ಹಿಂದಿ ಬಾರದೇ ಇರುವವರು ಸಭೆಯಿಂದ ಹೊರ ಹೋಗಿ ಎಂಬ ಆಯುಷ್ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಕಿಡಿಕಾರಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯೆಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆಯ ಪ್ರಯತ್ನಗಳು ಹೆಚ್ಚಾಗುತ್ತಿದ್ದು, ಈ ಘಟನೆಯೂ ಕೂಡಾ ಅದೇ ರೀತಿಯ ಪ್ರಯತ್ನವೆಂದು ಬಿಂಬಿಸಲಾಗುತ್ತಿದೆ. ರಾಜೇಶ್ ಅವರ ಹೇಳಿಕೆಯು ಈಗಾಗಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದು, ಪ್ರಸ್ತುತ ಕುಮಾರಸ್ವಾಮಿಯವರು ಕೂಡಾ ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮುಖಾಂತರ ಬಹಿರಂಗಪಡಿಸಿದ್ದಾರೆ.
ಸಂವಿಧಾನ ಬದ್ಧ ‘ಒಕ್ಕೂಟ ವ್ಯವಸ್ಥೆ’ ಎಂಬುದು ಈ ದೇಶದ ಒಗ್ಗಟ್ಟಿನ ಮಂತ್ರ. ಇಲ್ಲಿನ ಪ್ರತಿ ಭಾಷೆಗಳೂ ಒಕ್ಕೂಟ ವ್ಯವಸ್ಥೆಯ ಭಾಗ. ಹೀಗಿರುವಾಗ, ಹಿಂದಿ ಮಾತನಾಡಲು ಬಾರದ ಕಾರಣಕ್ಕೆ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಿ ಎಂಬುದು ಒಕ್ಕೂಟ ವ್ಯಸ್ಥೆಯ ಉಲ್ಲಂಘನೆಯಲ್ಲವೇ? ಸಂವಿಧಾನ ವಿರೋಧಿ ನಡೆಯಲ್ಲವೇ?
2/3— H D Kumaraswamy (@hd_kumaraswamy) August 23, 2020
“ಸಂವಿಧಾನ ಬದ್ಧ ‘ಒಕ್ಕೂಟ ವ್ಯವಸ್ಥೆ’ ಎಂಬುದು ಈ ದೇಶದ ಒಗ್ಗಟ್ಟಿನ ಮಂತ್ರ. ಇಲ್ಲಿನ ಪ್ರತಿ ಭಾಷೆಗಳೂ ಒಕ್ಕೂಟ ವ್ಯವಸ್ಥೆಯ ಭಾಗ. ಹೀಗಿರುವಾಗ, ಹಿಂದಿ ಮಾತನಾಡಲು ಬಾರದ ಕಾರಣಕ್ಕೆ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಿ ಎಂಬುದು ಒಕ್ಕೂಟ ವ್ಯಸ್ಥೆಯ ಉಲ್ಲಂಘನೆಯಲ್ಲವೇ? ಸಂವಿಧಾನ ವಿರೋಧಿ ನಡೆಯಲ್ಲವೇ?,” ಎಂದು ಅವರು ಪ್ರಶ್ನಿಸಿದ್ದಾರೆ.
ಹಿಂದಿ ಹೇರಬೇಕೆಂಬ ನಾಚಿಕೆ ಇಲ್ಲದ ಉತ್ಸಾಹದಿಂದ ಈ ರೀತಿ ಮಾಡಿದ್ದಾರೋ? ಅಥವಾ ಇಂಗ್ಲೀಷ್ ಬರುವುದಿಲ್ಲ ಎಂಬ ವಿನಂತಿಯೋ? ಎಂದು ಹೆಚ್‌ಡಿಕೆ ಹೇಳಿದ್ದಾರೆ.
ಇನ್ನು ಹಿಂದಿ ಶ್ರೇಷ್ಠತೆಯ ಗೀಳಿನಲ್ಲಿರುವ ಆಯುಷ್ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ ಅವರ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು ಎಂಬ ಆಗ್ರಹವನ್ನೂ ಮಾಡಿದ್ದಾರೆ.
ಒಟ್ಟಿನಲ್ಲಿ ರಾಜೇಶ ಕೊಟೆಚಾ ಅವರ ಹೇಳಿಕೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ಭಾಗವೆಂದೇ ಪರಿಗಣಿಸಲಾಗುತ್ತಿದ್ದು, ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿವೆ. ಈ ವಿಚಾರವಾಗಿ ಆಯುಷ್ ಇಲಾಖೆ ಆದಷ್ಟು ಶೀಘ್ರ ಸ್ಪಷ್ಟನೆ ನೀಡಬೇಕಾದ ಅನಿವಾರ್ಯತೆ ಇದೆ.


