ದೇಶದ ಸುದ್ದಿ ವಾಹಿನಿಗಳು ಬೆಳ್ಳಿ ತೆರೆಯ ತಾರಾಮಣಿಯರ ಸುತ್ತ ಗಿರಕಿ ಹೊಡೆಯುತ್ತಿರುವಾಗ, ಅಮಲು ಮತ್ತು ಅಧಿಕಾರದ ಹಗ್ಗಜಗ್ಗಾಟದ ದಾಳಗಳಾದವರಿಗೆ ಇನ್ನಿಲ್ಲದ ಪ್ರಚಾರ ಕೊಡುತ್ತಿರುವ ಹೊತ್ತಿಗೆ ದೇಶದ ರಾಜಧಾನಿಯಲ್ಲಿ ನಡೆದುಹೋದ ಸಾಮಾನ್ಯ ಮಹಿಳೆಯ, ಅದರಲ್ಲೂ 86 ವರ್ಷದ ವಯೋವೃದ್ಧೆಯ ಅತ್ಯಾಚಾರ ಪ್ರಕರಣ ಸದ್ದಿಲ್ಲದೆ ಬದಿಗೆ ಮರೆಮಾಚಿಹೋಗಿದೆ.
ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿವಾಹಿನಿಗಳು ಮತ್ತು ಬಹುತೇಕ ಮುದ್ರಣ ಮಾಧ್ಯಮಗಳಲ್ಲಿ ಸುದ್ದಿಯೇ ಆಗದ, ಆದರೆ ದೇಶದಲ್ಲಿ ಮಹಿಳೆಯರ ಸ್ಥಿತಿಗತಿ ಎಂತಹ ದುರ್ಗತಿಗೆ ತಲುಪಿದೆ? ‘ಬೇಟಿ ಬಚಾವೋ, ಬೇಟಿ ಪಡಾವೋ’ ಘೋಷಣೆ ಮೊಳಗಿಸಿದವರ ಸಿಂಹಾಸನದ ಕಾಲ ಬುಡದಲ್ಲೇ ಎಂಥ ಭೀಕರ ಕ್ರೌರ್ಯ ನಡೆದುಹೋಗಿದೆ ಎಂಬುದಕ್ಕೆ ದೆಹಲಿಯಲ್ಲಿ ಕಳೆದ ಸೋಮವಾರ ನಡೆದ ಈ ಘಟನೆ ನಿದರ್ಶನ.
ಸೋಮವಾರ ಸಂಜೆ ರಾಜಧಾನಿಯ ಹೊರವಲಯದ ಪ್ರದೇಶದಲ್ಲಿ ಹಾಲಿನವನಿಗಾಗಿ ಕಾದಿದ್ದ 86 ವರ್ಷದ ವಯೋವೃದ್ಧೆಗೆ, ಆಕೆಯ ಮೊಮ್ಮಗನ ವಯಸ್ಸಿನ (ಮೂವತ್ತರ ಆಸುಪಾಸಿನ ಹರೆಯದ) ವ್ಯಕ್ತಿ ನಿತ್ಯ ಹಾಲು ಹಾಕುವಾತ ಬರುವುದಿಲ್ಲ. ಹಾಗಾಗಿ ಬೇರೊಂದು ಕಡೆ ಹಾಲು ಕೊಡಿಸುತ್ತೇನೆ ಎಂದು ಕರೆದೊಯ್ದು, ಸಮೀಪದ ಜಮೀನಿಗೆ ಕರೆದೊಯ್ದು, ಆಕೆಯ ಅತ್ಯಾಚಾರ ನಡೆಸಿದ್ದಾನೆ!
![](https://pratidhvani.in/wp-content/uploads/2021/02/Support_us_Banner_New_3-339.png)
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಆಕೆ ಆತನ ಮಾತು ನಂಬಿ, ಹಾಲು ತರಲು ಆತನೊಂದಿಗೆ ಹೋದಾಗ, ಯಾರೂ ಇಲ್ಲದ ಜಮೀನೊಂದರ ಬಳಿ ಕರೆದೊಯ್ದ ವ್ಯಕ್ತಿ, ಆಕೆಯ ಮೇಲೆ ಎರಗಿದ್ದಾನೆ. ಆಕೆ ಕೂಗಿಕೊಂಡು, ಗೋಳಿಟ್ಟಿದ್ದಾಳೆ. ನಾನು ನಿಮ್ಮ ಅಜ್ಜಿಯ ಸಮ. ಬಿಟ್ಟುಬಿಡು ಎಂದು ಗೋಗರೆದಿದ್ದಾಳೆ. ಆದರೆ, ಆಕೆಯ ಯಾವ ಮನವಿಗೂ ಕಿವಿಗೊಡದ ಆತ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಅಷ್ಟರಲ್ಲಿ ಸಮೀಪದ ದಾರಿಯಲ್ಲಿ ಸಾಗುತ್ತಿದ್ದವರು ವಯೋವೃದ್ಧೆಯ ಕೂಗು ಕೇಳಿ ಬಂದು, ಆಕೆಯನ್ನು ರಕ್ಷಿಸಿದ್ದಾರೆ. ಜೊತೆಗೆ ಅತ್ಯಾಚಾರಿ ವಿಕೃತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ” ಎಂದು ಘಟನೆಯ ಕುರಿತ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಳ್ ವಿವರಿಸಿದ್ದಾರೆ.
ಬಹುತೇಕ ಭಾರತೀಯ ಮಾಧ್ಯಮಗಳಲ್ಲಿ ಕಾಣೆಯಾದ ಈ ಭೀಭತ್ಸ ಘಟನೆಯ ಕುರಿತ ವಿಸ್ತ್ರೃತ ವರದಿ ‘ಬಿಬಿಸಿ’, ‘ದ ಡಾನ್’ ಮತ್ತಿತರ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಘಟನೆಯ ಮಾರನೇ ದಿನ ಸಂತ್ರಸ್ತೆಯನ್ನು ಭೇಟಿ ಮಾಡಿದ ಮಲಿವಾಳ್, “ಆಕೆಯ ಸ್ಥಿತಿ ಆಘಾತಕಾರಿಯಾಗಿದೆ. ಆಕೆಯ ಕೈಗಳನ್ನು ತಿರುಚಿ ಹಾಕಿದ್ದಾನೆ. ಆಕೆಯ ಮುಖ ಮತ್ತು ಮೈಮೇಲೆ ಪರಚಿದ ಗಾಯಗಳಿಂದ ರಕ್ತ ಒಸರುತ್ತಿದೆ. ಘಟನೆಯಿಂದಾಗಿ ದೇಹವಿಡೀ ರಕ್ತ ಸಿಕ್ತವಾಗಿತ್ತು ಎಂದು ಆಕೆ ನಡುಗುವ ದನಿಯಲ್ಲಿ ಹೇಳಿದಳು. ಆಕೆ ಘಟನೆಯಿಂದಾಗಿ ತೀವ್ರ ಆಘಾತಕ್ಕೊಳಗಾಗಿದ್ದು, ಭೀತಿ ಮತ್ತು ಆಘಾತ ಆಕೆಯ ಕಣ್ಣುಗಳಲ್ಲಿ ಕಾಣುತ್ತಿತ್ತು” ಎಂದು ಹೇಳಿದ್ದಾರೆ. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂಥ ಈ ಕೃತ್ಯ ಎಸಗಿದ ಅಮಾನುಷ ವಿಕೃತನಿಗೆ ಮರಣದಂಡನೆಯಾಗಬೇಕು. ಘಟನೆಯ ಕುರಿತ ತನಿಖೆ ಮತ್ತು ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸಿ ಆತನನ್ನು ನೇಣುಗಂಬಕ್ಕೇರಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆಯುವುದಾಗಿ ಮಲಿವಾಳ್ ಹೇಳಿರುವುದಾಗಿ ವರದಿಯಾಗಿದೆ.
![](https://pratidhvani.in/wp-content/uploads/2021/02/TPFI-301.jpg)
ಅಂತಾರಾಷ್ಟ್ರಿಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದ ಮತ್ತು ಅತ್ಯಾಚಾರದ ವಿಷಯದಲ್ಲಿ ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಡಿದೆಬ್ಬಿಸಿದ್ದ 2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ಹೊತ್ತಲ್ಲಿ ಅಂದಿನ ಪ್ರತಿಪಕ್ಷ ಬಿಜೆಪಿ ಮತ್ತು ಬಹುತೇಕ ಮಾಧ್ಯಮಗಳು ತೋರಿದ ಆಸಕ್ತಿ, ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಉಳಿಯಲಿಲ್ಲ ಏಕೆ ಎಂಬ ಪ್ರಶ್ನೆಯನ್ನು ಈ ವೃದ್ಧೆ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ನಿರ್ಭಯಾ ಪ್ರಕರಣದ ಹೊತ್ತಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿದ್ದ ಇಂದಿನ ಪ್ರಧಾನಿ ಮೋದಿಯವರು ಆಗ, “ದೆಹಲಿ ಅತ್ಯಾಚಾರದ ರಾಜಧಾನಿಯಾಗಿದೆ” ಎಂದಿದ್ದರು. ಆ ಬಳಿಕ 2019ರ ಚುನಾವಣೆಗೆ ಮುನ್ನ ಅತ್ಯಾಚಾರ ಪ್ರಕರಣಗಳ ಕುರಿತ ಹೊಸ ಕಾನೂನು ರಚಿಸಿ, ಹೀನಾಯ ಪ್ರಕರಣಗಳಲ್ಲಿ ಮರಣದಂಡನೆ ವಿಧಿಸುವ ಅವಕಾಶವನ್ನೂ ಕಾನೂನಿನಡಿ ಒದಗಿಸಲಾಗಿತ್ತು. ಜೊತೆಗೆ ಅತ್ಯಾಚಾರ ಪ್ರಕರಣಗಳ ವಿಚಾರಣೆಗಾಗಿ ಶೀಘ್ರ ವಿಲೇವಾರಿ ನ್ಯಾಯಾಲಯಗಳನ್ನು ಸ್ಥಾಪಿಸುವ ಘೋಷಣೆಯನ್ನೂ ಮಾಡಲಾಗಿತ್ತು.
ಆದರೆ, ವಾಸ್ತವವಾಗಿ ಅಂತಹ ಕಾನೂನು ಬದಲಾವಣೆಗಳಾಗಲೀ, ಮೋದಿಯವರ ‘ಬೇಟಿ ಬಚಾವೋ ಬೇಟಿ ಪಡಾವೋ’ದಂತಹ ಘೋಷಣೆಗಳಾಗಲೀ ಸಮಾಜದಲ್ಲಿ ಯಾವುದೇ ಬದಲಾವಣೆ ತಂದಿಲ್ಲ ಎಂಬುದಕ್ಕೆ ಸ್ವತಃ ಮೋದಿಯವರ ಪಕ್ಷದ ಸಂಸದರು, ಶಾಸಕರೇ ಗಂಭೀರ ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿದ್ದಾರೆ ಮತ್ತು ಅಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಘನ ಮೌನಕ್ಕೆ ಶರಣಾಗುವ ಮೂಲಕ ಮಹಿಳೆಯರ ಸುರಕ್ಷತೆ ಮತ್ತು ಘನತೆಯ ವಿಷಯದಲ್ಲಿ ತಮ್ಮ ನೈಜ ಬದ್ಧತೆಯನ್ನು ಮೆರೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅದು ಅಪ್ರಾಪ್ತ ವಯಸ್ಸಿನ ಬುಡಕಟ್ಟು ಬಾಲಕಿಯ ಮೇಲೆ ಬಿಜೆಪಿ ನಾಯಕರೇ ಎಸಗಿದ ಹೇಯ ಕಾಶ್ಮೀರದ ಕಥುವಾ ಸಾಮೂಹಿಕ ಅತ್ಯಾಚಾರ ಪ್ರಕರಣವಿರಬಹುದು, ಉತ್ತರಪ್ರದೇಶದ ಬಿಜೆಪಿ ಶಾಸಕರೇ ಅತ್ಯಾಚಾರ ಎಸಗಿ ಅಪ್ರಾಪ್ತ ಸಂತ್ರಸ್ತೆಯ ಮನೆಮಂದಿ, ಮತ್ತು ಸ್ವತಃ ಆಕೆಯನ್ನೂ ಬೇಟೆಯಾಡಿ ಕೊಲೆಗೈದ ಉನ್ನಾವ್ ಪ್ರಕರಣಗಳಿರಬಹುದು, ಬಿಜೆಪಿ ಸಂಸದ ಸ್ವಾಮಿ ಚಿನ್ಮಯಾನಂದ ಪ್ರಕರಣವಿರಬಹುದು, ಮಧ್ಯಪ್ರದೇಶದ ದಲಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಿಜೆಪಿ ನಾಯಕ ಭೋಜಪಾಲ್ ಸಿಂಗ್ ಪ್ರಕರಣವಿರಬಹುದು, ಆ ಎಲ್ಲಾ ಸಂದರ್ಭಗಳಲ್ಲಿಯೂ ಪ್ರಧಾನಿ ಮೋದಿಯವರ ಮೌನ ಯಥಾಸ್ಥಿತಿ ಕಾಯ್ದುಕೊಂಡಿತ್ತು!
ಅಷ್ಟೇ ಅಲ್ಲ, ಆಡಳಿತ ಪಕ್ಷದ ಸಚಿವರು, ಪ್ರಮುಖರು ಕೂಡ ಇಂತಹ ಹೇಯ ಕೃತ್ಯಗಳ ವಿಷಯದಲ್ಲಿಯೂ ಪ್ರತ್ಯಕ್ಷವಾಗಿ, ಇಲ್ಲವೇ ಪರೋಕ್ಷವಾಗಿ ಆರೋಪಿಗಳ ಪರ ನಿಂತಿದ್ದರು. ಮತ್ತೊಂದು ಕಡೆ ದೇಶದ ಮುಖ್ಯವಾಹಿನಿ ಸುದ್ದಿ ವಾಹಿನಿಗಳು ಕೂಡ ಇಂತಹ ವಿಷಯದಲ್ಲಿ ದನಿ ಎತ್ತಿದ್ದು ವಿರಳ. ನಿರ್ಭಯಾ ಪ್ರಕರಣದಲ್ಲಿ ತಿಂಗಳುಗಟ್ಟಲೆ ಅಭಿಯಾನ ನಡೆಸಿದ ಸುದ್ದಿ ವಾಹಿನಿಗಳು, ಬಿಜೆಪಿ ನಾಯಕರ ಮತ್ತು ಬಿಜೆಪಿ ಆಡಳಿತದ ಅವಧಿಯಲ್ಲಿ ಮಹಿಳೆಯರ ಮೇಲೆ ನಡೆದ ಪೈಶಾಚಿಕ ಕೃತ್ಯಗಳನ್ನು ‘ಅದೊಂದು ಮಾಮೂಲಿ ಅಪರಾಧ’ ಎಂಬಂತೆ ಉದಾಸೀನ ತೋರಿದ್ದವು. ಈಗ ದೆಹಲಿ ವೃದ್ಧೆ ವಿಷಯದಲ್ಲಿ ಕೂಡ ಇಂತಹದ್ದೇ ಜಾಣಕುರುಡು ವರಸೆ ಮುಂದುವರಿದಿದೆ. ಇನ್ನು ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ನಗರವಾಸಿ ಹೈಫ್ರೊಫೈಲ್ ಸಾಮಾಜಿಕ ಕಾರ್ಯಕರ್ತರ ಮಹಿಳಾಪರ ಕಾಳಜಿ ಕೂಡ ಮಾಧ್ಯಮಗಳ ಹೈಪ್ ನ್ಯೂಸ್ ಅವಲಂಬಿಸಿದೆ ವಿನಃ ನೈಜ ಕಾಳಜಿಯಲ್ಲ ಎಂಬುದು ಕೂಡ ಈ ಪ್ರಕರಣದಲ್ಲಿ ಸಾಬೀತಾಗಿದೆ. ನಿರ್ಭಯಾ ಪ್ರಕರಣದಲ್ಲಿ ತಿಂಗಳುಗಟ್ಟಲೆ ದೇಶದ ಮೂಲೆಮೂಲೆಯಲ್ಲಿ ಮೊಂಬತ್ತಿ ಹಚ್ಚಿ ಪ್ರತಿಭಟಿಸಿದ್ದವರ ಕಾಳಜಿ, ದೆಹಲಿ ವೃದ್ಧೆಯ ವಿಷಯದಲ್ಲಿ ನಿದ್ರೆಗೆ ಜಾರಿಬಿಟ್ಟಿದೆ!
ದೇಶದ ಅಪರಾಧ ಕೃತ್ಯಗಳ ಕುರಿತ ಮಾಹಿತಿ ಕಲೆಹಾಕುವ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ(ಎನ್ ಸಿಆರ್ ಬಿ) ಅಂಕಿಅಂಶಗಳ ಪ್ರಕಾರ, 2018ರಲ್ಲಿ(ಲಭ್ಯವಿರುವ ಇತ್ತೀಚಿನ ಮಾಹಿತಿ) 33,977 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ; ದೇಶದಲ್ಲಿ ಸುಮಾರು 15 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತಿದೆ. ಆದರೆ, ಶಿಕ್ಷೆಯಾಗುವುದು ಮಾತ್ರ ಕೇವಲ 4ರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ! ಅದೂ ಅಲ್ಲದೆ, ಹೀಗೆ ಅಧಿಕೃತವಾಗಿ ದಾಖಲಾಗುವುದು ವಾಸ್ತವಿಕವಾಗಿ ನಡೆದ ಪ್ರಕರಣಗಳ ಪೈಕಿ ಐದರಲ್ಲಿ ಒಂದು ಮಾತ್ರ! ಅಂದರೆ; ಎನ್ ಸಿ ಆರ್ ಬಿ ದಾಖಲಿಸಿರುವ ಒಟ್ಟುಪ್ರಕರಣಗಳ ಸಂಖ್ಯೆಯ ನಾಲ್ಕು ಪಟ್ಟು ಅಧಿಕ ಅತ್ಯಾಚಾರ ಘಟನೆಗಳು ದೇಶದಲ್ಲಿ ನಡೆಯುತ್ತಿವೆ. ಒಂದು ತಿಂಗಳ ಹಸುಗೂಸಿನಿಂದ ಹಿಡಿದು 90 ವರ್ಷದ ವಯೋವೃದ್ಧೆಯ ವರೆಗೆ, ಹೆಣ್ಣಿನ ಮೇಲೆ ಪೈಶಾಚಿಕ ದಾಳಿ ನಡೆಸಲಾಗುತ್ತಿದೆ. ಒಂದು ಕಡೆ ‘ಯತ್ರ ನಾರ್ಯಸ್ತು ಪೂಜ್ಯಂತೆ’ ಎನ್ನುತ್ತಲೇ, ‘ಬೇಟಿ ಬಚಾವೋ’ ಎನ್ನುತ್ತಲೇ ಹರಿದುಮುಕ್ಕುವ ರಕ್ಕಸತನಕ್ಕೆ ಪಾರವೇ ಇಲ್ಲದಂತಾಗಿದೆ.
ಹಾಗಾಗಿಯೇ, ಈಗ ದೇಶದ ಹೆಣ್ಣುಮಕ್ಕಳ ರಕ್ಷಣೆಗೆ ಜರೂರಾಗಿ ಬೇಕಿರುವುದು ‘ಬೇಟಿ ಬಚಾವೋ, ಬೇಟಿ ಪಡಾವೋ’ ಅಲ್ಲ; ಬದಲಾಗಿ ‘ಬೇಟಾ ಪಡಾವೋ, ಬೇಟಿ ಬಚಾವೋ’. ಗಂಡು ಮಕ್ಕಳಿಗೆ ತನ್ನ ಸಹವರ್ತಿ ಹೆಣ್ಣುಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಸುವುದು ಎಲ್ಲಕ್ಕಿಂತ ಮುಖ್ಯ. ಆ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ನಾಗರಿಕ ಸಮಾಜ ಗಂಭೀರ ಪ್ರಯತ್ನಗಳನ್ನು ನಡೆಸಬೇಕಿದೆ. ಇಲ್ಲದೇ ಹೋದರೆ; ದೆಹಲಿಯ ವೃದ್ಧೆ ಪ್ರಕರಣದಂತಹ ಇಡೀ ಮನುಕುಲವೇ ನಾಚಿ ತಲೆತಗ್ಗಿಸುವಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ನಿರ್ಲಜ್ಜ ಅಧಿಕಾರಸ್ಥರು ಬಡಿವಾರದ ಬಾಯುಪಚಾರದ ಘೋಷಣೆಗಳನ್ನು ಮೊಳಗಿಸುತ್ತಲೇ ಇರುತ್ತಾರೆ, ನಾಚಿಕೆಗೇಡಿನ ಮಾಧ್ಯಮಗಳು ಸೆಲೆಕ್ವೀವ್ ಸಾಮಾಜಿಕ ಕಾಳಜಿ ಮೆರೆಯುತ್ತಲೇ ಇರುತ್ತವೆ!