ಮದುವೆ ಆದಾಗ ನನಗೆ ಹದಿನಾಲ್ಕು ವರ್ಷ, ಅವರಿಗೆ (ನರಸಿಂಹರಾಜು) ಇಪ್ಪತ್ತೆಂಟು. ಆಗ ಅವರು ಸ್ಟಾರ್ ಕಲಾವಿದ. ಕೆಲವೊಮ್ಮೆ ನಾಟಕ, ಸಿನಿಮಾ ಶೂಟಿಂಗ್‌ಗೆಂದು ನನ್ನನ್ನೂ ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಚಿಕ್ಕ ವಯಸ್ಸು, ಮುಗ್ಧ ಮನಸ್ಸಿನ ನನಗೆ ಸಿನಿಮಾರಂಗ ಸೋಜಿಗವೆನಿಸುತ್ತಿತ್ತು. ಚಿತ್ರೀಕರಣಕ್ಕೆ ಹೋದಾಗ ಕೆಲವು ಹೆಂಗಸರು, `ರೀ… ನೋಡಿ ನಿಮ್ ಯಜಮಾನ್ರು ಎಷ್ಟೊಂದು ನಟಿಯರ ಜತೆ ನಟಿಸ್ತಾರೆ… ನಿಮಗೆ ಏನೂ ಅನ್ಸೋಲ್ವೇನ್ರೀ?’ ಅಂತ ಕಿವಿಯಲ್ಲಿ ಊದೋರು! ನಾನು ನೇರವಾಗಿ ಇವರಲ್ಲಿ ಬಂದು, `ರೀ ನೋಡ್ರಿ… ಹೀಗಂತಾರೆ..’ ಎಂದು ಹೇಳುತ್ತಿದ್ದೆ. ನನ್ನ ಮುಗ್ಧತೆಗೆ ನಗುತ್ತಿದ್ದ ಪತಿದೇವರು, `ನೋಡು, ಅವ್ರು ನನ್ ಥರಾನೇ ಹೊಟ್ಟೆಪಾಡಿಗೆ ಬಂದು ಆ್ಯಕ್ಟ್ ಮಾಡ್ತಿದಾರೆ. ಒಳ್ಳೆ ಕುಟುಂಬದಿಂದ ಬಂದಂಥವರು. ಯಾರು ಏನೇ ಹೇಳಿದ್ರೂ ನನ್ನ ಜೀವನದ ಹಿರೋಯಿನ್ ನೀನೇ. ಯಾರು ಏನು ಹೇಳಿದ್ರೂ ತಲೆ ಕೆಡಿಸಿಕೊಳ್ಬೇಡ’ ಅಂತ ಸಮಾಧಾನ ಹೇಳುತ್ತಿದ್ದರು.
ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಯಜಮಾನರ ನಾಟಕವಿತ್ತು. ಆ ನಾಟಕದಲ್ಲಿ ಅವರೊಂದಿಗೆ ನಟಿ ಎಂ ಎನ್ ಲಕ್ಷ್ಮೀದೇವಮ್ಮನವರು ಪಾತ್ರ ಮಾಡಿದ್ದರು. ಆಗ ಸಿನಿಮಾ ಮತ್ತು ನಾಟಕಗಳಲ್ಲಿ ನರಸಿಂಹರಾಜು ಮತ್ತು ಲಕ್ಷ್ಮೀದೇವಮ್ಮನವರದು ಜನಪ್ರಿಯ ಜೋಡಿ. ಅಂದು ನಾಟಕ ಮುಗಿದಾಗ ನಾನು, ಅವರು ಮತ್ತು ಲಕ್ಷ್ಮಿದೇವಮ್ಮನವರು ಕಲಾಕ್ಷೇತ್ರದ ಹೊರಗೆ ನಿಂತಿದ್ದೆವು. ಆ ವೇಳೆ ಅಲ್ಲಿಗೆ ಬಂದ ನಾಲ್ಕೈದು ಅಭಿಮಾನಿ ಹೆಣ್ಣುಮಕ್ಕಳು, `ಸಾರ್ ಸಿನಿಮಾ, ನಾಟಕಗಳಲ್ಲಿ ನೀವೂ ನಿಮ್ಮ ಹೆಂಡ್ತಿ ಎಷ್ಟು ಹೊಂದಾಣಿಕೆಯಿಂದ ನಟಿಸುತ್ತೀರಿ! ಆಹಾ, ನಿಮ್ ಜೋಡಿ ನಿಜವಾಗ್ಲೂ ಅಪರೂಪ ಕಣ್ರೀ…’ ಎಂದರು.

`ನೀವು ಯಾರ ಬಗ್ಗೆ ಮಾತಾಡ್ತಿದ್ದೀರಿ?’ ಎಂದರು ಪತಿ. ಆ ಹೆಣ್ಣುಮಕ್ಕಳು ಲಕ್ಷ್ಮೀದೇವಮ್ಮನವರನ್ನು ತೋರಿಸಿದರು! ಅಲ್ಲೇ ಇದ್ದ ನನಗೆ ನಗು ತಡೆಯಲಾರದೆ ಬಾಯಿಗೆ ಸೆರಗು ಮುಚ್ಚಿಕೊಂಡೆ. ಪಾಪ, ಲಕ್ಷ್ಮೀದೇವಮ್ಮನವರಿಗೂ ನಾಚಿಕೆಯಾದಂತಾಯಿತು. ಕೂಡಲೇ ಪತಿದೇವರು, `ರೀ, ನಮಸ್ಕಾರ. ಅವ್ರು ನನ್ ಜೊತೆ ನಟಿಸುವ ಸಹಕಲಾವಿದೆ ಅಷ್ಟೇ… ನೋಡಿ ನಿಂತಿದ್ದಾರಲ್ಲ, ಇವ್ರೇ ನಮ್ಮನೆಯವ್ರು’ ಎಂದು ನನ್ನ ಕೈಹಿಡಿದು ಪಕ್ಕಕ್ಕೆ ಕರೆದುಕೊಂಡರು. ಆ ಹೆಣ್ಣುಮಕ್ಕಳೂ ನಾಚಿಕೊಂಡು ಹೊರಟುಹೋದರು. ಆಗ ನರಸಿಂಹರಾಜು-ಲಕ್ಷ್ಮೀದೇವಿ ಜನಪ್ರಿಯ ಜೋಡಿಯಾದ್ದರಿಂದ ಜನರು ಇವರನ್ನು ಪತಿ-ಪತ್ನಿಯೆಂದೇ ಭಾವಿಸಿದ್ದರು! ಆತ್ಮೀಯ ಗೆಳತಿಯಾದ ಲಕ್ಷ್ಮೀದೇವಮ್ಮನವರು ಈಗಲೂ ಆ ಸನ್ನಿವೇಶ ನೆನಪು ಮಾಡಿಕೊಂಡು ನಗುತ್ತಾರೆ.

ನರಸಿಂಹರಾಜು ಅವರು ಎರಡು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. `ಚೋರಿ ಚೋರಿ’ (1956) ಮತ್ತು `ಮಿಸ್ ಮೇರಿ’ (1957) ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಮುಂದೊಮ್ಮೆ ಇವರು ಮತ್ತು ರಾಜ್ಕಪೂರ್ ಭೇಟಿಯಾದಾಗ ಆ ಘಟನೆ ನೆನಪು ಮಾಡಿಕೊಂಡು ಮನಸಾರೆ ನಕ್ಕಿದ್ದರು. `ಚೋರಿ ಚೋರಿ’ ಶೂಟಿಂಗ್ ಸಂದರ್ಭದಲ್ಲಿ ರಾಜ್‌ಕಪೂರ್, `ನರಸಿಂಹರಾಜು ಜೀ, ಆಪ್ ಚೆಲೋ ಹಮಾರೆ ಸಾಥ್… ಹಿಂದಿ ಸಿನೆಮಾ ಮೆ ಆಪ್ ಬಡೇ ಸೇ ಬಡೇ ಸ್ಟಾರ್ ಬನ್ಜಾವೋಗೆ’ ಎಂದು ಇವರನ್ನು ಮುಂಬಯಿಗೆ ಆಹ್ವಾನಿಸಿದ್ದರಂತೆ. ಆಗ ಇವರು, `ನಾನು ಕನ್ನಡ ಚಿತ್ರರಂಗದಲ್ಲೇ ಖುಷಿಯಾಗಿದ್ದೇನೆ. ತಮ್ಮ ಆಹ್ವಾನಕ್ಕೆ ಧನ್ಯವಾದ’ ಎಂದು ಹೇಳಿದ್ದರಂತೆ. ಇಂಥ ಅನೇಕ ಸಂಗತಿಗಳು ನನ್ನಲ್ಲಿ ಪತಿಯ ಬಗ್ಗೆ ಹೆಮ್ಮೆ ತಂದಿವೆ.