ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರನ್ನು ತಪ್ಪಿತಸ್ಥ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠ, ಭೂಷಣ್ ವಿರುದ್ಧದ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ, ಶುಕ್ರವಾರ ಈ ತೀರ್ಮಾನ ಪ್ರಕಟಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಪ್ರಕಟಿಸಲು ಆಗಸ್ಟ್ 20ರಂದು ದಿನ ನಿಗದಿ ಮಾಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಐಷಾರಾಮಿ ಬೈಕಿನಲ್ಲಿ ಕೂತು ಪೋಸು ನೀಡಿದ ಫೋಟೋವೊಂದು ವೈರಲ್ ಆಗಿದ್ದ ಹಿನ್ನೆಲೆಯಲ್ಲಿ, ಆ ಚಿತ್ರದೊಂದಿಗೆ ಕಳೆದ ಆರು ತಿಂಗಳ ಅವಧಿಯಲ್ಲಿ ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕುರಿತ ಕಾಮೆಂಟ್ ಸೇರಿಸಿ ಪ್ರಶಾಂತ್ ಭೂಷಣ್ ಅವರು ಟ್ವೀಟ್ ಮಾಡಿದ್ದರು. ಅವರ ಆ ಟ್ವೀಟ್ ಹಿನ್ನೆಲೆಯಲ್ಲಿ ನ್ಯಾಯಾಂಗ ಮತ್ತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಹಿರಿಯ ನಾಗರಿಕ ಹಕ್ಕು ಹೋರಾಟಗಾರರಾದ ಭೂಷಣ್ ಅವರ ಈ ಟೀಕೆಯನ್ನು ನ್ಯಾಯಾಂಗದ ನಿಂದನೆ ಎಂದು ಪರಿಗಣಿಸಿದ್ದ ಸುಪ್ರೀಂಕೋರ್ಟ್, ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ದೂರು ದಾಖಲಿಸಿಕೊಂಡು ಅವರಿಗೆ ನೋಟೀಸ್ ನೀಡಿತ್ತು. ಪ್ರಶಾಂತ್ ಭೂಷಣ್ ಅವರ ಆ ಟ್ವೀಟ್, ನ್ಯಾಯಾಂಗದ ಪರಮಾಧಿಕಾರ ಮತ್ತು ಮುಖ್ಯನ್ಯಾಯಮೂರ್ತಿಗಳ ಘನತೆಗೆ ಕುಂದು ತಂದಿದೆ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಚಾಲನೆ ನೀಡಿತ್ತು.
ಈವರೆಗಿನ ವಾದವಿವಾದಗಳ ಮೇಲೆ ಕೋರ್ಟ್, ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂಬ ತೀರ್ಮಾನಕ್ಕೆ ಬಂದಿದೆ. ಇನ್ನು ಆ ಅಪರಾಧಕ್ಕೆ ಸಂಬಂಧಿಸಿದಂತೆ ಶಿಕ್ಷೆಯ ಪ್ರಮಾಣ ನಿರ್ಧರಿಸಲು ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಬೇಕಿದೆ. ಶಿಕ್ಷೆಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಎಂದಿನಿಂದ ಆರಂಭಿಸಬಹುದು ಎಂದು ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಬಿ ಆರ್ ಗವಾಯಿ, ಭೂಷಣ್ ಪರ ವಕೀಲರಾದ ದುಷ್ಯಂತ ಧವೆ ಅವರನ್ನು ಕೇಳಿದರು. ಆಗ ಧವೆ ಅವರು, ಅದಕ್ಕೆ ತಯಾರಾಗಲು ತಮಗೆ ಸಮಯಾವಕಾಶ ಬೇಕಾಗುತ್ತದೆ ಎಂದು ಮನವಿ ಮಾಡಿದರು. ಆ ಬಳಿಕ ಕೆಲ ಸಮಯದ ಚರ್ಚೆಯ ಬಳಿಕ ಅಂತಿಮವಾಗಿ ಆ.20ರಂದು ಶಿಕ್ಷೆ ಕುರಿತ ವಿಚಾರಣೆ ನಡೆಸಲು ತೀರ್ಮಾನಿಸಲಾಯಿತು.
ನ್ಯಾಯಾಂಗ ನಿಂದನೆ ಕಾಯ್ದೆ-1971ರ ಪ್ರಕಾರ, ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದಲ್ಲಿ ವ್ಯಕ್ತಿಯೊಬ್ಬನಿಗೆ ಗರಿಷ್ಟ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಗರಿಷ್ಟ 2000 ರೂ. ದಂಡ ಅಥವಾ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲು ಅವಕಾಶವಿದೆ.
ಆದರೆ, ಪ್ರಕರಣದ ಆರಂಭದಿಂದಲೂ ಪ್ರಶಾಂತ್ ಭೂಷಣ್ ಅವರು, ತಮ್ಮ ಎರಡು ಟ್ವೀಟ್ ಗಳು ಟೀಕೆಯಾಗುತ್ತವೆಯೇ ವಿನಃ ನ್ಯಾಯಾಂಗ ನಿಂದನೆಯಾಗುವುದಿಲ್ಲ. ಯಾವುದೇ ಸಂದರ್ಭದಲ್ಲಿ ನಾಗರಿಕರು ವ್ಯವಸ್ಥೆಯ ದೋಷಗಳ ಬಗ್ಗೆ ಪ್ರಶ್ನಿಸುವುದು, ಟೀಕಿಸುವುದು ವ್ಯವಸ್ಥೆಯನ್ನು ಸರಿಪಡಿಸುವ, ವ್ಯವಸ್ಥೆಯ ದೋಷಗಳನ್ನು ಅದಕ್ಕೆ ಮನವರಿಕೆ ಮಾಡುವ ರಚನಾತ್ಮಕ ಪ್ರಯತ್ನಗಳೇ ವಿನಃ, ಅವು ನ್ಯಾಯಾಂಗ ನಿಂದನೆಯಾಗುವುದಿಲ್ಲ. ಇಂತಹ ಪ್ರಯತ್ನಗಳನ್ನು ನ್ಯಾಯಾಂಗ ನಿಂದನೆಯ ಅಸ್ತ್ರ ಝಳಪಿಸಿ ಬಗ್ಗುಬಡಿದರೆ, ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಪೆಟ್ಟು ಕೊಟ್ಟಂತೆ ಎಂದು ಪ್ರಶಾಂತ್ ಭೂಷಣ್ ಪರ ದುಷ್ಯಂತ್ ಧವೆ ವಾದಿಸಿದ್ದರು.
ಪ್ರಕರಣದ ಹಿನ್ನೆಲೆಯಲ್ಲಿ ಬಹಳ ವರ್ಷಗಳ ಬಳಿಕ ದೇಶಾದ್ಯಂತ ನ್ಯಾಯಾಂಗ ನಿಂದನೆ ಕಾನೂನು ಮತ್ತು ವ್ಯವಸ್ಥೆಯನ್ನು ಟೀಕಿಸುವ, ಪ್ರಶ್ನಿಸುವ ಮತ್ತು ಅದರೊಂದಿಗೆ ಭಿನ್ನಮತ ಹೊಂದುವ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಗರಿಕ ಹಕ್ಕುಗಳ ನಡುವಿನ ಸಂಘರ್ಷದ ಕುರಿತ ದೊಡ್ಡ ಮಟ್ಟದ ಚರ್ಚೆ ಕಾವೇರಿತ್ತು.
ಅದರಲ್ಲೂ ಪ್ರಶಾಂತ್ ಭೂಷಣ್ ಅವರಂಥ ನಾಗರಿಕ ಹಕ್ಕುಗಳ ಪರ ಹೋರಾಟಗಾರರು, ಇತ್ತೀಚಿನ ವರ್ಷಗಳಲ್ಲಿ ರಾಫೇಲ್ ಹಗರಣ, ಸೋರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಧೀಶ ಲೋಯಾ ಅನುಮಾನಾಸ್ಪದ ಸಾವು ಪ್ರಕರಣ, ಲಾಕ್ ಡೌನ್ ನಿಂದ ಬದುಕು ಕಳೆದುಕೊಂಡ ವಲಸೆ ಕಾರ್ಮಿಕರ ಪ್ರಕರಣ, ಎನ್ ಆರ್ ಸಿ ಮತ್ತು ಪೌರತ್ವ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆಡಳಿತರೂಢ ಬಿಜೆಪಿ, ಪ್ರಧಾನಿ ಮೋದಿ ಮತ್ತು ಅವರ ಆಡಳಿತ ವ್ಯವಸ್ಥೆಯ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದರು. ಆ ಹಿನ್ನೆಲೆಯಲ್ಲಿ ಕೂಡ ಈ ನ್ಯಾಯಾಂಗ ನಿಂದನೆ ಪ್ರಕರಣದ ಕುರಿತು ದೊಡ್ಡ ಮಟ್ಟದ ಆತಂಕವೂ ಸಾರ್ವಜನಿಕರಲ್ಲಿ ಮೂಡಿತ್ತು.