ಕರ್ನಾಟಕದ ಮೊತ್ತ ಮೊದಲ ಖಾಸಗಿ ವಿಶ್ವವಿದ್ಯಾಲಯ ʼಅಲಾಯನ್ಸ್ ಯೂನಿವರ್ಸಿಟಿʼ (Alliance University) ಯ ಕುಲಪತಿ ಹುದ್ದೆಯಿಂದ ವಜಾಗೊಂಡಿದ್ದ ಮಧುಕರ್ ಅಂಗೂರ್ ಅವರು ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದಿದ್ದಾರೆ. 2016ರಲ್ಲೇ ಅವರ ವಿರುದ್ದ 96 ಕೋಟಿಗಳ ಹಗರಣದ ಆರೋಪ ಕೇಳಿ ಬಂದಿತ್ತು.
ಮಧುಕರ್ ಅಂಗೂರ್ ಅವರು 2011ರಿಂದ 2014ರ ವರೆಗೆ ಸರ್ಕಾರೇತರ ಸಂಸ್ಥೆಗಳಿಂದ ಹಾಗೂ ಸೆಕ್ಷನ್ 8ರ ಅಡಿಯಲ್ಲಿ ಬರುವಂತಹ ಖಾಸಗೀ ಸಂಸ್ಥೆಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ತಮ್ಮ ಖಾತೆಗೆ ಹಾಗೂ ಯುಎಸ್ ಡಾಲರ್ ರೂಪದಲ್ಲಿ ವರ್ಗಾಯಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ಭಾರತದಲ್ಲಿನ ಕಪ್ಪು ಹಣವನ್ನು ಬಿಳಿ ಯುಎಸ್ ಡಾಲರ್ಗಳಾಗಿ ಪರಿವರ್ತಿಸಲು ನಕಲಿ ಕಂಪೆನಿಗಳನ್ನು ಸೃಷ್ಟಿಸಿ ಅವುಗಳಿಂದ ನಕಲಿ ಬಿಲ್ ಹಾಗೂ ಇತರ ದಾಖಲೆಗಳನ್ನು ಸೃಷ್ಟಿಸಿದ್ದಾರೆಂಬ ಕಾರಣಕ್ಕೆ ಇಡಿ ಅವರ ವಿರುದ್ದ ಜಾಲ ಬೀಸಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಧುಕರ್ ಅವರು ಸುಮಾರು ರೂ. 128 ಕೋಟಿಗಳಷ್ಟು ಮೌಲ್ಯದ ಹಣವನ್ನು ಯುಎಸ್ ಡಾಲರ್ ರೂಪದಲ್ಲಿ ಭಾರತದಿಂದ ಅಮೇರಿಕಾಕ್ಕೆ ಸಾಗಿಸಿದ್ದಾರೆಂಬ ಕಾರಣಕ್ಕೆ ಅವರ ವಿರುದ್ದ ಬೆಂಗಳೂರಿನಲ್ಲಿ ಎರಡು FIR ದಾಖಲಾಗಿತ್ತು. NGO ಒಂದರ ಹಣವನ್ನು ದುರುಪಯೋಗಪಡೆಸಿಕೊಂಡ ಕಾರಣಕ್ಕಾಗಿ ಆನೆಕಲ್ ಪೊಲೀಸ್ ಠಾಣೆಯಲ್ಲಿ ಒಂದು ಕೇಸು ದಾಖಲಾದರೆ, ಇನ್ನೊಂದು ಮಡಿವಾಳ ಠಾಣೆಯಲ್ಲಿ 2016ರಲ್ಲಿ ಕೇಸು ದಾಖಲಾಗಿದೆ.
2015ರಿಂದ 2017ರ ವರೆಗೆ ಕೂಡಾ ಸರ್ಕಾರೇತರ ಕಂಪೆನಿಗಳಿಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂಬ ಆರೋಪ ಅವರ ಮೇಲಿದೆ. ಈ ಎರಡು ವರ್ಷದಲ್ಲಿ ಅವರು ದುರುಪಯೋಗಪಡಿಸಿಕೊಂಡ ಹಣದ ಮೊತ್ತ ಬರೋಬ್ಬರಿ ರೂ. 107 ಕೋಟಿ. ಅವರ ಜೊತೆ ಹಲವು ಪ್ರಭಾವಿ ರಾಜಕಾರಣಿಗಳು ಹಾಗೂ ದಲ್ಲಾಳಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಇಷ್ಟು ಮಾತ್ರವಲ್ಲದೇ, ಇವರ ವಿರುದ್ದ ಏಳು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ. ಧನರಾಜ್ ಬಾಬು ಎಂಬುವವರು ಇವರ ವಿರದ್ದ ದಾಖಲಿಸಿರುವ ಪ್ರಕರಣದಲ್ಲಿ ಇವರಿಗೆ ಮೂರು ವರ್ಷದ ಶಿಕ್ಷೆಯೊಂದಿಗೆ ರೂ. 4.75 ಕೋಟಿ ದಂವೂ ವಿಧಿಸಲಾಗಿತ್ತು.
ಈ ಜಾಲವನ್ನು ವ್ಯವಸ್ಥಿತಿವಾಗಿ ಅಧ್ಯಯನ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯವು, ಅಕ್ಟೋಬರ್ 9, 2020ರಂದು ಮಧುಕರ್ ಅವರನ್ನು ವಿಚಾರಣೆಗೆ ಹಾಜರಾಗಲು ತಿಳಿಸಿತ್ತು. ಇದಾದ ನಂತರ ಮತ್ತೆ ಅಕ್ಟೋಬರ್ 19ರಂದು ಕೂಡಾ ಹಣದ ಅವ್ಯವಹಾರದ ಕುರಿತಾಗಿ ವಿಚಾರಣೆಗೆ ಮಧುಕರ್ ಹಾಜರಾಗಿದ್ದರು. ಜಾರಿ ನಿರ್ದೇಶನಾಲಯವು ಮತ್ತೆ ಇವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
2016ರಲ್ಲಿ ಏಕಸದಸ್ಯ ಸಮಿತಿಯಿಂದ ತನಿಖೆ:
ರೂ. 96 ಕೋಟಿಗಳ ಹಗರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ದ ಏಕಸದಸ್ಯ ಸಮಿತಿಯಿಂದ ತನಿಖೆ ನಡೆಸಲು ಆದೇಶಿಲಾಗಿತ್ತು. ರೂ. 96 ಕೋಟಿಗಳಲ್ಲಿ 2010ರಿಂದ 2016ರವರೆಗೆ ಪಡೆದ ರೂ. 41.48 ಕೋಟಿ ಗಳಷ್ಟು ವಿದ್ಯಾರ್ಥಿಗಳ ಶುಲ್ಕಕ್ಕೆ ಲೆಕ್ಕವೇ ಇರಲಿಲ್ಲ. ಸುಮಾರು ರೂ. 48.18 ಕೋಟಿಗಳಷ್ಟು ಮೊತ್ತವು ಸಂದೇಹ ಪಡುವಂತಹ ಖಾತೆಗಳಿಗೆ ಜಮೆಯಾಗಿತ್ತೆಂದು ಸಮಿತಿಯ ವರದಿ ಹೇಳಿತ್ತು.
ಈ ಸಮಿತಿಯ ವರದಿಯನ್ನು ತಳ್ಳಿ ಹಾಕಿದ್ದ ಮಧುಕರ್ ಅವರು, “ಯುನಿವರ್ಸಿಟಿ ಕಾಯ್ದೆಯ ಪ್ರಕಾರ ಇಂತಹ ಸಮಿತಿಯನ್ನು ರಚಿಸಲು ಅವಕಾಶವಿಲ್ಲ. ಈ ಸಮಿತಿಯನ್ನೇ ಬರಖಾಸ್ತುಗೊಳಿಸಲು ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದರು,” ಹೇಳಿದ್ದರು.