ಕಳೆದ ಹದಿನೈದು ದಿನಗಳಿಂದ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಹಿಂದೆ ಬಿದಿದ್ದ ರಾಷ್ಟ್ರೀಯ ಮಾಧ್ಯಮಗಳು ಈಗ ನಟಿ ಕಂಗಾನಾ ರಾಣಾವತ್ ಜಪ ನಡೆಸುತ್ತಿವೆ. ಮುಂಬೈ ಮತ್ತು ಬಾಲಿವುಡ್ ಕೇಂದ್ರಿತವಾಗಿ ನಡೆಯುತ್ತಿರುವ ಈ ಎರಡು ಸುದ್ದಿಗಳು ರಾಷ್ಟ್ರೀಯ ಸುದ್ದಿಗಳೆಂಬಂತೆ ಪ್ರತಿಬಿಂಬಿಸಲಾಗುತ್ತಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಯಾಚೆಗೆ ಈ ಎರಡು ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾದ ಇಲ್ಲಿ ರಾಜಕೀಯ ಮತ್ತು ಚುನಾವಣಾ ಹಿತಾಸಕ್ತಿ ವಾಸನೆ ಜೋರಾಗಿಯೇ ಬಡಿಯುತ್ತಿದೆ.
ಮೊದಲು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಬಗ್ಗೆ ನೋಡೊಣ. ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತಿದೆ. ಒಂದು ಹೈ ಪ್ರೋಫೈಲ್ ಕೇಸ್ ಆಗಿರುವ ಹಿನ್ನಲೆ ಆರಂಭದ ಒಂದೆರಡು ದಿನ ಹೈಪ್ ಸರ್ವೆ ಸಾಮಾನ್ಯ. ಆದರೆ ಸುಶಾಂತ್ ಸಿಂಗ್ ಪ್ರಕರಣ ಪ್ರತಿನಿತ್ಯವೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪೂರ್ಣ ಸಮಯವನ್ನು ಕಬಳಿಸುತ್ತಿದೆ.
![](https://pratidhvani.in/wp-content/uploads/2021/02/Support_us_Banner_New_3-338.png)
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಕರಣದಿಂದ ದೇಶದ ಜನರಿಗೆ ಏನು ಲಾಭ? ಎನ್ನುವುದನ್ನು ಮಾಧ್ಯಮಗಳೇ ಹೇಳಬೇಕಿದೆ. ಡ್ರಗ್ಸ್ ಲೋಕ ಮತ್ತು ರಿಯಾ ಚಕ್ರವರ್ತಿ ಅನ್ನೊ ಪಾತ್ರ ಈ ಪ್ರಕರಣದಲ್ಲಿ ಸ್ವಾಧ ಹೆಚ್ಚಿಸಿದೆ. ಇದೇ ಕಾರಣಕ್ಕೆ ರಾಷ್ಟ್ರೀಯ ಮಾಧ್ಯಮಗಳು ಇಡೀ ಪ್ರಕರಣದ ಹಿಂದೆ ಬಿದ್ದಿದೆ. ರಿಯಾ ಚಕ್ರವರ್ತಿ ಬಂಧನದ ಬಗ್ಗೆ ಸುದ್ದಿ ಮಾಡಿದ ರಾಷ್ಟ್ರೀಯ ಮಾಧ್ಯಮಗಳು ಅದೇ ರೀತಿ ಸಿಬಿಐ ಅಧಿಕಾರಿಗಳು ಮಾಡಿರುವ ಹಲವು ಎಡವಟ್ಟುಗಳನ್ನು ಪ್ರಸಾರ ಮಾಡಲಿಲ್ಲ.
ಇನ್ನು ಸುಶಾಂತ್ ಸಿಂಗ್ ಪ್ರಕರಣ ಸಂಬಂಧಿಸಿದಂತೆ ಕಂಗಾನಾ ರಣಾವತ್ ಮಾತನಾಡಿದ್ದಾರೆ. ಮುಂಬೈ ಪೊಲೀಸರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನು ಅನಾವಶ್ಯಕವಾಗಿ ಶಿವಸೇನೆ ಮೈಮೇಲೆ ಎಳೆದುಕೊಂಡಿದೆ. ಶಿವಸೇನೆ ಪಕ್ಷದ ಸಂಸದ ಮತ್ತು ವಕ್ತಾರ ಸಂಜಯ್ ರಾವತ್ ಅವರು ಕಂಗಾನಾಗೆ ಬೆದರಿಕೆಯನ್ನೂ ಹಾಕಿದ್ದಾರೆ. ಅದನ್ನ ಸವಾಲಾಗಿ ಸ್ವೀಕರಿಸಿರುವ ಕಂಗಾನಾ ಭಾರಿ ಭದ್ರತೆಯಲ್ಲಿ ಮುಂಬೈಗೆ ಆಗಮಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಹರಿಹಾಯ್ದಿದ್ದಾರೆ.
![](https://pratidhvani.in/wp-content/uploads/2021/02/kangana_ranaut_1599458399-20210216-132526.jpeg)
ಈ ಎರಡು ವಿಚಾರಗಳು ಬಿಹಾರ ಚುನಾವಣೆಗೆ ತಳಕು ಹಾಕಿಕೊಂಡಿದೆ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ. ಸುಶಾಂತ್ ಸಿಂಗ್ ಮತ್ತು ಕಂಗಾನಾ ರಣಾವತ್ ಇಬ್ಬರು ಕೂಡ ರಜಪೂತ್ ಸಮುದಾಯದಿಂದ ಬಂದವರು. ಬಿಹಾರ ಚುನಾವಣೆಯಲ್ಲಿ ಈ ಸಮುದಾಯ ಒಂದು ಹಂತದಲ್ಲಿ ಬಿಜೆಪಿಗೆ ಹಲವು ಸೀಟು ಪಡೆಯಲು ನಿರ್ಣಾಯಕ ಎನ್ನಲಾಗಿದೆ. ಈ ಸಮುದಾಯದ ಪರ ನಿಂತಿದ್ದೇವೆ ಎಂದು ಬಿಂಬಿಸಲೆಂದೇ ಕೇಂದ್ರ ಮತ್ತು ಬಿಹಾರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ‘ಇಷ್ಟೆಲ್ಲಾ’ ಮಾಡುತ್ತಿದೆ ಎಂಬುದೀಗ ಗುಟ್ಟಾಗಿ ಉಳಿದಿಲ್ಲ.
ಬಿಜೆಪಿ ಬಿಹಾರದಲ್ಲಿ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡರೂ ಅದು ನಂಬಿಕೊಂಡಿರುವುದು ಮೇಲ್ಜಾತಿಯ ಮತಗಳನ್ನು ಮಾತ್ರ. ಇತರೆ ಹಿಂದೂಳಿದ ಮತ್ತು ದಲಿತ ಮತಗಳು ಜೆಡಿಯು, ಆರ್‌ಜೆಡಿ ಹಾಗೂ ಬಿಎಸ್ಪಿಗೆ ಹಂಚಿಕೆಯಾಗಲಿವೆ. ಹೀಗಾಗಿ ಬ್ರಾಹ್ಮಣರು ಭೂಮಿಹಾರ್ / ಬಾಭನ್, ರಜಪೂತರು ಮತ್ತು ಕಾಯಸ್ಥ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈ ಎಲ್ಲಾ ಮತಗಳು ಕ್ರೂಢಿಕರಣಗೊಂಡರೆ ಒಟ್ಟು 15% ಮತಗಳು ಬಿಜೆಪಿ ಬುಟ್ಟಿ ಸೇರಲಿದೆ. ಆದುದರಿಂದ ಈ ಮೇಲ್ಜಾತಿ ಮತಗಳೇ ಇಲ್ಲಿನ ಚುನಾವಣೆಗಳಲ್ಲಿ ನಿರ್ಣಾಯಕವಾಗಿವೆ.
![](https://pratidhvani.in/wp-content/uploads/2021/02/nistish_kumar_PTI_1-1.jpg)
ಸದ್ಯ ಸುಶಾಂತ್ ಸಿಂಗ್ ಪ್ರಕರಣವನ್ನು ಮಾಧ್ಯಮಗಳನ್ನು ಬಳಸಿಕೊಂಡು ರಾಷ್ಟ್ರೀಯ ಸುದ್ದಿಯನ್ನಾಗಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಅದರಲ್ಲೂ ಸುಶಾಂತ್ ಸಿಂಗ್, ರಜಪೂತ್ ಸಮುದಾಯಕ್ಕೆ ಸೇರಿದವರು ಮುಖ್ಯವಾಗಿ ಅವರೊಬ್ಬ ಬಿಹಾರಿಯೂ ಹೌದು. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಹಾರಿಗಳನ್ನು ಭಾವನಾತ್ಮಕವಾಗಿ ಗೆಲ್ಲುವ ತಂತ್ರ ಮಾಡುತ್ತಿದೆ. ಈ ಮೂಲಕ ಮೇಲ್ಜಾತಿಯ ಜೊತೆಗೆ ಯುವ ಬಿಹಾರಿ ಮತಗಳ ಸೆಳೆಯಲು ಬಿಜೆಪಿ ತೆರೆಮೆರೆಯಲ್ಲಿ ಪ್ರಯತ್ನಿಸುತ್ತಿದೆ.
ಇದಕ್ಕೆ ಕಂಗನಾ ರಣಾವತ್ ಪೂರಕವಾಗಿ ವರ್ತಸುತ್ತಿದ್ದಾರೆ. ಸುಶಾಂತ್ ಸಿಂಗ್ ನಿಧನಕ್ಕೂ ಮುನ್ನ ಡ್ರಗ್ಸ್ ಬಗ್ಗೆ ಧ್ವನಿ ಎತ್ತದ ಕಂಗನಾ, ಸುಶಾಂತ್ ಸಿಂಗ್ ಪ್ರಕರಣದಲ್ಲಿ ಭಾವನಾತ್ಮಕವಾಗಿ ಸೆಳೆಯುತ್ತಿದ್ದಾರೆ. ಇಲ್ಲಿ ಕಂಗಾನ ಕೂಡಾ ರಜಪೂತ್ ಸಮುದಾಯದವರು ಎನ್ನುವುದು ಗಮನಾರ್ಹವಾದ ಸಂಗತಿಯಾಗಿದೆ. ಕಳೆದ ಬಾರಿ ಕೇಂದ್ರ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಇದಕ್ಕೆ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಶಿವಸೇನೆ ಸಂಸದ ಬೆದರಿಕೆ ಬಳಿಕ ಕಂಗಾನ ಕೇಳದಿದ್ದರೂ ಗೃಹ ಇಲಾಖೆ ಸ್ವ ಹಿತಾಸಕ್ತಿಯಿಂದ ವೈ ಪ್ಲಸ್ ಶ್ರೇಣಿಯ ಭದ್ರತೆ ನೀಡಿದೆ. ಕೇಳದೆ ಭದ್ರತೆ ನೀಡುವ ಕೇಂದ್ರ ಸರ್ಕಾರದ ಹಿಂದಿನ ಅಜೆಂಡಾ ಚುನಾವಣೆ ಎನ್ನುವುದು ಇಲ್ಲಿ ಸ್ಪಷ್ಟ. ಎಲ್ಲದಕ್ಕಿಂತ ಮುಖ್ಯವಾಗಿ ಕಂಗಾನಾ ರಣಾವತ್ ಮೂಲತಃ ಹಿಮಾಚಲ ಪ್ರದೇಶದವರು. ಮುಂದಿನ ಚುನಾವಣೆಯಲ್ಲಿ ಮನಾಲಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ.
ಬಿಹಾರ ಚುನಾವಣೆ ಸಮೀಪಿಸುತ್ತಿದೆ. ಕೊರೊನಾ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಸದ್ಯ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಶೀಘ್ರ ಅಮೇರಿಕಾವನ್ನು ಸರಿಗಟ್ಟಿ ಒಂದನೇ ಸ್ಥಾನಕ್ಕೆ ಏರಿದರೂ ಅಚ್ಚರಿ ಪಡುವಂತಿಲ್ಲ. ಮೊದಲ ತ್ರೈ ಮಾಸಿಕ ಅವಧಿಯಲ್ಲಿ -23% ಜಿಡಿಪಿ ಕುಸಿತ ಕಂಡಿದೆ. ಗಡಿಯಲ್ಲಿ ಚೀನಾ ಭೂಮಿ ಅತಿಕ್ರಮಣ ಪ್ರಯತ್ನ ಮಾಡುತ್ತಲೆ ಇದೆ. 20 ಸೈನಿಕರ ಸಾವಿನ ಬಳಿಕವೂ ಭಾರತ ದಿಟ್ಟ ಉತ್ತರ ನೀಡಿಲ್ಲ. ಇದಲ್ಲದೇ ನಿರುದ್ಯೋಗದ ತವರು ಎನಿಸಿಕೊಳ್ಳುವ ಬಿಹಾರದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು ಯುವಕರಿಗೆ ಉದ್ಯೋಗ ಇಲ್ಲ, ಇರುವ ಉದ್ಯಮಗಳು ಮುಚ್ಚಿವೆ. ಈ ವಿಚಾರಗಳು ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾದರೆ ಬಿಹಾರದಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದು ಖಂಡಿತಾ. ಹೀಗಾಗಿ ತನ್ನ ಮಾಧ್ಯಮ ಪಡೆಗಳೊಂದಿಗೆ ಇಡೀ ದಿನಾ ಸುಶಾಂತ್ ಸಿಂಗ್ ರಜಪೂತ್ ಮತ್ತು ಕಂಗಾನಾ ರಣಾವತ್ ಅವರ ಭಜನೆ ಮಾಡುವಂತೆ ಬಿಜೆಪಿ ತೆರೆ ಮರೆಯಲ್ಲಿ ನಿಂತು ಮಾಡುತ್ತಿದೆ. ಈ ಮೂಲಕ ‘ಬಿಜೆಪಿ ಸಾವಿನ ಹೆಸರಿನಲ್ಲಿ ರಾಜಕಾರಣ ಮಾಡುತ್ತೆ’ ಎಂಬ ಆರೋಪವನ್ನು ಮತ್ತೊಮ್ಮೆ ಸಾಬೀತುಪಡಿಸಲೊರಟಿದೆ.
ಅಂದಹಾಗೆ ರಾಜಕೀಯವಾಗಿ ಬಿಹಾರಿಗಳನ್ನು ಬಹಳ ಸೂಕ್ಷ್ಮಮತಿಗಳು ಎಂದು ಹೇಳಲಾಗುತ್ತದೆ. ಅಲ್ಲದೆ 15 ವರ್ಷ ನಿರಂತರವಾಗಿ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಸಹಜವಾಗಿ ಆಡಳಿತ ವಿರೋಧಿ ಅಲೆಯಲ್ಲಿ ಮುಳುಗಿದ್ದಾರೆ. ಆದುದರಿಂದ ಸುಶಾಂತ್ ಸಿಂಗ್ ರಜಪೂತ್ ಮತ್ತು ಕಂಗಾನಾ ರಣಾವತ್ ಅವರ ಪ್ರಹಸನ ಬಿಜೆಪಿಗೆ ಪ್ರಸಾದವಾಗಿ ಪರಿಣಮಿಸುವುದೇ ಎನ್ನುವುದನ್ನು ಕಾದುನೋಡಬೇಕಾಗಿದೆ.