ಕನ್ನಡದ ಹಿರಿಯ ಕವಿ, ಧಾರವಾಡ ಮೂಲದ ಡಾ. ಐರಸಂಗ ಇಂದು ವಿಧಿವಶರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಐರಸಂಗ ಅವರಿಗೆ 91 ವರ್ಷ ಪ್ರಾಯವಾಗಿತ್ತು.
ಎಲೆಮರೆ ಕಾಯಿಯಂತೆ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ ಐರಸಂಗ, ಸುಮಾರು 35 ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ʼಸೈಕಲ್ ಕವಿʼ ಎಂದು ಜನಪ್ರಿಯವಾಗಿರುವ ಇವರನ್ನು ಪ್ರೀತಿಯಿಂದ ಜನರು ʼಐರಸಂಗ ಕಾಕಾʼ ಎಂದು ಕರೆಯುತ್ತಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಧಾರವಾಡ ಆಕಾಶವಾಣಿಯ ಭಾವ ಸಂಗಮ, ಮುಂಜಾನೆ ಕಾರ್ಯಕ್ರಮ ವಂದನಾ ಮೊದಲಾದ ಕಾರ್ಯಕ್ರಮಗಳಿಂದ ಎಲ್ಲರ ಮನೆ ಮಾತಾದ ಐರಸಂಗ ಅವರನ್ನು ʼಬಾನುಲಿ ಕವಿʼ ಎಂದೂ ಕರೆಯುತ್ತಿದ್ದರು.
ತಮ್ಮ ಬದುಕಿನ 60 ವರ್ಷಗಳ ಕಾಲ ಕನ್ನಡ ಸಾಹಿತ್ಯ ಲೋಕಕ್ಕೆ ಸೇವೆ ಮಾಡಿದ ಐರಸಿಂಗ ಅವರ ಚೊಚ್ಚಲ ಕವನ ಸಂಕಲನ ʼಸುಪ್ರಭಾತʼ. ತನ್ನ ಕವನ ಸಂಕಲನಗಳ ಪುಸ್ತಕಗಳನ್ನು ಸೈಕಲ್ಲಿನಲ್ಲೇ ಇಟ್ಟು ಮಾರುತ್ತಿದ್ದ ಐರಸಂಗ, ಎಲ್ಲಿಗೆ ಪಯಣಿಸಬೇಕೆಂದಿದ್ದರೂ ಸೈಕಲನ್ನೇ ನೆಚ್ಚಿಕೊಂಡಿದ್ದರು. ತಮ್ಮ ಇಳಿವಯಸ್ಸಿನಲ್ಲೂ ಮಲ್ಲಗಂಬ, ಈಜು, ಸೈಕಲ್ ತುಳಿಯುವಿಕೆ ಮೊದಲಾದ ದೈಹಿಕ ಶ್ರಮ ಬೇಡುವ ಕೆಲಸವನ್ನೂ ಮಾಡುತ್ತಾ, ಸದಾ ಜೀವನ್ಮುಖಿಯಾಗಿ ಬಾಳಿದವರು.
ಮಕ್ಕಳಿಗೆ ಉಚಿತ ಪಾಠವನ್ನೂ ಹೇಳಿಕೊಡುತ್ತಿದ್ದ ಐರಸಂಗ ಅವರಿಗೆ, ಸಂಗೀತ ಸಂಯೋಜನೆ, ತಬಲಾ ವಾದನ, ಸೈಕಲ್ ಹಾಗೂ ಗಡಿಯಾರ ರಿಪೇರಿ ಕಾವ್ಯದ ಹೊರತಾದ ಹವ್ಯಾಸಗಳು. 2500ಕ್ಕಿಂತಲೂ ಹೆಚ್ಚು ಕವನಗಳನ್ನು ಬರೆದಿರುವ ಐರಸಂಗ ಮಾರುತಿ ಪ್ರಕಾಶನವೆಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಅಜ್ಞಾತರಾಗಿಯೇ ಉಳಿದಿದ್ದ ಐರಸಂಗರಿಗೆ ತಡವಾಗಿಯಾರೂ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿದೆ.