ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರೂ ಇನ್ನೂ ಕೂಡ ಎಲ್ಲವೂ ಸರಿಯಾಗಿದೆ ಎನ್ನುವ ಬಗ್ಗೆ ಹೇಳಲು ಯಾರಿಗೂ ಸಾಧ್ಯವಾಗ್ತಿಲ್ಲ. ಅಧಿಕಾರದ ದಾಹ ಬಿಜೆಪಿಯಲ್ಲಿ ಮುಗಿಲು ಮುಟ್ಟಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಬೆಂಬಿಡದೆ ಕಾಡುತ್ತಿದೆ. ತಿಂಗಳು ಮೂರಾಗುವಂತಿಲ್ಲ ಎಲ್ಲಾದರೂ ಒಂದು ಗುಂಪು ಗುಂಪಾಗಿ ಶಾಸಕರು ಸಭೆ ನಡೆಸುತ್ತಾ ಭಿನ್ನಮತದ ಬಾವುಟ ಹಾರಿಸುತ್ತಿದ್ದಾರೆ. ಬಂಡಾಯದ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಅಂತಹ ಸುದ್ದಿಗಳನ್ನು ಕಡಿಮೆ ಮಾಡುವ ನಿಟ್ಟಿನಿಂದ ಸಿಎಂ ಬಿಎಸ್ ಯಡಿಯೂರಪ್ಪ 24 ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಮಾಡಿದ್ದಾರೆ.
ಬಿಜೆಪಿ ಶಾಸಕರಿಗೆ ನಿಗಮ ಮಂಡಳಿ ನೀಡಿದ್ದರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. ತನ್ನ ಖುರ್ಚಿ ಉಳಿಸಿಕೊಳ್ಳಲು ಶಾಸಕರಿಗೆ ನಿಗಮ ಮಂಡಳಿ ನೀಡಿದ್ದಾರೆ ಎಂದು ಕಾಲೆಳೆದಿದ್ದಾರೆ. ಕರೋನಾ ಸಂಕಷ್ಟ ಸಮಯದಲ್ಲಿ ಬದುಕಿಗಾಗಿ ಜನತೆ ಹೋರಾಟ ಮಾಡುತ್ತಿದ್ದರೆ, ಸರ್ಕಾರಕ್ಕೆ ವರ್ಷಾಚರಣೆ ಸಂಭ್ರಮದಲ್ಲೂ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತನ್ಮಯವಾಗಿದೆ. 24 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಉಡುಗೊರೆ ನೀಡುವ ಮೂಲಕ ಜನತೆಯ ಆಶೋತ್ತರಗಳಿಗೆ ಕೊಳ್ಳಿ ಇಟ್ಟಂತೆ ಇದೆ. ಸರ್ಕಾರ ಮಾತ್ರವಲ್ಲ, ಜನತೆಯೂ ಕೂಡ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ರಾಜ್ಯ ಸರ್ಕಾರದ ಬೊಕ್ಕಸ ಹಾಗೂ ಜನಸಾಮಾನ್ಯರ ಮೇಲೆ ಹೊರೆ ಹಾಕುವ ಮೂಲಕ ಶಾಸಕರಿಗೆ ಮುಖ್ಯಮಂತ್ರಿ ಉಡುಗೊರೆ ಕೊಟ್ಟಿದ್ದಾರೆ. ಆದರೆ ರಾಜ್ಯದ ಜನತೆಗೆ ಬರೆ ಎಳೆದಿರುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಲಕ್ಷ ನಡವಳಿಕೆಯನ್ನು ಖಂಡಿಸುತ್ತೇನೆ. ಬಿಜೆಪಿ ಸರ್ಕಾರಕ್ಕೆ ಸಾಮಾನ್ಯರ ಹಿತ ಮುಖ್ಯವೋ..? ಕುರ್ಚಿ ಉಳಿಸಿಕೊಳ್ಳಲು ಶಾಸಕರ ಹಿತ ಮುಖ್ಯವೋ..? ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಜನತೆಗೆ ಉಡುಗೊರೆ ಕೊಡಬೇಕಾಗಿದ್ದ ರಾಜ್ಯ ಸರ್ಕಾರ, ಶಾಸಕರನ್ನು ತೃಪ್ತಿಪಡಿಸುವ ಅನಾಚಾರ ಪ್ರದರ್ಶಿಸಿದೆ. ರಾಜ್ಯ ಎದುರಿಸುತ್ತಿರುವ ಇಂತಹ ಸಂಕಷ್ಟದ ಸಮಯದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಗಾದಿಯ ಮೇಲೆ ಸವಾರಿ ಮಾಡುವುದು ಹಿತವೇ ಎಂಬುದನ್ನು ಶಾಸಕರೇ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ. ಹಗಲನ್ನು ಇರುಳು ಮಾಡಿ, ಇರುಳನ್ನು ಹಗಲು ಮಾಡಿ, ಆಚಾರವೇ ಅನಾಚಾರವೇ..? ಅನಾಚಾರವ ಆಚಾರವ ಮಾಡಿ, ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ, ನುಡಿವವರ ಮಾತ ಕೇಳಲಾಗದು ಗುಹೇಶ್ವರಾ ಎಂದು ಟ್ವಿಟರ್ನಲ್ಲಿ ವಚನದ ಮೂಲಕ ಕಿಡಿಕಾರಿದ್ದಾರೆ.
ಬಾಗಲಕೋಟೆಯ ತೇರದಾಳ ಶಾಸಕ ಸಿದ್ದು ಸವದಿಗೆ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ ಶಾಸಕ ಸಿದ್ದು ಸವದಿ ನಾನು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಮುಖ್ಯಮಂತ್ರಿಗಳು ಪ್ರೀತಿಯಿಂದ ನೇಕಾರ ಸಮುದಾಯದ ಮುಖಂಡರಿಗೆ ಕೊಡಿ ಎನ್ನುವುದು ನಮ್ಮ ಬೇಡಿಕೆಯಾಗಿತ್ತು ಎನ್ನುವ ಮೂಲಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಪರೋಕ್ಷವಾಗಿ ತಿರಸ್ಕರಿಸಿದ್ದಾರೆ. ನೇಕಾರ ಸಮುದಾಯದ ಇಬ್ಬರು ಮುಖಂಡರು ಆಕಾಂಕ್ಷಿಗಳಿದ್ದರು. ನೇಕಾರರಿಗೆ ಕೊಟ್ಟರೆ ಸೂಕ್ತ ಎನ್ನುವುದು ನಮ್ಮ ಬೇಡಿಕೆ. ನನಗೆ ಕೊಡುವುದು ಸೂಕ್ತವಲ್ಲ ಎಂದಿದ್ದಾರೆ. ಕೊಡುವುದಾದರೆ ಕೈಮಗ್ಗ ಅಭಿವೃದ್ಧಿ ನಿಗಮ ಬಿಟ್ಟು ಬೇರೆ ನಿಗಮ ಕೊಡಲಿ ಎಂದಿದ್ದಾರೆ.
ಸಚಿವ ಸ್ಥಾನ ಬದಲು ನಿಗಮ ಮಂಡಳಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ನಾನು ಈಗಾಗಲೇ ಸಚಿವನಾಗಿದ್ದವನು, ಇದೀಗ ನಿಗಮ ಮಂಡಳಿಗೆ ನೇಮಕ ಮಾಡುವುದು ಎಷ್ಟು ಸರಿ ಎಂದು ಕಿಡಿ ಕಾರಿದ್ದಾರೆ. ಬಸವರಾಜ್ ದಡೆಸಗೂರ್ಗೆ ನಿಗಮ ಮಂಡಳಿ ನೀಡಿದಕ್ಕೂ ಆಕ್ರೋಶ ವ್ಯಕ್ತವಾಗಿದೆ. ಸಮಾಜ ಕಲ್ಯಾಣ ಮಂಡಳಿ ನೀಡಿ ಸಂಪುಟ ದರ್ಜೆ ಸ್ಥಾನ ಮಾನ ನೀಡಿರುವುದು ಯಾವ ನ್ಯಾಯ..? ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ದಡೆಸಗೂರ್ಗೆ ಈ ಸ್ಥಾನ ನೀಡದಂತೆ ಒತ್ತಡ ಕೇಳಿ ಬಂದಿತ್ತು. ಈ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ನಾಲ್ವರು ಶಾಸಕರ ನಿಗಮ ಮಂಡಳಿ ಸ್ಥಾನ ವಾಪಸ್ಸು ಪಡೆದಿದ್ದಾರೆ.
ನಿಗಮ ಮಂಡಳಿಗೆ ನೇಮಕವಾಗಿದ್ದ 24 ಮಂದಿ ಶಾಸಕರಲ್ಲಿ ನಾಲ್ವರ ಸ್ಥಾನವನ್ನು ವಾಪಸ್ಸು ಪಡೆದುಕೊಂಡಿದ್ದಾರೆ. ಶಾಸಕ ತಿಪ್ಪಾರೆಡ್ಡಿ, ಪರಣ್ಣ ಈಶ್ವರಪ್ಪ ಮುನವಳ್ಳಿ, ಲಾಲಾಜಿ ಆರ್ ಮೆಂಡನ್, ಬಸವರಾಜ್ ದಡೆಸೂರ್ ನೇಮಕವನ್ನು ವಾಪಸ್ಸು ಪಡೆದುಕೊಂಡಿದ್ದಾರೆ. ತಾಂತ್ರಿಕ ಕಾರಣ ನೀಡಿ ನೇಮಕ ವಾಪಸ್ಸು ಪಡೆಯಲಾಗಿದೆ. ಇನ್ನೂ ಕೆಲವು ಶಾಸಕರಲ್ಲಿ ಅಸಮಾಧಾನ ಇದೆ ಎನ್ನಲಾಗಿದೆ. ಇನ್ನೆಷ್ಟು ಜನ ಬಂಡಾಯ ಶುರು ಮಾಡ್ತಾರೆ ಎನ್ನುವ ಕುತೂಹಲ ಮೂಡಿದೆ.
ಕುಮಾರಸ್ವಾಮಿ ಮಾತಿಗೆ ಬಿಜೆಪಿ ಆಕ್ರೋಶ..!
ಕುಮಾರಸ್ವಾಮಿ ಟೀಕೆಗೆ ವ್ಯಂಗ್ಯವಾಡಿರುವ ಬಿಜೆಪಿ ನಾಯಕರು, ಚುನಾಯಿತ ಪ್ರತಿನಿಧಿಗಳಿಗೆ ಜವಾಬ್ದಾರಿ ಕೊಡುವುದು ತಪ್ಪು ಎಂದರೆ ಇಂತವರಿಗೆ ಬುದ್ಧಿ ಹೇಳೋಕೆ ಆಗೋದಿಲ್ಲ. ಅಸಮಾಧಾನದ ವಿಚಾರದಲ್ಲಿ ಮುಖ್ಯಮಂತ್ರಿಗಳು ನೋಡಿ ಸರಿಪಡಿಸುತ್ತಾರೆ ಎಂದಿದ್ದಾರೆ ಡಿಸಿಎಂ ಅಶ್ವಥ್ ನಾರಾಯಣ್. ಇನ್ನೂ ಕರೋನಾ ಸಂದರ್ಭದಲ್ಲಿ ನಿಗಮ ಮಂಡಳಿ ವಿಸ್ತರಣೆ ಅವಶ್ಯಕತೆ ಇತ್ತ ಎಂದ ಕುಮಾರಸ್ವಾಮಿಗೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಕರೋನಾ ಜೊತೆಗೆ ಸರ್ಕಾರ, ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಇವೆಲ್ಲಾ ಎಂದಿನಂತೆ ನಡೆಯುವ ಕೆಲಸಗಳು, ಕರೋನಾವನ್ನು ತಡೆಗಟ್ಟಬೇಕು. ಎಲ್ಲವನ್ನೂ ಜೊತೆಯಲ್ಲಿ ಮಾಡಿಕೊಂಡು ಹೋಗಬೇಕು. ಸದುದ್ದೇಶದಿಂದ ನಿಗಮ ಮಂಡಳಿ ನೀಡಲಾಗಿದೆ. ರಾಜಕೀಯ ವ್ಯವಸ್ಥೆ ಕರೋನಾ ಮೇಲೆ ಪರಿಣಾಮ ಬೀರಲ್ಲ ಎಂದಿದ್ದಾರೆ.
ಒಟ್ಟಾರೆ, ಬಿಜೆಪಿಯಲ್ಲಿ ಬಂಡಾಯ ಕಡಿಮೆ ಮಾಡುವ ಉದ್ದೇಶದಿಂದ ಸಿಎಂ ಬಿಎಸ್ ಯಡಿಯೂರಪ್ಪ ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದಾರೆ. ಆದರೆ ಅದು ಸಿಎಂ ನಿರ್ಧಾರಕ್ಕೆ ರಿವರ್ಸ್ ಹೊಡೆದಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ನಿಯಂತ್ರಣ ಮಾಡ್ತಾರೆ ಕಾದು ನೋಡಬೇಕಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ