ಕಳೆದ ಕೆಲವು ದಿನಗಳಿಂದ ಅಶೋಕ್ ಗೆಹಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ಉರುಳಿಸಲು ತೆರೆಮರೆಯಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿದೆ. ಇದರ ಹಿಂದೆ ಬಿಜೆಪಿಯ ಷಡ್ಯಂತ್ರವಿದೆ ಎಂದು ಕಾಂಗ್ರೆಸ್‌ನ ಆರೋಪವಾಗಿತ್ತು. ಕಾಂಗ್ರೆಸ್ ನ ಆರೋಪಕ್ಕೆ ಪುರಾವೆಯಂತೆ ಕಾಂಗ್ರೆಸ್ ಎರಡು ಫೋನ್ ಸಂಭಾಷಣೆಯ ಧ್ವಣಿಮುದ್ರಿಕೆಯನ್ನು ಬಿಡುಗಡೆಗೊಳಿಸಿದೆ.
ಎರಡು ಕಾಲ್ ರೆಕಾರ್ಡಿಂಗ್‌ಗಳು ಹೊರಬಂದಿದ್ದು, ಅದರಲ್ಲಿ ಭನ್ವರ್ ಲಾಲ್ ಶರ್ಮಾ ಅವರೊಂದಿಗೆ ಬಿಜೆಪಿ ನಾಯಕರು ಸರ್ಕಾರ ಉರುಳಿಸಲು ಸಂವಾದ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಬಿಜೆಪಿಯೊಂದಿಗೆ ಸಂಭಾಷಣೆ ನಡೆಸಿದ ಆರೋಪದಲ್ಲಿ ಬಂಡಾಯ ಶಾಸಕರಾದ ಭನ್ವರ್ ಲಾಲ್ ಶರ್ಮ ಹಾಗೂ ವಿಶ್ವೇಂದ್ರ ಸಿಂಗ್‌ರನ್ನು ಕಾಂಗ್ರೆಸ್ ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಚಿನ್ ಪೈಲಟ್ ಹಾಗೂ 18 ಬಂಡಾಯ ಶಾಸಕರಿಗೆ ಕಾಂಗ್ರೆಸ್ ಈಗಾಗಲೇ ನೋಟೀಸ್ ಹೊರಡಿಸಿತ್ತು. ಅನರ್ಹರನ್ನಾಗಿಸುವುದಾಗಿಯೂ ಪಕ್ಷ ಹೇಳಿತ್ತು. ಈ ನಡೆಯನ್ನು ಪ್ರಶ್ನಿಸಿ ಸಚಿನ್ ಪೈಲಟ್ ತಂಡ ಕೋರ್ಟ್ ಮೆಟ್ಟಿಲೇರಿತ್ತು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪದ ಮೇಲೆ ಬಂಡಾಯ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾರೊಂದಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೆಸರನ್ನೂ FIR ನಲ್ಲಿ ಹೆಸರಿಸಲಾಗಿದೆ. ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯ ಶಾಸಕರು ಬಿಜೆಪಿಯೊಂದಿಗೆ ಸಂಚು ಹೂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಕಾಂಗ್ರೆಸ್ ಇಂದು ಆರೋಪಿಸಿದೆ.
ಕರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಬದಲು ಅಧಿಕಾರ ಹಿಡಿಯಲು ಮೋದಿ ಸರ್ಕಾರ ಮತ್ತು ಬಿಜೆಪಿ ಸಂಚು ರೂಪಿಸುತ್ತಿವೆ ಎಂದು ಕಾಂಗ್ರೆಸ್ ಹಿರಿಯ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಈ ಬಗ್ಗೆ “ಸಚಿನ್ ಪೈಲಟ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು” ಎಂದೂ ಅವರು ಸೇರಿಸಿದ್ದಾರೆ.