ಯಶವಂತಪುರ ಸಮೀಪ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂಧರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾಷಣಕ್ಕೆ ಅಡ್ಡಪಡಿಸಿದ್ದಾರೆ, ಹಾಗೂ ವಾಪಾಸು ತೆರಳುವಾಗ ಬೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಉಪಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ, ಎರಡೂ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಚಟುವಟಿಕೆಯನ್ನು ಬಿರುಸುಗೊಳಿಸಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ , ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದಾಗ ಮುನಿರತ್ನ ಬೆಂಬಲಿಗರು ಗೂಂಡಾಗಿರಿ ಮಾಡಿ ನಮ್ಮ ಬೆದರಿಸುವ ಪ್ರಯತ್ನ ಮಾಡಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ನಿನ್ನೆ ನಾನು ಯಶವಂತಪುರ ಸಮೀಪ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾಷಣಕ್ಕೆ ಅಡ್ಡಿಪಡಿಸಿದ್ದರಲ್ಲದೆ, ನಾನು ವಾಪಾಸು ತೆರಳುವಾಗ ವಾಹನ ಅಡ್ಡಗಟ್ಟಿ ಬೆದರಿಸುವ ಪ್ರಯತ್ನ ಮಾಡಿದ್ದರು. ಇದು ಬಿಜೆಪಿಯವರ ರಾಜಕಾರಣದ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ, ನಾನು ಪ್ರಚಾರಕ್ಕೆ ಬಂದಿರುವುದನ್ನು ಕಂಡು ಸೋಲಿನ ಭೀತಿಗೀಡಾಗಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ರೌಡಿಸಂ ಮೂಲಕ ಮತದಾರರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಗೂಂಡಾಗಿರಿಗೆ ನಾವು ಹೆದರುವವರಲ್ಲ.ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಹುಷಾರ್ ! ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಆರ್.ಆರ್ ನಗರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ್ದ ಮುನಿರತ್ನ ಅವರೆ ಅಲ್ಲಿನ ಕಾನೂನು ಬಾಹಿರ ಚಟುವಟಿಕೆಗಳಿಗೆ, ಗೂಂಡಾಗಿರಿಗೆ ಮೂಲ ಕಾರಣ. ಸೋಲಿನ ಭಯದಿಂದ ಜಿ.ಕೆ ವೆಂಕಟೇಶ್ ಅಂಥವರನ್ನು ಮುಂದೆ ಬಿಟ್ಟು ಮುನಿರತ್ನ ಅವರೆ ಗಲಭೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದ ಅಭ್ಯರ್ಥಿ ಜಯಚಂದ್ರ ಅವರನ್ನು ಬಿಜೆಪಿ ನಾಯಕರು ಮುದಿ ಎತ್ತು ಎಂದು ಹೀಗಳೆದಿದ್ದಾರೆ, ಹಾಗಾದರೆ ಬಿ.ಎಸ್ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸುಗಳಾ? ಚುನಾವಣೆಯನ್ನು ಸಾಧನೆ ಮತ್ತು ಸಿದ್ಧಾಂತದ ಮೂಲಕ ಎದುರಿಸಲಾಗದವರು ಮಾತ್ರ ಸೋಲಿನ ಭೀತಿಯಿಂದ ಈ ರೀತಿ ಚಾರಿತ್ರ್ಯಹರಣ, ಗೂಂಡಾಗಿರಿ, ಹಣ ಹಂಚುವುದು ಮೊದಲಾದ ಅಡ್ಡದಾರಿ ಹಿಡಿಯುವುದು ಎಂದು ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.