸ್ಟಿಗಳು ಕೂಡ ಸಾರ್ವಜನಿಕ ಮಾಧ್ಯಮಗಳ ಮೂಲಕವೂ ಅವ್ಯವಹಾರ ತಮ್ಮ ಗಮನಕ್ಕೆ ಬಂದಾಗ ಅದನ್ನು ಸರಿಪಡಿಸುವಂತೆ ಆಡಳಿತ ಮಂಡಳಿಗೆ ಹೇಳಿದಾಗ ಅಂತಹ ತಮ್ಮ ಕಾಳಜಿಗೆ ಸ್ಪಂದಿಸುವ ಬದಲು ದೇವಾಲಯ ಟ್ರಸ್ಟಿಗಳು ತಮ್ಮ ದನಿಯನ್ನೇ ಹತ್ತಿಕ್ಕಲು ಪ್ರಯತ್ನಿಸಿದರು ಎಂದೂ ಹೇಳಿದ್ದರು.
ಈ ನಡುವೆ ಅವ್ಯವಹಾರ ಕುರಿತು ‘ದ ವೈರ್’ ಸುದ್ದಿತಾಣ ವಿಶೇಷ ವರದಿ ಪ್ರಕಟಿಸಿತ್ತು. ಆ ವರದಿಯನ್ನು ‘ಪ್ರತಿಧ್ವನಿ’ ಕನ್ನಡೀಕರಿಸಿ ಪ್ರಕಟಿಸಿತ್ತು. ಜೊತೆಗೆ ದ ಹಿಂದೂ ಸೇರಿದಂತೆ ವಿವಿಧ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಪ್ರಕರಣದ ಕುರಿತ ವರದಿಗಳು ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದವು. ಅದಾದ ಬಳಿಕ ಮೂವರು ಟ್ರಸ್ಟಿಗಳ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚೌಧರಿ, ಉನ್ನಿಕೃಷ್ಣನ್ ಮತ್ತು ಅನಿಲ್ ಸ್ವರೂಪ್ ಅವರನ್ನು ಟ್ರಸ್ಟಿನ ಅಧ್ಯಕ್ಷರು ನೇಮಕ ಮಾಡಿದ್ದರು. ಟ್ರಸ್ಟಿಗೆ ತಮ್ಮಿಂದ ನೇಮಕವಾದರನ್ನೇ ಒಳಗೊಂಡ ಸಮಿತಿ ರಚಿಸಿ, ತಮ್ಮ ವಿರುದ್ಧವೇ ಕೇಳಿಬಂದಿರುವ ಗಂಭೀರ ಅವ್ಯವಹಾರ ಪ್ರಕರಣದ ತನಿಖೆಗೆ ಸೂಚಿಸಿದ ಟ್ರಸ್ಟ್ ಅಧ್ಯಕ್ಷರ ಕ್ರಮ ಕೂಡ ತೀವ್ರ ಟೀಕೆಗೆ ಒಳಗಾಗಿತ್ತು.
ಈ ಪ್ರಕರಣದ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಬಾಸ್ಕರ್ ಅವರಿಗೂ ಪತ್ರ ಬರೆದಿದ್ದ ಗ್ರಾಮೀಣ ಕೂಲಿಗಾರರ ಸಂಘದ ಸ್ವರ್ಣ ಭಟ್ ಮತ್ತಿತರನ್ನೊಳಗೊಂಡ ವಿವಿಧ ನಾಗರಿಕ ಸಂಘಟನೆಗಳ ಪ್ರಮುಖರು, ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 34 ಕೋಟಿ ರೂ.ಗಳಷ್ಟು ಭಾರೀ ಸರ್ಕಾರಿ ಅನುದಾನ ಪಡೆದಿರುವ ಸಂಸ್ಥೆ ಬಿಸಿಯೂಟದ ಹೆಸರಿನಲ್ಲಿ ಸಾರ್ವಜನಿಕ ಹಣ ದುರುಪಯೋಗ ಮತ್ತು ವಿದೇಶಿ ದೇಣಿಗೆ(ನಿಯಂತ್ರಣ) ಕಾಯ್ದೆ(ಎಫ್ ಸಿಆರ್ ಎ) ಉಲ್ಲಂಘಿಸಿರುವುದು ಸಾಬೀತಾದಲ್ಲಿ ಕೂಡಲೇ ಟ್ರಸ್ಟಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು.
Also Read: ಇಸ್ಕಾನ್ ‘ಅಕ್ಷಯ ಪಾತ್ರೆ’ಯಲ್ಲಿ ಅಕ್ರಮದ ಬಿರುಗಾಳಿ: ಟ್ರಸ್ಟಿಗಳ ರಾಜೀನಾಮೆ!
ಈ ಎಲ್ಲಾ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ವಿಷಯದಲ್ಲಿ ರಾಜ್ಯ ಸರ್ಕಾರ ಏನು ನಿರ್ಧಾರ ಕೈಗೊಳ್ಳಲಿದೆ ಮತ್ತು ಆ ಬಳಿಕ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿತ್ತು. ಆದರೆ, ಗುರುವಾರ ದಿಢೀರ್ ಬೆಳವಣಿಗೆಯಲ್ಲಿ ಅಕ್ಷಯ ಪಾತ್ರಾ ಫೌಂಡೇಷನ್ನಿನ ಉಪಾಧ್ಯಕ್ಷ ಹಾಗೂ ದೇವಾಲಯ ಟ್ರಸ್ಟಿಯಾದ ಚಂಚಲಪತಿ ದಾಸ್ ಹಾಗೂ ನವೀನ್ ನೀರದ್ ದಾಸ್ ಅವರು ತಮ್ಮನ್ನು ಭೇಟಿ ಮಾಡಿದ್ದರು ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಹಾಗೂ ಬಿಜೆಪಿಯ ಪ್ರಭಾವಿ ನಾಯಕ ಕೆ ಎಸ್ ಈಶ್ವರಪ್ಪ ಫೋಟೋ ಸಹಿತ ಟ್ವೀಟ್ ಮಾಡಿದ್ದರು. ಜೊತೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಕೂಡ ಜೊತೆಗಿದ್ದರು ಎಂದು ಸಚಿವರು ಬಹಳ ಖುಷಿಯಿಂದ, ಇದೊಂದು ಸೌಹಾರ್ದ ಭೇಟಿ ಎಂದು ಬಣ್ಣಿಸಿದ್ದರು.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಸಚಿವರ ಆ ಟ್ವೀಟ್ ಟ್ಯಾಗ್ ಮಾಡಿ, “ಬಂಟ್ವಾಳ ಶಾಸಕರ ಉಪಸ್ಥಿತಿಯಲ್ಲಿ ಅಕ್ಷಯ ಪಾತ್ರಾ ಸಂಸ್ಥೆಯ ಉಪಾಧ್ಯಕ್ಷರು ಬಿಜೆಪಿಯ ಸಚಿವರನ್ನು ಭೇಟಿ ಮಾಡಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಅಕ್ಷಯಪಾತ್ರಾ ಸಂಸ್ಥೆಯ ಕುರಿತು ಎದ್ದಿರುವ ವಿವಾದ ಮತ್ತು ಆ ಸಂಸ್ಥೆ ಆ ಪ್ರಕರಣದ ಕುರಿತು ತನಿಖೆಗೆ ರಚಿಸಿರುವ ಸಮಿತಿಯ ಬಗ್ಗೆಯೂ ದೊಡ್ಡ ಮಟ್ಟದ ಆಕ್ಷೇಪ ಮತ್ತು ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಸಚಿವ ಈಶ್ವರಪ್ಪ ಅವರಿಗೆ ಸರಿಯಾದ ಮಾಹಿತಿ ಎಂದುಕೊಂಡಿದ್ದೇನೆ” ಎಂದು ಟ್ವೀಟ್ ಮಾಡಿದ್ದರು. ಅಕ್ಷಯಪಾತ್ರಾ ಅವ್ಯವಹಾರದ ಕುರಿತು ‘ದ ವೈರ್’ನಲ್ಲಿ ವಿಸ್ತೃತ ವರದಿ ಮಾಡಿದ್ದ ಅವರು ಆ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಚಿವ ಈಶ್ವರಪ್ಪ ತಮ್ಮ ಟ್ವೀಟ್ ಅಳಿಸಿಹಾಕಿದ್ದಾರೆ!
ಸಚಿವರು ಹಾಗೆ ದಿಢೀರನೇ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದನ್ನು ಕೂಡ ಉಲ್ಲೇಖಿಸಿ, ಹಳೆಯ ಟ್ವೀಟ್ ನ ಸ್ಕ್ರೀನ್ ಶಾಟ್ ಬಳಸಿ, ಸುಗತ ಅವರು ಸರಣಿ ಟ್ವೀಟ್ ಮಾಡಿದ್ದು, ಅಕ್ಷಯಪಾತ್ರಾ ಸಂಸ್ಥೆಯ ಚಂಚಲಪತಿದಾಸ್ ಅವರೊಂದಿಗಿನ ತಮ್ಮ ಭೇಟಿಯ ಚಿತ್ರಸಹಿತ ಟ್ವೀಟ್ ನ್ನು ಸಚಿವರು ದಿಢೀರ್ ಅಳಿಸಿಹಾಕಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ!

ಆ ಮೂಲಕ ಬಹುಕೋಟಿ ಸಾರ್ವಜನಿಕ ಹಣದ ದುರುಪಯೋಗದ ಕುರಿತು ಎದ್ದಿರುವ ವಿವಾದ ಮತ್ತು ಅಂತಹ ಗಂಭೀರ ಅವ್ಯವಹಾರ ಆರೋಪವನ್ನು ತಮ್ಮದೇ ಟ್ರಸ್ಟಿಗಳಿಂದ ಎದುರಿಸುತ್ತಿರುವ ಸಂಸ್ಥೆಯ ಮುಖ್ಯಸ್ಥರು ದಿಢೀರ್ ಸರ್ಕಾರದ ಪ್ರಮುಖರು ಮತ್ತು ಆರ್ ಎಸ್ ಎಸ್ ಮತ್ತು ಸಂಘಪರಿವಾರದ ಆಪ್ತರೂ ಆದ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಭೇಟಿ ಮಾಡಿರುವುದು ಸಹಜವಾಗೇ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ. ಅಷ್ಟೇ ಅಲ್ಲ; ಆ ಭೇಟಿಯ ಕುರಿತು ಸ್ವತಃ ಸಚಿವರೇ ಸಾಮಾಜಿಕ ಜಾಲತಾಣದಲ್ಲಿ ಪ್ರಚುರಪಡಿಸಿ, ಕೆಲವೇ ಗಂಟೆಗಳಲ್ಲಿ ಆ ಮಾಹಿತಿಯನ್ನು ಯಾವ ಸ್ಪಷ್ಟನೆಯನ್ನೂ ನೀಡದೆ ಅಳಿಸಿ ಹಾಕಿರುವುದು ಕೂಡ ಅಂತಹ ಅನುಮಾನಗಳು ಮತ್ತಷ್ಟು ಗಟ್ಟಿಯಾಗಲು ಕಾರಣವಾಗಿದೆ.
ಆ ಹಿನ್ನೆಲೆಯಲ್ಲಿ ಸಚಿವರು ಮತ್ತು ಸದ್ಯ ಆರೋಪಿ ಸ್ಥಾನದಲ್ಲಿರುವ ಸಂಸ್ಥೆಯ ಮುಖ್ಯಸ್ಥರ ನಡುವಿನ ಈ ಭೇಟಿಯ ಕುರಿತು ಸರ್ಕಾರ ಮತ್ತು ಬಿಜೆಪಿ ಪಕ್ಷ ಯಾವ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಹಾಗೇ ತಮ್ಮ ಭೇಟಿಯ ಕುರಿತ ಸಚಿವರ ಇಂತಹ ಅನುಮಾನಾಸ್ಪದ ವರಸೆಯ ಬಗ್ಗೆ ಸ್ವತಃ ಅಕ್ಷಯಪಾತ್ರಾ ಸಂಸ್ಥೆಯ ಮುಖ್ಯಸ್ಥರ ಪ್ರತಿಕ್ರಿಯೆ ಏನು ಎಂಬುದನ್ನೂ ಕಾದುನೋಡಬೇಕಿದೆ!