ಉತ್ತರಪ್ರದೇಶದ ಹಾಥ್ರಾಸ್ ಎಂಬಲ್ಲಿ ಮೇಲ್ಜಾತಿಯ ನಾಲ್ವರು ನರರಾಕ್ಷಸರು, ದಲಿತ ವಾಲ್ಮೀಕಿ ಸಮುದಾಯದ ಯುವತಿಯ ಸಾಮೂಹಿಕ ಅತ್ಯಾಚಾರ ಎಸಗಿ, ನಾಲಿಗೆ ಕತ್ತರಿಸಿ, ಬೆನ್ನು ಮೂಳೆ ಮುರಿದು ಬಿಸಾಕಿದ ಘಟನೆ ಬೆನ್ನಲ್ಲೇ ಕಳೆದ 24 ತಾಸಲ್ಲಿ ಆ ರಾಜ್ಯದಲ್ಲಿ ಬರೋಬ್ಬರಿ 18 ಅತ್ಯಾಚಾರ ಘಟನೆಗಳು ವರದಿಯಾಗಿವೆ. ಇದು ಬಿಜೆಪಿ ನಾಯಕರು ಮತ್ತು ಅದರ ಬೆಂಬಲಿಗ ಹಿಂದುತ್ವವಾದಿಗಳು ಬಹಳ ಹೆಮ್ಮೆಯಿಂದ ರಾಮರಾಜ್ಯ ಎಂದು ಬೀಗುವ ಮತ್ತು ಸ್ವತಃ ರಾಮಭಕ್ತ ಎಂದು ಬಿಂಬಿಸಲಾಗಿರುವ ಯೋಗಿ ಆದಿತ್ಯನಾಥ ಆಡಳಿತದ ಒಂದು ಸಣ್ಣ ಝಲಕ್ ಅಷ್ಟೇ.
ಗಮನಿಸಬೇಕಾದ ಸಂಗತಿ ಎಂದರೆ; ಹೀಗೆ ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಎಲ್ಲರೂ ಆ ರಾಜ್ಯದ ಜಮೀನ್ದಾರಿ ಭೂಮಾಲೀಕ ಠಾಕೂರ್ ಜಾತಿಯವರು ಮತ್ತು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಜಾತಿಬಂಧುಗಳೇ ಎಂಬುದು. ಹಾಗೆ ನೋಡಿದರೆ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಇಂತಹ ದಬ್ಬಾಳಿಕೆ, ಹಿಂಸೆ ಮತ್ತು ಅಮಾನವೀಯ ಕೃತ್ಯಗಳಿಂದಾಗಿಯೇ ಉತ್ತರಪ್ರದೇಶ ಇತ್ತೀಚಿನ ವರ್ಷಗಳಲ್ಲಿ ಹೆಸರಾಗಿದೆ. ಮತ್ತು ಅಂತಹ ಕೃತ್ಯಗಳ ಹಿಂದೆ ಸ್ವತಃ ಸಿಎಂ ಯೋಗಿ ಆಪ್ತ ವಲಯ ಮತ್ತು ಅವರ ಆಡಳಿತದಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿ ತುಂಬಿರುವ ಅವರದೇ ಠಾಕೂರ್ ಸಮುದಾಯದ ಪ್ರಭಾವಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಕುಮ್ಮಕ್ಕು ಇದೆ ಎಂಬುದು ಗುಟ್ಟೇನಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅದರಲ್ಲೂ ಮುಖ್ಯವಾಗಿ ಯೋಗಿ ಸಂಪೂರ್ಣ ಮುಕ್ತ ಅಧಿಕಾರ ಕೊಟ್ಟಿರುವ ಅಲ್ಲಿನ ಪೊಲೀಸ್ ಇಲಾಖೆಯಲ್ಲಿ ಮೇಲ್ಜಾತಿ ಹಿಂದುತ್ವವಾದಿ ಅಧಿಕಾರಿಗಳು ಯಾವ ಮಟ್ಟಿನ ಪ್ರಭಾವ ಹೊಂದಿದ್ದಾರೆ ಮತ್ತು ಏನನ್ನೂ ಮಾಡಿದರೂ ದಕ್ಕಿಸಿಕೊಳ್ಳುವ ತಾಕತ್ತು ಹೊಂದಿದ್ದಾರೆ ಎಂಬುದಕ್ಕೆ ಈ ಹಾಥ್ರಾಸ್ ಪ್ರಕರಣದಲ್ಲಿ ಸಂತ್ರಸ್ತೆಯ ಶವವನ್ನು ಕನಿಷ್ಟ ನೋಡಲು ಕೂಡ ಆಕೆಯ ಕುಟುಂಬದವರಿಗೆ ಬಿಡದೆ, ಮನೆಮಂದಿಯನ್ನು ಮನೆಯೊಳಗೆ ಕೂಡಿಹಾಕಿ ಪೊಲೀಸರೇ ನಡುರಾತ್ರಿಯಲ್ಲಿ ಚಿತೆಗಿಟ್ಟು ಸುಟ್ಟುಹಾಕಿದ ಅಮಾನವೀಯ ಅಟ್ಟಹಾಸವೇ ನಿದರ್ಶನ.
ಇದೆಲ್ಲಾ ಉತ್ತರಪ್ರದೇಶದ ಆಡಳಿತವನ್ನು, ಅಲ್ಲಿನ ಪೊಲೀಸರ ವರಸೆಯನ್ನು ಮತ್ತು ಶ್ರೀರಾಮನ ಅಪರಾವತಾರ, ರಾಮಭಕ್ತ ಎಂಬ ಬಣ್ಣನೆಗೊಳಗಾಗುತ್ತಿರುವ ಸಿಎಂ ಯೋಗಿ ಆದಿತ್ಯನಾಥರ ರಾಮರಾಜ್ಯವನ್ನು ‘ಪ್ರಜಾಪ್ರಭುತ್ವ’ದ ಆಶಯಗಳ ನೆಲೆಯಿಂದ ನೋಡುವವರಿಗೆ ಆತಂಕ ಹುಟ್ಟಿಸುವ ಚಿತ್ರಣಗಳು. ಆದರೆ, ‘ಹಿಂದುತ್ವವಾದ’ ಎಂಬ ಮೇಲ್ಜಾತಿ ಮತ್ತು ಮೇಲ್ವರ್ಗದ ಅಜೆಂಡಾದ ಚಾಳೀಸಿನಿಂದ ನೋಡುವವರಿಗೆ ಈ ಎಲ್ಲವೂ ನಾಳೆಯ ಸಂಪೂರ್ಣ ರಾಮರಾಜ್ಯ ಕಟ್ಟುವ ದಿಕ್ಕಿನ ಆದರ್ಶದ ಹೆಜ್ಜೆಗಳೇ. ಈ ಮಾತಿಗೆ ಸಾಕ್ಷಿ ಬೇಕಿದ್ದರೆ ಹಾಥ್ರಾಸ್ ಘಟನೆಗೆ ‘ಉಗ್ರ ರಾಷ್ಟ್ರೀಯವಾದಿ’ ಎಂಬ ತುಸು ನಾಜೂಕು ಹೆಸರಿನ ಕಟ್ಟಾ ಹಿಂದುತ್ವವಾದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರ ಪ್ರತಿಕ್ರಿಯೆ ಗಮನಿಸಿ. ಹೇಗೆ ಉತ್ತರಪ್ರದೇಶ ಭವಿಷ್ಯದ ಭಾರತದ ಪ್ರಯೋಗಶಾಲೆಯಾಗಿ ಅವರಿಗೆ ಹೊಸ ಭರವಸೆಯಾಗಿ ಕಾಣಿಸುತ್ತಿದೆ ಎಂಬುದು ಅರ್ಥವಾಗದೇ ಇರದು.
Also Read: ಹಾಥ್ರಾಸ್: ಅತ್ಯಾಚಾರವೇ ನಡೆದಿಲ್ಲ ಎಂದ ಪೊಲೀಸರು
ದೇಶದ ಉದ್ದಗಲಕ್ಕೆ ಪೊಲೀಸರ ಅಟ್ಟಹಾಸ, ಅಮಾನವೀಯ ವರ್ತನೆಯ ಬಗ್ಗೆ ಸಾವಿರಾರು ನಿದರ್ಶನಗಳು ಸಿಗಬಹುದು. ಆದರೆ, ಉತ್ತರಪ್ರದೇಶದಲ್ಲಿ ಮಾತ್ರ ಪೊಲೀಸರ ಅಂತಹ ವರ್ತನೆಗಳಿಗೆ ಸ್ವತಃ ಸಿಎಂ ಮತ್ತು ಅವರ ಸರ್ಕಾರದ ಅಧಿಕೃತ ಮುದ್ರೆಯ ಅಭಯವಿದೆ. ಅದು ವಿಕಾಸ್ ದುಭೆ ಎನ್ ಕೌಂಟರ್ ಇರಬಹುದು, ಸಿಎಎ-ಎನ್ ಆರ್ ಸಿ ಹೋರಾಟಗಾರರ ಆಸ್ತಿ ಜಪ್ತಿ ಮತ್ತು ತೀರಾ ಕಠಿಣ ಕಾನೂನುಗಳ ಮೂಲಕ ಅವರ ನಾಗರಿಕ ಹೋರಾಟವನ್ನು ಹಣಿದಿರುವುದಿರಬಹುದು, ಸಾಲು ಸಾಲು ದಲಿತ ಮತ್ತು ಅಲ್ಪಸಂಖ್ಯಾತ ಮಹಿಳೆಯರು, ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಿರಬಹುದು ಮತ್ತು ತೀರಾ ಇತ್ತೀಚೆಗೆ ಭಾರೀ ಮುಖಭಂಗಕ್ಕೆ ಕಾರಣವಾದ ಡಾ. ಕಫೀಲ್ ಖಾನ್ ಪ್ರಕರಣವಿರಬಹುದು… ಎಲ್ಲದರಲ್ಲೂ ಪೊಲೀಸರ ಸ್ವತಃ ತಾವೇ ಕಾನೂನು ಮತ್ತು ತಾವೇ ತೀರ್ಪು ಕೊಡುವವರು ಎಂಬ ವರಸೆ ಎದ್ದುಕಾಣುತ್ತದೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೇಲೆಯೇ ಕೆಡವಿ ಹಲ್ಲೆ ನಡೆಸಿರುವುದು ಕೂಡ ಉತ್ತರಪ್ರದೇಶ ಪೊಲೀಸರ ಅಂತಹ ಯಾವ ಲಗಾಮೂ ಇಲ್ಲದ ಪರಮಾಧಿಕಾರ ಮತ್ತು ಅಟ್ಟಹಾಸದ ನಡಿಗೆಯ ತಾಜಾ ನಿದರ್ಶನ.

ಈ ಎಲ್ಲದರ ನಡುವೆಯೂ ಯೋಗಿ ಆದಿತ್ಯನಾಥರು ಸತತ ಮೂರು ಬಾರಿ ದೇಶದ ‘ದ ಬೆಸ್ಟ್ ಸಿಎಂ’ ಎಂದು ಹಾಡಿಹೊಗಳಲಾಗುತ್ತಿದೆ. ಅದೂ ದೇಶದ ಮುಖ್ಯವಾಹಿನಿ ಮಾಧ್ಯಮಗಳೇ ಇಂತಹ ಬಿರುದು ಬಾವಲಿಗಳನ್ನು ನೀಡಿ ಸಂಭ್ರಮಿಸುತ್ತಿವೆ. ಉದ್ಯಮ ವಲಯ ಹೂಡಿಕೆಯ ಬಹಳ ಮುಕ್ತ ಅವಕಾಶವಿರುವ, ಪೂರಕ ವಾತಾವರಣವಿರುವ ರಾಜ್ಯ ಉತ್ತರಪ್ರದೇಶ ಎಂದು ಹೇಳುತ್ತಿದೆ. ಉದ್ಯಮಿಗಳ ಪಾಲಿನ ಸ್ವರ್ಗ ಎಂದೇ ಕರೆಯಲಾಗುತ್ತಿದೆ. ಅಂದರೆ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ‘ಎಲ್ಲಿಡಬೇಕೋ ಅಲ್ಲಿಟ್ಟು’, ಮೇಲ್ಜಾತಿ, ಜಮೀನ್ದಾರಿ ಅಧಿಕಾರದ, ದರ್ಪದ ಮತ್ತು ಅದೇ ಹೊತ್ತಿಗೆ ಅದೇ ವರ್ಗದ ಹಿನ್ನೆಲೆಯ ಉದ್ಯಮಿಗಳಿಗೆ ಸ್ವರ್ಗದಂತಹ ವ್ಯವಸ್ಥೆಯನ್ನು ಯೋಗಿ ಆದಿತ್ಯನಾಥರ ಸರ್ಕಾರ ದಣಿವರಿಯದೆ ನಿರ್ಮಿಸುತ್ತಿದೆ!
ಹಾಗಾಗಿಯೇ ಸಹಜವಾಗೇ ಸಮಾನತೆ, ಸಹೋದರತೆ, ಸಹಬಾಳ್ವೆ, ಮಾನವ ಹಕ್ಕುಗಳು ಮುಂತಾದ ಪ್ರಜಾಸತ್ತಾತ್ಮಕ ಮೌಲ್ಯಗಳ ಹಳೆಯ ವರಸೆಯಲ್ಲಿ ಕಾಣುವವರಿಗೆ ಯೋಗಿ ರಾಜ್ಯ ‘ಗೂಂಡಾ ರಾಜ್ಯ’ವಾಗಿ, ‘ಪೊಲೀಸ್ ರಾಜ್ಯ’ವಾಗಿ ಕಾಣಿಸಿದರೆ; ಉಗ್ರ ರಾಷ್ಟ್ರೀಯವಾದ ಎಂಬ ಮುಖವಾಡದ ಕಟ್ಟಾ ಹಿಂದುತ್ವವಾದಿ, ಮೇಲ್ಜಾತಿ ಮಾಧ್ಯಮ ಮತ್ತು ಸಮುದಾಯಗಳಿಗೆ ಭವಿಷ್ಯದ ಭರವಸೆಯ ರಾಮರಾಜ್ಯವಾಗಿ ಕಾಣಿಸುತ್ತಿದೆ ಮತ್ತು ಭಾರತದ ಮುಂದಿನ ಮಾದರಿಯ ಪ್ರಯೋಗಶಾಲೆಯಾಗಿ ಕಾಣಿಸುತ್ತಿದೆ!
Also Read: ತಾವು ಹೋಗೊಲ್ಲ, ಹೋಗುವವರನ್ನು ಬಿಡೊಲ್ಲ; ಯೋಗಿ ಮಾಡೆಲ್!
ಸುಮಾರು ಎರಡು ದಶಕದ ಹಿಂದೆ ಹೋಗಿ ಒಮ್ಮೆ ಗಮನಿಸುವುದಾದರೆ; ಗುಜರಾತ್ ಕೂಡ 2002ರ ಆಸುಪಾಸಿನಲ್ಲಿ ಇಂತಹದ್ದೇ ಭವಿಷ್ಯದ ಭಾರತದ ಮಾಡೆಲ್ ಆಗಿತ್ತು. ಪ್ರಯೋಗಶಾಲೆಯಾಗಿತ್ತು. 2002ರಲ್ಲಿ ಗುಜರಾತ್ ಹತ್ಯಾಕಾಂಡದಲ್ಲಿ ಸಾವಿರಾರು ಮಂದಿ ಸಾವು ಕಂಡರು. ಹಾಗೆ ಸತ್ತವರಲ್ಲಿ ಬಹುಪಾಲು ಮುಸ್ಲಿಮರೇ ಎಂಬುದು ಈಗ ಇತಿಹಾಸ. ಜೊತೆಗೆ ಆ ಹತ್ಯಾಕಾಂಡದ ಹಿಂದೆ ಅಂದಿನ ಸರ್ಕಾರದ ಪರೋಕ್ಷ ಕುಮ್ಮಕ್ಕು ಇತ್ತು ಎಂಬುದು ಕೂಡ ಹಲವು ತನಿಖೆ- ವಿಚಾರಣೆಗಳಲ್ಲೂ ಸಾಬೀತಾದ ಸತ್ಯ. ಆದರೆ, ಆ ಘಟನೆಯಾಗಿ ಕೆಲವೇ ವರ್ಷಗಳಲ್ಲಿ ಅಲ್ಲಿನ ಸರ್ಕಾರ ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ನರೇಂದ್ರ ಮೋದಿಯವರು ದೇಶದ ಭವಿಷ್ಯದ ಭರವಸೆಯಾಗಿ ಬಿಂಬಿತರಾದರು. ಹತ್ಯಾಕಾಂಡಕ್ಕೆ ಆಡಳಿತದ ಕುಮ್ಮಕ್ಕು ಇತ್ತು ಎಂಬ ಹಿನ್ನೆಲೆಯಲ್ಲಿ ರಾಜಧರ್ಮ ಪಾಲನೆಯ ಎಚ್ಚರಿಕೆ ನೀಡಿದ್ದ ಸ್ವತಃ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಮೋದಿಯವರನ್ನು ಟೀಕಿಸಿದ್ದ ಬಹುತೇಕರು ಕೆಲವೇ ವರ್ಷಗಳಲ್ಲಿ ಅವರ ಬಣ್ಣನೆಗೆ ಇಳಿದರು.
ಅದಾಗಿ ಹತ್ತು ವರ್ಷಗಳಲ್ಲಿ 2013ರ ಹೊತ್ತಿಗೆ; ‘ವೈಭ್ರಂಟ್ ಗುಜರಾತ್ ‘ ಜಾಗತಿಕ ಹೂಡಿಕೆದಾರರ ಸಮ್ಮೇಳನದ ಹೊತ್ತಿಗೆ; ನರೇಂದ್ರ ಮೋದಿಯವರನ್ನು ಹೊಗಳಲು ದೇಶದ ಅತಿರಥರು ಸಾಲುಗಟ್ಟಿದ್ದರು. ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ರತನ್ ಟಾಟಾರವರೆಗೆ ದೇಶದ ಮಹಾನ್ ಉದ್ಯಮಿಗಳು, ಕಾರ್ಪೊರೇಟ್ ಕುಳಗಳು ಮೋದಿಯವರನ್ನು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಅವತಾರ ಎಂದು ಬಣ್ಣಿಸಿದರು. ಗುಜರಾತಿನ ಹೊರಗೆ ದೇಶದ ಮೂಲೆಮೂಲೆಯಲ್ಲಿ ಗುಜರಾತಿನ ‘ಕ್ರಾಂತಿಕಾರಕ ಬದಲಾವಣೆ’ ಸಂಘಪರಿವಾರ ಮತ್ತು ಮಾಧ್ಯಮಗಳ ಸಂಘನಿಷ್ಠೆಯ ಮೂಲಕ ಮನೆಮಾತಾಯಿತು. ರಸ್ತೆ, ವಿದ್ಯುತ್, ಕೃಷಿ ಕ್ರಾಂತಿ ಸೇರಿದಂತೆ ಗುಜರಾತ್ ಪ್ರಗತಿ ಎಂಬುದು ದೇಶದ ಮುಂದೆ ಗುಜರಾತ್ ಮಾಡೆಲ್ ಆಗಿ ಬಿಂಬಿತವಾಯಿತು. ಪರಿಣಾಮ ಈಗ ಕಾಣುತ್ತಿದ್ದೇವೆ.
Also Read: 2019ರಲ್ಲಿ SC, ST ಮೇಲಿನ ದೌರ್ಜನ್ಯಗಳಲ್ಲಿ ಕ್ರಮವಾಗಿ 7% ಹಾಗೂ 26% ರಷ್ಟು ಏರಿಕೆ: NCRB
ಅಂದಿನ ಗುಜರಾತಿನ ಮುಖ್ಯಮಂತ್ರಿ ಮೋದಿ, 2014ರ ಲೋಕಸಭಾ ಚುಣಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಮಾಧ್ಯಮ ಮತ್ತು ದೇಶದ ‘ಉಗ್ರ ರಾಷ್ಟ್ರೀಯವಾದಿ’ ವಲಯಗಳ ನಿರಂತರ ಶ್ರಮದ ಫಲವಾಗಿ ಚುನಾವಣೆ ಗೆದ್ದು ಪ್ರಧಾನಿಯಾದರು. 2019 ಚುನಾವಣೆಯಲ್ಲಿಯೂ ಆ ಎರಡೂ ವಲಯಗಳು ಅಷ್ಟೇ ಪರಿಶ್ರಮದಿಂದ ಕೆಲಸ ಮಾಡಿದವು. ಮೋದಿಯವರ ಪ್ರತಿ ಉಸಿರನ್ನೂ , ಪ್ರತಿ ಮಾತನ್ನೂ ರಾಷ್ಟ್ರೀಯ ಬದಲಾವಣೆಯ, ದೇಶದವನ್ನು ವಿಶ್ವಗುರು ಮಾಡುವ, ಗ್ಲೋಬಲ್ ಸೂಪರ್ ಪವರ್ ಮಾಡುವ ವರಸೆಗಳೆಂದೇ ಮಾಧ್ಯಮಗಳು ದಣಿವರಿಯದೆ ಬಿತ್ತರಿಸಿದವು. ಸತತ ಐದು ವರ್ಷಗಳ ಮೊದಲ ಅವಧಿಯುದ್ದಕ್ಕೂ ನಿತ್ಯವೂ ಗಂಟೆಗಟ್ಟಲೆ ಮೋದಿಯವ ಪವಾಡಗಳ ಬಗ್ಗೆ, ಚಮತ್ಕಾರಗಳ ಬಗ್ಗೆ, ಅವರ ಮಾತು, ನಡಿಗೆ, ಊಟ, ತಿಂಡಿ, ಧ್ಯಾನ, ಹಾಡು, ಕ್ಯಾಮರಾ, ಚಿತ್ರ,.. ಹೀಗೆ ಪ್ರತಿ ಹೆಜ್ಜೆಯೂ ಒಬ್ಬ ಅವತಾರ ಪುರುಷನ ಕಾರ್ಯಾಕಾರಣದ ನಡೆ ಎಂಬಂತೆ ಬಿಂಬಿಸಲಾಯಿತು. ಪರಿಣಾಮ ಎರಡನೇ ಅವಧಿಗೆ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದರು. ಪರಿಣಾಮ ಈಗ ಕಾಣುತ್ತಿದ್ದೇವೆ.
ಮೋದಿಯವರದೇ ವರಸೆಯಲ್ಲಿ ಈಗ ಯೋಗಿ ಹೆಜ್ಜೆ ಇಡುತ್ತಿದ್ದಾರೆ. ಆದರೆ, ಒಮ್ಮೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಕೆಲವು ಅನಿವಾರ್ಯತೆಗಳಿಗೆ ಜೋತುಬಿದ್ದು ಅಥವಾ ತಮ್ಮದೇ ವಿಶ್ವನಾಯಕ ಎಂಬ ವರ್ಚಸ್ಸು ಕಟ್ಟುವ ಹಂಬಲಕ್ಕೋ ಬಿದ್ದು ಮೋದಿ ಈ ಉಗ್ರ ರಾಷ್ಟ್ರೀಯವಾದಿ ಎಂಬ ಕಟ್ಟಾ ಮೇಲ್ಜಾತಿ ಮತ್ತು ಮೇಲ್ವರ್ಗದ ಹಿಂದುತ್ವವಾದದ ನಿರೀಕ್ಷೆಯಂತೆ ಕೆಲವು ಬಾರಿ ಉಗ್ರ ನಿಲವುಗಳನ್ನು ಕೈಗೊಳ್ಳಲು ಹಿಂಜರಿದಿರಬಹುದು. ಸಂಘಪರಿವಾರದ ಹಿತಕ್ಕೆ ಅನುಗುಣವಾಗಿ ವಿವಾದಿತ ಕೃಷಿ ಮಸೂದೆಗಳು, ಕಾರ್ಮಿಕ ಕಾನೂನು ತಿದ್ದುಪಡಿ, ಸಿಎಎ-ಎನ್ ಆರ್ ಸಿ ಕಾಯ್ದೆ, ಹಿಂದುತ್ವವಾದಿ ಶಕ್ತಿಗಳ ವಿರುದ್ಧ ದನಿ ಎತ್ತುವವರ ದಮನ ಮುಂತಾದ ಕ್ರಮಗಳ ಹೊರತಾಗಿಯೂ ಸಂಘಪರಿವಾರದ ನಿರೀಕ್ಷೆಗೆ ಪ್ರತಿಯಾಗಿ ಅವರು ತುಸು ಮೃದುವಾದಂತೆ ಕಂಡಿರಬಹುದು.
Also Read: FACT CHECK: ವೈರಲ್ ಆದ ಚಿತ್ರದಲ್ಲಿರುವುದು ಅತ್ಯಾಚಾರದ ಸಂತ್ರಸ್ತೆಯೇ ಅಲ್ಲ
ಅಂತಹ ತಮ್ಮ ನಿರೀಕ್ಷೆಗೆ ನಿಲುಕದ ಮೋದಿ, ಹುಟ್ಟಿಸಿರುವ ಕೆಲಮಟ್ಟಿನ ಭ್ರಮನಿರಸನವನ್ನು ಈಗ ಯೋಗಿ ಆದಿತ್ಯನಾಥರ ಶೈಲಿ ನೀಗಿಸುತ್ತಿದೆ. ಮೇಲ್ಜಾತಿ ಮತ್ತು ವರ್ಗದವರು ಸಮಾಜದ ಮೇಲೆ ದಶಕಗಳಿಂದ ಕಳೆದುಕೊಂಡಿರುವ ಹಿಡಿತವನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥರ ದಲಿತರು ಮತ್ತು ಮುಸ್ಲಿಮರ ವಿರುದ್ಧದ ಬರ್ಭರ ನಡೆಗಳು ದೊಡ್ಡಮಟ್ಟದಲ್ಲಿ ನೆರವಾಗುತ್ತಿವೆ. ಅದು ಸಹಜವಾಗೇ ಸಂಘಪರಿವಾರದಲ್ಲಿ ಯೋಗಿಯ ಕುರಿತು ಹೊಸ ಭರವಸೆ ಮೂಡಿಸಿದೆ. ಅವರ ಕಣ್ಣಲ್ಲಿ ಈಗ ಯೋಗಿ ಭವಿಷ್ಯದ ಭಾರತದ ಮಾದರಿಯಾಗಿದ್ದಾರೆ. ಹಾಗಾಗಿ ಗುಜರಾತ್ ಮಾದರಿ ಈಗ ನಿನ್ನೆಯ ಸಂಗತಿ. ನಾಳೆಯ ಭರವಸೆ ಉತ್ತರಪ್ರದೇಶವೇ!
ಮೋದಿಯವರಂತೆ ವಿಶ್ವನಾಯಕನಾಗುವ ಹಂಬಲವಿಲ್ಲದ, ಸಂಘಪರಿವಾರದ ಸಿದ್ಧಾಂತ ಮತ್ತು ಅಜೆಂಡಾಕ್ಕಿಂತ ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಭವಿಷ್ಯ ಮುಖ್ಯ ಎಂಬ ವರಸೆಯೂ ಇರದ, ಆದರೆ, ತಾನು ಅಂದುಕೊಂಡಿದ್ದನ್ನು ಯಾವ ಕಾನೂನು, ಸಂವಿಧಾನ, ನ್ಯಾಯಾಲಯಗಳ ಮುಲಾಜೇ ಇಲ್ಲದೆ ಮಾಡುವ ಯೋಗಿ ಆದಿತ್ಯನಾಥ ಸಂಘಪರಿವಾರಕ್ಕೆ ಹೆಚ್ಚು ಆಪ್ತರು. ಮುಖ್ಯವಾಗಿ ದಲಿತರನ್ನು ಬಗ್ಗುಬಡಿಯಲು ಮತ್ತು ಅಲ್ಪಸಂಖ್ಯಾತರನ್ನು ಹದ್ದುಬಸ್ತಿನಲ್ಲಿಡಲು ಯೋಗಿ ಅನುಸರಿಸುತ್ತಿರುವ ಕ್ರಮ ಸಂಘದ ಪಾಲಿಗೆ ಭವಿಷ್ಯದ ಭಾರತದ ಮಾದರಿಯ ದಾರಿ!
Also Read: ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ
ಹೀಗೆ ತಮ್ಮದೇ ಅನುಕೂಲ ಮತ್ತು ಹಿತಾಸಕ್ತಿಯ ಕಲ್ಪನೆಯ ರಾಷ್ಟ್ರ ನಿರ್ಮಾಣದ ಸಂಘಪರಿವಾರದ ವಿಶಾಲ ಕ್ಯಾನ್ ವಾಸಿನಲ್ಲಿ ನೋಡಿದರೆ; ಹಾಥ್ರಾಸ್ ಘಟನೆಯಂತಹವು ಆಕಸ್ಮಿಕವಲ್ಲ; ಭವಿಷ್ಯದ ಭಾರತದ ದಿಕ್ಕಿನಲ್ಲಿ ಚಿಕ್ಕಪುಟ್ಟ ಅಂಬೇಗಾಲುಗಳು ಅಷ್ಟೇ. ನೀವಿನ್ನೂ ಪ್ರಜಾಪ್ರಭುತ್ವದ ಆಶಯಗಳಲ್ಲೇ ದೇಶದ ಆಗುಹೋಗುಗಳನ್ನು ನೋಡುತ್ತಿದ್ದರೆ; ನಾಳೆಯ ನಾಗಾಲೋಟದ ಹಾದಿಯ ದಿನಗಳು ಇನ್ನಷ್ಟು ಭೀಕರವಾಗಿರಲಿವೆ.