ಮಂಡ್ಯ ಜಿಲ್ಲೆಯ ಡ್ರೋನ್ ಪ್ರತಾಪನ ಕುರಿತ ಕನ್ನಡ ಮಾಧ್ಯಮಗಳ ಬಾಲಿಶ ವರದಿಗಳು ಮತ್ತು ಅತಿರಂಜಿತ ಕಟ್ಟುಕತೆಗಳ ಹಿಂದಿನ ವಾಸ್ತವಾಂಶಗಳು ಬಯಲಾಗಿ ತೀವ್ರ ಮುಖಭಂಗ ಅನುಭವಿಸಿದ ಬೆನ್ನಲ್ಲೇ, ಅದೇ ಮಂಡ್ಯ ಜಿಲ್ಲೆಯ ಆಧುನಿಕ ಭಗೀರಥ ಎಂದೇ ಜನಪ್ರಿಯರಾಗಿರುವ ಕಾಮೇಗೌಡರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡರು ಕುರಿ ಮೇಯಿಸುತ್ತಲೇ ತಮ್ಮ ಸ್ವಂತ ಖರ್ಚಿನಲ್ಲಿ 16 ಕೆರೆ ನಿರ್ಮಿಸಿ ಪ್ರಾಣಿ ಪಕ್ಷಿಗಳ ದಾಹ ತೀರಿಸಿದ್ದಾರೆ ಎಂದು ಸಾಕಷ್ಟು ಪ್ರಚಾರ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮಾಧ್ಯಮಗಳು ಅವರನ್ನು ಆಧುನಿಕ ಭಗೀರಥ ಎಂದೇ ಬಣ್ಣಿಸಿದ್ದವು. ಮಾಧ್ಯಮಗಳ ವರದಿಯ ಆಧಾರದಲ್ಲಿ 2018ರಲ್ಲೇ ರಾಜ್ಯ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಲಾಗಿತ್ತು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್ ‘ ಕಾರ್ಯಕ್ರಮದಲ್ಲಿ ಗೌಡರ ಪರಿಸರ ಪ್ರೇಮವನ್ನು ಕೊಂಡಾಡಿದ್ದರು. ಆ ಬಳಿಕವಂತೂ ಕಾಮೇಗೌಡರು ದೇಶವ್ಯಾಪಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ, ಕನ್ನಡ ಸುದ್ದಿ ವಾಹಿನಿಗಳಲ್ಲಿ ಕಾಮೇಗೌಡರ ಕುರಿತ ಸಾಲುಸಾಲು ವರದಿ, ವಿಶೇಷ ಕಾರ್ಯಕ್ರಮಗಳೂ ಪ್ರಸಾರವಾಗಿದ್ದವು.
ಇಂತಹ ವರದಿಗಳಿಂದ ಪ್ರೇರಿತರಾಗಿದ್ದ ಕನ್ನಡದ ಖ್ಯಾತ ಸಿನಿಮಾ ನಿರ್ಮಾಪಕರೊಬ್ಬರು ಅವರ ಮೇಲೆ ‘ದ ಗುಡ್ ಶೆಫರ್ಡ್’ ಹೆಸರಿನಲ್ಲಿ ಸಾಕ್ಷ್ಯ ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದರು.
ಆದರೆ, ಈ ನಡುವೆ ಕಾಮೇಗೌಡರ ಕುರಿತು ಅವರು ಸ್ವಂತ ಊರಿನಲ್ಲಿಯೇ ಹಲವು ಅಪಸ್ವರದ ಮಾತುಗಳು ಕೇಳಿಬಂದಿದ್ದವು. ಈ ನಡುವೆ ದಾಸನದೊಡ್ಡಿಯ ಗ್ರಾಮಸ್ಥರು ಕಾಮೇಗೌಡರ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿದ್ದು, ಕಾಮೇಗೌಡರು ಯಾವುದೇಕೆರೆಕಟ್ಟೆ ನಿರ್ಮಿಸಿಲ್ಲ. ಗಿಡಮರ ಬೆಳೆಸಿರುವುದು ಕೂಡ ಸುಳ್ಳು. ಹಿಂದಿನವರು ತೆಗೆಸಿದ್ದ ಕಟ್ಟೆಗಳನ್ನೇ ತಾನು ತೋಡಿಸಿರುವುದಾಗಿ ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿದ್ದಾರೆ. ಅಲ್ಲದೆ, ವೈಯಕ್ತಿಕವಾಗಿಯೂ ಕಾಮೇಗೌಡರ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳಿವೆ. ಗ್ರಾಮಸ್ಥರೊಂದಿಗೆ ಸದಾ ಒಂದಿಲ್ಲೊಂದು ವಿಷಯದಲ್ಲಿ ಜಗಳ ಕಾಯುವ ಅವರು, ಮಹಿಳೆ-ಮಕ್ಕಳೆನ್ನದೆ ಎಲ್ಲರಿಗೂ ಅಸಹ್ಯವಾಗಿ ನಿಂದಿಸುವುದು, ಹೇಯವಾಗಿ ಮಾತನಾಡುವುದು ಮಾಡುತ್ತಿದ್ದು, ವಿಚಿತ್ರ ನಡವಳಿಕೆಯ ಈ ವ್ಯಕ್ತಿಯ ಅಸಲೀತನ ಪರಿಶೀಲಿಸಿ, ನೀಡಿರುವ ಪ್ರಶಸ್ತಿ- ಪುರಸ್ಕಾರಗಳನ್ನು ವಾಪಸು ಪಡೆಯಿರಿ ಎಂದು ಆಗ್ರಹಿಸಿದ್ದಾರೆ.
ಈ ನಡುವೆ, ಮಂಡ್ಯ ರೈತ ಸಂಘಟನೆ ಮುಖಂಡರಾದ, ಸಾಹಿತಿ ಟಿ ಎಲ್ ಕೃಷ್ಣೇಗೌಡರು, ತಮ್ಮ ಫೇಸ್ ಬುಕ್ ಪುಟದಲ್ಲಿ ಕಾಮೇಗೌಡರು ತೆಗೆಸಿದ್ದು ಎಂದು ಹೇಳಲಾದ ‘ಕೆರೆ’ಗಳ ಫೋಟೋ ಮತ್ತು ವೀಡಿಯೋ ಹಂಚಿಕೊಂಡಿದ್ದು, ಅವುಗಳು ಯಾವೂ ವಾಸ್ತವವಾಗಿ ಕೆರೆಗಳೇ ಅಲ್ಲ; ಚಿಕ್ಕಪುಟ್ಟ ಗುಂಡಿ, ಕಟ್ಟೆಗಳು ಮತ್ತು ಯಾವುದೂ ಹೊಸದಾಗಿ ನಿರ್ಮಾಣವಾದವುಗಳಲ್ಲ. ರಸ್ತೆ, ಮನೆ ಮುಂತಾದ ಕೆಲಸಗಳಿಗಾಗಿ ಜೆಸಿಬಿಯಿಂದ ಮಣ್ಣು ತೆಗೆದಾಗ ನಿರ್ಮಾಣವಾದ ಗುಂಡಿಗಳೇ ವಿನಃ ಕೆರೆ-ಕಟ್ಟೆ ನಿರ್ಮಾಣದ ಉದ್ದೇಶಕ್ಕೆ ಮಾಡಿದವುಗಳಲ್ಲ ಎಂದು ತಮ್ಮ ಸಾಕ್ಷಾತ್ ಅನುಭವ ಹಂಚಿಕೊಂಡಿದ್ದಾರೆ.
ಅವರ ಫೇಸ್ ಬುಕ್ ಪೋಸ್ಟ್ ಹೇಳುವಂತೆ;
“ಪ್ರಧಾನ ಸೇವಕರಾದ ಮೋದಿಯವರು ಹೆಸರೆತ್ತಿದ ಮೇಲೆ ಕಾಮೇಗೌಡರು ಕಟ್ಟಿಸಿರುವ ಕೆರೆಗಳನ್ನು ನೋಡಲೇಬೇಕೆಂಬ ಕುತೂಹಲದಿಂದ ದಾಸನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದೆವು. ಬೆಟ್ಟ-ಗುಡ್ಡಗಳನ್ನು ಸುತ್ತಾಡಿ ಎಷ್ಟು ಹುಡುಕಿದರೂ ಒಂದು ಕೆರೆಯು ಸಿಗಲಿಲ್ಲ. ಸಿಕ್ಕಿದಂತಹ ಎಲ್ಲಾ ಗುಂಡಿಗಳು ನಾಲ್ಕು ಕೊಪ್ಪರಿಗೆ ನೀರು ತುಂಬಬಹುದಾದ, ಜೆಸಿಬಿಯಿಂದ ಮಣ್ಣು ತೆಗೆದು ಮಾಡಿರುವಂತಹವು. ಅದೂ ಈಗಾಗಲೇ ರಸ್ತೆ ಕಾಮಗಾರಿಯವರು, ಮನೆ ನಿರ್ಮಾಣದವರು ಮಣ್ಣು ತೆಗೆದು ಹಳ್ಳವಾಗಿ, ನೀರು ನಿಲ್ಲುತ್ತಿದ್ದ ಜಾಗಗಳನ್ನು ಮತ್ತಷ್ಟು ಕೆರೆಯಲಾಗಿದೆ. ಹೀಗಿದ್ದಾಗ್ಯೂ ಕಾಮೇಗೌಡರು ಪಡೆದ ಪ್ರಚಾರಕ್ಕೂ ತೋಡಿರುವ ಗುಂಡಿಗಳಿಗೂ ಯಾವ ಸಂಬಂಧವೂ ಇಲ್ಲ. ಈಗ ಕೆಲವು ಆಲದ ಕೊಂಬೆಗಳನ್ನು ಕಡಿದು ನಾಟಿ ಮಾಡಿರುವುದನ್ನು ಬಿಟ್ಟರೆ ನೆಟ್ಟು ಬೆಳೆಸಿದ ಮರಗಳೂ ಇಲ್ಲ.
ಕೆಲಸಕ್ಕೆ ಬಾರದ ಏನೇನೋ ಸಂಗತಿಗಳೆಲ್ಲ ಸುದ್ದಿಯಾಗುವ ಈ ಕಾಲದಲ್ಲಿ ‘ಕಾಮೇಗೌಡರ ಗುಂಡಿ’ಗಳು ಕಟ್ಟೆಗಳಾಗಿ, ಕೆರೆಗಳಾಗಿ ಕ್ರಮೇಣ 16 ಕೆರೆಗಳಾಗಿ ಮಾರ್ಪಾಡಾಗಿರುವುದರಲ್ಲಿ ಯಾವುದೇ ಅತಿಶಯವಿಲ್ಲ. ಕಾಮೇಗೌಡರನ್ನು ಪ್ರಶ್ನಿಸುವ ಮುನ್ನ ನಾವು ಯೋಚಿಸಬೇಕಿರುವುದು ಯಾವುದೇ ವಾಸ್ತವಾಂಶ ಪರಿಶೀಲಿಸದೆ ರಂಜನೀಯ ವರದಿ ಮಾಡುವ ನಮ್ಮ ಮಾಧ್ಯಮಗಳ ವ್ಯಾಧಿಯ ಬಗ್ಗೆ, ಅದನ್ನು ಮನದ ಮಾತಾಗಿಸಿಕೊಂಡ ಪ್ರಧಾನ ಸೇವಕರ ಪ್ರಚಾರದ ಹಪಾಹಪಿಯ ಬಗ್ಗೆ…
‘ಚಿನ್ನದ ರಸ್ತೆ’ಯಲ್ಲಿ ಆಟವಾಡಿಕೊಂಡು, ‘ಗಟಾರದ ಗ್ಯಾಸಿ’ನಲ್ಲಿ ಚಹ ಬಿಸಿ ಮಾಡಿ ಕುಡಿದ ದಿನವೇ ಗುಂಡಿಗಳೆಲ್ಲಾ ಕಟ್ಟೆಗಳಾಗಿ, ಕಟ್ಟೆಗಳೆಲ್ಲಾ ಕೆರೆಗಳಾಗಿ ಕಲಿಗಾಲ ಅಂತ್ಯವಾಗಲಿದೆ.”