ಬಿಹಾರ ವಿಧಾನಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ಬಿಜೆಪಿ, ಜೆಡಿಯು ಹಾಗೂ ಎಲ್ಜೆಪಿ ಹೊಂದಾಣಿಕೆ ಮಾಡಿಕೊಂಡು ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ ಈಗಾಗಲೇ ಸೀಟು ಹಂಚಿಕೆ ಬಗ್ಗೆ ಚೆರ್ಚೆಗಳು ನಡೆಯುತ್ತಿದ್ದು, ಯಾರು ಯಾರನ್ನು ಎದುರಿಸುತ್ತಿದ್ದಾರೆ..? ಎನ್ನುವುದೇ ಸವಾಲಿನ ವಿಷಯವಾಗಿದೆ. ಆರ್ಜೆಡಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ, ಜೆಡಿಎಯು ನೇತೃತ್ವದ ಎನ್ಡಿಎ ಮೈತ್ರಿಕೂಟ ತೊಡೆ ತಟ್ಟಬೇಕಿದೆ. ಆದರೆ ಬಿಹಾರದಲ್ಲಿ ಸದ್ಯಕ್ಕೆ ಆ ಲಕ್ಷಣ ಕಾಣಿಸುತ್ತಿಲ್ಲ. ಸ್ವತಃ ತಮ್ಮ ಮೈತ್ರಿಕೂಟದ ಪಕ್ಷದ ನಾಯಕರ ವಿರುದ್ಧ ಸಮರ ಸಾರುತ್ತಿರುವುದು ಭಾರತೀಯ ಜನತಾ ಪಾರ್ಟಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಯಾರನ್ನು ಸಮಾಧಾನ ಮಾಡಬೇಕು..! ಯಾರನ್ನು ಮೈತ್ರಿಕೂಟದಿಂದ ಹೊರಗಿಟ್ಟರೆ ಬಿಜೆಪಿಗೆ ಲಾಭವಾಗುತ್ತದೆ ಎನ್ನುವುದರ ಬಗ್ಗೆ ಯೋಜನೆ ರೂಪಿಸಲು ಬಿಜೆಪಿ ತಿಣುಕಾಡುತ್ತಿದೆ.
ಬಿಹಾರದಲ್ಲಿ ಪ್ರಜ್ವಲಿಸುತ್ತಿದ್ದಾನೆ ಚಿರಾಗ್ ಪಾಸ್ವಾನ್..!
ಲೋಕ ಜನಶಕ್ತಿ ಪಾರ್ಟಿ (LJP)ಯ ಅಧ್ಯಕ್ಷರಾಗಿರುವ 37 ವರ್ಷದ ಚಿರಾಗ್ ಪಾಸ್ವಾನ್ ಕಳೆದೊಂದು ವರ್ಷದಿಂದ ಬಿಹಾರದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಬಿಹಾರ ಸಿಎಂ ಆಗಿರುವ ಜೆಡಿಯು ಪಕ್ಷದ ನಿತೀಶ್ ಕುಮಾರ್ ಹಾಗೂ ನಿತೀಶ್ ಅವರ ಮಿತ್ರ ಪಕ್ಷ ಹಿಂದೂಸ್ತಾನ್ ಅವಾಮ್ ಮೋರ್ಚಾ ಅಧ್ಯಕ್ಷ ಜೀತಾನ್ ರಾಮ್ ಮಾಂಝಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಲೋಕಜನಶಕ್ತಿ ಪಾರ್ಟಿಯ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದರೂ ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ರಾಜಕೀಯ ಅಸ್ತಿತ್ವ ರೂಪಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ನಿತೀಶ್ ಕುಮಾರ್ ಅವರ ಬೆಂಬಲ ಹಿಂದೂಸ್ತಾನ್ ಅವಾಮ್ ಮೋರ್ಚಾ ಪರವಾಗಿದ್ದರೆ, ಬಿಜೆಪಿ ಬೆಂಬಲ ಲೋಕಜನಶಕ್ತಿ ಪಾರ್ಟಿ ಪರವಾಗಿದೆ. ಆದರೂ ರಾಜ್ಯದಲ್ಲಿ ಮೈತ್ರಿ ಸರ್ಕಾರವೇ ಅಧಿಕಾರ ನಡೆಸುತ್ತಿದೆ ಎನ್ನುವುದು ಅಚ್ಚರಿಯ ವಿಚಾರ. ಬಿಹಾರದಲ್ಲಿ ಸೀಟು ಹಂಚಿಕೆ ಬಗ್ಗೆ ಚಿರಾಗ್ ಪಾಸ್ವಾನ್ ಹೆಜ್ಜೆ ಭಾರೀ ಕುತೂಹಲ ಮೂಡಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಿತೀಶ್ ತಲೆಯಲ್ಲಿ ಇರುವ ಲೆಕ್ಕಾಚಾರ ಏನು..?
ಬಿಹಾರ ಸಿಎಂ ನಿತೀಶ್ ಕುಮಾರ್ ಬಿಜೆಪಿ ಸಹಾಯದಿಂದ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿ ಪಕ್ಷದ ಸಹಾಯ ಅಧಿಕಾರಕ್ಕೆ ಬರಲು ಬೇಕಿಲ್ಲ ಎನ್ನುವುದು ನಿತೀಶ್ ಅವರ ಚಿಂತನೆ. ಅದೇ ಕಾರಣಕ್ಕಾಗಿ 2010ರಲ್ಲಿ ಬಿಜೆಪಿ ಜೆಡಿಯು ಸೀಟು ಹೊಂದಾಣಿಕೆಯ ಸೂತ್ರವನ್ನೇ ಈ ಬಾರಿಯೂ ಜಾರಿಗೆ ತರಲು ಮುಂದಾಗಿದ್ದಾರೆ. ತಾನು ಸ್ಪರ್ಧೆ ಮಾಡುವ ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಜೆಡಿಯು ಬಿದ್ದಿದೆ. ಸ್ಥಾನ ಹಂಚಿಕೆ ಸೂತ್ರ 2010ರಂತೆಯೇ ನಡೆದರೆ ಜೆಡಿಯುಗೆ 141 ಸ್ಥಾನಗಳು ಮತ್ತು ಬಿಜೆಪಿಗೆ 102 ಸ್ಥಾನಗಳು ದಕ್ಕಲಿವೆ. ಇದರಲ್ಲಿ 122 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿಧಾನ ಸಭೆಯ ಅರ್ಧದಷ್ಟು ಸ್ಥಾನಗಳಿಗೆ ಹತ್ತಿರವಾಗಬೇಕೆಂದು ನಿತೀಶ್ ಬಯಸಿದ್ದಾರೆ. ಆದರೆ ಬಿಜೆಪಿ ಈ ಸೂತ್ರಕ್ಕೆ ಒಪ್ಪಿಗೆ ಸೂಚಿಸುವುದೇ ಎನ್ನುವುದನ್ನು ಕಾದು ನೋಡಬೇಕು.
ಎಲ್ಜೆಪಿ ಬಳಸಿಕೊಂಡು ನಿತೀಶ್ ಮಣಿಸುತ್ತಾ ಬಿಜೆಪಿ..?
ಬಿಜೆಪಿ ಹಾಗೂ ಜೆಡಿಯು ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡಿದರೆ ಲೋಕಜನಶಕ್ತಿ ಪಕ್ಷ ಪ್ರತ್ಯೇಕವಾಗಿ ಸ್ಪರ್ಧೆ ಮಾಡಲಿದ್ದು, 143 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ತಯಾರಿ ನಡೆಸುವ ಸೂಚನೆಗಳು ಲಭಿಸುತ್ತಿವೆ. ಅಂದರೆ 141 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿರುವ ನಿತೀಶ್ ಕುಮಾರ್ ಅವರನ್ನು ಸೋಲಿಸುವುದೇ ಲೋಕಜನಶಕ್ತಿ ಪಕ್ಷದ ಏಕಮಾತ್ರ ಉದ್ದೇಶವಾಗಿದೆ ಎನ್ನುವ ರೀತಿಯಲ್ಲಿ ಎಲ್ಜೆಪಿ ನಾಯಕರ ನಡವಳಿಕೆಗಳು ಕಾಣುತ್ತಿವೆ.
ಕೇಂದ್ರದಲ್ಲಿ ತನ್ನ ಮಿತ್ರಪಕ್ಷವಾಗಿರುವ ಲೋಕ ಜನಶಕ್ತಿ ಪಕ್ಷವನ್ನು ಬಳಸಿಕೊಂಡು 2013ರಲ್ಲಿ ಎನ್ಡಿಎ ಮೈತ್ರಿಕೂಟದಿಂದ ಹೊರಗೆ ಹೋಗಿದ್ದ ನಿತೀಶ್ಕುಮಾರ್ಗೆ ಬುದ್ಧಿ ಕಲಿಸಬೇಕು ಎನ್ನುವ ಇರಾದೆ ಭಾರತೀಯ ಜನತಾ ಪಾರ್ಟಿಯದ್ದು ಆಗಿದೆ. ಇಲ್ಲದಿದ್ದರೆ ತನ್ನನೇ ಮೈತ್ರಿಕೂಟದ ಒಳಗೆ ಇರುವ ಲೋಕ ಜನಶಕ್ತಿ ಪಕ್ಷವನ್ನು ನಿಯಂತ್ರಣ ಮಾಡಬಹುದಿತ್ತು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕರೋನಾ ನಿಯಂತ್ರಣ ಹಾಗೂ ವಲಸೆ ಕಾರ್ಮಿಕರ ವಿಚಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ತೆಗೆದುಕೊಂಡ ನಿಲುವುಗಳನ್ನು ಚಿರಾಗ್ ಪಾಸ್ವಾನ್ ಟೀಕಿಸಿದರೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿರುವುದು ಇದೇ ಕಾರಣಕ್ಕೆ ಎನ್ನಲಾಗ್ತಿದೆ.
ಬಿಜೆಪಿ ಲೆಕ್ಕಾಚಾರಗಳು ತುಂಬಾ ಸ್ಪಷ್ಟವಾಗಿದೆಯೇ..?
ಭಾರತೀಯ ಜನತಾ ಪಾರ್ಟಿ ಈಗಾಗಲೇ ಎನ್ಡಿಎ ಮೈತ್ರಿಕೂಟದ ಒಳಗಿನ ಪಕ್ಷಗಳಿಂದಲೇ ಪೆಟ್ಟು ತಿಂದಿದ್ದು, ಈ ಭಾರೀ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡು ರಾಜಕೀಯ ರಣತಂತ್ರ ರೂಪಿಸಲು ಮುಂದಾಗಿದೆ. 2010ರಲ್ಲಿ ಸ್ಪರ್ಧೆ ಮಾಡಿದ ಸ್ಥಾನಗಳಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಇಚ್ಛಿಸಿದೆ. ಮಹಾರಾಷ್ಟ್ರದಲ್ಲಿ ಹೊಂದಾಣಿಕೆ ಮಾಡಿಕೊಂಡು ಗೆಲುವು ಕಂಡ ಬಳಿಕ ಬಿಜೆಪಿ ನಾಯಕರಿಗೆ ಟೋಪಿ ಹಾಕಿ ವಿರೋಧ ಪಕ್ಷಗಳ ಜೊತೆಗೆ ಉದ್ಧವ್ ಠಾಕ್ರೆ ಅಧಿಕಾರ ಹಿಡಿದಂತೆ ನಿತೀಶ್ ಕುಮಾರ್ ಹೋಗಬಾರದು ಎನ್ನುವ ಕಾರಣದಿಂದಲೇ ನಿತೀಶ್ ನೇತೃತ್ವದ ಜನತಾ ದಳ (ಯುನೈಟೆಡ್) ಪಕ್ಷವನ್ನು ದುರ್ಬಲ ಮಾಡಿ, ರಾಮ್ವಿಲಾಸ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷವನ್ನು 2ನೇ ಸ್ಥಾನದಲ್ಲಿ ಉಳಿಸಿಕೊಳ್ಳುವ ಲೆಕ್ಕಾಚಾರ ಮಾಡಲಾಗಿದೆ ಎನ್ನುವುದು ತಿಳಿಯುತ್ತಿದೆ.
ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ, ಯಾರೂ ಶತ್ರುಗಳೂ ಅಲ್ಲ ಎನ್ನುವ ಸೂತ್ರ ಬಿಜೆಪಿ ಪಕ್ಷದ್ದಾಗಿದೆ. ಅದೇ ಕಾರಣಕ್ಕೆ ಮಿತ್ರನ ಸೊಂಟ ಮುರಿಯಲು ಮತ್ತೊಬ್ಬ ಮಿತ್ರನನ್ನೇ ಅವಲಂಭಿಸಿದೆ. ಆದರೆ ನಿತೀಶ್ಕುಮಾರ್ತಾವು ಉರುಳಿಸುವ ದಾಳ ಹೇಗಿರಲಿದೆ ಎನ್ನುವುದರ ಮೇಲೆ ಬಿಹಾರದ ರಾಜಕೀಯ ಲೆಕ್ಕಾಚಾರಗಳು ಅಂತಿಮವಾಗಲಿವೆ. ಇದೇ ತಿಂಗಳಾಂತ್ಯಕ್ಕೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ಮೈತ್ರಿ ಪಕ್ಷಗಳ ಒಳಗಿನ ಸೀಟು ಹಂಚಿಕೆ ವಿಚಾರ ಕುತೂಹಲ ಮೂಡಿಸಿದೆ.