ದೇಶದ ಭದ್ರತೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಚೀನಾಕ್ಕೆ ನೀಡುತ್ತಿದ್ದ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ಬಂಧಿಸಿರುವ ಸ್ವತಂತ್ರ ಪತ್ರಕರ್ತ ರಾಜೀವ್ ಶರ್ಮಾ ಪ್ರಕರಣ ಕ್ಷಣಕ್ಷಣಕ್ಕೂ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಆ ಪತ್ರಕರ್ತ ಸ್ವತಃ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೊಂದಿಗೆ ಹೊಂದಿದ್ದ ನಂಟು ಚರ್ಚೆಗೆ ಗ್ರಾಸವಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜಕೀಯ ವಿಶ್ಲೇಷಕ ಹಾಗೂ ಪ್ರಮುಖವಾಗಿ ಭಾರತದ ವ್ಯೂಹಾತ್ಮಕ ಕಾರ್ಯತಂತ್ರಗಳ ವಿಶ್ಲೇಷಕ ಎಂದು ಗುರುತಿಸಿಕೊಂಡಿದ್ದ 61 ವರ್ಷದ ರಾಜೀವ್ ಶರ್ಮಾ, ‘ದ ಟ್ರಿಬ್ಯೂನ್’ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಬಳಿಕ ವಿವಿಧ ಮಾಧ್ಯಮಗಳಿಗೆ ಸ್ವತಂತ್ರ ಪತ್ರಕರ್ತನಾಗಿ ಬರೆಯುತ್ತಿದ್ದರು. ಆದರೆ, ಮುಖ್ಯವಾಗಿ 2010 ರ ಸುಮಾರಿಗೆ ಆತ, ಸ್ವತಃ ಅಜಿತ್ ಧೋವಲ್ ಅವರೇ ಸಂಸ್ಥಾಪಕ ನಿರ್ದೇಶಕರಾಗಿರುವ ದೇಶದ ಮುಂಚೂಣಿ ಥಿಂಕ್ ಟ್ಯಾಂಕ್ ಸಂಸ್ಥೆಯಾದ ‘ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಷನ್’ ನಲ್ಲಿ ಸಂಪಾದಕರಾಗಿ ಮತ್ತು ಸೀನಿಯರ್ ಫೆಲೋ ಆಗಿ ಕೆಲಸ ಮಾಡುತ್ತಿದ್ದರು (https://www.rediff.com/news/report/taliban-targeting-sikhs-and-hindus-in-pakistan/20100222.htm) ಎಂಬ ಸಂಗತಿ ಇದೀಗ ಬಯಲಿಗೆ ಬಂದಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿವೇಕಾನಂದ ಇಂಟರ್ ನ್ಯಾಷನಲ್ ಪೌಂಡೇಷನ್(ವಿಐಎಫ್) ವೆಬ್ ಸೈಟಿನಲ್ಲಿ ಶರ್ಮಾ ಕುರಿತ ವಿವರಗಳನ್ನು ಒಳಗೊಂಡಿದ್ದ ವಿಐಎಫ್ ಟೀಮ್ ಎಂಬ ಪುಟವನ್ನು ನಿಷ್ಕ್ರಿಯಗೊಳಿಸಲಾಗಿದೆ (https://www.vifindia.org/fellows).
ಪ್ರಮುಖವಾಗಿ ಭಾರತದ ಅಂತಾರಾಷ್ಟ್ರೀಯ ಸಂಬಂಧಗಳು, ರಾಜತಾಂತ್ರಿಕ ಬಿಕ್ಕಟ್ಟುಗಳು, ನೆರೆಹೊರೆಯ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧ ಮುಂತಾದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ ಸಂಬಂಧಗಳ ಕುರಿತ ಅಧ್ಯಯನಕ್ಕಾಗಿ ಹೆಸರಾಗಿರುವ ಈ ಸಂಸ್ಥೆಯಲ್ಲಿ ಸದ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಘಟಾಘಟಿ ನಾಯಕರು ಇದ್ದಾರೆ. ಬಿಜೆಪಿ ಮತ್ತು ಅದರ ಸಿದ್ಧಾಂತದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಥಿಂಕ್ ಟ್ಯಾಂಕ್ ಎಂದೇ ಗುರುತಿಸಲಾಗುವ ಈ ವಿಐಎಫ್ನ ಸದ್ಯದ ಸಲಹಾ ಮಂಡಳಿಯಲ್ಲಿ ದೆಹಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್, ಪ್ರಸಾರ ಭಾರತಿ ಮುಖ್ಯಸ್ಥ ಮತ್ತು ಕನ್ನಡಿಗ ಅರಕಲಗೋಡು ಸೂರ್ಯಪ್ರಕಾಶ್ ಮತ್ತಿತರ ಹಲವು ಪ್ರಮುಖರು ಇದ್ದಾರೆ. ಅಲ್ಲದೆ, ಅದರ ಕಾರ್ಯಕಾರಿ ಮಂಡಳಿಯಲ್ಲಿ ಆರ್ ಎಸ್ ಎಸ್ ಆರ್ಥಿಕ ತಜ್ಞ ಹಾಗೂ ರಿಸರ್ವ್ ಬ್ಯಾಂಕ್ ನಿರ್ದೇಶಕ ಎಸ್ ಗುರುಮೂರ್ತಿಯವರೂ ಇದ್ದು, ಸದ್ಯ ಟ್ರಸ್ಟಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಜೊತೆಗೆ, ಡಿಆರ್ಡಿಒ ಮಾಜಿ ಮುಖ್ಯಸ್ಥ ಹಾಗೂ ಹಾಲಿ ನೀತಿ ಆಯೋಗದ ಸದಸ್ಯ ವಿ ಕೆ ಸಾರಸ್ವತ್, ರಾ ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ಸಿ ಡಿ ಸಹಾಯ್ ಮತ್ತಿತರ ಘಟಾನುಘಟಿಗಳು ಸದ್ಯ ಸಂಸ್ಥೆಯ ಟ್ರಸ್ಟಿಗಳಾಗಿದ್ದಾರೆ. ಇದು ಸಂಸ್ಥೆಯ ಅಧಿಕೃತ ವೆಬ್ ತಾಣದಲ್ಲಿರುವ ಮಾಹಿತಿ.
ಬಹುತೇಕ ಭಾರತೀಯ ಗುಪ್ತಚರ ಸಂಸ್ಥೆಗಳು, ರಕ್ಷಣಾ ವಲಯ, ವಿದೇಶಾಂಗ ವ್ಯವಹಾರ, ವಿವಿಧ ಉನ್ನತ ಮಟ್ಟದ ರಾಜತಾಂತ್ರಿಕ ಹುದ್ದೆಗಳು, ಭಾರತ ಸರ್ಕಾರದ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರ ಸಚಿವಾಲಯಗಳ ಕಾರ್ಯದರ್ಶಿಗಳಂತಹ ಆಯಕಟ್ಟಿನ ಸ್ಥಾನದಲ್ಲಿದ್ದು ನಿವೃತ್ತರಾದವರೇ ವಿಐಎಫ್ ಆಡಳಿತ ಮಂಡಳಿಯಲ್ಲಿದ್ದಾರೆ ಎಂಬುದು ಗಮನಾರ್ಹ. ಇಂತಹ ಸಂಸ್ಥೆ ಸಹಜವಾಗೇ 2015ರಲ್ಲಿ ರಾಜಕೀಯ ಪಕ್ಷಗಳೊಂದಿಗಿನ ನಂಟು ಹೊಂದಿರುವ ಅಥವಾ ರಾಜಕೀಯ ಪಕ್ಷಗಳ ಆಶ್ರಯದಲ್ಲಿರುವ ಜಗತ್ತಿನ ಪ್ರಭಾವಿ ಥಿಂಕ್ ಟ್ಯಾಂಕ್ ಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು( https://www.thehindu.com/news/national/vif-among-top-think-tanks-with-political-affiliation/article8175791.ece). ಪೆನ್ಸಿಲ್ವೇನಿಯಾ ವಿವಿ ನಡೆಸಿದ ಆ ಸಮೀಕ್ಷೆಯಲ್ಲಿ ವಿಐಎಫ್ 40 ನೇ ಸ್ಥಾನ ಪಡೆದಿತ್ತು ಮತ್ತು ಸಂಸ್ಥೆ ಬಿಜೆಪಿ ಆಶ್ರಯದ ಥಿಂಕ್ ಟ್ಯಾಂಕ್ ಎಂದೇ ಗುರುತಿಸಲ್ಪಟ್ಟಿತ್ತು.
ಇದೀಗ ರಾಜೀವ್ ಶರ್ಮಾ ಬಂಧನದೊಂದಿಗೆ ಸಂಸ್ಥೆ ಮತ್ತೊಮ್ಮೆ ಸುದ್ದಿಯಲ್ಲಿದ್ದು; ಸ್ವತಃ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೇ ಕಟ್ಟಿಬೆಳೆಸಿದ ಮತ್ತು ಸದ್ಯ ಎಸ್ ಗುರುಮೂರ್ತಿ ಸೇರಿದಂತೆ ಹಲವು ಘಟಾಘಟಿಗಳು ಮುನ್ನಡೆಸುತ್ತಿರುವ ಸಂಸ್ಥೆಯೊಂದಿಗೆ ನಂಟುಹೊಂದಿದ್ದ ಪತ್ರಕರ್ತನ ಬಂಧನ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಸಿದೆ.
ಪ್ರಮುಖವಾಗಿ, ರಾಜೀವ್ ಶರ್ಮಾ ಬಂಧನವಾಗುತ್ತಿದ್ದಂತೆ ಸಂಸ್ಥೆ ತನ್ನ’ವಿಐಎಫ್ ಟೀಮ್’ ಎಂಬ ತನ್ನ ಫೆಲೋ ಮತ್ತು ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಪುಟವನ್ನು ನಿಷ್ಕ್ರಿಯಗೊಳಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಂಸ್ಥೆ ಮತ್ತು ಶರ್ಮಾ ನಡುವಿನ ಸಂಬಂಧದ ಕುರಿತು ಅನುಮಾನಗಳು ಎದ್ದಿವೆ. ಒಂದು ವೇಳೆ ಸಂಸ್ಥೆ ಶರ್ಮಾನೊಂದಿಗೆ ಫಾರದರ್ಶಕ ಸಂಬಂಧ ಹೊಂದಿದ್ದರೆ ಅದನ್ನ ಮುಚ್ಚಿಡುವಂತಹದ್ದೇನಿದೆ? ಎಂಬ ಪ್ರಶ್ನೆ ಕೇಳಿಬಂದಿದೆ. ಜೊತೆಗೆ, ಬಹಳ ಮುಖ್ಯವಾಗಿ ಬಂಧಿತ ಪತ್ರಕರ್ತ ಸಂಸ್ಥೆಯಲ್ಲಿ ಸಂಪಾದಕನಾಗಿ, ಫೆಲೋ ಆಗಿ ಕೆಲಸ ಮಾಡಿರುವುದು ನಿಜವಾದರೆ, ಆತನ ಹಿನ್ನೆಲೆ ಮತ್ತು ಸಂಪರ್ಕಗಳ ಬಗ್ಗೆ ರಾ ಮಾಜಿ ಮುಖ್ಯಸ್ಥರಂತಹ ಘಟಾನುಘಟಿಗಳಿರುವ ಸಂಸ್ಥೆ ಪೂರ್ವಾಪರ ವಿಚಾರಣೆ ನಡೆಸಿರಲಿಲ್ಲವೆ? ಎಂಬ ಪ್ರಶ್ನೆಯೂ ಇದೆ.
ಈ ನಡುವೆ, ದೆಹಲಿ ಪೊಲೀಸರು ಆತನ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ, ರಾಜೀವ್ ಶರ್ಮಾನನ್ನು ಸರ್ಕಾರಿ ಗೌಪ್ಯತೆ ಕಾಯ್ದೆಯಡಿ ಬಂಧಿಸಲಾಗಿದೆ. ಚೀನಾದ ಗುಪ್ತಚರ ಸಂಸ್ಥೆಗೆ ಭಾರತದ ಸೂಕ್ಷ್ಮ ಮಾಹಿತಿಯನ್ನು ಆತ ಹಣಕ್ಕಾಗಿ ಮಾರುತ್ತಿದ್ದ. ಅದಕ್ಕಾಗಿ ವೆಸ್ಟ್ರನ್ ಯೂನಿಯನ್ ಮನಿ ಟ್ರಾನ್ಸಫರ್ ಮೂಲಕ ಹವಾಲಾ ಹಣ ಪಡೆಯುತ್ತಿದ್ದ. ಭೂತಾನ್- ಸಿಕ್ಕಿ- ಚೀನಾ ಗಡಿಯಲ್ಲಿನ ಭಾರತೀಯ ಸೇನಾ ನಿಯೋಜನೆ, ಭಾರತ-ಮ್ಯಾನ್ಮಾರ್ ಸೇನಾ ಸಹಕಾರ, ಭಾರತ-ಚೀನಾ ಗಡಿ ವಿಷಯ ಸೇರಿದಂತೆ ಹಲವು ಸೂಕ್ಷ್ಮ ಮಾಹಿತಿಯನ್ನು ಆತ ಚೀನಾದ ಗುಪ್ತಚರ ಸಂಸ್ಥೆಗಳಿಗೆ ಮಾರಾಟ ಮಾಡಿದ್ದಾನೆ. ಅದಕ್ಕಾಗಿ ಆತ ಇತ್ತೀಚಿನ ದಿನಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಹಣವನ್ನೂ ವಿವಿಧ ಮೂಲಗಳಿಂದ ಪಡೆದಿದ್ದಾನೆ. ಈ ಮೊದಲು ಚೀನಾದ ಸರ್ಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ಪತ್ರಿಕೆಗೂ ಆತ ಬರೆಯುತ್ತಿದ್ದ. ಆ ಸಂಪರ್ಕದ ಮೂಲಕವೇ ಆತನಿಗೆ ಚೀನಾ ಗುಪ್ತಚರ ಅಧಿಕಾರಿಗಳ ಸಂಪರ್ಕ ಸಿಕ್ಕಿತ್ತು. ಆತನ ಈ ವ್ಯವಹಾರಗಳಿಗೆ ನೆರವಾಗುತ್ತಿದ್ದ ಚೀನಾ ಮೂಲದ ಕಿಂಗ್ ಶಿ ಮತ್ತು ನೇಪಾಳ ಮೂಲದ ಶೇರ್ ಸಿಂಗ್ ಅಲಿಯಾಸ್ ರಾಜ್ ಬೋಹ್ರಾ ಎಂಬಿಬ್ಬರನ್ನೂ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಡಿಸಿಪಿ (ವಿಶೇಷ ದಳ) ಸಂಜೀವ್ ಯಾದವ್ ಹೇಳಿದ್ದಾರೆ.
ವಿಚಿತ್ರವೆಂದರೆ; ದೆಹಲಿ ಪೊಲೀಸರ ಪ್ರಕಾರ ಇಷ್ಟೆಲ್ಲಾ ಹಿನ್ನೆಲೆ ಹೊಂದಿರುವ ಈ ಪತ್ರಕರ್ತನಿಗೆ ಸಾಮಾನ್ಯವಾಗಿ ಬಹಳಷ್ಟು ಪೂರ್ವಾಪರ ತನಿಖೆ ಮಾಡಿ ನೀಡಲಾಗುವ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ(ಪಿಐಬಿ) ಯ ಮಾನ್ಯತಾ ಪತ್ರವನ್ನೂ ನೀಡಲಾಗಿತ್ತು ಮತ್ತು ಆತ ಭಾರತೀಯ ಪ್ರೆಸ್ ಕ್ಲಬ್ ಸದಸ್ಯ ಕೂಡ!
ಈ ನಡುವೆ, ದೇಶದ್ರೋಹ ಕಾಯ್ದೆ, ಗೌಪ್ಯತಾ ಕಾಯ್ದೆ, ಯುಎಪಿಎ ಕಾಯ್ದೆಗಳ ದುರುಪಯೋಗಕ್ಕೆ ಹೆಸರಾಗಿರುವ ದೆಹಲಿ ಪೊಲೀಸರ ವಿರುದ್ಧ ಈ ಪ್ರಕರಣದಲ್ಲಿಯೂ ಆರೋಪಗಳು ಕೇಳಿಬಂದಿದ್ದು, ಸ್ವತಃ ದೆಹಲಿಯ ಭಾರತೀಯ ಪ್ರೆಸ್ ಕ್ಲಬ್ ಈ ಆರೋಪ ಮಾಡಿದೆ. ಶರ್ಮಾ ವಿರುದ್ಧ ಪೊಲೀಸರ ಕಾರ್ಯಾಚರಣೆ ಹಿಂದೆ ‘ದೊಡ್ಡ ವ್ಯಕ್ತಿಗಳ ಕೈವಾಡ’ವಿದೆ ಮತ್ತು ತೀರಾ ‘ಆಘಾತಕಾರಿ’ ಬೆಳವಣಿಗೆ ಎಂದು ಕಟುವಾಗಿ ಪ್ರತಿಕ್ರಿಯಿಸಿದೆ. “ದೆಹಲಿ ಪೊಲೀಸರು ಇಂತಹ ಕಳಂಕಿತ ಕೃತ್ಯಗಳಿಗಾಗಿ ಕುಖ್ಯಾತಿ ಗಳಿಸಿದ್ದಾರೆ. ಜನಪ್ರಿಯ ಸ್ವತಂತ್ರ ಪತ್ರಕರ್ತ ಹಾಗೂ ತನ್ನ ಹಿರಿಯ ಸದಸ್ಯ ರಾಜೀವ್ ಶರ್ಮಾ ಅವರ ಬಂಧನ ಆಘಾತಕಾರಿ ಬೆಳವಣಿಗೆ. ಪೊಲೀಸರ ಈ ಕ್ರಮ ಹಲವು ಅನುಮಾನಗಳಿಗೆ ಎಡೆಮಾಡಿದೆ ಮತ್ತು ಕೆಲವು ಪ್ರಶ್ನಾರ್ಹ ಮತ್ತು ಶಂಕಾಸ್ಪದ ಪ್ರೇರಣೆಯಿಂದ ಪೊಲೀಸರು ಈ ಬಂಧನ ಮಾಡಿದ್ದಾರೆ ಎಂಬುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತಿದೆ” ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿದೆ.
ಒಂದು ಕಡೆ ದೆಹಲಿ ಲೆಫ್ಟಿನೆಂಟ್ ಗವರ್ನರ್, ಆರ್ ಬಿಐ ನಿರ್ದೇಶಕರು, ರಾ ಮಾಜಿ ಮುಖ್ಯಸ್ಥರು, ಡಿಆರ್ ಡಿಒ ಮಾಜಿ ಮುಖ್ಯಸ್ಥರು ಮುನ್ನಡೆಸುವಂಥ ಸಂಸ್ಥೆಯೊಂದಿಗಿನ ನಂಟು, ಹಾಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರೇ ಕಟ್ಟಿದ ಸಂಸ್ಥೆಯೊಂದಿಗಿನ ಒಡನಾಟ; ಮತ್ತೊಂದು ಕಡೆ ದೇಶದ ಪ್ರತಿಷ್ಠಿತ ಪ್ರೆಸ್ ಕ್ಲಬ್ ಸದಸ್ಯತ್ವ, ಭಾರತ ಸರ್ಕಾರವೇ ನೀಡುವ ಪಿಐಬಿ ಮಾನ್ಯತೆ,.. ಹೀಗೆ ಸಾಲು ಸಾಲು ಹೆಚ್ಚುಗಾರಿಕೆ ಮತ್ತು ನಂಟು ಹೊಂದಿರುವ ಪ್ರಭಾವಿ ಪತ್ರಕರ್ತರೊಬ್ಬರನ್ನು ದೆಹಲಿಯ ಪೊಲೀಸರ ವಿಶೇಷ ದಳ ಬೇಹುಗಾರಿಕೆಯಂತಹ ಗಂಭೀರ ಪ್ರಕರಣದಲ್ಲಿ ಬಂಧಿಸಿದೆ. ಹಾಗಾಗಿ ಇದೀಗ ಏಕ ಕಾಲಕ್ಕೆ ಪೊಲೀಸರ ಕಾರ್ಯಾಚರಣೆಯೂ, ಆ ಪತ್ರಕರ್ತರೊಂದಿಗೆ ನಂಟು ಹೊಂದಿರುವ ಪ್ರಭಾವಿಗಳು ಮತ್ತು ಪ್ರಭಾವಿ ಸಂಸ್ಥೆಗಳು ಕೂಡ ಚರ್ಚೆಗೆ ಗ್ರಾಸವಾಗಿವೆ!
ನಿಜಕ್ಕೂ ಈ ವಿಷಯದಲ್ಲಿ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ತನಿಖೆ ನಡೆದಲ್ಲಿ ಮಾತ್ರ ಇಡೀ ಪ್ರಕರಣದ ಹಿಂದಿನ ಒಳಸುಳಿಗಳು ಹೊರಬರಲಿವೆ. ಇಲ್ಲವಾದಲ್ಲಿ ಪ್ರೆಸ್ ಕ್ಲಬ್ ವ್ಯಕ್ತಪಡಿಸಿದ ಆತಂಕ ನಿಜವಾಗಲಿದೆ. ಯಾರನ್ನೋ ರಕ್ಷಿಸಲು, ಇನ್ನಾರದ್ದೋ ವ್ಯವಹಾರ ಮುಚ್ಚಿಹಾಕಲು ಹೀಗೆ ಇನ್ನಾರನ್ನೋ ಬಲಿಕೊಡುವ ಕಳ್ಳ-ಪೊಲೀಸ್ ಆಟ ಮುಂದುವರಿಯುತ್ತಲೇ ಇರುತ್ತದೆ!