ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಕೆ ಆರಂಭವಾಗುವ ಸಾಧ್ಯತೆಗಳೂ ಕಾಣಿಸುತ್ತಿವೆ. ಇಲ್ಲೀವರೆಗೂ ತಮಿಳುನಾಡಿನಲ್ಲಿ ಗೆಲುವಿನ ದಡ ಸೇರಲಾಗದೆ ಕಂಗಾಲಾಗಿರುವ ಕಮಲ ಪಕ್ಷಕ್ಕೆ ಅಣ್ಣಾಮಲೈ, ಆಸರೆಯಾಗಿ ನಿಲ್ಲುವ ಭರವಸೆ ಮೂಡಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿರುವ ಅಣ್ಣಾಮಲೈ, ತಮಿಳು ಜನರಲ್ಲಿ ರಾಷ್ಟ್ರೀಯತೆ ಮೂಡಿಸಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಅಂದರೆ ತಮಿಳು ಪ್ರೀತಿ ಹೊಂದುವ ಮೂಲಕ ಕೇವಲ ಅಣ್ಣಾ ಡಿಎಂಕೆ ಹಾಗೂ ಡಿಎಂಕೆ ಪಕ್ಷಕ್ಕೆ ಮಾತ್ರ ಮನ್ನಣೆ ಕೊಡುತ್ತಿರುವ ತಮಿಳುನಾಡಿನ ಜನರಲ್ಲಿ ದೇಶಪ್ರೇಮ ಬಿತ್ತುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತ ಸ್ವಾತಂತ್ರ್ಯವಾದ ಬಳಿಕ ರಾಮಸ್ವಾಮಿ ಪೆರಿಯಾರ್, ಪಿ.ಎಸ್. ಕುಮಾರಸ್ವಾಮಿ ರಾಜಾ, ಸಿ ರಾಜಗೋಪಾಲಾಚಾರಿ, ಕೆ. ಕಾಮರಾಜ್, ಎಂ. ಭಕ್ತವಸ್ತಲಂ ಕಾಂಗ್ರೆಸ್ ನಿಂದ ಆಯ್ಕೆಯಾಗಿ ಮುಖ್ಯಮಂತ್ರಿಗಳಾಗಿ 20 ವರ್ಷಗಳ ಕಾಲ ತಮಿಳುನಾಡನ್ನು ಆಳಿದರು. ಆ ಬಳಿಕ ಶುರುವಾಗಿದ್ದು ಡಿಎಂಕೆ (Dravida Munnetra Kazhagam) ಯುಗ. 1967ರಲ್ಲಿ ಅಣ್ಣಾದೊರೈ ಮುಖ್ಯಮಂತ್ರಿ ಆಗಿದ್ದರು, ಆ ಬಳಿಕ 1969ರಲ್ಲೂ ಅಣ್ಣಾದೊರೈ ಮತ್ತೆ 2ನೇ ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ 20 ದಿನಗಳಲ್ಲಿ ಸಾವನ್ನಪ್ಪಿದರು. ಆ ನಂತರ ನಂಜುಂಡಾಚಾರಿಯನ್ 5 ದಿನಗಳು ಸಿಎಂ ಆಗಿದ್ದರು. ಅವರಿಬ್ಬರ ಬಳಿಕ ಮುಖ್ಯಮಂತ್ರಿಗಾದಿ ಏರಿದ್ದು ಎಂ ಕರುಣಾನಿಧಿ. ಸತತ 2 ಬಾರಿ 1976ರ ತನಕ ಮುಖ್ಯಮಂತ್ರಿ ಆಗಿದ್ದರು. ಆ ಬಳಿಕ ಶುರುವಾಗಿದ್ದು (All India Anna Dravida Munnetra Kazhagam) ಡಾ. ಎಂ.ಜಿ ರಾಮಚಂದ್ರನ್ ಅವರಿಂದ ಹೊಸ ದಾರಿ ಹಿಡಿದ ತಮಿಳುನಾಡಿನ ಜನರು ಸತತವಾಗಿ 10. ವರ್ಷಗಳ ಕಾಲ (1977 – 1987) ಎಐಡಿಎಂಕೆಗೆ ಅಧಿಕಾರ ಕೊಟ್ಟರು. 1987ರಲ್ಲಿ ಡಾ. ಎಂ.ಜಿ ರಾಮಚಂದ್ರನ್ ನಿಧನರಾದ ಬಳಿಕ ತಮಿಳುನಾಡಿನ ರಾಜಕಾರಣ ದಿಕ್ಕೆಟ್ಟ ಹಡಗಿನಂತೆ ಸಂಚಾರ ಮಾಡಿತ್ತು. 35 ದಿನದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡರು. ಅಂತಿಮವಾಗಿ ಕರುಣಾನಿಧಿ ಮತ್ತೆ ಮುಖ್ಯಮಂತ್ರಿ ಆದರು.
1996ರಲ್ಲಿ ಅಖಾಡಕ್ಕೆ ಇಳಿಕ ಕರುನಾಡ ಮಗಳು ಜೆ. ಜಯಲಲಿತಾ, ಕರುಣಾನಿಧಿ ಎದುರಿಸಿ ನಿಂತು ಮುಖ್ಯಮಂತ್ರಿ ಆಗಿ ಇತಿಹಾಸ ಬರೆದರು. ಡಾ. ಎಂ.ಜಿ ರಾಮಚಂದ್ರನ್ ಅವರ ಆತ್ಮೀಯರಾಗಿದ್ದ ಜಯಲಲಿತಾ, ತಮಿಳುನಾಡಿನ ಜನರ ನಾಡಿಮಿಡಿತ ಅರಿತವರಾಗಿದ್ದರು. 2001ರ ರಲ್ಲಿ ಕರುಣಾನಿಧಿ, ನಂತರ ಒಂದೊಂದು ಅವಧಿಗೆ ಒಬ್ಬರಂತೆ ಅಧಿಕಾರ ಎನ್ನುವುದು ಎರಡೂ ಪಕ್ಷಗಳ ಸ್ವತ್ತಾಗಿತ್ತು. 2016ರಲ್ಲಿ ಜಯಲಲತಾ ಜಯಭೇರಿ ಬಾರಿಸಿ 3ನೇ ಅವಧಿ 5 ಬಾರಿ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಡಿಎಂಕೆಯಿಂದ ಕರುಣಾನಿಧಿ ಕೂಡ 5 ಬಾರಿ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದ್ದರು. ಇದೀಗ ಘಟಾನುಘಟಿ ನಾಯಕರಾದ ಜಯಲಲಿತಾ 2018ರಲ್ಲಿ ನಿಧರಾಗಿದ್ದು, ಕರುಣಾನಿಧಿ 2018ರಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಇದೀಗ ಎಐಡಿಎಂಕೆ ಅಧಿಕಾರ ನಡೆಸುತ್ತಿದ್ದು, ಎಐಡಿಎಂಕೆ ಒಳಗೆ ಎರಡು ಬಣಗಳಾಗಿದ್ದು, ಸಮನ್ವಯತೆ ಕೊರತೆ ಜೊತೆಗೆ ಹೇಳಿಕೊಳ್ಳುವಂತಹ ಜನಮನ ಗೆಲ್ಲಬಲ್ಲ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಇನ್ನೂ ಡಿಎಂಕೆ ಪಕ್ಷದಲ್ಲಿ ಕರುಣಾನಿಧಿ ಪುತ್ರ ಎಂ.ಕೆ ಸ್ಟಾಲಿನ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಮತ್ತೋರ್ವ ಪುತ್ರ ಎಂ.ಕೆ ಅಳಗಿರಿ ಕೂಡ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದ್ದಾರೆ. ಈ ಬಾರಿ ಅಧಿಕಾರ ಎಐಡಿಎಂಕೆಗೋ ಅಥವಾ ಡಿಎಂಕೆಗೋ ಎನ್ನುವ ಕುತೂಹಲ ಮೂಡಿಸಿರುವ ಹೊತ್ತಿನಲ್ಲಿ ಸ್ಟಾರ್ ನಟರಾದ ರಜಿನಿಕಾಂತ್ ಹಾಗೂ ಕಮಲ್ ಹಾಸನ್ ಕೂಡ ತಮ್ಮದೇ ಆದ ಪ್ರತ್ಯೇಕ ಪಕ್ಷಗಳನ್ನು ಸ್ಥಾಪಿಸಿಕೊಂಡು ಚುನಾವಣಾ ಕಣವನ್ನೇ ಎದುರು ನೋಡುತ್ತಿದ್ದಾರೆ. ಇದೀಗ ಬಿಜೆಪಿ ಕೂಡ ಕರ್ನಾಟಕದಲ್ಲಿ ಹೆಸರು ಗಳಿಸಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರೆದುಕೊಂಡು ಅಖಾಡಕ್ಕೆ ಎಂಟ್ರಿ ಕೊಡುತ್ತಿದೆ.
ಬಿಜೆಪಿ ಸೇರ್ಪಡೆಯಾದ ಕಾಡುಗಳ್ಳ ವೀರಪ್ಪನ್ ಪುತ್ರಿ..!
ತಮಿಳುನಾಡಿನ ಜನರು ಸ್ವಾತಂತ್ರ್ಯ ಭಾರತದ ಆರಂಭ ಕಾಲವನ್ನು ಹೊರತುಪಡಿಸಿದ್ರೆ ಮಿಕ್ಕೆಲ್ಲಾ ಅವಧಿಯಲ್ಲೂ ಕೇವಲ ದ್ರಾವಿಡ ಪಕ್ಷಗಳಾದ ಎಂಡಿಕೆ, ಎಐಡಿಎಂಕೆ ಪಕ್ಷವನ್ನು ಮಾತ್ರ ಬೆಂಬಲಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತಮಿಳಿನಾಡಿನಲ್ಲೂ ಸಾಕಷ್ಟು ರಾಜಕೀಯ ಬದಲಾವಣೆಗಳು ಆಗುತ್ತಿದ್ದು, ಕಳೆದ ಶನಿವಾರ ಸಾವಿರಾರು ಕಾರ್ಯಕರ್ತರು ಮುರಳೀಧರ್ ರಾವ್ ಹಾಗೂ ಕೇಂದ್ರ ಸಚಿವ ಪೊನ್ ರಾಧಕೃಷ್ಣ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿ ಸೇರಿದ್ದಾರೆ. ಅದರಲ್ಲೂ ತಮಿಳುನಾಡು ಹಾಗೂ ಕರ್ನಾಟಕದ ಪಾಲಿಗೆ ನಡುಕ ಹುಟ್ಟಿಸಿದ್ದ ಕಾಡುಗಳ್ಳ ವೀರಪ್ಪನ್ ಪುತ್ರಿ ಕೂಡ ಸೇರಿದ್ದಾರೆ. ನಾನು ಜಾತಿ ಧರ್ಮವನ್ನು ನೋಡದೆ ಎಲ್ಲಾ ಬಡವರಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ ವಿದ್ಯಾರಾಣಿ ವೀರಪ್ಪನ್.
ಅಣ್ಣಾಮಲೈಗೆ ಯಾವ ರೀತಿ ಲಾಭ..? ನಷ್ಟ..?
ಅಣ್ಣಾಮಲೈ IIM ನಲ್ಲಿ ಓದಿಕೊಂಡಿರುವ ವ್ಯಕ್ತಿ. ಇಂಡಿಯನ್ ಪೊಲೀಸ್ ಸರ್ವೀಸ್ ನಲ್ಲಿ 9 ವರ್ಷಗಳ ಕಾಲ ಕೆಲಸ ಮಾಡುವ ಮೂಲಕ ಸಾಮಾಜಿಕ ಬದುಕು ಹೇಗಿರುತ್ತದೆ..? ಹೇಗೆ ಅವರಿಗಾಗಿ ಕೆಲಸ ಮಾಡಬೇಕು..? ಜನರನ್ನು ಹೇಗೆ ಮನವೊಲಿಕೆ ಮಾಡಬೇಕು ಎನ್ನುವುದನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಅದು ಚುನಾವಣೆಯಲ್ಲಿ ಸಾಕಷ್ಟು ಸಹಾಯಕ್ಕೆ ಬರಲಿದೆ ಎನ್ನಲಾಗಿದೆ. ಆದರೆ ಕರ್ನಾಟಕದಲ್ಲಿ ಚಿರಪರಿಚಿತನಾಗಿರುವ ಓರ್ವ ವ್ಯಕ್ತಿಯನ್ನು ತಮಿಳುನಾಡಿನ ಜನ ಹೇಗೆ ಸ್ವೀಕಾರ ಮಾಡುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಜೊತೆಗೆ ನಾನು ಕನ್ನಡಿಗ ಎನ್ನುವುದಕ್ಕೆ ಹೆಮ್ಮೆ ಪಡುತ್ತೇನೆ. ಕೊನೆಯ ಉಸಿರು ಇರುವ ತನಕ ನಾನು ಕನ್ನಡಿಗ ಎಂದೇ ಹೇಳಿಕೊಳ್ಳುತ್ತೇನೆ ಎಂದಿರುವ ಒಂದೆರಡು ಮಾತುಗಳು ತಮಿಳುನಾಡಿನ ಜನರ ಮನಸನ್ನೇ ಅದಲು ಬದಲು ಮಾಡಲು ವಿರೋಧಿಗಳ ಪಾಲಿಗೆ ಅಸ್ತ್ರವಿದ್ದಂತೆ. ಆದರೂ ಅಣ್ಣಾಮಲೈ ಅದೃಷ್ಟ ಪರೀಕ್ಷೆ ಮಾಡಲು ಕನಿಷ್ಟ 9 ತಿಂಗಳು ಕಾಯಲೇಬೇಕಿದೆ.