ಲವ್ ಜಿಹಾದ್, ಗೋಹತ್ಯೆ ನಿಷೇಧದ ಮಾತುಗಳೆಲ್ಲ ತಮ್ಮ ಆಡಳಿತ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಬಿಜೆಪಿ ನಾಯಕರ ಹತಾಶ ಪ್ರಯತ್ನ. ಅವರಿಗೆ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಕೋಮುದ್ವೇಷ ಹುಟ್ಟಿಸಲು ಈ ಕುತಂತ್ರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮದುವೆಗೆ ಜಾತಿ-ಧರ್ಮಗಳ ನಿರ್ಬಂಧ ಕಾನೂನಿನಲ್ಲಿ ಇಲ್ಲ. ದೇಶದ ಯಾವ ಕಾನೂನು ಕೂಡಾ ಲವ್ ಜೆಹಾದ್ ಎಂದರೆ ಏನು ಎಂದು ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಗೃಹಸಚಿವರೇ ಸಂಸತ್ ನಲ್ಲಿ ಹೇಳಿದ್ದಾರೆ. ಸಿಟಿ ರವಿ ಗೃಹಸಚಿವರನ್ನು ಕೇಳಿಕೊಂಡು ಬಂದು ಮಾತನಾಡಲಿ ಎಂದು ಸಿಟಿ ರವಿಗೆ ಟಾಂಗ್ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಸರಣಿ ಟ್ವೀಟ್ ಮಾಡಿ ಬಿಜೆಪಿ ಸರ್ಕಾರವನ್ನು ಟೀಕಿಸಿದ ಸಿದ್ದರಾಮಯ್ಯ, ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಂತರಧರ್ಮೀಯ ಮದುವೆ ಅಕ್ರಮ ಎಂದು ಹೇಳಿಲ್ಲ. ಆ ತೀರ್ಪನ್ನು ಉಲ್ಲೇಖಿಸುವವರು ಮೊದಲು ಅದನ್ನು ಓದಿಕೊಳ್ಳಲಿ. ಇಷ್ಟಪಟ್ಟವರನ್ನು ವಿವಾಹವಾಗುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಗೂಂಡಾರಾಜ್ಯವಾದ ಉತ್ತರಪ್ರದೇಶ ನಮಗೆ ಮಾದರಿ ಅಲ್ಲ ಎಂದಿದ್ದಾರೆ.
ಆರ್ ಎಸ್ ಎಸ್ ಶಾಖೆಗೆ ಹೋಗಿ ನಾನು ಕಲಿಯುವಂತಹದ್ದು ಏನೂ ಇಲ್ಲ. ಅದರ ಬಗ್ಗೆ ತಿಳಿದುಕೊಂಡೇ ವಿರೋಧಿಸುತ್ತಿದ್ದೇನೆ. ಆಡಳಿತ ನಡೆಸುವವರಿಗೆ ಸಂವಿಧಾನ ಗೊತ್ತಿರಬೇಕು, ಆರ್ ಎಸ್ ಎಸ್ ಅಲ್ಲ. ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನು ಓದಲಿ. ಬೇಕಾದರೆ ನಾನೇ ಸಂವಿಧಾನದ ಪಾಠ ಮಾಡ್ತೇನೆ ಎಂದು ಸವಾಲು ಹಾಕಿದ್ದಾರೆ ಸಿದ್ದರಾಮಯ್ಯ.
ಬಿಜೆಪಿ ಮತ್ತು ಆರ್ ಎಸ್ ಎಸ್ ಮೂಲಭೂತವಾಗಿ ಸಂವಿಧಾನ ವಿರೋಧಿ. ಅದು ಮೀಸಲಾತಿ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎಲ್ಲವನ್ನೂ ವಿರೋಧಿಸುತ್ತದೆ. ಅವರು ಮಿಲ್ಲರ್ ವರದಿಯಿಂದ ಮಂಡಲ್ ವರದಿ ವರಗೆ ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರು, ಮನುಸ್ಮೃತಿಗೆ ಬದ್ಧರಾಗಿರುವವರು ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಗೋಹತ್ಯೆಯ ಬಗ್ಗೆ ಬಿಜೆಪಿ ನಾಯಕರದ್ದು ದಂದ್ವನಿಲುವು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತು ಹಲವು ಪಟ್ಟು ಹೆಚ್ಚಾಗಿದೆ. ಅತೀ ಹೆಚ್ಚು ಗೋಮಾಂಸ ರಫ್ತು ನಡೆಯುತ್ತಿರುವುದು ಉತ್ತರಪ್ರದೇಶದಲ್ಲಿ. ಹೆಚ್ಚಿನ ಗೋಮಾಂಸ ವ್ಯಾಪಾರಿಗಳು ಬಿಜೆಪಿಗೆ ಸೇರಿದವರು ಎಂದು ಅವರು ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ. ಹಿಂದಿನ ಬಿಜೆಪಿ ಸರ್ಕಾರ 1964ರ ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಿ ಮೂಲ ಕಾಯ್ದೆಯನ್ನು ಉಳಿಸಿಕೊಂಡಿದೆ. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ತುರ್ವಿಹಾಳ್ ನಾಳೆ ಕಾಂಗ್ರೆಸ್ ಸೇರಲಿದ್ದಾರೆ. ಉಪಚುನಾವಣೆಯಲ್ಲಿ ಅವರೇ ನಮ್ಮ ಅಭ್ಯರ್ಥಿಯಾಗಬಹುದು. ನಾವು ನಾಳೆ ಮಸ್ಕಿಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು- ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ತೀರ್ಮಾನಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಉಪಚುನಾವಣೆಯಲ್ಲಿ ಮರಾಠರನ್ನು ಓಲೈಸಲು ಇಂತಹ ಕ್ಷುಲಕ ರಾಜಕೀಯ ನಡೆಸುತ್ತಿದೆ. ಪ್ರಕಾಶ್ ಹುಕ್ಕೇರಿಯವರ ಅಸಮಾಧಾನದ ಬಗ್ಗೆ ನನಗೆ ತಿಳಿದಿಲ್ಲ, ಅವರು ನನ್ನ ಜೊತೆಯಲ್ಲಿ ಏನನ್ನೂ ಹೇಳಿಲ್ಲ. ಈ ಅಸಮಾಧಾನದ ಸುದ್ದಿಗಳೆಲ್ಲ ಹುಕ್ಕೇರಿಯವರ ಹೆಸರಿನಲ್ಲಿ ಬಿಜೆಪಿ ನಾಯಕರು ನಡೆಸುತ್ತಿರುವ ಸುಳ್ಳು ಪ್ರಚಾರ ಇದ್ದಿರಲೂ ಬಹುದು. ಅದನ್ನು ತಿಳಿದುಕೊಳ್ತೇವೆ ಎಂದು ತಿಳಿಸಿದ ಸಿದ್ದರಾಮಯ್ಯ, ಮರಾಠ ಅಭಿವೃದ್ದಿ ನಿಗಮ ಸ್ಥಾಪನೆಯನ್ನು ವಿರೋಧಿಸಿ ಕನ್ನಡ ಸಂಘಟನೆಗಳು ಡಿಸೆಂಬರ್ ಐದರಂದು ನಡೆಸಲಿರುವ ಕರ್ನಾಟಕ ಬಂದ್ ನಲ್ಲಿ ಪಾಲ್ಗೊಳ್ಳುವ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ. ಬೆಳಗಾವಿ ಕರ್ನಾಟಕದ ಅಖಂಡ ಭಾಗ, ಇದನ್ನು ಮಹಾಜನ ವರದಿಯೇ ಸ್ಪಷ್ಟಪಡಿಸಿದೆ. ಇದರಲ್ಲಿ ರಾಜಿಯೇ ಇಲ್ಲ. ನೆಲ-ಜಲ-ಭಾಷೆಯ ರಕ್ಷಣೆ ಬಗ್ಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅಧಿಕ ಪ್ರಸಂಗಿತನದ ಹೇಳಿಕೆ ಖಂಡನೀಯ ಎಂದು ಹೇಳಿದ್ದಾರೆ.