ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಜಲ ಮಂಡಳಿ (BWSSB)ಯ ಭ್ರಷ್ಟಾಚಾರದ ಕೆರೆ ತುಂಬುತ್ತಾ ಬರುತ್ತಿರುವಂತೆ ಕಾಣುತ್ತಿದೆ. ಒಂದರ ಮೇಲೊಂದರಂತೆ ಬೆಂಗಳೂರು ಮಹಾನಗರದ ನೀರು ಸರಬರಾಜು ಮಾಡುವ ಹೊಣೆ ಹೊತ್ತಿರುವ ಬೆಂಗಳೂರು ಜಲ ಮಂಡಳಿಯ ಭ್ರಷ್ಟಾಚಾರದ ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಈ ಕುರಿತಾಗಿ ಪ್ರತಿಧ್ವನಿಗೆ ದಾಖಲೆಗಳು ಲಭ್ಯವಾಗಿದ್ದು, ಜಲಮಂಡಳಿ ನಡೆಸಿರುವ ಅಕ್ರಮಗಳ ಕುರಿತು, ಆ ಅಕ್ರಮಗಳ ಕುರಿತಾಗಿ ನೀಡಿರುವ ದೂರುಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗಿದೆ. ಬೆಂಗಳೂರು ಜಲಮಂಡಳಿಯ ಅಕ್ರಮಗಳನ್ನು ಹಲವು ಸರಣಿಗಳಲ್ಲಿ ಪ್ರತಿಧ್ವನಿ ನಿಮ್ಮ ಮುಂದೆ ಬಿಚ್ಚಿಡಲಿದೆ.
ಬೆಳೆಯುತ್ತಿರುವ ಬೆಂಗಳೂರಿಗೆ ನೀರು ಪೂರೈಸಲು ಜಲ ಮಂಡಳಿಯು ಕಾವೇರಿ ಐದನೇ ಘಟ್ಟದ ಯೋಜನೆ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ (III)ರ ಟೆಂಡರ್ ಪ್ರಕ್ರಿಯೆಯಿ ಆರಂಭವಾದ ಅವ್ಯವಹಾರದ ಸರಣಿ ಇನ್ನೂ ಮುಗಿದಿಲ್ಲ. ಈ ಯೋಜನೆಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಕಂಪೆನಿಗಳು ಟೆಂಡರ್ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಹೊರಗುಳಿಯುತ್ತಿದ್ದಾರೆ. ಅರ್ಹವಾಗಿ ಯಾರಿಗೆ ಈ ಟೆಂಡರ್ಗಳು ಲಭ್ಯವಾಗಬೇಕೋ ಅವರಿಗೆ ಕಾರಣಾಂತರಗಳಿಂದ (?) ಟೆಂಡರ್ ಲಭ್ಯವಾಗುತ್ತಲೇ ಇಲ್ಲ.
Also Read: ಕೆಂಗೇರಿ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ 80 ಕೋಟಿ ಅವ್ಯವಹಾರದ ದುರ್ಗಂಧ
ಈ ಕುರಿತಾಗಿ ಜೈಕಾ (Japan International Co-operation Agency – JICA) ಕೂಡಾ ಜಲಮಂಡಳಿಯ ಚೇರ್ಮನ್ ಅವರಿಗೆ ಪತ್ರವನ್ನು ಬರೆದು ಟೆಂಡರ್ ಪ್ರಕ್ರಿಯೆಯ ಮೊದಲ ಹಂತದಲ್ಲಿ ಹಲವು ಕಂಪಟನಿಗಳು ಆಸಕ್ತಿ ತೋರಿದರೂ, ಕೊನೇಯ ಹಂತದಲ್ಲಿ ಅವು ಟೆಂಡರ್ ಪ್ರಕ್ರಿಯೆಯಿಂದ ಹೊರಗುಳಿಯುತ್ತಿವೆ. ಈ ಬಗ್ಗೆ ಸೂಕ್ತ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕು, ಎಂದು ಹೇಳಿತ್ತು.
ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ವಾದಕ್ಕೆ ಕುರುಹಾಗಿ, ಈ ಪತ್ರ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪದೋಷಗಳು ಕಾಣಸಿಗುತ್ತವೆ.
ಕರ್ನಾಟಕ ರಾಷ್ಟ್ರ ಸಮಿತಿ (KRS)ಯು ಈ ಕುರಿತಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ನೀಡಿದ್ದರೂ, ಯಾವುದೇ ರೀತಿಯ ತನಿಖೆಯನ್ನು ಕೈಗೊಳ್ಳದಿರುವುದು ವುವಸ್ಥೆಯ ಅವ್ಯವಸ್ಥೆಗೆ ಹಿಡಿದಿರುವ ಕೈಗನ್ನಡಿಯಾಗಿದೆ. ಪ್ರಕರಣದ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿರುವ KRS ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ದೀಪಕ್ ಸಿ ಎನ್ ಅವರು, ಈ ಅವ್ಯವಹಾರಗಳಲ್ಲಿ ಜಲಮಂಡಳಿಯ ಚೇರ್ಮನ್ ಆಗಿದ್ದಂತಹ ತುಷಾರ್ ಗಿರಿನಾಥ್ ಅವರು ನೇರವಾಗಿ ಭಾಗಿಯಾಗಿರುವ ಕುರಿತು ನಮಗೆ ಸಂಶಯವಿದೆ ಎಂದು ಹೇಳಿದ್ದಾರೆ.
“ಮೂರು ವರ್ಷಗಳಿಂದ ತುಷಾರ್ ಗಿರಿನಾಥ್ ಅವರು ಇದೇ ಹುದ್ದೆಯಲ್ಲಿದ್ದಾರೆ. ಯಡಿಯೂರಪ್ಪನವರ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಅವರ ವರ್ಗಾವಣೆಗೆ ಆದೇಶ ನೀಡಲಾಗಿತ್ತು. ಆದರೆ, ಒಂದೇ ದಿನದೊಳಗಡೆ ಅವರ ವರ್ಗಾವಣೆಯನ್ನು ವಾಪಾಸ್ ಪಡೆಯಲಾಗಿತ್ತು. ಜಲಮಂಡಳಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತಾಗಿ ಮಂಡಳಿಯ ಹಿರಿಯ ಸದಸ್ಯರು ಅವರ ಗಮನಕ್ಕೆ ತಂದರಾದರೂ, ತುಷಾರ್ ಅವರು ಆ ಕುರಿತಾಗಿ ಗಮನ ಹರಿಸಲೇ ಇಲ್ಲ. ಇದು ಅಕ್ರಮಗಳಲ್ಲಿ ತುಷಾರ್ ಅವರ ಕೈವಾಡವನ್ನು ಸೂಚಿಸುತ್ತದೆ,” ಎಂದಿದ್ದಾರೆ.
ಅಂದಹಾಗೆ, ಜಲಮಂಡಳಿಯ ಅಕ್ರಮಗಳ ಕರ್ಮಕಾಂಡ ಇಷ್ಟಕ್ಕೇ ನಿಲ್ಲುವುದಿಲ್ಲ, S1C ಮತ್ತು S1D ಯೋಜನೆಗಳಲ್ಲಿ ಟೆಂಡರ್ ಯಾರಿಗೆ ಲಭ್ಯವಾಗಿರುತ್ತದೋ, ಅವರಿಗೆ ತೆರಿಗೆಯನ್ನು ಜಲಮಂಡಳಿಯ ಪರವಾಗಿ ನೀಡುವ ಯಾವುದೇ ರೀತಿಯ ಅವಕಾಶವಿರುವುದಿಲ್ಲ. ಆದರೆ, ವಿಎ ಟೆಕ್ ವಾಬಾಗ್ (VA Tech Wabagh Ltd) ಎನ್ನುವ ಕಂಪೆನಿಗೆ ಐದು ಕೋಟಿಗೂ ಹೆಚ್ಚು ಹಣವನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತಾಗಿ ಈಗ ನಿವೃತ್ತರಾಗಿರುವ ಹಾಗೂ ಈ ಹಿಂದೆ ಸೇವೆಯಲ್ಲಿದ್ದ ಮುಖ್ಯ ಲೆಕ್ಕಾಧಿಕಾರಿಯವರು ಆಕ್ಷೇಪವನ್ನು ಕೂಡಾ ವ್ಯಕ್ತಪಡಿಸಿದ್ದರು. ಈ ಆಕ್ಷೇಪಣೆಯ ಆಧಾರದ ಮೇಲೆ ಚಾರ್ಟರ್ಡ್ ಅಕೌಂಟೆಂಟ್ಗಳಿಂದ ವರದಿಯನ್ನು ಕೂಡಾ ಜಲಮಂಡಳಿಯು ಕೇಳಿತ್ತು.
ವರದಿಯ ಪ್ರಕಾರ ಸುಮಾರು 3.18 ಕೋಟಿ ರೂ. ಮೊತ್ತದ ಹಣ ವಾಬಾಗ್ ಕಂಪೆನಿಗೆ ಹೆಚ್ಚಿಗೆ ಪಾವತಿಯಾಗಿರುವುದು ಕಂಡು ಬಂದಿತ್ತು. ಇಲ್ಲಿ ತನ್ನ ತಪ್ಪನ್ನು ತಿದ್ದಲು, ಜಲಮಂಡಳಿಯ ಅಧಿಕಾರಿಗಳಿಗೆ ಉತ್ತಮ ಅವಕಾಶವಿದ್ದರೂ ಅದನ್ನು ಕೈಚೆಲ್ಲಿ ಕುಳಿತರು. ಹೆಚ್ಚಿಗೆ ನೀಡಿದ ಮೊತ್ತವನ್ನು ವಾಬಾಗ್ ಕಂಪೆನಿಯಿಂದ ವಾಪಾಸ್ ಪಡೆಯುವ ಕುರಿತು ಯಾವುದೇ ರೀತಿಯ ಪ್ರಯತ್ನವನ್ನೂ ಜಲಮಂಡಳಿ ಮಾಡಲಿಲ್ಲ.
ವಾಬಾಗ್ ಕಂಪೆನಿಯೊಂದಿಗಿನ ಅಕ್ರಮಗಳ ಕತೆ ಇಲ್ಲಿಗೆ ನಿಲ್ಲುವುದಿಲ್ಲ. S1C ಮತ್ತು S1D ಯೋಜನೆಗಳಿಗೆ ಅಗತ್ಯವೇ ಇಲ್ಲದಂತಹ ಅನಾವಶ್ಯಕ ವಸ್ತುಗಳ ಬಿಲ್ಗಳನ್ನು ನೀಡಿ ವಾಬಾಗ್ ಕಂಪೆನಿ 3.82 ಕೋಇ ಮೊತ್ತವನ್ನು ಪಡೆದುಕೊಂಡಿದೆ. Madras Steels and Tubes ಎಂಬ ಕಂಪೆನಿಯ ವತಿಯಿಂದ ಬಿಲ್ಗಳನ್ನು ಸಲ್ಲಿಸಲಾಗಿದೆ. ಬಿಲ್ನಲ್ಲಿರುವ ವಸ್ತುಗಳು ಯೋಜನೆಗೆ ಅವಶ್ಯಕವೋ ಇಲ್ಲವೋ ಎಂಬ ಕುರಿತಾಗಿ ಗಮನ ಹರಿಸುವ ಕಾಳಜಿಯನ್ನು ಜಲಮಂಡಳಿ ತೋರಲಿಲ್ಲ.
ಇಲ್ಲಿ ಪ್ರಮುಖವಾಗಿ ಗಮನಹರಿಸಬೇಕಾದ ಸಂಗತಿಯೇನೆಂದರೆ, ಭ್ರಷ್ಟಾಚಾರ ನಿಗೃಹ ದಳಕ್ಕೆ ಈ ಕುರಿತಾಗಿ ಮಾಹಿತಿ ಇದ್ದರೂ, ಅವರಿಗೆ ದೂರು ನೀಡಿದ್ದರೂ, ಅವರು ಕೂಡಾ ಸೊಲ್ಲೆತ್ತುತ್ತಿಲ್ಲ. ಭ್ರಷ್ಟರನ್ನು ಕಾನೂನಿನ ಕೈಗಳಿಂದ ರಕ್ಷಿಸುವ ಎಲ್ಲಾ ಪ್ರಯತ್ನಗಳೂ ಸಾಂಗವಾಗಿ ನಡೆಯುತ್ತಿವೆ ಎಂದರೆ ಅದು ತೆರಿಗೆ ಪಾವತಿಸುವ ಜನರ ದುರದೃಷ್ಟವಲ್ಲದೇ ಏನು?
ಈ ಅಕ್ರಮಗಳು ಬೆಂಗಳೂರಿನ ಅಭಿವೃದ್ದಿ ಯೋಜನೆಗಳಿಗೆ ಯಾವ ರೀತಿ ತೊಂದರೆಯಾಗಬಹುದು ಎಂಬ ಕುರಿತು ಮಾತನಾಡಿರುವ ದೀಪಕ್, ಬೆಂಗಳೂರಿನಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗೆ JICA ದೀರ್ಘಾವಧಿ ಸಾಲದ ರೂಪದಲ್ಲಿ ಸಾಕಷ್ಟು ನೆರವು ನೀಡುತ್ತಿದೆ. ಆ ನೆರವು ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆಗಳಿವೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಮಾತ್ರವಲ್ಲ ಸಂಪೂರ್ಣ ರಾಜ್ಯದ ಘನತೆಗೆ ಧಕ್ಕೆ ತರುವಂತಹ ವಿಚಾರ, ಎಂದು ಹೇಳಿದ್ದಾರೆ.
ಇತ್ತೀಚಿಗೆ ತುಷಾರ್ ಗಿರಿನಾಥ್ ಅವರನ್ನು ಸಹಕಾರ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು, ಅವರು BWSSB ಚೇರ್ಮನ್ ಆಗಿರುವಾಗ ನಡೆದಿರುವಂತಹ ಅಕ್ರಮಗಳ ಕುರಿತಾಗಿ ನಿಷ್ಪಕ್ಷಪಾತವಾದಂತಹ ತನಿಖೆ ನಡೆಸಬೇಕಾದ ಅವಶ್ಯಕತೆಯಿದೆ.
ಒಟ್ಟಿನಲ್ಲಿ, ಅಕ್ರಮಗಳ ಕೂಪವಾಗಿರುವ ಜಲಮಂಡಳಿಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಬರಬೇಕಿವೆ. ಈಗಾಗಲೇ ಪೋಲಾಗಿರುವ ನೂರಾರು ಕೋಟಿಗಳಷ್ಟು ಮೊತ್ತವನ್ನು ಮತ್ತೆ ವಾಪಾಸು ಪಡೆದು ಅಭಿವೃದ್ದಿ ಕಾರ್ಯಕ್ಕಾಗಿ ಬಳಸಿಕೊಂಡು ತೆರಿಗೆ ಪಾವತಿಸುತ್ತಿರುವ ಜನರಿಗೆ ನ್ಯಾಯ ಒದಗಿಸಬೇಕಾಗಿದೆ. ಇನ್ನಾದರೂ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗಕ್ಕೆ ತಿಳಿಯುವುದಿಲ್ಲ ಎಂಬ ಧೋರಣೆಯನ್ನು ಹೊಂದಿರುವ ಜಲಮಂಡಳಿಯು ಸುಧಾರಿಸಿಕೊಂಡು ನಿಷ್ಟೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಬೆಂಗಳೂರು ನಿಜವಾದ ಅಭಿವೃದ್ದಿಯತ್ತ ಸಾಗಲು ಸಾಧ್ಯ.