ಅಸ್ಸಾಮಿನ ಚಾಚರ್ ಜಿಲ್ಲೆಯ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ತನ್ನ ಮದುವೆಗೂ ರಜೆ ಪಡೆಯದೆ ಕರ್ತವ್ಯ ನಿರ್ವಹಿಸಿ ವ್ಯಾಪಕ ಶ್ಲಾಘನೆಗೆ ಒಳಗಾಗಿದ್ದಾರೆ. ಈ ಕರ್ತವ್ಯ ನಿಷ್ಠ ಜಿಲ್ಲಾಧಿಕಾರಿ ಮೂಲತಃ ಹೈದರಾಬಾದ್ ನಿವಾಸಿ, 2013 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಕರೋನಾ ಸಾಂಕ್ರಮಿಕ ಹರಡುವ ಮೊದಲೇ ಚಾಚರ್ ಜಿಲ್ಲೆಗೆ ಸೇವೆಗೆ ನಿಯೋಜನೆಗೊಂಡಿದ್ದರು.
ಚಾಚರ್ ಜಿಲ್ಲೆಯಲ್ಲಿ ದಿನವೊಂದಕ್ಕೆ ಸರಾಸರಿ 100ರಂತೆ ಕರೋನಾ ಪ್ರಕರಣಗಳು ಪತ್ತೆಯಾಗುತ್ತಿದೆ. ಹಾಗಾಗಿಯೇ ಈ ಜಿಲ್ಲಾಧಿಕಾರಿ ತನ್ನ ಮದುವೆಗಾಗಿ ರಜೆ ಮಾಡಲು ನಿರಾಕರಿಸಿದ್ದಾರೆ. ಮದುವೆಗಾಗಿ ಹೈದರಾಬಾದಿನಲ್ಲಿರುವ ಮನೆಗೆ ಬರುವುದಿಲ್ಲ, ತಾನು ರಜೆ ಪಡೆಯುವುದಿಲ್ಲವೆಂದು ಮನೆಯವರಿಗೆ ತಿಳಿಸಿದ್ದಾರೆ. ಮದುವೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಕುಟುಂಬಸ್ಥರಿಗೆ ಇದು ಕ್ಷಣಕಾಲಕ್ಕೆ ದಿಗ್ಭ್ರಮೆ ಹುಟ್ಟಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೊನೆಗೂ ನಿಗದಿಯಂತೆ ಮದುವೆ ಕಾರ್ಯಕ್ರಮ ನೆರವೇರಲು ವರನೇ ವಧುವಿನ ಅಂದರೆ ಜಿಲ್ಲಾಧಿಕಾರಿಯ ಸಿಲ್ಚಾರ್‌ನಲ್ಲಿರುವ ಬಂಗಲೆಗೆ ತೆರಳಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ಝೂಮ್ ವಿಡಿಯೋ ಕಾಲ್ ಮೂಲಕ ಇಬ್ಬರ ಕುಟುಂಬ ಸೇರಿದಂತೆ ಸುಮಾರು 800 ಮಂದಿ ಸಾಕ್ಷಿಯಾಗಿದ್ದಾರೆ.
ಯಾರೇ ಒಬ್ಬರ ಜೀವನದಲ್ಲಿ ಮದುವೆ ಅನ್ನುವುದು ಮುಖ್ಯ ಅಂಗ ಅನ್ನುವುದು ತಿಳಿದಿದೆ, ಆದರೆ ನನಗೆ ರಜೆ ಪಡೆದುಕೊಳ್ಳುವ ಹಾಗಿರಲಿಲ್ಲ. ಯಾಕೆಂದರೆ ನನ್ನ ಜಿಲ್ಲೆಯಲ್ಲಿ (ಕರ್ತವ್ಯ ನಿರತ) ದಿನವೊಂದಕ್ಕೆ ಸರಾಸರಿ 100 ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ಪತ್ತೆಯಾಗುತ್ತಿದೆ. ನಾನು ಜನರ ಜೀವ ಉಳಿಸಲು ಹೋರಾಡುತ್ತಿದ್ದೇನೆ. ಇಂತಹ ವಿಷಮ ಘಳಿಗೆಯಲ್ಲೂ ನನ್ನ ಜಿಲ್ಲೆಯನ್ನು ಬಿಟ್ಟು ಹೋಗುವುದು ನನಗೆ ಊಹಿಸಲೂ ಅಸಾಧ್ಯ ಎಂದು ಮಹಿಳಾ ಜಿಲ್ಲಾಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಅಲ್ಲದೆ, ತನಗೆ ತನ್ನ ಅಧಿಕೃತ ಸರ್ಕಾರಿ ಬಂಗಲೆಯಲ್ಲಿ ಮದುವೆ ನಡೆದಿರುವುದು ಕುಶಿ ತಂದಿದೆ ಎಂದು ಹೇಳಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಯ ನಿರ್ಣಯಕ್ಕೆ ಅವರ ಕುಟುಂಬಸ್ಥರು, ವರನ ಕುಟುಂಬಸ್ಥರು, ಸ್ವತಃ ವರನೇ ಅಭಿನಂದಿಸಿದ್ದಾರೆ.
ಮದುವೆಗೆ ಆಗಮಿಸಿದ ಪುಣೆ ಮೂಲದ ವರ ಆದಿತ್ಯ ಶಶಿಕಾಂತ್, ಮದುವೆಗೂ ಮುನ್ನ ಸ್ಥಳೀಯ ಕೋವಿಡ್ ಶಿಷ್ಟಾಚಾರದ ಪ್ರಕಾರ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇದ್ದರು.
“ನನ್ನ ತಂದೆ-ತಾಯಿ ಕೋವಿಡ್ ನಿಂದ ಇದೀಗ ಚೇತರಿಸಿಕೊಳ್ಳುತ್ತಿದ್ದು, ಮದುವೆಗೆ ಆಗಮಿಸಲು ಸಾಧ್ಯವಾಗಿಲ್ಲ, ನನ್ನ ಕಡೆಯಿಂದ ನನ್ನ ತಂಗಿಯೊಬ್ಬಳೆ ಮದುವೆಗೆ ಇದ್ದಳು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಝೂಮ್ ಮೂಲಕ ಮದುವೆಗೆ ಸಾಕ್ಷಿಯಾದ ಅಷ್ಟೂ ಮಂದಿಯೂ ಮದುವೆಗೆ ಖುದ್ದು ಹಾಜರಾಗುವಂತೆ ವಸ್ತ್ರ ಧರಿಸಿ ವಧುವರರಿಗೆ ಆಶಿರ್ವದಿಸಿದ್ದಾರೆ.

ತನ್ನ ಮದುವೆಗೆ ತನ್ನ ಸಹೋದ್ಯೋಗಿಗಳನ್ನು, ಗೆಳೆಯರನ್ನು ಆಹ್ವಾನಿಸಿದ್ದ ಜಿಲ್ಲಾಧಿಕಾರಿ ಮದುವೆಯ ವಿಷಯ ಬಚ್ಚಿಟ್ಟು, ಗಣೇಶ ಪೂಜೆಗೆಂದು ಆಹ್ವಾನಿಸಿದ್ದರು. ಪೂಜೆಗೆಂದು ಬಂದವರಿಗೆ ಸ್ಥಳದಲ್ಲಿ ಮದುವೆ ವಿಚಾರ ತಿಳಿದು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಸಂಧರ್ಭದಲ್ಲಿ 20 ರಷ್ಟು ಮಂದಿ ಮದುವೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
ಅದಲ್ಲದೆ, ಮದುವೆಯ ಮುನ್ನಾ ದಿನ ಹಾಗೂ ನಂತರದ ದಿನವೂ ಎಂದಿನಂತೆ ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಸ್ಸಾಮ್ ರಾಜ್ಯದಲ್ಲಿ ಬುಧವಾರ ಸರ್ಕಾರಿ ರಜೆಯಿದ್ದು, ಅಂದೇ ಮದುವೆಯಾಗಿದ್ದಾರೆ. ಹಾಗೂ ಮದುವೆಯ ದಿನವೂ ಔದ್ಯೋಗಿಕ ಕರೆಗಳನ್ನು ಸ್ವೀಕರಿಸಿದ್ದಾರೆ, ಕರ್ತವ್ಯಕ್ಕೆ ಸಂಬಂಧಿಸಿದಂತೆ ಆದೇಶಗಳನ್ನು ನೀಡಿದ್ದಾರೆ.
ಚಾಚರ್ ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದಲೂ, ಜಿಲ್ಲೆಯ ಆರೋಗ್ಯ, ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸಲು ಅವಿರತ ಶ್ರಮ ಪಡುತ್ತಿದ್ದಾರೆಂದು ಔಟ್‌ಲುಕ್ ವರದಿ ಮಾಡಿದೆ.