ಕರೊನಾ ಕರಿ ನೆರಳಿನಲ್ಲಿ ಇಂದಿನಿಂದ ಮಹತ್ವದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಸಂಪುಟ ಪುನರ್ರಚನೆಯ ಬೇಗುದಿ, ಕರೋನಾ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದ ಕಾರ್ಯವೈಖರಿ, ಸಚಿವರ ನಡುವೆ ಇಲ್ಲದ ಸಮನ್ವಯತೆ, ಕರೋನಾ ಕಾಲದಲ್ಲೂ ಕೇಳಿಬಂದ ಭ್ರಷ್ಟಾಚಾರದ ಆರೋಪ, ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಹಾಗೂ ಇನ್ನಿತರ ವಿಷಯಗಳಿಂದ ಜರ್ಜರಿತಗೊಂಡಿರುವ ಆಡಳಿತಾರೂಢ ಬಿಜೆಪಿ ಒಲ್ಲದ ಮನಸ್ಸಿನಿಂದಲೇ ಅಧಿವೇಶನಕ್ಕೆ ತಲೆಯಾಡಿಸಿದೆ. ಇನ್ನೊಂದೆಡೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬಯಲು ಮಾಡಲು ಪ್ರತಿಪಕ್ಷ ಕಾಂಗ್ರೆಸ್, ಅದರಲ್ಲೂ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ವ ಸನ್ನದ್ಧರಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿಯ ಅಧಿವೇಶನ ಭಾರೀ ಕುತೂಹಲ ಮೂಡಿಸಿದೆ.
ರಾಜ್ಯ ಸರ್ಕಾರ ಕರೋನಾ ಸಂದರ್ಭದಲ್ಲಿ ತಂದಿರುವ ಸುಗ್ರೀವಾಜ್ಞೆಗಳಿಗೆ ಶಾಸನಸಭೆಯ ಅನುಮೋದನೆ ಪಡೆಯುವ ಧಾವಂತ. ಜೊತೆಗೆ ಕೆಲ ವಿವಾದಾತ್ಮಕ ಮಸೂದೆಗಳ ಬಗ್ಗೆ ಚರ್ಚೆ ಮಾಡಿದರೆ ಸರ್ಕಾರ ಮತ್ತು ಬಿಜೆಪಿಯ ನಿಜ ಬಣ್ಣ ಬಯಲಾಗುತ್ತದೆ ಎಂದು ಚರ್ಚೆಯನ್ನೇ ಮಾಡದೆ ಸದನದ ಅನುಮೋದನೆ ಪಡೆದುಕೊಂಡುಬಿಡಬೇಕೆಂಬ ದುಷ್ಟತನ. ಈ ಹಿನ್ನಲೆಯಲ್ಲಿ ಮೂರೇ ದಿನಕ್ಕೆ ಮುಂಗಾರು ಅಧಿವೇಶನಕ್ಕೆ ಮಂಗಳ ಹಾಡಲು ಸರ್ಕಾರ ಹವಣಿಸುತ್ತಿದೆ. ಮೂರೇ ದಿನಕ್ಕೆ ಅಧಿವೇಶನಕ್ಕೆ ಎಳ್ಳು-ನೀರು ಬಿಡಲು ಸರ್ಕಾರ ಮತ್ತು ಬಿಜೆಪಿ ನೀಡುತ್ತಿರುವುದು ಕರೋನಾ ಎಂಬ ಕುಂಟುನೆಪ. ಸರ್ಕಾರದ ಹುನ್ನಾರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸೊಪ್ಪು ಹಾಕಿಲ್ಲ. ಆದುದರಿಂದ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುವುದಂತೂ ನಿಶ್ವಿತವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮುಂಗಾರು ಅಧಿವೇಶನವನ್ನು ಮೊಟಕುಗೊಳಿಸಲು ಉತ್ಸಾಹುಕವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಅಧಿವೇಶನವನ್ನು ಮೊಟಕುಗೊಳಿಸುವ ಬಗ್ಗೆ ಮಾತನ್ನಾಡಿದ್ದಾರೆ. ಆದರೆ ಇದಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಒಪ್ಪಿಗೆ ನೀಡಿಲ್ಲ. ಈ ವಿಷಯವನ್ನು ಸ್ವತಃ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ನನಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೂರವಾಣಿ ಕರೆ ಮಾಡಿದ್ದರು. ಕರೊನಾ ಸೋಂಕು ಹರಡುವಿಕೆ ತೀವ್ರವಾಗಿರುವುದರಿಂದ ಸದನವನ್ನು ಮೂರೇ ದಿನಕ್ಕೆ ಮೊಟಕು ಮಾಡುತ್ತಿದ್ದೇವೆ, ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು. ಆದರೆ ನಾವು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಅಧಿವೇಶನವನ್ನು ಮೊಟಕುಗೊಳಿಸಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲಿರುವ ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಮಾಧ್ಯಮದವರು ಕರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೀಗೆ ಪರೀಕ್ಷೆ ಮಾಡಿಸಿಕೊಂಡ 1800 ಜನರಲ್ಲಿ 70 ಜನರಿಗೆ ಪಾಸಿಟಿವ್ ಬಂದಿದೆ. ಈ ಪೈಕಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆಹಾರ ಸಚಿವ ಕೆ. ಗೋಪಾಲಯ್ಯ, ಕಾಂಗ್ರೆಸ್ ಶಾಸಕ ಪ್ರಿಯಾಂಕಾ ಖರ್ಗೆ ಸೇರಿದಂತೆ ಐವರು ಶಾಸಕರಿಗೂ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನೇ ನೆಪ ಮಾಡಿಕೊಂಡು ಅಧಿವೇಶನವನ್ನು ಮೊಟಕುಗೊಳಿಸೋಣ ಎನ್ನುತ್ತಿದೆ ಬಿಜೆಪಿ. ಚರ್ಚೆ ಮಾಡಬೇಕಿರುವ ಹಲವು ಪ್ರಮುಖ ಸಂಗತಿಗಳಿವೆ. ಆದುದರಿಂದ ಅಧಿವೇಶನವನ್ನು ಮೂರೇ ದಿನಕ್ಕೆ ಮುಕ್ತಾಯ ಮಾಡುವುದು ಬೇಡ ಎನ್ನುತ್ತಿದೆ ಪ್ರತಿಪಕ್ಷ ಕಾಂಗ್ರೆಸ್.

ರೈತರ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು ಬಂದ ಯಡಿಯೂರಪ್ಪ ಈಗ ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸುವ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದಿದ್ದಾರೆ. ಜೊತೆಗೆ ಕಾರ್ಪೂರೇಟ್ ಕಂಪನಿಗಳಿಗೆ, ಹಣ ಇದ್ದವರಿಗೆ ಅನುಕೂಲ ಮಾಡಿಕೊಡಲು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿದ್ದಾರೆ. ಈ ಎರಡೂ ಜನವಿರೋಧಿ ಮತ್ತು ರೈತ ವಿರೋಧಿ ಮಸೂದೆಗಳಿಗೆ ಹೇಗಾದರೂ ಮಾಡಿ ಒಪ್ಪಿಗೆ ಪಡೆದುಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಮೊದಲಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿರುವ ಸಿದ್ದರಾಮಯ್ಯ ಈ ಮಸೂದೆಗಳನ್ನು ಒಪ್ಪಲು ಸುತಾರಾಂ ಸಿದ್ದರಿಲ್ಲ. ಇವು ರೈತ ವಿರೋಧಿ ಆಗಿರುವ ಕಾರಣಕ್ಕೆ ಜೆಡಿಎಸ್ ಕೂಡ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಸಿದ್ದರಾಮಯ್ಯ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ. ಈ ವಿಷಯದ ಚರ್ಚೆಗೆ ಸಿದ್ದರಾಮಯ್ಯ ಪಟ್ಟುಹಿಡಿಯುವುದು ಗ್ಯಾರಂಟಿ ಆಗಿರುವುದರಿಂದ ಸದನಕ್ಕೂ ಮುನ್ನವೇ ಆಡಳಿತ ಪಕ್ಷದಲ್ಲಿ ಅಂಜಿಕೆ ಶುರುವಾಗಿದೆ.

ಕರೊನಾ ಸಂದರ್ಭದಲ್ಲಿ ಆದ ಭ್ರಷ್ಟಾಚಾರದ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ವಿಷಯ ಪ್ರಸ್ತಾಪಿಸುವ ಸಾಧ್ಯತೆ ಇದೆ. ನೆರೆ ಮತ್ತು ಬರಕ್ಕೆ ಕೇಂದ್ರ ಸರ್ಕಾರ ಸರಿಯಾದ ಪರಿಹಾರ ನೀಡಿಲ್ಲ ಮತ್ತು ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ತರುವ ಪ್ರಯತ್ನ ಮಾಡಿಲ್ಲ. ಪ್ರಧಾನಿ ಮೋದಿ ಎದುರು ಮಾತನಾಡಲು ರಾಜ್ಯ ಬಿಜೆಪಿ ನಾಯಕರು, ವಿಶೇಷವಾಗಿ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ 24 ಬಿಜೆಪಿ ಸದಸ್ಯರು ಕೇಳುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿ ಮಾಡಬಹುದು, ಹೆಚ್ಚಿನ ಅನುದಾನ ಪಡೆಯಬಹುದೆಂಬುದು ಮೋದಿ ಮತ್ತು ಯಡಿಯೂರಪ್ಪನವರ ಸರ್ಕಾರಗಳ ವಿಷಯದಲ್ಲಿ ಸುಳ್ಳಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವ ಇನ್ನೊಂದು ಪ್ರಮುಖ ಅಸ್ತ್ರವಾಗಿದೆ. ಬಿಜೆಪಿ ಪಾಳೆಯದಲ್ಲಿ ಭಯ ಮೂಡಿಸಿದೆ.
ಇನ್ನು ಇತ್ತೀಚೆಗೆ ರಾಜ್ಯದಲ್ಲಿ ಕೇಳಿಬಂದ ಡ್ರಗ್ಸ್ ದಂಧೆ, ಬೆಂಗಳೂರು ಗಲಭೆ ಪ್ರಕರಣಗಳು ಕೂಡ ಚರ್ಚೆಗೆ ಬರಲಿವೆ. ಇದಲ್ಲದೆ ಬಿಜೆಪಿಯ ಆಂತರಿಕ ಕಲಹ ಈಗ ತಾರಕಕ್ಕೇರಿದೆ. ಸಚಿವಾಕಾಂಕ್ಷಿಗಳು ಪರೋಕ್ಷವಾಗಿ ಸರ್ಕಾರಕ್ಕೆ ಮುಜುಗರ ತರುವಂತೆ ನಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷದ ಬಳಿ ಸಾಕಷ್ಟು ಅಸ್ತ್ರಗಳಿರುವುದರಿಂದ ಈ ಬಾರಿಯ ಅಧಿವೇಶನ ಭಾರೀ ಕುತೂಹಲ ಮೂಡಿಸಿದೆ.