ಮುಕ್ತ ಮಾರುಕಟ್ಟೆಯಿದ್ದಾಗ ರೈತರಿಗೆ ನ್ಯಾಯಯುತ ಬೆಲೆ ಸಿಕ್ಕಿದ್ದರೆ APMC ಕಾಯ್ದೆ ಯಾಕೆ ಜಾರಿಗೆ ಬಂತು? ಎಂದು ಪ್ರಶ್ನಿಸಿರುವುದು ವಿಪಕ್ಷ ನಾಯಕ ಸಿದ್ದರಾಮಯ್ಯ. ಎಪಿಎಂಸಿ ಕಾಯ್ದೆಯ ಕುರಿತಂತೆ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿದ್ದರಾಮಯ್ಯ, ಸರ್ಕಾರ ರೈತರನ್ನು ಗುಲಾಮರನ್ನಾಗಿ ಮಾಡಲು ಹೊರಟಿದೆ ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸ್ವಪ್ರೇರಣೆಯಿಂದಲ್ಲ. ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ಕೃಷಿ ಸಚಿವಾಲಯದ ಒತ್ತಡಕ್ಕೆ ಮಣಿದು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ನಾಡಿನ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲು ಹೊರಟಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈಗಿನ ಎಪಿಎಂಸಿ ಕಾಯಿದೆಯ ಅನ್ವಯ ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಒಳಗೆ ವರ್ತಕರಿಗೆ ಇಲ್ಲವೇ ಹೊರಗೆ ಪರವಾನಗಿ ಇರುವ ವರ್ತಕರಿಗೆ ಮಾರಾಟ ಮಾಡಬಹುದಿತ್ತು. ತಿದ್ದುಪಡಿಯಿಂದಾಗಿ ಎಪಿಎಂಸಿ ಹೊರಗಿನ ವರ್ತಕರ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣ ಇರುವುದಿಲ್ಲ. ಹೀಗಿದ್ದಾಗ ರೈತರಿಗೆ ಎಲ್ಲಿದೆ ರಕ್ಷಣೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಆರಂಭದಲ್ಲಿ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸಿಗುತ್ತದೆ ಎಂದು ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ, ಇದರಿಂದ ರಾಜ್ಯದಲ್ಲಿನ ಎಪಿಎಂಸಿ ಗಳು ಒಂದೊಂದಾಗಿ ಮುಚ್ಚಿಕೊಳ್ಳುತ್ತಾ ಸಾಗಿ ಕೊನೆಗೆ ರೈತರು ಅನಿವಾರ್ಯವಾಗಿ ಖಾಸಗಿಯವರನ್ನೆ ಅವಲಂಬಿಸಬೇಕಾಗುತ್ತದೆ. ಒಮ್ಮೆ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳು ಸಾರ್ವಭೌಮತ್ವ ಸಾಧಿಸಿದರೆಂದರೆ ನಂತರ ಅವರನ್ನು ನಿಯಂತ್ರಿಸುವ ಯಾವ ನಿಯಮಗಳು ಅಥವಾ ಅಧಿಕಾರ ಸರ್ಕಾರದ ಬಳಿ ಇರುವುದಿಲ್ಲ. ಇದು ಭವಿಷ್ಯದಲ್ಲಿ ಶೋಷಣೆಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.
ರೈತರ ಬೆಳೆಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ನಿಜವಾದ ಕಾಳಜಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದ್ದರೆ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿ, ತೂಕ ಮತ್ತು ಇತರೆಡೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ. ಎಪಿಎಂಸಿ ಗಳಿಂದ ಸರ್ಕಾರಕ್ಕೆ ವಾರ್ಷಿಕ ರೂ.600 ಕೋಟಿ ಲಾಭವಿದೆ, ಇದರ ಜೊತೆಗೆ ರೈತರ ಬೆಳೆಗಳಿಗೂ ಅರ್ಹ ಬೆಲೆ ಸಿಗುತ್ತಿದೆ. ಕಾಯ್ದೆಗೆ ತಿದ್ದುಪಡಿ ತರುವುದರಿಂದ ಎಲ್ಲಾ ಎಪಿಎಂಸಿ ಗಳು ಬಾಗಿಲು ಹಾಕಿದರೆ ಸರ್ಕಾರಕ್ಕಾಗುವ ಈ ನಷ್ಟವನ್ನು ಖಾಸಗಿ ಕಂಪನೆಗಳು ತುಂಬಿಕೊಡುತ್ತವೆಯೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರೈತರಿಗೆ ಮುಕ್ತ ಮಾರುಕಟ್ಟೆ ಕಲ್ಪಿಸುವುದರಿಂದ ನ್ಯಾಯಯುತ ಬೆಲೆ ಸಿಗುತ್ತದೆ ಎಂಬುದು ಸರ್ಕಾರದ ವಾದ. ಹಾಗಾದರೆ 1966ರ ಪೂರ್ವದಲ್ಲೂ ಮುಕ್ತ ಮಾರುಕಟ್ಟೆಯಿತ್ತು, ಆಗ ರೈತರಿಗೆ ನ್ಯಾಯಯುತ ಬೆಲೆ ಸಿಕ್ಕಿದ್ದರೆ ಎಪಿಎಂಸಿ ಕಾಯ್ದೆ ಯಾಕೆ ಜಾರಿಗೆ ಬರುತ್ತಿತ್ತು? ರೈತರ ಮೇಲಿನ ಶೋಷಣೆ ಹೆಚ್ಚಿದ್ದಕ್ಕೆ ಕಾಯ್ದೆ ಜಾರಿಗೆ ಬಂದದ್ದಲ್ಲವೇ ಎಂದು ಕೇಳಿದ್ದಾರೆ.
ರಾಜ್ಯಪಟ್ಟಿಯಲ್ಲಿರುವ ಎಪಿಎಂಸಿ ಕಾಯಿದೆಗೆ ಮಾದರಿ ತಿದ್ದುಪಡಿ ರೂಪಿಸಿ, ಇದನ್ನು ಯಥಾವತ್ತಾಗಿ ಜಾರಿಗೆ ತನ್ನಿ ಎಂದು ಕೇಂದ್ರ ಸರ್ಕಾರ ಹೇಳುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅಪಚಾರ. ಕೇಂದ್ರಕ್ಕೆ ಈ ಅಧಿಕಾರ ಕೊಟ್ಟವರು ಯಾರು? ಎಪಿಎಂಸಿ ಗಳ ಮೇಲೆ ಸರ್ಕಾರದ ನಿಯಂತ್ರಣವಿದೆ, ತಿದ್ದುಪಡಿ ಜಾರಿಯಾದರೆ ರೈತರ ಉತ್ಪನ್ನಗಳನ್ನು ಖರೀದಿಸುವ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ಸರ್ಕಾರಕ್ಕೆ ಯಾವುದೇ ರೀತಿಯ ನಿಯಂತ್ರಣ ಇರುವುದಿಲ್ಲ. ಭವಿಷ್ಯದಲ್ಲಿ ಖಾಸಗಿಯವರೇ ರೈತರ ಶೋಷಣೆಗೆ ಇಳಿದರೆ ನ್ಯಾಯಕ್ಕಾಗಿ ರೈತರು ಯಾರನ್ನು ಕೇಳಬೇಕು? ಎಂದು ಸಿದ್ದರಾಮಯ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಪ್ರಶ್ನೆ ಮಾಡಿದ್ದಾರೆ.