ಈಶಾನ್ಯ ದೆಹಲಿಯಲ್ಲಿ ಕ್ಯಾರವಾನ್ ಪತ್ರಕರ್ತರ ಮೇಲೆ ಹಿಂದುತ್ವ ದಾಳಿಕೋರರು ದೈಹಿಕ, ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ಜೀವಪರ ಚಿಂತಕರು ಖಂಡಿಸಿದ್ದಾರೆ. ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಹೆಚ್ಚುತ್ತಿರುವ ಗುಂಪು ಹಲ್ಲೆ, ಗುಂಪು ಹತ್ಯೆಗಳ (Mob Lynching) ಕುರಿತು ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ರಾಜಧಾನಿ ದೆಹಲಿಯಲ್ಲಿ ಕ್ಯಾರವಾನ್ ಪತ್ರಕರ್ತರ ಮೇಲೆ ಗುಂಪು ಹಲ್ಲೆ ನಡೆದಿದೆ.
ಘಟನೆ ಖಂಡಿಸಿ ಪತ್ರಿಕಾ ಗೋಷ್ಟಿ ನಿನ್ನೆ ನಡೆದಿದ್ದು, ಖ್ಯಾತ ವಕೀಲ ಪ್ರಶಾಂತ್ ಭೂಷಣ್, ಖ್ಯಾತ ಲೇಖಕಿ ಅರುಂಧತಿ ರಾಯ್ ಮೊದಲಾದ ಪ್ರಗತಿಪರ ಚಿಂತಕರು ಘಟನೆಯನ್ನು ಖಂಡಿಸಿದ್ದಾರೆ.
ಪತ್ರಕರ್ತರ ಮೇಲೆ ಹಲ್ಲೆ: ಏನಿದು ಪ್ರಕರಣ?
ಆಗಸ್ಟ್ 5 ರಂದು ರಾಮಮಂದಿರ ಭೂಮಿ ಪೂಜೆ ನಡೆದ ಬಳಿಕ ಈಶಾನ್ಯ ದೆಹಲಿಯ ಸುಭಾಷ್ ಮೊಹಲ್ಲಾದ ಮಸೀದಿಯೊಂದರ ಮೇಲೆ ಏಕಾಏಕಿ ಕೇಸರಿ ಧ್ವಜ ಕಾಣಿಸಿಕೊಂಡಿರುವುದು ಕೋಮು ಉದ್ವಿಗ್ನತೆಗೆ ಕಾರಣವಾಗಿತ್ತು. ಆಗಸ್ಟ್ 11ರಂದು ಈ ಕುರಿತು ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಅದಾಗ್ಯೂ ಪೋಲಿಸರು ತಕ್ಷಣವೇ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಸಹೋದ್ಯೋಗಿ ಮಹಿಳಾ ಪತ್ರಕರ್ತೆಯೊಂದಿಗೆ ವರದಿಗಾರಿಕೆಗೆ ತೆರಳಿದ್ದ ಪ್ರಭ್‌ಜಿತ್ ಸಿಂಗ್ ಹಾಗೂ ಶಾಹಿದ್ ತಂತ್ರೆ ಎಂಬ ವರದಿಗಾರರ ಮೇಲೆ ಗುಂಪು ಹಲ್ಲೆ ಮಾಡಿದೆ. ಹಲ್ಲೆಕೋರರು ಅವ್ಯಾಚ ಭಾಷೆಯಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಗುಂಪಿನಲ್ಲಿ ಕೇಸರಿ ಕುರ್ತಾ ಹಾಕಿರುವ ವ್ಯಕ್ತಿಯೊಬ್ಬ ತನ್ನನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದಾನೆ. ಹಾಗೂ ಆ ಗುಂಪಿಗೆ ಆತನೇ ನೇತೃತ್ವ ವಹಿಸಿಕೊಂಡಿದ್ದ ಎಂದು ಕ್ಯಾರವಾನ್ ಹೇಳಿದೆ.
ಶಾಹಿದ್ ಹೆಸರು ಕೇಳಿ ತಿಳಿದುಕೊಂಡ ಗುಂಪು, ಕೋಮು ನಿಂದೆ ಮಾಡಿ, ಕೊಂದು ಬಿಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಪ್ರಭ್‌ಜಿತ್ ಸಿಂಗ್ ತನ್ನ ದೂರಿನಲ್ಲಿ, ಕೇಸರಿಧಾರಿ ಮನುಷ್ಯನ ನೇತೃತ್ವದ ಗುಂಪು ಶಾಹಿದ್‌ರ ಮುಸ್ಲಿಂ ಗುರುತಿಗಾಗಿ ಅವರನ್ನು ಕೊಂದೇ ಬಿಡುತ್ತಿದ್ದರು ಎಂದು ಹೇಳಿದ್ದಾರೆ.
ಈತನ್ಮಧ್ಯೆ, ಪತ್ರಕರ್ತರ ಗುಂಪಿನಲ್ಲಿದ್ದ ಮಹಿಳಾ ಪತ್ರಕರ್ತೆಯ ಮೇಳೆ ಗುಂಪು, ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದೆ. ಕ್ಯಾರವಾನ್ ಹೇಳಿರುವ ಪ್ರಕಾರ ಆಕೆ ಭಯೋತ್ಪಾದಕ ಗುಂಪಿನಿಂದ ತಪ್ಪಿಸಿಕೊಂಡು, ಪಕ್ಕದ ಗಲ್ಲಿಯಲ್ಲಿ ಓಡಲೆತ್ನಿಸಿದ್ದಾರೆ. ಅದಾಗ್ಯೂ ಗೂಂಡಾಗಳು ಆಕೆಯನ್ನು ಸುತ್ತುವರೆದು ಅಕ್ರಮವಾಗಿ ಆಕೆಯ ಫೋಟೋ, ವೀಡಿಯೊ ಚಿತ್ರೀಕರಿಸಿದ್ದಾರೆ. ಅಶ್ಲೀಲ ಮಾತುಗಳು, ಸಂಜ್ಞೆಗಳ ಮೂಲಕ ದೌರ್ಜನ್ಯ ನಡೆಸಿದ್ದಾರೆ. ಗುಂಪಿನಲ್ಲಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಆಕೆಯೆದುರು ತನ್ನ ಜನನಾಂಗವನ್ನು ಪ್ರದರ್ಶಿಸಿದ್ದಾನೆ. ಮತ್ತು ಕಾಮುಕತೆಯ ಸಂಜ್ಞೆಗಳನ್ನು ವ್ಯಕ್ತಪಡಿಸಿದ್ದಾನೆ.
ಅಲ್ಲದೆ, ದಾಳಿಕೋರರು ಮಹಿಳಾ ಪತ್ರಕರ್ತೆಯ ತಲೆ, ತೋಳು, ಸೊಂಟ ಹಾಗೂ ಎದೆಯ ಭಾಗಗಳಿಗೆ ಹೊಡೆದಿದ್ದಾರೆ ಎಂದು ಕ್ಯಾರವಾನ್ ತನ್ನ ಹೇಳಿಕೆ ನೀಡಿದೆ. ಕ್ಯಾರವಾನ್ ಹೇಳಿಕೆ ಪ್ರಕಾರ, ಕೇಸರಿಧಾರಿ ನೇತೃತ್ವದ ಹಲ್ಲೆಕೋರ ಗುಂಪಿನಲ್ಲಿ ಮಹಿಳೆಯರೂ ಇದ್ದರೆಂಬ ಅಂಶ ಆಘಾತಕಾರಿಯಾದುದು.
ಘಟನಾ ಸಂಧರ್ಭದಲ್ಲಿ ಸ್ಥಳದಲ್ಲೇ ಪೋಲಿಸರು ಇದ್ದರೂ, ಪೋಲಿಸರು ಅಸಹಾಯಕರಾಗಿ ಮೂಕ ಪ್ರೇಕ್ಷಕರಂತೆ ನಿಂತು ನೋಡಿದ್ದಾರೆ. ಗುಂಪನ್ನು ಚದುರಿಸುವಲ್ಲಿ ಪೋಲಿಸರು ನಿಷ್ಕ್ರಿಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪತ್ರಕರ್ತರ ಮೇಲಿನ ಹಲ್ಲೆಗೆ ಖಂಡನೆ:
ಈಶಾನ್ಯ ದೆಹಲಿಯಲ್ಲಿ ನಡೆದಿರುವ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪತ್ರಕರ್ತರ ಮೇಲೆ ನಡೆದಿರುವ ಹಲ್ಲೆಯನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡಿಸಿದೆ. ಕಠಿಣ ಕ್ರಮ ಕೈಗೊಳ್ಳುವಂತೆ, ಪತ್ರಕರ್ತರಿಗೆ ನಿರ್ಭೀತರಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದೆ.
ಪಂಜಾಬ್, ಚಂಢೀಗಢದ ಪತ್ರಕರ್ತ ಸಂಘವು ಈ ಕುರಿತು ಪ್ರತಿಕ್ರಿಯಿಸಿದ್ದು, ದೂರು ದಾಖಲಿಸಲು ಹಿಂಜರಿದ ಪೋಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕ್ಯಾರವಾನ್ ಪತ್ರಕರ್ತರೊಡನೆ ನಿಲ್ಲುವುದಾಗಿ ಬೆಂಬಲ ಸೂಚಿಸಿದೆ.
ಇನ್ನು ಘಟನೆ ಸಂಬಂಧಿಸಿದಂತೆ ಖಂಡನಾ ಪತ್ರಿಕಾ ಗೋಷ್ಟಿ ನಿನ್ನೆ ನಡೆದಿದ್ದು, ಖ್ಯಾತ ವಕೀಲ ಪ್ರಶಾಂತ್ ಭೂಷಣ್, ಖ್ಯಾತ ಲೇಖಕಿ ಅರುಂಧತಿ ರಾಯ್, ಹಿರಿಯ ಪತ್ರಕರ್ತ ಆನಂದ್ ಸಹಯ್ ಹಾಗೂ ಕ್ಯಾರವಾನ್ ಪತ್ರಿಕೆಯ ರಾಜಕೀಯ ಸಂಪಾದಕ ಶಾಹಿದ್ ಅಬ್ಬಾಸ್ ಮುಂತಾದವರು ಪಾಲ್ಗೊಂಡಿದ್ದರು.
ಪ್ರಶಾಂತ್ ಭೂಷಣ್ ಮಾತನಾಡಿ, ಹಲ್ಲೆಕೋರ ಗುಂಪು ಸರ್ಕಾರದ ವಿರುದ್ಧ ಮಾತನಾಡುವ ಜನರ ಮೇಲೆ ದಾಳಿ ಮಾಡುವಾಗಲೆಲ್ಲಾ ಪೊಲೀಸರು ಪ್ರೇಕ್ಷಕರಂತೆ ಅಸಹಾಯಕರಾಗಿ ನಿಲ್ಲುತ್ತಾರೆ ಎಂದು ಹೇಳಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಮಾಧ್ಯಮ, ನ್ಯಾಯಾಲಯ ಮುಂತಾದವುಗಳನ್ನು ಹೊಂದಿರಬೇಕು ಆದರೆ ನಾವು ಈಗ ನೋಡುತ್ತಿರುವುದು ಇಂತಹದೆಲ್ಲದರ ನಾಶ. ನಾವೀಗ ಪ್ರಜಾಪ್ರಭುತ್ವಕ್ಕ ವಿರೋಧಾಭಾಸದಂತಿರುವ ಏಕ ಪಕ್ಷ ಪ್ರಜಾಪ್ರಭುತ್ವದಲ್ಲಿದ್ದೇವೆ” ಎಂದು ಲೇಖಕಿ ಅರುಂಧತಿ ರಾಯ್ ಹೇಳಿದ್ದಾರೆ.
ಮುಖ್ಯವಾಹಿನಿಯ ಬಹುಪಾಲು ಮಾಧ್ಯಮಗಳು ಹಿಂದುತ್ವ ಸಿದ್ಧಾಂತದ ಪ್ರೊಪಗಾಂಡ ಹರಡುತ್ತಿದೆ. ಪ್ರೊಪಗಾಂಡ ಹರಡದ, ಸರ್ಕಾರವನ್ನು ಪ್ರಶ್ನಿಸುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಕೆಲವೇ ಕೆಲವು ಮಾಧ್ಯಮಗಳಿವೆ. ಅವುಗಳ ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಫ್ಯಾಸಿಸಂ ಯಾವುದೇ ಭಿನ್ನಾಭಿಪ್ರಾಯಗಳನ್ನು ಸಹಿಸುವುದಿಲ್ಲ. ಕಟ್ಟಕಡೆಯ ವ್ಯಕ್ತಿಯ ಭಿನ್ನಾಭಿಪ್ರಾಯವನ್ನೂ ಕೂಡಾ ಅದು ಸಹಿಸುವುದಿಲ್ಲ, ವಿರುದ್ಧ ದನಿಗಳನ್ನು ಮಟ್ಟ ಹಾಕಲು ಪ್ರಯತ್ನಿಸುತ್ತದೆ. ಸಣ್ಣ ಪಟ್ಟಣಗಳ ಪತ್ರಕರ್ತರಿಗೆ ಏನಾಗುತ್ತಿದೆ ಎಂಬುದರ ಕುರಿತು ಯೋಚಿಸಿ ನೋಡಿದಾಗ ಇದು ನಮಗೆ ಅರ್ಥವಾಗುತ್ತದೆ ಎಂದು ಅರುಂಧತಿ ರಾಯ್ ಹೇಳಿದ್ದಾರೆ.
ಈ ದ್ವೇಷ ತುಂಬಿದ ಹಿಂದುತ್ವ ಸಿದ್ಧಾಂತವು ಪ್ರತಿ ಸಂಸ್ಥೆಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವುದರಿಂದ ನಾವು ಸ್ವಯಂ-ನಾಶಗೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ, ಯಾಕೆಂದರೆ ಅದು ಅದರ ವಿರುದ್ಧ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯ ಮೇಲೆಯೂ ಆಕ್ರಮಣ ಮಾಡುತ್ತದೆ ಎಂದು ಅರುಂಧತಿ ಆತಂಕ ವ್ಯಕ್ತ ಪಡಿಸಿದ್ದಾರೆ.