ಅಕ್ಷಯ ಪಾತ್ರಾ ಫೌಂಡೇಷನ್ ನ ಸ್ವತಂತ್ರ ಟ್ರಸ್ಟಿಗಳ ರಾಜೀನಾಮೆ ವಿಷಯ ಕಳೆದ ಒಂದು ತಿಂಗಳ ತೆರೆಮರೆಯ ಗುಸುಗುಸು ಬಳಿಕ ಇದೀಗ ಅಧಿಕೃತವಾಗೇ ಜಗಜ್ಜಾಹೀರುಗೊಂಡಿದೆ. ಒಂದು ಕಡೆ ದೀಪಾವಳಿ ಪಟಾಕಿಗಳು ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಈ ರಾಜೀನಾಮೆ ಪ್ರಸಂಗ ಸ್ಫೋಟಿಸಿದೆ.
ಆದರೆ, ಧಾರ್ಮಿಕ ಸಂಸ್ಥೆ ಮತ್ತು ಸ್ವತಂತ್ರ ಟ್ರಸ್ಟಿಗಳು ಸೇರಿ ಎರಡೂ ಕಡೆಯಿಂದಲೂ ಈ ವಿಷಯ ಅಧಿಕೃತವಾಗಿ ಬಹಿರಂಗವಾಗಲು ಏಕಿಷ್ಟು ಸಮಯ ಹಿಡಿಯಿತು ಎಂಬುದು ಕುತೂಹಲಕಾರಿ ಸಂಗತಿ. ಆ ಬಗ್ಗೆ ನಂತರ ಪರಿಶೀಲಿಸೋಣ. ಆ ಮುನ್ನ ಟ್ರಸ್ಟಿಗಳ ರಾಜೀನಾಮೆಗೆ ಕಾರಣವಾದ ವಿವಾದವೇನು ಮತ್ತು ಅಕ್ಷಯ ಪಾತ್ರಾ ಫೌಂಡೇಷನ್ ನಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ನೈತಿಕತೆಯ ಮೇಲೆ ಅದು ಬೀರಬಹುದಾದ ಪರಿಣಾಮಗಳೇನು ಎಂಬುದನ್ನು ಗಮನಿಸೋಣ.
ತೀರಾ ಇತ್ತೀಚಿನವರೆಗೆ ಅಕ್ಷಯ ಪಾತ್ರಾ ಫೌಂಡೇಷನ್ ಗೆ ಸಂಬಂಧಿಸಿದಂತೆ, ಅವರು ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸುವುದಿಲ್ಲ ಎಂಬ ಕಾರಣಕ್ಕೆ ವಿವಾದ ಸದ್ದು ಮಾಡುತ್ತಿತ್ತು. ಹಾಗೇ ಪೌಷ್ಟಿಕಾಂಶ ಜ್ಞಾನಕ್ಕೆ ತದ್ವಿರುದ್ಧವಾಗಿ ಮಕ್ಕಳಿಗೆ ಮೊಟ್ಟೆ ನೀಡದೇ ಇರುವುದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಭಾರತದ ಮೇಲ್ಜಾತಿ ಆಹಾರ ಮೌಲ್ಯಗಳ ಪ್ರತಿಪಾದಕನಾದ ಬೆಂಗಳೂರು ಇಸ್ಕಾನ್ ನ ಕರ್ಮಠ ನಿಲುವಿನ ಪ್ರತಿಫಲ ಅದು ಎಂದೇ ಬಿಸಿಯೂಟಕ್ಕೆ ಸಂಬಂಧಿಸಿದ ಈ ಎರಡೂ ವಿವಾದಗಳನ್ನು ನೋಡಲಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಒಂದು ಸ್ವಾಯತ್ತ ಖಾಸಗೀ ಸಂಸ್ಥೆಯಾಗಿ ಇಸ್ಕಾನ್ ತನ್ನ ಅಂತಹ ನಂಬಿಕೆಯನ್ನು ಅನುಸರಿಸುವುದು, ಅಳವಡಿಸಿಕೊಳ್ಳುವುದು ಅದರ ಇಚ್ಛೆಗೆ ಬಿಟ್ಟ ಸಂಗತಿ. ಆದರೆ, ಇಸ್ಕಾನ್ ಆಶ್ರಯದಲ್ಲಿದ್ದರೂ, ಸುಮಾರು 2000 ಸಾಲಿನಲ್ಲಿ ಆರಂಭದಾದಂದಿನಿಂದಲೂ ಸಂಪೂರ್ಣ ಸ್ವತಂತ್ರ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಅಕ್ಷಯ ಪಾತ್ರಾ ಫೌಂಡೇಷನ್ ವಿಷಯದಲ್ಲಿ ಹಾಗೆ ಹೇಳಲಾಗುವುದಿಲ್ಲ. ಏಕೆಂದರೆ; ಅದು ತಾನು ಇಸ್ಕಾನ್ ನಿಂದ ಹೊರತಾದ ಸ್ವತಂತ್ರ ಸಂಸ್ಥೆ ಎಂಬುದನ್ನೇ ಮುಂದಿಟ್ಟುಕೊಂಡು ಖಾಸಗೀ ಮತ್ತು ಸಾರ್ವಜನಿಕ ಅನುದಾನ, ದೇಣಿಗೆಯನ್ನು ಪಡೆದುಕೊಂಡಿದೆ. ಮುಖ್ಯವಾಗಿ ಅಂತಹ ನೆಲೆಯ ಮೇಲೆಯೇ ಹಲವು ರಾಜ್ಯ ಸರ್ಕಾರಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಾರಿ ಏಜೆನ್ಸಿಯಾಗಿ ಅವಕಾಶ ಗಿಟ್ಟಿಸಿಕೊಂಡಿದೆ. ಸದ್ಯ ಅದೇ ಹಿನ್ನೆಲೆಯಲ್ಲಿಯೇ 14 ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಸಂಸ್ಥೆಗೆ ಅನುದಾನ ನೀಡುತ್ತಿವೆ. ದೇಶದ ವಿವಿಧೆಡೆ ಸುಮಾರು 19 ಸಾವಿರ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ನಿರ್ವಹಣೆಯನ್ನು ಅಕ್ಷಯ ಪಾತ್ರಾ ಫೌಂಡೇಷನ್ ನಿರ್ವಹಿಸುತ್ತಿದೆ.
ಅಕ್ಷಯ ಪಾತ್ರಾ ಫೌಂಡೇಷನ್ನಿನ ಆಡಳಿತ ಮಂಡಳಿಯಲ್ಲಿರುವ ಹೆಸರುಗಳನ್ನು ಗಮನಿಸಿದರೆ ಸಾಕು, ಯಾರು ಬೇಕಾದರೂ, ಆ ಸಂಸ್ಥೆ ಹೇಗೆ ಎರಡು ದಶಕಗಳ ಕಾಲ ಧಾರ್ಮಿಕ ಸಂಸ್ಥೆಗಳು, ಕಾರ್ಪೊರೇಟ್ ಕುಳಗಳು ಹೇಗೆ ಪರಸ್ಪರ ಕೈಜೋಡಿಸಿದರು. ಹೇಗೆ ಅಧಿಕಾರಶಾಹಿ ಮತ್ತು ರಾಜಕಾರಣಿಗಳು ಪ್ರಭಾವಿಸಿ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯಂತಹ ಮಹತ್ವದ ಯೋಜನೆಯನ್ನು ತನ್ನ ವಶ ಮಾಡಿಕೊಂಡಿತು ಎಂಬುದನ್ನು ಊಹಿಸಬಹುದು. ಇಸ್ಕಾನ್ ಮತ್ತು ಕಾರ್ಪೊರೇಟ್ ಕುಳಗಳ ನಡುವಿನ ಈ ಪಾಲುದಾರಿಕೆ ಅಸ್ತಿತ್ವಕ್ಕೆ ಬರುವ ಮುನ್ನ ಮಧ್ಯಾಹ್ನದ ಬಿಸಿಯೂಟ ಯೋಜನೆ ಎಂಬುದು ಒಂದು ಸಂಪೂರ್ಣ ಸ್ವಾಯತ್ತ ಸಮುದಾಯಿಕ ವ್ಯವಸ್ಥೆಯಾಗಿತ್ತು. ಈಗಲೂ ಅಕ್ಷಯಪಾತ್ರಾ ಯೋಜನೆ ತಲುಪದೇ ಇರುವ ಪ್ರದೇಶಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೆಯೇ ಮುಂದುವರಿದಿದೆ.
ಆದರೆ, ಅಕ್ಷಯಪಾತ್ರಾದ ಈ ಹೊಸ ವ್ಯವಸ್ಥೆಯಲ್ಲಿ ಬಿಸಿಯೂಟ ಎಂಬುದು ಹಸಿದ ಮಕ್ಕಳ ಹೊಟ್ಟೆ ತುಂಬಿಸುವ ಆಹಾರವಾಗಿ ಮಾತ್ರವಲ್ಲ; ಅವರ ಮೇಲೆ ಮೇಲ್ಜಾತಿ- ಸಮುದಾಯದ ಆಹಾರ ನಂಬಿಕೆಯನ್ನೂ ಹೇರುವ ಸಾಧನವಾಗಿ ಬಳಕೆಯಾಯಿತು. ಸೇವೆಯೊಂದಿಗೆ ಧಾರ್ಮಿಕ ನಂಬಿಕೆಯನ್ನೂ ಬಹಳ ಜಾಣ್ಮೆಯಿಂದ ಮಿಳಿತ ಮಾಡಲಾಯಿತು ಎಂಬುದು ಗಮನಾರ್ಹ. ಬಡ ಮಕ್ಕಳ ಹಸಿವಿನ ವಿಷಯವಾದ್ದರಿಂದ ಮತ್ತು ತನ್ನ ಹೈಜೆನಿಕ್ ಅಡುಗೆಮನೆ, ಭಷ್ಟಾಚಾರರಹಿತ ವ್ಯವಸ್ಥೆ, ಯಾವ ಅಡ್ಡಿಆತಂಕವಿರದ ಸರಬರಾಜು ವ್ಯವಸ್ಥೆ ಮತ್ತು ಮಕ್ಕಳ ನುಗುಮುಖಗಳೊಂದಿಗೆ ಅಕ್ಷಯಪಾತ್ರಾ ಸಂಸ್ಥೆ ಇಡೀ ಯೋಜನೆಯ ಜಾಹೀರಾತುಗಳನ್ನು ಪ್ರಚುರಪಡಿಸಿದ ಹಿನ್ನೆಲೆಯಲ್ಲಿ ನಂಬಿಕೆ ಮತ್ತು ಸೇವೆಯ ನಡುವಿನ ಸಂಬಂಧವನ್ನು ಪ್ರಶ್ನಿಸಲು ಬಹುತೇಕರು ಹಿಂಜರಿದರು. ಅದೂ ಸಾರ್ವಜನಿಕ ಹಣದಲ್ಲಿ ಒಂದು ಸಮುದಾಯದ ನಂಬಿಕೆಯನ್ನು ಅಮಾಯಕ ಮಕ್ಕಳ ಮೇಲೆ ಹೇರಲಾಗುತ್ತಿರುವುದನ್ನು ಪ್ರಶ್ನಿಸಲು ಕೂಡ ಬಹುತೇಕರು ಹಿಂಜರಿದರು.
ಹಾಗೆ ನೋಡಿದರೆ; ಅಕ್ಷಯಪಾತ್ರಾ ತೀರಾ ಇತ್ತೀಚಿನ ವರೆಗೆ ತನ್ನನ್ನು ತಾನು ಬಿಂಬಿಸಿಕೊಂಡಿದ್ದು ಕೂಡ ದೇಶದ ಕಾರ್ಪೊರೇಟ್ ವಲಯದ ಉತ್ಕೃಷ್ಟ ವ್ಯಕ್ತಿಗಳು ತಮ್ಮ ವೃತ್ತಿಪರ ಪ್ರಾವೀಣ್ಯತೆಯನ್ನೇ ಧಾರೆ ಎರೆದು ಮುನ್ನಡೆಸುತ್ತಿರುವ ಮಹಾನ್ ಆದರ್ಶದ ಸಂಸ್ಥೆ ಎಂದೇ. ಕಾಲಕ್ರಮೇಣದಲ್ಲಿ ಅಕ್ಷಯಪಾತ್ರಾ ಫೌಂಡೇಷನ್ ಬ್ರಾಂಡಿಂಗ್ ಹೇಗಾಯಿತು ಎಂದರೆ, ಸರ್ಕಾರದ ಭಾರೀ ಅನುದಾನದ ಮೇಲೆ ನಡೆಯುತ್ತಿರುವ ಸಂಸ್ಥೆ ಎನ್ನುವ ಬದಲು, ಅದೊಂದು ಬೆಂಗಳೂರು ಇಸ್ಕಾನ್ ನ ನಿಸ್ವಾರ್ಥ ಸೇವಾ ಸಂಸ್ಥೆ ಎಂದೇ ಜನಪ್ರಿಯವಾಯಿತು. ಹಾಗಿದ್ದರೂ ಸರ್ಕಾರದ ಅಧಿಕಾರಶಾಹಿಯಾಗಲೀ, ರಾಜಕಾರಣಿಗಳಾಗಲೀ ಅಂತಹ ಚಿತ್ರಣ ತಪ್ಪು ಎಂದು ವಾಸ್ತವ ಸಂಗತಿಯನ್ನು ಹೇಳುವ ಪ್ರಯತ್ನ ಮಾಡಲಿಲ್ಲ.
ಎನ್ ಆರ್ ನಾರಾಯಣಮೂರ್ತಿ, ಗುರುರಾಜ್ ‘ದೇಶ್’ ದೇಶಪಾಂಡೆ, ಡಾ ದೇವಿ ಶೆಟ್ಟಿ, ದೀಪಕ್ ಚೋಪ್ರಾ ಮತ್ತಿತರ ದೊಡ್ಡದೊಡ್ಡವರ ಹೆಸರುಗಳೊಂದಿಗೆ ಅಕ್ಷಯಪಾತ್ರಾಕ್ಕೆ ದೊರೆತ ಮಾನ್ಯತೆ ಮಾಧ್ಯಮಗಳು ಕೂಡ ಆ ಸಮೂಹವನ್ನು ಪ್ರಶ್ನಿಸಲಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತು. ಅಪರೂಪಕ್ಕೆ ಅಂತಹ ಪ್ರಯತ್ನಗಳು ನಡೆದರೂ, ಅಂತಹ ಅಭಿಪ್ರಾಯಗಳನ್ನು ಬದಲಿಸಲು ಅಥವಾ ಪ್ರಶ್ನೆಗಳನ್ನು ಹತ್ತಿಕ್ಕಲು ಎಲ್ಲಾ ಬಗೆಯ ಒತ್ತಡವನ್ನು ಪ್ರಯೋಗಿಸಲಾಯಿತು. ವಿಪರ್ಯಾಸದ ಸಂಗತಿಯೆಂದರೆ; ಎರಡು ದಶಕಗಳ ಸುದೀರ್ಘ ಅವಧಿಯ ಅಂತಹ ವರ್ಚಸ್ಸು ವೃದ್ಧಿಯ ಹೊರತಾಗಿಯೂ ಸಂಸ್ಥೆಯ ಸ್ವತಂತ್ರ ಟ್ರಸ್ಟಿಗಳಾದ ಟಿ ವಿ ಮೋಹನ್ ದಾಸ್ ಪೈ, ರಾಜ್ ಪಿ ಕೊಂಡೂರ್, ವಿ ಬಾಲಕೃಷ್ಣನ್ ಮತ್ತು ಅಭಯ್ ಜೈನ್ ಅವರು ಇದೀಗ ಹೇಳಿಕೆಗಳನ್ನು ನೀಡಿ, ಅಕ್ಷಯಪಾತ್ರಾ ಫೌಂಡೇಷನ್ನಿನ ಆಡಳಿತ ಲೋಪಗಳನ್ನು ಬಯಲುಮಾಡಿದ್ದಾರೆ. ಸಂಸ್ಥೆಯ ಲೋಪಗಳು ಮತ್ತು ಆ ಕುರಿತು ಸಾರ್ವಜನಿಕರ ಗಮನ ಸೆಳೆದಿರುವ ಸೊಲ್ಲಿಗರ(ವಿಷನ್ ಬ್ಲೋಯರ್ಸ್) ದೂರುಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಈ ಹಿಂದೆ ಬೆಂಗಳೂರು ಇಸ್ಕಾನ್, ಹಸಿದ ಹೊಟ್ಟೆ ತುಂಬಿಸುವ ನೆಪದಲ್ಲಿ; ಅದೂ ಸಾರ್ವಜನಿಕ ಹಣದಲ್ಲಿ; ಮುಗ್ಧ ಮಕ್ಕಳ ಮೇಲೆ ತನ್ನ ಕರ್ಮಠ ಆಹಾರ ಪದ್ಧತಿಯನ್ನು ಹೇರುವಾಗ ಪ್ರಶ್ನಿಸದೇ ಸುಮ್ಮನಿದ್ದ ಈ ಟ್ರಸ್ಟಿಗಳು ಈಗ ಸಂಸ್ಥೆಯ ಸ್ವಾಯತ್ತತೆ ಮತ್ತು ಅದರ ನಿರ್ವಹಣೆಯಲ್ಲಿ ಸ್ವತಂತ್ರ ಟ್ರಸ್ಟಿಗಳ ಹಿಡಿತದ ಪರ ದನಿ ಎತ್ತಿದ್ದಾರೆ. ಇದು ವಿಪರ್ಯಾಸ. ಅಕ್ಷಯ ಪಾತ್ರಾ ಫೌಂಡೇಷನ್ ಸಾರ್ವಜನಿಕ ಹಣದ ಹೊಣೆಗಾರಿಕೆ ಹೊತ್ತಿದೆ ಮತ್ತು ಆ ಕಾರಣಕ್ಕೆ ಅದರ ಆಡಳಿತದಲ್ಲಿ ಪಾರದರ್ಶಕತೆ ಬೇಕು ಎಂಬ ಪ್ರಶ್ನೆಯನ್ನು ಇಷ್ಟು ತಡವಾಗಿ ಏಕೆ ಕೇಳಲಾಗುತ್ತಿದೆ ಎಂಬುದು ಕುತೂಹಲಕಾರಿ ಸಂಗತಿ. ಹಾಗೇ ಬರೋಬ್ಬರಿ ಎರಡು ದಶಕಗಳ ಕಾಲ ಬೆಂಗಳೂರು ಇಸ್ಕಾನ್ ಮತ್ತು ಅಕ್ಷಯ ಪಾತ್ರಾ ಫೌಂಡೇಷನ್ ಪರಸ್ಪರ ಒಂದನ್ನೊಂದು ಆತುಕೊಂಡು ಬೆಳೆಯುತ್ತಿರುವಾಗ, ಆ ಎರಡರ ನಡುವಿನ ವಹಿವಾಟು, ವ್ಯವಹಾರಗಳ ಬಗ್ಗೆ ಯಾರೊಬ್ಬರೂ ಮಾತನಾಡಲಿಲ್ಲ ಏಕೆ ಎಂಬುದು ಕೂಡ ಅಚ್ಚರಿಯ ವಿಷಯವೇ. ಸಂಸ್ಥೆಗಳ ಲೆಕ್ಕಪತ್ರಗಳನ್ನು ಬಹುಶಃ ಪ್ರತ್ಯೇಕವಾಗಿ, ಬಹಳ ಸ್ವಚ್ಛವಾಗಿಟ್ಟಿರಬಹುದು. ಆದರೆ, ಊಟದ ವಿಷಯದಲ್ಲಿ ಅದು ಹೇರುತ್ತಿದ್ದ ನೈತಿಕತೆಗೆ ಸಂಬಂಧಿಸಿದಂತೆ ಟ್ರಸ್ಟಿಗಳು, ದಾನಿಗಳು ಮತ್ತು ಅನುದಾನ ನೀಡಿದ ಸರ್ಕಾರಗಳ ಮೇಲೆ ಒಂದು ನೈತಿಕ ಹೊಣೆಗಾರಿಕೆಯ ತೂಗುಕತ್ತಿ ಸದಾ ತೂಗುತ್ತಿತ್ತು. ಅಂತಹ ವಿಷಯಗಳಲ್ಲಿ ಒಂದು ವೇಳೆ ಎರಡು ದಶಕಗಳಿಂದ ಟ್ರಸ್ಟಿಗಳು ಮತ್ತು ಈ ಧಾರ್ಮಿಕ ಸಂಸ್ಥೆಗಳ ನಡುವೆ ತುಟಿ ಬಿರಿಯದ ಮಟ್ಟಿನ ಸಹಮತ ಇದ್ದಿದ್ದರೆ ಈಗ ಯಾಕೆ ಅದು ಮುರಿದುಬಿದ್ದಿದೆ? ಅದಕ್ಕೆ ಕಾರಣವೇನು?
ಕೆಲವು ತಿಂಗಳ ಹಿಂದೆ ಅಕ್ಷಯಪಾತ್ರಾದ ಆಂತರಿಕ ಲೆಕ್ಕಪತ್ರ ಪರಿಶೋಧನಾ ಸಮಿತಿಯ ಸದಸ್ಯರೊಬ್ಬರು(ಸುದ್ದಿಮೂಲದ ಕೋರಿಕೆ ಮೇರೆಗೆ ಅವರ ಹೆಸರನ್ನು ರಹಸ್ಯವಾಗಿಡಲಾಗಿದೆ) ಟ್ರಸ್ಟಿಗಳಿಗೆ ಬರೆದಿರುವ 3500 ಪದಗಳ ಪತ್ರ,ದಲ್ಲಿ ಇರುವ ಈ ಕೆಳಕಂಡ ವಿವರಗಳು ನಿಜಕ್ಕೂ ಆತಂಕಕಾರಿ. ಆ ಪತ್ರದ ಪದಶಃ ಮಾಹಿತಿ ಇಲ್ಲಿದೆ;
“ಒಬ್ಬ ಹೊರಗಿನವನಾಗಿ ನಾನು, ಅಕ್ಷಯಪಾತ್ರಾ ಫೌಂಡೇಷನ್ನಿನಲ್ಲಿ ಅತ್ಯುತ್ತಮ ಆಡಳಿತ ನೀತಿ ಪಾಲನೆಯಾಗುತ್ತಿದೆ ಎಂದು ಭಾವಿಸಿದ್ದೆ. ಆದರೆ, ಲೆಕ್ಕಪರಿಶೋಧನಾ ಸಮಿತಿ(ಎಸಿ) ಹೊಣೆ ವಹಿಸಿಕೊಂಡ ಬಳಿಕ ನನಗೆ ಹಲವು ಕೊರತೆಗಳು, ತಾಳೆಯಾಗದ ವಿವರಗಳು ಗಮನಕ್ಕೆ ಬಂದವು. ನನ್ನ ದೃಷ್ಟಿಯಲ್ಲಿ ಆ ಲೋಪಗಳು ಫೌಂಡೇಷನ್ನಿನ ಹೆಸರಿಗೆ ಮಸಿ ಬಳಿಯಬಲ್ಲಷ್ಟು ಗಂಭೀರ ಸಂಗತಿಗಳು…”
“ಹರೇಕೃಷ್ಣ ಫೌಂಡೇಷನ್, ಇಸ್ಕಾನ್ ಬೆಂಗಳೂರು, ಟಚ್ ಸ್ಟೋನ್ ಫೌಂಡೇಷನ್ ಮುಂತಾದ ದೇವಾಲಯದ ಟ್ರಸ್ಟುಗಳು ಫೌಂಡೇಷನ್ನಿಗೆ ಸಂಬಂಧಿತ ಸಂಸ್ಥೆಗಳೇ. ಫೌಂಡೇಷನ್ನಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು(ಮಧು ಪಂಡಿತ್ ದಾಸ್ ಮತ್ತು ಚಂಚಲಪತಿ ದಾಸ್) ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಅಥವಾ ತಮ್ಮ ಧಾರ್ಮಿಕ ಸಂಸ್ಥೆಗಳ ಮೂಲಕ ಅಂತಹ ಟ್ರಸ್ಟ್ ಮತ್ತು ಫೌಂಡೇಷನ್ ಮೇಲೆ ಅಧಿಕಾರ ಹೊಂದಿದ್ದಾರೆ. ಹಾಗೇ ಮತ್ತೊಂದು ಕಡೆ, ದೇವಾಲಯದ ಟ್ರಸ್ಟುಗಳ ಮತಪ್ರಚಾರಕರು ಕೂಡ ಅಕ್ಷಯಪಾತ್ರಾ ಮತ್ತು ಇತರೆ ಹಲವು ಧಾರ್ಮಿಕ ಘಟಕಗಳ ಘಟಕಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಮತ ಪ್ರಚಾರಕರು ಕೂಡ ಅಕ್ಷಯಪಾತ್ರಾದಲ್ಲಿ ಮಹತ್ವದ ಸ್ಥಾನಮಾನಗಳನ್ನು ಹೊಂದಿದ್ದಾರೆ. ಇಂತಹ ಸಂಕೀರ್ಣ ನಂಟಿನ ಹಿನ್ನೆಲೆಯಲ್ಲಿ ಅಕ್ಷಯಪಾತ್ರಾ ಮತ್ತು ದೇವಾಲಯ ಟ್ರಸ್ಟುಗಳ ನಡುವಿನ ಸಂಬಂಧ ಮತ್ತು ಚಟುವಟಿಕೆಗಳು ಪಾರದರ್ಶಕವಾಗಿವೆ. ಪಕ್ಕಾ ಲೆಕ್ಕಪತ್ರ ಹೊಂದಿವೆ ಮತ್ತು ಕೈಯಳತೆಯಲ್ಲೇ ಎಲ್ಲವೂ ಇವೆ”.
“ಧರ್ಮ ಪ್ರಚಾರಕರು ತಮ್ಮ ಕಾರ್ಯಕ್ಷಮತೆ, ಬದ್ಧತೆಯಂತಹ ವಿಷಯದಲ್ಲಿ ಉತ್ತರದಾಯಿತ್ವ ಇಲ್ಲದೆ ಮತ್ತು ಅಕ್ಷಯಪಾತ್ರದಂತಹ ಸಂಸ್ಥೆಯ ನಿಯಂತ್ರಣಕ್ಕೂ ಒಳಪಡದೆ ಯಾವುದೇ ಇದ್ದಂತಿದೆ. ಫೌಂಡೇಷನ್ನಿನ ಸಿಇಒ/ಸಿಎಫ್ ಒ/ ಕಾರ್ಪೊರೇಟ್ ಕಾರ್ಯಗಳಿಗೆ ಅವರುಗಳು ಬಹಳಮಟ್ಟಿಗೆ ಯಾವುದೇ ರೀತಿಯಲ್ಲಿ ಬಾಧ್ಯಸ್ಥರಾಗಿ ಇದ್ದಂತಿಲ್ಲ. ಇದು ಬಹಳ ಶಿಥಿಲವಾದ ಒಂದು ಪರಿಸ್ಥಿತಿ. ಫೌಂಡೇಷನ್ನಿನ ಆಡಳಿತ ಮಂಡಳಿಯ ಟ್ರಸ್ಟಿಗಳಿಗೆ ಮತ್ತು ಲೆಕ್ಕಪರಿಶೋಧನಾ ಸಮಿತಿಗೆ ಉತ್ತರದಾಯಿಯಲ್ಲದ ಮತ್ತು ಕೇವಲ ಧಾರ್ಮಿಕ ಮುಖ್ಯಸ್ಥರಿಗೆ ಮಾತ್ರ ಸಂಪೂರ್ಣ ಅಧಿಕಾರ ನೀಡುವ ವ್ಯವಸ್ಥೆ ಇದು..”
“ನಿರ್ದಿಷ್ಟ ಘಟಕಗಳ ನಿರ್ವಹಣೆ, ದೇಣಿಗೆ ಸಂಗ್ರಹ, ವಾಹನ ವೆಚ್ಚ, ಅನುದಾನ ಸಂಗ್ರಹದ ಕರ್ಚುವೆಚ್ಚ, ಬಾಡಿಗೆ ಹಂಚಿಕೆ, ಅನುದಾನ ಸಂಗ್ರಹ ಮುಂತಾದ ವಿಷಯದಲ್ಲಿ ಫೌಂಡೇಷನ್ ಮತ್ತು ದೇವಾಲಯ ಟ್ರಸ್ಟುಗಳ ನಡುವಿನ ವ್ಯವಹಾರಗಳು ಸ್ಪಷ್ಟವಾಗಿಲ್ಲ. ಈ ವಿಷಯದಲ್ಲಿ ಯಾವುದೇ ಲಿಖಿತ ಒಪ್ಪಂದ ಪತ್ರಗಳಾಗಲೀ, ಸ್ಪಷ್ಟತೆಯಾಗಲೀ ಇಲ್ಲ. ಬಹಳಷ್ಟು ಪ್ರಕರಣಗಳಲ್ಲಿ ಫೌಂಡೇಷನ್ನಿನ ಸಂಪನ್ಮೂಲ ಮೂಲಗಳ ದಾಖಲೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಹಿತಾಸಕ್ತಿ ಸಂಘರ್ಷ ತಲೆದೋರದಂತೆ ನೋಡಿಕೊಳ್ಳಲು ಅಗತ್ಯವಾದ ಸಮರ್ಪಕ ಲೆಕ್ಕಪತ್ರ ತಪಾಸಣೆಯ ಪದ್ಧತಿಯೇ ಇಲ್ಲ. ಹಲವು ಸಂದರ್ಭದಲ್ಲಿ ಅಸಮರ್ಪಕ ದಾಖಲೆಗಳು ಮತ್ತು ವರದಿಗಳು ಕಂಡುಬಂದಿದ್ದು, ಗಂಭೀರ ಲೋಪಗಳು ಪತ್ತೆಯಾಗಿವೆ..”
“ಕಳೆದ ಎರಡು ವರ್ಷಗಳಲ್ಲಿ ಫೌಂಡೇಷನ್ನಿನ ಘಟಕಗಳು ಮತ್ತು ಘಟಕಾಧ್ಯಕ್ಷರ ಕಾರ್ಯನಿರ್ವಹಣೆಯ ಬಗ್ಗೆ ಹಲವು ಸೊಲ್ಲಿಗರಿಂದ ಗಂಭೀರ ದೂರುಗಳು ಬಂದಿವೆ. ಆ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಬಹುತೇಕ ಪ್ರಕರಣಗಳಲ್ಲಿ ಘಟಕಾಧ್ಯಕ್ಷರು ಮತ್ತು ಇತರೆ ಮತ ಪ್ರಚಾರಕರ ಕಡೆಯಿಂದ ತಪ್ಪುಗಳಾಗಿರುವುದು ಆಧಾರಸಹಿತ ಸಾಬೀತಾಗಿದೆ..” “ಹಾಗೇ ಮತಪ್ರಚಾರಕರು ಸಮಯಕ್ಕೆ ಸರಿಯಾಗಿ ವಿವರಗಳನ್ನು ಒದಗಿಸುವ ಬದಲು ಮಾಹಿತಿ ತಿರುಚುವ ಉದ್ದೇಶದಿಂದ ತಮ್ಮದೇ ಆದ ಪ್ರತ್ಯೇಕ ಲೆಕ್ಕದ ಪುಸ್ತಕಗಳನ್ನು ನಿರ್ವಹಿಸುತ್ತಿದ್ದರು. ಹಾಗೇ ಪರಸ್ಪರ ಸಹಕಾರದ ಕೊರತೆ ಇರುವುದು ಕೂಡ ತನಿಖೆಯಲ್ಲಿ ಗೊತ್ತಾಗಿದೆ. ಜೊತೆಗೆ ವಿಶೇಷ ಲೆಕ್ಕಪತ್ರ ಪರಿಶೀಲನಾಧಿಕಾರಿಗಳ ಮೇಲೆ ಪ್ರಭಾವ ಬೀರಲು ಅವರೊಂದಿಗೆ ವ್ಯವಹಾರಿಕ ನಂಟು ಕುದುರಿಸುವ ಪ್ರಯತ್ನಗಳನ್ನೂ ಮಾಡಲಾಗಿದೆ. ಇಂತಹವು ಎಲ್ಲವೂ ಯಾವುದೇ ಒಳ್ಳೆಯ ಆಡಳಿತದ ಲಕ್ಷಣಗಳಲ್ಲ. ಅರ್ನ್ಸ್ಟ್ ಅಂಡ್ ಯಂಗ್ ವತಿಯಿಂದ 2020ರ ಅಕ್ಟೋಬರ್ ಹೊತ್ತಿಗೆ ವಿಶೇಷ ಲೆಕ್ಕಪರಿಶೋಧನೆ ಮುಗಿಯಬೇಕಿತ್ತು. ಆದರೆ, ಸಹಕಾರವಿಲ್ಲದೆ ಮತ್ತು ಮಾಹಿತಿ ಒದಗಿಸದೇ ಇದ್ದುದರಿಂದ ಮತ್ತು ಸಂಬಂಧಿತ ಲೆಕ್ಕಪತ್ರಗಳನ್ನು ಒದಗಿಸದೇ ಇರುವುದರಿಂದ(ಟ್ರಸ್ಟಿಗಳ ಸೂಚನೆ ಹೊರತಾಗಿಯೂ) ನಿಗದಿತ ಕಾಲಮಿತಿಯಲ್ಲಿ ಲೆಕ್ಕಪರಿಶೋಧನೆ ಪೂರ್ಣಗೊಂಡಿಲ್ಲ. ಉನ್ನತ ಮಟ್ಟದಲ್ಲಿನ ನಾಯಕತ್ವದಲ್ಲಿನ ಸಂಘರ್ಷದಿಂದ ರಕ್ಷಣೆ ಪಡೆಯುತ್ತಿರುವ ವ್ಯಕ್ತಿಗಳ ಕಾರಣದಿಂದ ಉದ್ಭವಿಸಿರುವ ಈ ಸ್ಥಿತಿಯ ಹಿನ್ನೆಲೆಯಲ್ಲಿ ನೋಡಿದರೆ, ವಸ್ತುನಿಷ್ಠವಾಗಿ ಲೆಕ್ಕಪರಿಶೋಧನೆ ನಡೆಯುತ್ತದೆ ಎಂಬುದೇ ಅನುಮಾನಾಸ್ಪದವಾಗಿದೆ..”
“ಅಕ್ಷಯಪಾತ್ರಾ ಒದಗಿಸುವ ಊಟದ ದರ ಎಂದಿನಿಂದಲೂ ಒಂದು ತಲೆನೋವಿನ ಸಂಗತಿಯಾಗೇ ಇದೆ. ಇತರೆ ಯಾವುದೇ ಸಂಘಟನೆ ಒದಗಿಸುವ ಇಂತಹದ್ದೇ ಊಟದ ದರಕ್ಕಿಂತ ಈ ದರ ಬಹಳ ದುಬಾರಿಯಾಗಿದೆ. ಈ ಕುರಿತ ಪ್ರಶ್ನೆ/ ಪರಿಶೀಲನೆಗಳಿಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಏಕೆಂದರೆ; ಧಾರ್ಮಿಕ ಘಟಕಗಳ ಅಧ್ಯಕ್ಷರು ಆಯಾ ಘಟಕ ಮಟ್ಟದ ಅಡುಗೆಮನೆಗಳನ್ನು ನಿರ್ವಹಿಸುತ್ತಿದ್ದು, ಅವರು ಅಕ್ಷಯಪಾತ್ರಾ ಸಂಸ್ಥೆಗೆ ಯಾವುದೇ ಬಗೆಯಲ್ಲಿ ಉತ್ತರದಾಯಿಗಳಾಗಿ ಉಳಿದಿಲ್ಲ..”
ಹೀಗೆ ಹೇಳಿರುವ ಆಂತರಿಕ ಲೆಕ್ಕಪರಿಶೋಧಕರು, ಕೊನೆಯಲ್ಲಿ, ಒಂದು ಸಮಗ್ರ ವಿಧಿವಿಜ್ಞಾನ ತನಿಖೆ ಕೂಡ ಅಗತ್ಯವಿದೆ ಎಂದು ಹೇಳುತ್ತಾರೆ. ಈ ಪತ್ರದಲ್ಲಿ ಮಾಡಿರುವ ಆರೋಪಗಳ ಸತ್ಯಾಸತ್ಯತೆ ಬಗ್ಗೆ ದ ವೈರ್ ಪ್ರತ್ಯೇಕ ಪರಿಶೀಲನೆ ನಡೆಸಿಲ್ಲ. ಈ ಮೇಲಿನ ಪತ್ರದ ಬಗ್ಗೆ ಸಮಿತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ, ಮತಪ್ರಚಾರಕರು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ಅಭಿಪ್ರಾಯ ಕೋರಿದ್ದರು ಎನ್ನಲಾಗಿದೆ. ಲೆಕ್ಕಪರಿಶೋಧನಾ ಸಮಿತಿಯ ಸದಸ್ಯ ಸುರೇಶ್ ಸೇನಾಪತಿ ಅವರಿಗೆ ಸಂಬಂಧಿಸಿದ ಇತರೆ ಆಡಳಿತ ಮಂಡಳಿಗಳಿಗೆ ಸಂಬಂಧಿಸಿದಂತೆ ಈ ಸಲಹೆ ಕೋರಲಾಗಿತ್ತು. ಆದರೆ, ಅಕ್ಷಯಪಾತ್ರಾ ಫೌಂಡೇಷನ್ನಿಗೆ ಸಂಬಂಧಿಸಿದಂತೆ ಅಲ್ಲ. ಆದರೆ, ಅದನ್ನೇ ನೈತಿಕ ದಾಳವಾಗಿ ಬಳಸಿ, ಸಮಿತಿಯ ಬಾಯಿ ಮುಚ್ಚಿಸಲು ಯತ್ನಿಸಲಾಯಿತು. ತಮ್ಮ ಕಾರ್ಪೊರೇಟ್ ಸಹೋದ್ಯೋಗಿಯ ಪರ ನಿಂತು ಸ್ವತಂತ್ರ ಟ್ರಸ್ಟಿಗಳು ದನಿ ಎತ್ತಲು ಇದೂ ಒಂದು ಕಾರಣ.
ಧಾರ್ಮಿಕ ಸಂಸ್ಥೆಯ ಟ್ರಸ್ಟಿಗಳು 2020ರ ನವೆಂಬರ್ 14ರಂದು ಅಕ್ಷಯ ಪಾತ್ರಾ ಫೌಂಡೇಷನನ್ನು ಪುನರ್ ರಚಿಸಿದಾಗ, ಟ್ರಸ್ಟಿನಿಂದ ಹೊರಹೋದ ಪ್ರಮುಖ ಟ್ರಸ್ಟಿಯೊಬ್ಬರು(ಅವರ ಕೋರಿಕೆಯಂತೆ ಹೆಸರು ಬಹಿರಂಗಪಡಿಸುತ್ತಿಲ್ಲ), ಸಂಸ್ಥೆಯ ಟ್ರಸ್ಟಿಗಳಿಗೆ ಬಹಳ ಖಾರವಾಗಿ ಮತ್ತು ನಿಷ್ಠುರವಾಗಿ, ಹಲವು ಸಂಗತಿಗಳನ್ನು ಬಹಿರಂಗಪಡಿಸುವ ಒಂದು ಮೇಲ್ ಕಳಿಸಿದರು. ಆ ಪತ್ರದ ಕೆಲವು ಭಾಗಗಳ ಯಥಾ ರೂಪ ಇಲ್ಲಿದೆ;
“ಅಭಯ್ ಜೊತೆಯಾಗಿ ಅಕ್ಷಯ ಪಾತ್ರಾದ ಸಂಸ್ಥಾಪಕರಲ್ಲಿ ಒಬ್ಬನಾಗಿ, ನೀವು ಮತ್ತು ಸ್ವಾಮಿ ಎಂಪಿಡಿ(ಮಧು ಪಂಡಿತ್ ದಾಸ್) ಕೆಲಸದಿಂದ ನನಗೆ ಬಹಳ ಬೇಸರ ಮತ್ತು ನೋವಾಗಿದೆ. ಲೆಕ್ಕಪರಿಶೋಧನಾ ಸಮಿತಿ ಹೊರಹಾಕಿದ ನಿಮ್ಮ ವ್ಯವಹಾರವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದೀರಿ..!”
“ಮುಂಬೈ ಇಸ್ಕಾನ್ ನಿಂದ ಹಲವು ಗಂಭೀರ ಕೃತ್ಯಗಳಿಗಾಗಿ ಆರೋಪಿತರಾಗಿರುವ ಸ್ವಾಮಿ ಎಂಪಿಡಿ, ಅಪರಾಧಿ ಎಂದು ಹೈಕೋರ್ಟ್ ಹೇಳಿತ್ತು. ನಂತರ ಸುಪ್ರೀಂಕೋರ್ಟ್ ಆ ಪ್ರಕರಣಕ್ಕೆ ತಡೆಯಾಜ್ಞೆ ನೀಡಿತ್ತು. ನ್ಯಾ. ರವೀಂದ್ರನ್ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ, ಬೆಂಗಳೂರು ದೇವಾಲಯ ಮತ್ತು ಅದರ ಹಣಕಾಸಿನ ಮೇಲೆ ಕಣ್ಗಾವಲು ಇಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಅಂದರೆ, ನಿಮ್ಮ ಮೇಲೆ ನ್ಯಾಯಾಲಯಕ್ಕೆ ನಂಬಿಕೆ ಇರಲಿಲ್ಲ. ಇದಕ್ಕಿಂತ ಕೆಟ್ಟ ಪರಿಸ್ಥಿತಿ ಇನ್ನೇನು ಬೇಕಿತ್ತು? ಇದರ ಬಗ್ಗೆ ನಮಗೆ ಗೊತ್ತಿತ್ತು. ಆದರೂ ನಾವು ನಿಮ್ಮನ್ನಾಗಲೀ ಅಥವಾ ಎಂಪಿಡಿಯವರನ್ನಾಗಲೀ ಆಡಳಿತ ಮಂಡಳಿ ಸಭೆಯಿಂದಾಗಲೀ ಅಥವಾ ಅಕ್ಷಯಪಾತ್ರಾ ಫೌಂಡೇಷನ್ನಿನಿಂದಾಗಲೀ ದೂರವಿರಿ ಎಂದು ಹೇಳಲಿಲ್ಲ. ಆದರೂ ಎಂಪಿಡಿ ತೀರಾ ಕ್ಷುಲ್ಲಕ ವಿಷಯಗಳನ್ನು ಇಟ್ಟುಕೊಂಡು ದ್ವೇಷ ಸಾಧಿಸತೊಡಗಿದರು..”
“ಒಂದು ಸಮಾನ ನಂಬಿಕೆಯ ಮೇಲೆ ನಾವು ಈ ಟ್ರಸ್ಟ್ ಸೇರಿದ್ದೆವು. ಆದರೆ ಹತ್ತು ವರ್ಷಗಳ ಹಿಂದೆ, ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಎಂಪಿಡಿ ಆ ಟ್ರಸ್ಟನ್ನು ಬದಲಾಯಿಸಿದರು. ನಿಮ್ಮ ಮೇಲೆ ನಂಬಿಕೆ ಇಟ್ಟು ನಾವು ಅದನ್ನೂ ಒಪ್ಪಿಕೊಂಡೆವು. ಆದರೆ, ಈಗ ನೀವು ನಂಬಿಕೆ ದ್ರೋಹ ಬಗೆದಿರಿ. ಸ್ವತಂತ್ರ ಟ್ರಸ್ಟಿಗಳನ್ನು ಬದಿಗೆ ಸರಿಸಿದಿರಿ..”
“ಇದು ಟ್ರಸ್ಟ್ ಗೆ ಬಗೆದ ದ್ರೋಹ. ಟ್ರಸ್ಟ್ ಡೀಡ್ ಪ್ರಕಾರ ಸ್ವತಂತ್ರ ಟ್ರಸ್ಟಿಗಳನ್ನೊಳಗೊಂಡ ಮತ್ತು ಸರಿಸಮಾನ ಮತದಾನದ ಹಕ್ಕಿನ ಟ್ರಸ್ಟ್ ವಿನಃ, ಒಳಗಿನವರೇ ತುಂಬಿಕೊಂಡ ಟ್ರಸ್ಟ್ ಎಂದಲ್ಲ. ದಯಮಾಡಿ ಅದನ್ನು ಇದನ್ನು ಮತ್ತೊಮ್ಮೆ ಓದಿ..”
“ನಿಮಗೆ ತಕ್ಕಂತೆ ತಲೆಯಾಡಿಸುವ ಮತ್ತು ತಮಗೆ ಯಾವ ಅಧಿಕಾರವೂ ಇಲ್ಲ ಎಂಬುದನ್ನು ಒಪ್ಪಿಕೊಳ್ಳುವ ಸಿಇಒ ಮತ್ತು ಸಿಎಫ್ ಒ ಅವರನ್ನು ಇಟ್ಟುಕೊಂಡು ನೀವಿಬ್ಬರೂ ಅಕ್ಷಯಪಾತ್ರಾವನ್ನು ನಿಮ್ಮ ಹಿಡಿತದಲ್ಲಿಟ್ಟುಕೊಂಡಿದ್ದೀರಿ. ಅದರ ಸ್ವತ್ತುಗಳನ್ನು ಬಳಸಿಕೊಂಡದ್ದಕ್ಕೆ ಪ್ರತಿಯಾಗಿ ಅಕ್ಷಯಪಾತ್ರಾಕ್ಕೆ ನೀವೇನೂ ನೀಡಿಲ್ಲ. ಲೆಕ್ಕಪರಿಶೋಧನಾ ಸಮಿತಿ ಈ ಲೋಪವನ್ನು ಪತ್ತೆ ಮಾಡಿ, ಸತ್ಯಾಸತ್ಯತೆ ಕಂಡುಹಿಡಿಯಲು ಸ್ವತಂತ್ರ ಏಜೆನ್ಸಿ ಮೂಲಕ ತನಿಖೆ ನಡೆಸಲು ಮುಂದಾದಾಗ ಆ ಸಮಿತಿಯ ಕಾರ್ಯಕ್ಕೆ ಅಡ್ಡಿಪಡಿಸುವ ಯತ್ನ ಮಾಡಿದಿರಿ. ಅದರ ಭಾಗವಾಗಿ, ಎಲ್ಲವನ್ನೂ ಸರಿಪಡಿಸಲು ಅಪಾರ ಸಮಯ ಮತ್ತು ಶಕ್ತಿ ವ್ಯಯಿಸಿದ ಸಮಿತಿಯ ಒಬ್ಬ ಸದಸ್ಯರ ವಿರುದ್ಧ ದಾಳಿಗೆ ಇಳಿದಿರಿ. ಅಕ್ಷಯಪಾತ್ರಾದ ಆಸ್ತಿ ಮತ್ತು ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುವ ವಿಷಯದಲ್ಲಿ ನೀವಿಬ್ಬರೂ ಜಂಟಿ ಸಹಭಾಗಿಗಳು. ಆದರೆ, ಬೇರೆಯವರಿಗೆ ನೈತಿಕತೆ ಪಾಠ ಮಾಡುತ್ತಿದ್ದೀರಿ. ನಿಮ್ಮ ಈ ಆಶಾಢಭೂತಿತನ ಮತ್ತು ವಂಚಕತನದ ಬಗ್ಗೆ ನಾಚಿಕೆಪಡಬೇಕು..”
“ಜೈಪುರದ ನಿಮ್ಮ ಭಕ್ತ ಅಧ್ಯಕ್ಷರ ವಿರುದ್ಧ ಸೊಲ್ಲಿಗರು(ವಿಷಲ್ ಬ್ಲೋಯರ್ಸ್) ದೂರು ನೀಡಿದ್ದಾರೆ. ಮಥುರಾದಲ್ಲಂತೂ ಹೇಗೆ ಅವರು ಅಲ್ಲಿನ ಸಿಇಒ, ಸಿಎಫ್ಒ ಸೇರಿದಂತೆ ಸಿಬ್ಬಂದಿಯನ್ನು ನಪುಂಸಕರನ್ನಾಗಿಸಿ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿದರು. ಸಂಸ್ಥೆಯ ಆಸ್ತಿಪಾಸ್ತಿ ದುರುಪಯೋಗಪಡಿಸಿಕೊಂಡರು. ಈ ಬೆಳವಣಿಗೆಗಳು ಯಾವೊಬ್ಬ ಟ್ರಸ್ಟಿಗೂ ತಿಳಿಯಲೇ ಇಲ್ಲ. ಆದರೆ, ಅತೃಪ್ತ ಸಿಬ್ಬಂದಿಗಳಲ್ಲೇ ಕೆಲವರಾದ ಸೊಲ್ಲಿಗರಿಗೆ ಈ ಎಲ್ಲವೂ ತಿಳಿದಿತ್ತು. ಜೈಪುರದಲ್ಲಿ ಅಲ್ಲಿನ ಸಿಎಂ ಕಚೇರಿಯ ವ್ಯಕ್ತಿಯೊಬ್ಬರೇ ಅಕ್ಷಯಪಾತ್ರಾದ ದುರುಪಯೋಗದ ಬಗ್ಗೆ ಪತ್ರಬರೆದು ಲೋಪ ಎತ್ತಿತೋರಿಸಿದರು. ನಿಮಗೆಲ್ಲಾ ಗೊತ್ತಿದ್ದ ಮತ್ತು ನಮ್ಮಿಂದ ಮುಚ್ಚಿಟ್ಟಿದ್ದ ರಸೀದಿ ಪುಸ್ತಕಗಳ ಕುರಿತು ಅವರು ಬೊಟ್ಟುಮಾಡಿದ್ದರು..”
“ನೀವು ಎನ್ ಆರ್ ಎನ್(ಎನ್ ಆರ್ ನಾರಾಯಣಮೂರ್ತಿ) ಮತ್ತು ದೇಶ್(ಗುರುರಾಜ್ ‘ದೇಶ್’ ದೇಶಪಾಂಡೆ) ಹೆಸರುಗಳನ್ನು ದುರುಪಯೋಗಪಡಿಸಿಕೊಂಡು ಅಮೆರಿಕದಲ್ಲಿನ ಟ್ರಸ್ಟಿಗಳಾದ ಲೆಕ್ಕಪರಿಶೋಧಕರನ್ನು ಪ್ರಭಾವಿಸಲು ಯತ್ನಿಸಿದಿರಿ. ಅವರಿಗೆ ವಾಸ್ತವಾಂಶಗಳ ಸುಳಿವು ನೀಡದೆ, ನಿಮ್ಮ ಅಕ್ರಮಗಳನ್ನು ಮುಚ್ಚಿಹಾಕಲು ಅವರ ಆಶೀರ್ವಾದವೂ ಇದೆ ಎಂಬಂತೆ ಬಿಂಬಿಸಿದಿರಿ..”
“20 ವರ್ಷಗಳಿಂದ ನಾವು ನಿಮ್ಮಿಬ್ಬರನ್ನೂ ನಂಬಿದ್ದೆವು. ತೀರಾ ಅಗತ್ಯದ ಹೊತ್ತಲ್ಲಿ ನಿಮ್ಮ ಜೊತೆ ನಿಂತೆವು. ಸರ್ಕಾರ ಮತ್ತು ಇತರರ ಎದುರು ನಿಮ್ಮ ಹಿತ ಕಾಪಾಡಿದೆವು. ನಿಮ್ಮ ನಡುವಿನ ಗುಂಪುಗಾರಿಕೆ ಹೊತ್ತಲ್ಲಿ, ಸಂಘರ್ಷದ ಹೊತ್ತಲ್ಲಿ ನಿಮ್ಮ ಪರ ವಹಿಸಿದೆವು. ನಿಮ್ಮ ಕೃತ್ಯಗಳ ವಿಷಯದಲ್ಲಿ ಅನುಮಾನ, ಆಕ್ರೋಶಗಳು ಕೇಳಿಬಂದಾಗ ಜನರ ಮುಂದೆ ನಿಮ್ಮನ್ನು ಸಮರ್ಥಿಸಿಕೊಂಡೆವು. ಅದೆಲ್ಲಕ್ಕೆ ಪ್ರತಿಯಾಗಿ ನಾವು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಮುಕ್ತ ನಡವಳಿಕೆ ಬೇಕೆಂದೆವು. ಆದರೆ ನೀವು ನಮಗೆ ಬೆನ್ನಲ್ಲಿ ಚೂರಿ ಹಾಕಿದಿರಿ, ವಾಸ್ತವಾಂಶಗಳನ್ನು ತಿರುಚಿ, ವಂಚಿಸಿದಿರಿ..”
“ಶ್ರೀ ಕೃಷ್ಣ ಪರಮಾತ್ಮ ಎಲ್ಲವನ್ನೂ ಬಲ್ಲ ಎಂದುಕೊಳ್ಳೋಣ. ವಂಚನೆ ಮತ್ತು ಅದನ್ನು ಮುಚ್ಚಿಹಾಕುವವರಿಗೆ ತಕ್ಕ ಪಾಠ ಕಲಿಸುತ್ತಾನೆ ಎಂದು ನಂಬಿಕೆ ಇದೆ. ಧರ್ಮ ಗೆಲ್ಲುತ್ತದೆ. ಈ ವಿಷಯದಲ್ಲಿ ನೀವಿಬ್ಬರೂ ಧರ್ಮದ ಕಡೆ ಇಲ್ಲ ಎಂಬುದು ಮಾತ್ರ ದಿಟ!..”
ಈ ಪತ್ರದಲ್ಲಿನ ವಿವರಗಳ ಸತ್ಯಾಸತ್ಯತೆಯನ್ನು ಕೂಡ ‘ದ ವೈರ್’ ವೈಯಕ್ತಿಕವಾಗಿ ಪರಿಶೀಲಿಸಿಲ್ಲ. ರಾಜೀನಾಮೆ ನೀಡಿ ಹೊರಹೋಗುತ್ತಿರುವ ಮತ್ತೊಬ್ಬ ಟ್ರಸ್ಟಿ ಕೂಡ ಆಂತರಿಕ ಲೆಕ್ಕಪರಿಶೋಧನಾ ಸಮಿತಿಯ ವರದಿಯನ್ನು ಒಪ್ಪಿಕೊಂಡಿದ್ದಾರೆ. ಅವರು 2020ರ ನವೆಂಬರ್ 9ರಂದು ಬರೆದಿರುವ ಮತ್ತೊಂದು ಪತ್ರದಲ್ಲಿ ಅದನ್ನು ಉಲ್ಲೇಖಿಸಿದ್ದಾರೆ ಕೂಡ. “ನಿಮ್ಮ ಕೃತ್ಯಗಳಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ನನಗೆ ನಂಬಿಕೆ ಇದೆ ಮತ್ತು ಅದನ್ನು ಬೇಡಿಕೊಳ್ಳುತ್ತೇನೆ ಕೂಡ. ಮುಖ್ಯವಾಗಿ ಈ ಎಲ್ಲಾ ಸಂಗತಿಗಳ ಕುರಿತು ನಂಬಿಕಸ್ಥರಿಂದ ಸೂಕ್ತ ತನಿಖೆಯಾಗಿ, ನೀವು ಮುಚ್ಚಿಹಾಕಿರುವ ಇಡೀ ಕೊಳಕು ಹೊರಬರುತ್ತದೆ ಎಂದು ನಂಬಿದ್ದೇನೆ. ಆ ಮೂಲಕ ನಿಮ್ಮ ದುಷ್ಟ ಹಿಡಿತದಿಂದ ಅಕ್ಷಯಪಾತ್ರಾ ಪಾರಾಗಲಿದೆ ಎಂದೂ ಆಶಿಸುತ್ತೇನೆ..” ಎಂದು ಅವರು ಆ ಪತ್ರದಲ್ಲಿ ಹೇಳಿದ್ದಾರೆ.
ಅಕ್ಷಯ ಪಾತ್ರಾ ಫೌಂಡೇಷನ್ ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸ್ವತಂತ್ರ ಟ್ರಸ್ಟಿಗಳಲ್ಲಿ ಒಬ್ಬರಾದ ಅಭಯ್ ಜೈನ್ 2020ರ ಫೆಬ್ರವರಿಯಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಕುತೂಹಲದ ಸಂಗತಿ ಎಂದರೆ, ಆಗ ಅವರ ಪರವಾಗಿ ಯಾವೊಬ್ಬ ಟ್ರಸ್ಟಿಗಳು ದನಿ ಎತ್ತಿರಲಿಲ್ಲ. ಎರಡು ದಶಕಗಳ ಕಾಲ ಜೊತೆಯಾಗಿದ್ದರೂ ಉಳಿದ ಟ್ರಸ್ಟಿಗಳೆಲ್ಲೂ ಅಭಯ್ ಜೈನ್ ರಾಜೀನಾಮೆ ವಿಷಯದಲ್ಲಿ ಮೌನವಹಿಸಿದ್ದರು. ಆ ಬಳಿಕ ಕ್ರಮೇಣ ವಿಷಯ ಕಾವೇರಿತು. ಒಂದು ಮೂಲದ ಪ್ರಕಾರ, ಸ್ವತಂತ್ರ ಟ್ರಸ್ಟಿಗಳು ರಾಜೀನಾಮೆ ನೀಡುವ ಉದ್ದೇಶ ಹೊಂದಿರಲಿಲ್ಲ. ಆದರೆ, ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ವಾಸ್ತವವಾಗಿ ವಿವಾದ ಆರಂಭವಾಗುತ್ತಿದ್ದಂತೆ 2020ರ ಅಕ್ಟೋಬರ್ 18ರಂದು ಅಕ್ಷಯಪಾತ್ರಾ ಫೌಂಡೇಷನ್ ಅಧ್ಯಕ್ಷ ಮಧು ಪಂಡಿತ್ ದಾಸ್, ಸ್ವತಂತ್ರ ಟ್ರಸ್ಟಿಯೊಬ್ಬರಿಗೆ ಬಹಳ ‘ಒತ್ತಾಯಪೂರ್ವಕ’ ಮನವಿ ಮಾಡಿದರು.
ದಾಸ್ ಬರೆದ ಆ ಪತ್ರದ ಯಥಾ ರೂಪ ಇಲ್ಲಿದೆ;
“ಹರೇ ಕೃಷ್ಣ, ನಿಮ್ಮ ರಾಜೀನಾಮೆ ಪತ್ರ ನೋಡಿ ನೋವಾಗಿದೆ. ಹಲವು ವರ್ಷಗಳ ಕಾಲ ನೀವು ಅಕ್ಷಯಪಾತ್ರಾದ ಆಧಾರ ಸ್ತಂಭವಾಗಿದ್ದಿರಿ. ನಿಮ್ಮ ಸೇವೆಯನ್ನು ಕಳೆದುಕೊಳ್ಳುವುದು ನೋವಿನ ಸಂಗತಿ. ನಿಮ್ಮಂಥ ಸ್ಫೂರ್ತಿದಾಯಕ ಟ್ರಸ್ಟಿಗಳನ್ನು ಕಳೆದುಕೊಳ್ಳುವುದು ಈ ದೇಶದ ಮಕ್ಕಳ ಹಿತದ ಕಾರ್ಯಕ್ಕೆ ದೊಡ್ಡ ನಷ್ಟವೇ ಸರಿ..”
“ಎರಡು ದಶಕಗಳ ಕಾಲ ನಾವು ಪರಸ್ಪರ ಹೊಂದಾಣಿಕೆಯಿಂದ ಅನ್ಯೂನತೆಯಿಂದ ಕೆಲಸ ಮಾಡಿದ್ದೇವೆ. ಒಂದು ವಿಷಯದ ಬಗೆಗಿನ ಭಿನ್ನಾಭಿಪ್ರಾಯ ನಮ್ಮನ್ನೆಲ್ಲಾ ಬೇರೆ ಮಾಡಬಾರದು. ಅದು ಕೇವಲ ಭಿನ್ನಾಭಿಪ್ರಾಯ ಮಾತ್ರ ಎಂದು ನನಗನಿಸುವುದಿಲ್ಲ. ಬಹಳಷ್ಟು ಊಹಾಪೋಹದ ನಡುವೆ ಈ ಸೊಲ್ಲಿಗರ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ನಡುವೆ ಸಾಕಷ್ಟು ಅಪನಂಬಿಕೆ ಬೆಳೆದುಬಿಟ್ಟಿದೆ. ಅಂತಿಮವಾಗಿ ಕೃಷ್ಣನಿಗೆ ಎಲ್ಲ ಸತ್ಯ ಗೊತ್ತಿದೆ. ವದಂತಿಗಳು ದಾರಿತಪ್ಪಿಸುತ್ತವೆ. ಇದು ನಮ್ಮ ವಿಧಿ ಎಂದುಕೊಳ್ಳುತ್ತೇನೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ಹೊರತುಪಡಿಸಿ ಉಳಿದಂತೆ ನಂಬಿಕೆಯನ್ನು ಕಳೆದುಕೊಳ್ಳುವಂತಹ ಏನನ್ನೂ ಮಾಡಿಲ್ಲ..”
“ನಾನು ನಿನ್ನೆ ಮೋಹನ್(ಟಿ ವಿ ಮೋಹನ್ ದಾಸ್ ಪೈ) ಅವರಿಗೆ ವೈಯಕ್ತಿಕವಾಗಿ ಕೋರಿಕೊಂಡಿದ್ದೇನೆ. ಹಲವು ಬಾರಿಯ ಕೋರಿಕೆಯ ಹೊರತಾಗಿಯೂ ಬಾಲಾ(ವಿ ಬಾಲಕೃಷ್ಣನ್) ತಮ್ಮ ನಿಲುವು ಸಡಿಲಿಸಿಲ್ಲ. ಸೊಲ್ಲಿಗರ ವಿಷಯದಲ್ಲಿ ನಮ್ಮ ನಿಲುವಿನ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡುತ್ತಿದ್ದಾರೆ. ಆದರೆ, ಮೋಹನ್ ತಮ್ಮ ನಿರ್ಧಾರವನ್ನು ಬದಲಾಯಿಸುವ ವಿಶ್ವಾಸ ಇದೆ. ನೀವೂ ಕೂಡ ನಿಮ್ಮ ರಾಜೀನಾಮೆ ನಿರ್ಧಾರ ಬದಲಿಸಿ ಎಂದು ಕೋರುತ್ತೇನೆ ಮತ್ತು ಮೋಹನ್ ಅವರಿಗೆ ಉಳಿದುಕೊಳ್ಳುವಂತೆ ಮನವೊಲಿಸಿ..”
ಇಷ್ಟಾಗಿಯೂ ನಿಮಗೆ ನಮ್ಮೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎನಿಸಿದರೆ, ಹೊಸ ಮಂಡಳಿ ರಚನೆಯಾದ ಬಳಿಕ ಮತ್ತು ಲೆಕ್ಕ ಪರಿಶೋಧನಾ ಸಮಿತಿ ಮುಂದೆ ಬಾಕಿ ಇರುವ ವಿಷಯಗಳನ್ನು ಬಗೆಹರಿಸಿ ನಂತರ ಹೊರಹೋಗುವ ಮೂಲಕ ಸಂಸ್ಥೆಯ ಘನ ಉದ್ದೇಶಕ್ಕೆ ನ್ಯಾಯ ಒದಗಿಸಿ. ಒಬ್ಬ ಟ್ರಸ್ಟಿಯಾಗಿ ಅದು ನಿಮ್ಮ ಕರ್ತವ್ಯವಲ್ಲವೆ? ಮಂಡಳಿಗೆ ರಾಜೀನಾಮೆ ನೀಡಿದ ಬಳಿಕ ನೋಟಿಸ್ ಅವಧಿ ನೀಡಿ, ನಮಗೆ ಉಪಕಾರ ಮಾಡಿ. ಒಬ್ಬ ಟ್ರಸ್ಟಿಯಾಗಿ ಎರಡು ದಶಕ ಕಾಲ ಹೊಣೆ ಹೊತ್ತ ಬಳಿಕ, ನೀವು ಈಗ ದಿಢೀರನೇ ನಿಮ್ಮೆಲ್ಲರ ರಾಜೀನಾಮೆಯಿಂದ ಉದ್ಭವವಾಗುವ ಪರಿಸ್ಥಿತಿ ನಿಭಾಯಿಸಲು ಸಹಕರಿಸಬೇಕು..”
ಒಟ್ಟಾರೆ, ಈ ಗಂಭೀರ ಆರೋಪಗಳು ಮತ್ತು ಅವು ಸಾರ್ಜನಿಕ ಹಣಕಾಸು ಅನುದಾನದ ವಿಷಯಕ್ಕೆ ಸಂಬಂಧಪಟ್ಟ ಆರೋಪಗಳಾಗಿರುವುದರಿಂದ ಬಹುಮುಖ ತನಿಖೆ ನಡೆದಲ್ಲಿ ಮಾತ್ರ ಈ ವಿವಾದದ ಕುರಿತು ಸ್ಪಷ್ಟತೆ ಮತ್ತು ವಾಸ್ತವಾಂಶ ಹೊರಬರಲು ಸಾಧ್ಯ. ಮತಪ್ರಚಾರಕರು ಮತ್ತು ಸ್ವತಂತ್ರ ಟ್ರಸ್ಟಿಗಳಿಬ್ಬರು ಪತ್ರದಲ್ಲೂ ಉಲ್ಲೇಖಿಸಿರುವ ದೇವರ ನ್ಯಾಯ ಎಂಬುದು ಈ ಎಲ್ಲಾ ತನಿಖೆಗಳು ಮುಗಿಯುವವರೆಗೆ ಕಾರ್ಯರೂಪಕ್ಕೆ ಬರಲಾರದು. ಅಥವಾ ದೇವರ ತೀರ್ಪಿನ ಮೇಲೆ ಯಾರಿಗೂ ನಿಯಂತ್ರಣವಿಲ್ಲದಿರುವುದರಿಂದ ತನಿಖೆ ಮತ್ತು ದೇವರ ನ್ಯಾಯ ಎರಡೂ ಏಕ ಕಾಲಕ್ಕೆ ಸಮಾನಾಂತರವಾಗಿ ಸಾಗಲೂಬಹುದು!
–
(ಕೃಪೆ- ದ ವೈರ್)