ಎರಡು ತಿಂಗಳ ಹಿಂದೆ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರು ಗಲಭೆ ಕೋಮು ಗಲಭೆಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ನಳಿನ್ ಕುಮಾರ್, ಬೆಂಗಳೂರಿನ ದಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದಿರುವ ಗಲಭೆ ಹಿಂದೂ-ಮುಸ್ಲಿಂ ಗಲಭೆಯಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷದೊಳಗಿನ ಎರಡು ನಾಯಕತ್ವದ ವಿಚಾರವಾಗಿ ನಡೆದ ಗಲಭೆ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದು, ಮೇಯರ್ ಸಂಪತ್ ರಾಜ್ ಡಿಕೆ ಶಿವಕುಮಾರ್ ಬೆಂಬಲಿಗರು. ಅಖಂಡ ಶ್ರೀನಿವಾಸ್ ಮೂರ್ತಿಯವರು ಸಿದ್ಧರಾಮಯ್ಯ ಜೊತೆಗೂಡುತ್ತಾರೆಂಬ ಕಾರಣದಿಂದ ಸಂಪತ್ ರಾಜ್ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದ್ದಾರೆಂದು ನಳಿನ್ ಆರೋಪಿಸಿದ್ದಾರೆ.
Also Read: ಬೆಂಗಳೂರು ಗಲಭೆ ಮತ್ತು ಉತ್ತರವಿಲ್ಲದ ಸಾಲುಸಾಲು ಪ್ರಶ್ನೆಗಳು!
ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಶಾಸಕ ಸ್ಥಾನದಿಂದ ಕೆಳಗಿಳಿಸಬೇಕೆಂಬ ಹುನ್ನಾರದಲ್ಲಿ ಕಾಂಗ್ರೆಸ್ ಒಳಗಿರುವ ಇನ್ನೊಂದು ಬಣವೇ ಅವರ ವಿರುದ್ಧ ದಂಗೆ ಏಳಿಸಿದೆ ಎಂದು ನಳಿನ್ ಹೇಳಿದ್ದಾರೆ.
ಇದು ನಾವು ಹೇಳುವುದಲ್ಲ, ಪೊಲೀಸ್ ವರದಿ ಹೇಳಿರುವುದು. ಸಂಪತ್ ರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಖಂಡ ಶ್ರೀನಿವಾಸ್ ಮೂರ್ತಿಯೇ ದೂರು ನೀಡಿದ್ದಾರೆ. ಆದರೆ ಸಂಪತ್ ರಾಜ್ರನ್ನು ಕಾಂಗ್ರೆಸ್ ಅಧ್ಯಕ್ಷರು ಅಡಗಿಸಿಟ್ಟಿದ್ದಾರೆ ಎಂದು ನಳಿನ್ ಡಿಕೆ ಶಿವಕುಮಾರ್ ಮೇಲೆ ಆರೋಪ ಹೊರಿಸಿದ್ದಾರೆ.
Also Read: ಬೆಂಗಳೂರು ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಪರಾರಿ -ಪೊಲೀಸ್
ಬಳಿಕ ಕಾಂಗ್ರೆಸ್ಗೆ ಸವಾಲು ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ, ನೀವು ಆದರ್ಶವಾದಿಗಳಾಗಿದ್ದರೆ, ಈ ದೇಶದ ಕಾನೂನಿಗೆ ಗೌರವ ಕೊಡುವುದಿದ್ದರೆ ಸಂಪತ್ ರಾಜ್ ಬಳಿ ಸರೆಂಡರ್ ಆಘಲು ಹೇಳಬೇಕಿತ್ತು. ಇವತ್ತು ಕಾಂಗ್ರೆಸ್ ಸಂಪತ್ ರಾಜ್ರನ್ನು ರಕ್ಷಿಸುತ್ತಿದೆ. ದಲಿತ ಶಾಸಕನಿಗೆ ರಕ್ಷಣೆ ಕೊಡಲಾಗದ ಕಾಂಗ್ರೆಸ್ ಆ ಶಾಸಕನ ಮನೆಗೆ ಬೆಂಕಿಯಿಟ್ಟವನಿಗೆ ರಕ್ಷಣೆ ಕೊಡುತ್ತಿದೆ. ಕಾಂಗ್ರೆಸ್ ನ ನೀತಿಯೇನು, ನಿಯಮವೇನು ಎಂದು ಇದರಲ್ಲಿ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೋಸ್ಕರ ಎಸ್ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಆದರೂ ಕಾಂಗ್ರೆಸ್ ನಾಯಕರು ಎಸ್ಡಿಪಿಐ ಯನ್ನು ನಿಷೇಧ ಮಾಡಲು ಬಿಜೆಪಿ ಸರ್ಕಾರಕ್ಕೆ ಹೇಳುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸತ್ಯಮೇವ ಜಯತೆ!
ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆಗೆ ಕಾರಣ ಹಿಂದೂ-ಮುಸ್ಲಿಂ ಹೋರಾಟ ಅಲ್ಲ : ನಳಿನ್ ಕುಮಾರ್@nalinkateel ಅವರೇ, ಗಲಭೆಯನ್ನು ಮುಸ್ಲಿಂ ಸಂಘಟನೆಯ ತಲೆಗೆ ಕಟ್ಟಿ, ಹಿಂದೂ-ಮುಸ್ಲಿಂ ಹೋರಾಟ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದ ತಾವು ಮತ್ತು ತಮ್ಮ ಪಕ್ಷದವರು ಸಾರ್ವಜನಿಕವಾಗಿ ಕ್ಷಮೆ ಕೇಳುವರೇ?@BJP4Karnataka pic.twitter.com/nCdaek4Z1e
— Faizal Peraje (@Faizal_Peraje) November 14, 2020
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕುರಿತಂತೆ ನಳಿನ್ ಕುಮಾರ್ ಕಟೀಲ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಗಲಭೆಯನ್ನು ಮುಸ್ಲಿಮರ ತಲೆಗೆ ಕಟ್ಟಿ, ಹಿಂದೂ-ಮುಸ್ಲಿಂ ಗಲಭೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದ ತಾವು ಮತ್ತು ತಮ್ಮ ಪಕ್ಷದವರು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೀರೇ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದಾರೆ.

