ಅಣ್ಣ ತಮ್ಮಂದಿರು ವಿರೋಧಿಗಳ ವಿರುದ್ಧ ಹೋರಾಡುವಾಗ ಒಗ್ಗಾಟ್ಟಾಗಿ ಇರಬೇಕು ಎನ್ನುವುದನ್ನು ಭಾರತದ ಪುರಾಣಗಳಾದ ಮಹಾಭಾರತ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಮಹಾ ಭಾರತ ಹಾಗೂ ರಾಮಾಯಣವನ್ನೇ ನಂಬಿ ರಾಜಕಾರಣ ಮಾಡುವ ಬಿಜೆಪಿಗೆ ಮಾತ್ರ ಇದು ಅರಿವಾದಂತೆ ಕಾಣುತ್ತಿಲ್ಲ. ವಿರೋಧಿಗಳ ಎದುರು ಹೋರಾಡುವಾಗಲೂ ತಮ್ಮ ತಮ್ಮ ನಡುವಿನ ಒಳಜಗಳವನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ.
ಆಗಿದ್ದು ಇಷ್ಟೆ, ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಕೋವಿಡ್ 19 ನಿರ್ವಹಣೆಯಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ ಮಾಡಿದೆ ಎಂದು ಆರೋಪ ಮಾಡಿದ್ದರು. ಮೊದ ಮೊದಲಿಗೆ ರಾಜಕೀಯ ಹೇಳಿಕೆ ರೀತಿಯಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಲು ಶುರು ಮಾಡಿದ ಸಚಿವರಿಗೆ ಸಮಾಜದಲ್ಲಿ ಜನರ ಎದುರು ಕೆಂಗಣ್ಣಿಗೆ ಗುರಿಯಾಗುವ ಅರಿವಾಗಿತ್ತು. ಯಾವಾಗ ವಿಷಯ ತಾವಂದುಕೊಂಡಷ್ಟು ಸುಲಭವಿಲ್ಲ ಎನ್ನುವುದು ಗೊತ್ತಾಯಿತೋ, ಆಗ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಆರೋಪಕ್ಕೆ ಉತ್ತರ ಕೊಡುವ ಪ್ರಯತ್ನ ಮಾಡಿದರು. ಆದರೆ ಆ ಸುದ್ದಿಗೋಷ್ಠಿಯಲ್ಲಿ ಯಾರು ಇರಬೇಕಿತ್ತೋ ಅವರು ಇಲ್ಲದೆ ಇದ್ದಿದ್ದು ಬಟಾಬಯಲಾಯ್ತು.
ಕೋವಿಡ್ ನಿರ್ವಹಣೆ ಮಾಡುವುದು ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ, ಈ ಎರಡೂ ಇಲಾಖೆ ನಡುವೆ ಮೊದಲಿನಿಂದಲೂ ಸಮನ್ವಯತೆ ಇಲ್ಲ. ಇಬ್ಬರು ಸಚಿವರ ನಡುವೆ ಹೊಂದಾಣಿಕೆ ಇಲ್ಲದೆ ಮುಸುಕಿನ ಗುದ್ದಾಟ ನಡೆಸುತ್ತಲೇ ಇರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿಲ್ಲ ವಿಚಾರ. ಆದರೆ ಇಂದು ಸುದ್ದಿಗೋಷ್ಠಿಗೆ ಸುಧಾಕರ್ ಹೋಗುವುದಕ್ಕೆ ನಿರಾಕರಿಸಿದರು ಎನ್ನಲಾಗಿದೆ. ಇದನ್ನು ಹೇಗೆ ನಿಬಾಯಿಸುವುದು ಎಂದು ಲೆಕ್ಕಾಚಾರ ಹಾಕಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ ನಾರಾಯಣ್ ಅವರನ್ನು ಜೊತೆ ಮಾಡಿ ಸುದ್ದಿಗೋಷ್ಠಿ ನಡೆಯುವಂತೆ ಮಾಡಿದರು. ಆದರೆ ಇದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ರಾಮಬಾಣದಂತ ಅಸ್ತ್ರ ಸಿಕ್ಕಂತಾಯ್ತು.
ಬಿಜೆಪಿ ಸಚಿವರ ಸುದ್ದಿಗೋಷ್ಠಿ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರೋನಾ ನಿಯಂತ್ರಣದಲ್ಲಿನ ಅವ್ಯವಹಾರದ ಬಗೆಗಿನ ನನ್ನ ಆರೋಪಕ್ಕೆ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಲು ಪ್ರಯತ್ನಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಡಿಸಿಎಂ ಅಶ್ವಥ್ ನಾರಾಯಣ್, ಸತ್ಯವನ್ನು ಬಿಚ್ಚಿಡುವ ಬದಲಿಗೆ ಸುಳ್ಳನ್ನು ಮುಚ್ಚಿಡಲು ಪರದಾಡಿದ್ದಾರೆ. ನಾನು ಕೇಳಿರುವ ಯಾವ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದ್ದಾರೆನ್ನುವುದು ನನಗೆ ತಿಳಿದಿಲ್ಲ. ರಾಜ್ಯ ಸರ್ಕಾರದ ಲಿಖಿತ ಸ್ಪಷ್ಟನೆ ನನ್ನ ಕೈ ಸೇರಿದ ನಂತರ ವಿವರವಾಗಿ ಪ್ರತಿಕ್ರಿಯಿಸುವೆ ಎಂದಿದ್ದಾರೆ.
ಸರ್ಕಾರದ ಒಳಗೊಂದು ಸರ್ಕಾರ ಇದೆಯೋ..?
ಆದರೆ ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಸಚಿವ ಡಾ.ಸುಧಾಕರ್ ಕಾಣಲಿಲ್ಲ. ಸರ್ಕಾರದ ಒಳಗೊಂದು ಸರ್ಕಾರ ಇದೆಯೇ..? ಎಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಒಟ್ಟು 323 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ. ಆದರೆ ಅವರು ನೀಡಿರುವ ಲೆಕ್ಕವನ್ನು ಎಷ್ಟೇ ಕೂಡಿಸಿ ಕಳೆದರೂ ಅದು 100 ಕೋಟಿ ರೂಪಾಯಿ ದಾಟುವುದಿಲ್ಲ. ಉಳಿದ ದುಡ್ಡಿಗೆ ಲೆಕ್ಕ ಎಲ್ಲಿದೆ..? ಎಂದು ಪ್ರಶ್ನಿಸಿದ್ದಾರೆ.
ಪಿಎಂ ಕೇರ್ಸ್ ಫಂಡ್‌ನಲ್ಲಿ ಕೇಂದ್ರ ಸರ್ಕಾರ ತಲಾ 4 ಲಕ್ಷ ರೂಪಾಯಿ ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ನಮ್ಮಲ್ಲಿ ಮಾತ್ರ ವೆಂಟಿಲೇಟರ್‌ಗಳನ್ನು 12 ರಿಂದ 18 ಲಕ್ಷ ರೂಪಾಯಿವರೆಗೆ ಕೊಟ್ಟು ಖರೀದಿಸಲಾಗಿದೆ. ಅಂತಹ ವಿಶೇಷತೆ ಈ ವೆಂಟಿಲೇಟರ್‌ಗಳಲ್ಲಿ ಏನಿದೆ..? ಇವುಗಳ ಬೆಲೆಯಲ್ಲಿ ಯಾಕೆ ಇಷ್ಟೊಂದು ವ್ಯತ್ಯಾಸ..? ಎಂದು ವೆಂಟಿಲೇಟರ್ ಖರೀದಿ ಬಗ್ಗೆ ಪ್ರಶ್ನೆ ಮತ್ತೆ ಸಿದ್ದರಾಮಯ್ಯ ಪಶ್ನೆ ಮಾಡಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯ ಸಚಿವರು ಮತ್ತು ಉಪಮುಖ್ಯಮಂತ್ರಿಗಳು ಇಬ್ಬರೂ ಖರೀದಿ ಮಾಡಿರುವ ಸಲಕರಣೆಗಳ ದುಬಾರಿ ದರವನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆದರ ವ್ಯತ್ಯಾಸಕ್ಕೆ ಗುಣಮಟ್ಟದಲ್ಲಿನ ವ್ಯತ್ಯಾಸ ಕಾರಣ ಎಂದು ಹೇಳಿದ್ದಾರೆ. ಆದರೆ ಇದನ್ನು ತಾಂತ್ರಿಕವಾಗಿ ಸಮರ್ಥಿಸುವ ಯಾವ ದಾಖಲೆಗಳನ್ನು ಯಾಕೆ ನೀಡಿಲ್ಲ..? ಯಾಕೆ ಎಂದು ಕುಟುಕಿದ್ದಾರೆ. ನಾನು ಕರೋನಾ ನಿಯಂತ್ರಣದ ಸಲಕರಣೆಗಳ ಲೆಕ್ಕ ಮಾತ್ರ ಕೇಳಿದ್ದಲ್ಲ. ಆಹಾರ ಧಾನ್ಯ, ಮತ್ತು ಆಹಾರ ಸಾಮಗ್ರಿಗಳ ಕಿಟ್, ಆಸ್ಪತ್ರೆಗಳಿಗೆ ಖರೀದಿಸಲಾದ ಬೆಡ್‌ಗಳ ಬೆಲೆ, ಕ್ವಾರಂಟೈನ್ ಕೇಂದ್ರಗಳು, ಐಸೋಲೇಷನ್ ವಾರ್ಡ್‌ಗಳಿಗೆ ಆಗಿರುವ ಖರ್ಚಿನ ವಿವರವನ್ನೂ ಕೇಳಿದ್ದೇನೆ. ಆ ಲೆಕ್ಕ ಎಲ್ಲಿದೆ..? ಎಂದು ಟ್ವೀಟ್ ಮಾಡಿ ಸರ್ಕಾರವನ್ನು ಕಾಡುವ ಮುನಸೂಚನೆ ಕೊಟ್ಟಿದ್ದಾರೆ.
ಸಿದ್ದು ಟ್ವೀಟ್ ಬಳಿಕ ಸಿಎಂ ಅಖಾಡಕ್ಕೆ..!
ಬಿಜೆಪಿ ಸರ್ಕಾರದ ಎಡವಟ್ಟುಗಳ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ವಿಪಕ್ಷಗಳ ಆರೋಪದ ಬಗ್ಗೆ ನಾಳೆ ಅಥವಾ ನಾಡಿದ್ದು ಸಿಎಂ ಬಿ.ಎಸ್ ಯಡಿಯೂರಪ್ಪ ಅಂಕಿ, ಅಂಶಗಳನ್ನು ರಾಜ್ಯದ ಜನತೆ ಮುಂದಿಡಲಿದ್ದಾರೆ ಎಂದಿದ್ದಾರೆ. ಒಟ್ಟಾರೆ, ಸಿದ್ದರಾಮಯ್ಯ ಸರ್ಕಾರವನ್ನು ಕಾಡುವುದಕ್ಕೆ ಶುರು ಮಾಡಿದ್ದಾರೆ. ಮಂತ್ರಿಗಳು ಕೊಟ್ಟ ಲೆಕ್ಕ ಅರ್ಧಂಬರ್ಧ ಇದ್ದು ಅದರಲ್ಲಿ ಸ್ಪಷ್ಟತೆ ಇರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ ಅಖಾಡಕ್ಕೆ ಬರುತ್ತಿದ್ಗದು ಭ್ರಷ್ಟಾಚಾರವನ್ನು ಸಮರ್ಥಿಸುತ್ತಾರೋ..? ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವ ಉದ್ದೇಶದಿಂದ ತನಿಖೆ ಮಾಡಿಸ್ತಾರೋ ಕಾದು ನೋಡ್ಬೇಕು.