ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ಕನ್ನಡ ಪರ ಸಂಘಟನೆಗಳು ನೀಡಿದ ಬಂದ್ ಕರೆಗೆ ಕರ್ನಾಟಕ ರಕ್ಷಣಾ ವೇದಿಕೆ ಕೈಜೋಡಿಸಿದೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕರವೇ ಅಧ್ಯಕ್ಷರಾದ ನಾರಾಯಣ ಗೌಡ ಅವರು, ವಾಟಾಳ್ ನಾಗರಾಜ್ ಅವರು ಬಂದ್‌ಗೆ ಬೆಂಬಲ ಕೋರಿದ್ದಾರೆ, ಕರವೇ ಬಂದ್ ಗೆ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ ಅವರು, ನೆರೆ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಷ್ಟಲ್ಲಿದ್ದಾರೆ. ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ. 25000 ಕೋಟಿ ನಷ್ಟ ಆಗಿದೆ ಎಂದು ಸಿಎಂ ಹೇಳಿದರೂ, ಕೇಂದ್ರ ಸರ್ಕಾರ 577 ಕೋಟಿ ನೀಡಿ ಸುಮ್ಮನಾಗಿದೆ. ಕೇಂದ್ರ ಕೊಟ್ಟ ಅನುದಾನದಿಂದ ಯಾವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಚುನಾವಣೆ ಗೆಲ್ಲಲು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ 50 ಕೋಟಿ ಕೊಡುತ್ತಿದೆ ಸರ್ಕಾರ. ಇದು ಸರಿಯಾದ ಕ್ರಮವಲ್ಲ, ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು, ಶಾಂತ ರೀತಿಯಿಂದ ಪ್ರತಿಭಟಿಸಲು ನಿರ್ಧಾರ ಮಾಡಿದ್ದು, ಸರ್ಕಾರದ ತೀರ್ಮಾನ ಖಡಾಖಂಡಿತವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಾವು ಮರಾಠ ಸಮಾಜದ ವಿರೋಧಿಗಳಲ್ಲ. ನಮ್ಮ ವಿರೋಧ ಸರ್ಕಾರದ ಕ್ರಮದ ವಿರುದ್ಧ, ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆಯೇ ಹೊರತು ಮರಾಠ ಸಮುದಾಯದ ವಿರುದ್ಧವಲ್ಲ, ಕರ್ನಾಟಕ ರಕ್ಷಣಾ ವೇದಿಕೆಯು ಈ ಹಿಂದೆಯೂ ಎಲ್ಲಾ ಸರ್ಕಾರಗಳ ವಿರುದ್ದ ಪ್ರತಿಭಟನೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
Also Read: ನಾವು ಹಿಂದೂಗಳು, ಕನ್ನಡಿಗರ ಓಟು ಹೋಗುತ್ತದೆಂಬ ಭಯವಿಲ್ಲ; ಬಸನಗೌಡ ಯತ್ನಾಳ್
ಚುನಾವಣೆ ಗೆಲ್ಲಲು ಈ ರೀತಿ ಮಾಡಿದರೆ ಎಲ್ಲಾ ಭಾಷಾ ಅಲ್ಪಸಂಖ್ಯಾತರಿಗೆ ಏನು ಮಾಡುತ್ತೀರಾ? ಬಿಬಿಎಂಪಿ ಚುನಾವಣೆ ಬಂದರೆ ತಮಿಳು , ತೆಲುಗು, ಮಾರ್ವಾಡಿ, ಮಲಯಾಳಿ ಭಾಷೆಗಳ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತೀರಾ ಎಂದು ಪ್ರಶ್ನಿಸಿದ ಅವರು ಈ ರೀತಿಯ ನಿರ್ಧಾರ ತಗೋಬೇಡಿ ಎಂದು ಎಚ್ಚರಿಸಿದ್ದಾರೆ.
ಯತ್ನಾಳ್‌ಗೆ ತಿರುಗೇಟು!
ಕನ್ನಡ ಪರ ಹೋರಾಟಗಾರರನ್ನು ರೋಲ್‌ಕಾಲ್ ಗಿರಾಕಿಗಳೆಂದು ಕರೆದಿದ್ದ ಯತ್ನಾಳ್ ವಿರುದ್ಧ ಹರಿಹಾಯ್ದ ಅವರು, ಯತ್ನಾಳ್ ಆಡಿರುವ ಮಾತುಗಳು ಅವರ ಸ್ವಂತ ವಿವೇಚನೆಯದ್ದೋ, ಸರ್ಕಾರದ್ದೋ ಗೊತ್ತಿಲ್ಲ. ಸರ್ಕಾರದ ಮಾತುಗಳಾಗಿದ್ದರೆ, ಎಲ್ಲಾ ಶಾಸಕರು ರಾಜಿನಾಮೆ ನೀಡಿ, ಕನ್ನಡದ ಮತಗಳು ಬೇಡ ಎಂದು ಮತ ಕೇಳಿ ಗೆದ್ದು ತೋರಿಸಿ ಎಂದು ಸವಾಲು ಹಾಕಿದ್ದಾರೆ.
Also Read: ಬಸನಗೌಡ ಯತ್ನಾಳ್ ಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಸವಾಲುಗಳು
ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆಯುತ್ತವೆ. ವಿಜಯಪುರದಲ್ಲಿ ದೊಡ್ಡ ಸಮಾವೇಶ ನಡೆಸಿ ಯತ್ನಾಳ್ ಸವಾಲಿಗೆ ಅಲ್ಲಿಯೇ ಉತ್ತರ ನೀಡುತ್ತೇವೆ ಎಂದಿರುವ ಅವರು ಕನ್ನಡದವರ ಓಟ್ ಬೇಡ ಎಂದು ಚುನಾವಣೆಗೆ ಬನ್ನಿ ಇಲ್ಲವಾದರೆ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.