ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಸಂಚರಿಸುವ ಬಸ್ಸಿನಲ್ಲಿ ನೋಯ್ಡಾದಿಂದ ಶೀಖೋಹಾಬಾದ್‌ಗೆ ಪ್ರಯಾಣಿಸುತ್ತಿದ್ದ ಯುವತಿಯನ್ನು ಬಸ್ ಚಾಲಕ ಹಾಗೂ ಡ್ರೈವರ್ ಸೇರಿ ಬಸ್ಸಿಂದ ಹೊರಗೆ ಎಸೆದಿದ್ದಾರೆ. ಎಸೆಯಲ್ಪಟ್ಟ ರಭಸಕ್ಕೆ ಬಲವಾದ ಗಾಯಗೊಂಡ ಯುವತಿ ರಸ್ತೆಯಲ್ಲೇ ಸಾವನ್ನಪ್ಪಿದ್ದಾಳೆ. ಮೃತ ಪಟ್ಟ ಯುವತಿಯನ್ನು 19 ವರ್ಷದ ಅಂಶಿಕಾ ಯಾದವ್ ಎಂದು ಗುರುತಿಸಲಾಗಿದೆ.
ಮೂತ್ರಪಿಂಡದಲ್ಲಿ ಕಲ್ಲು ಇದ್ದ ಯುವತಿ ತನ್ನ ತಾಯಿಯೊಂದಿಗೆ ಶಿಖೋಹಾಬಾದ್‌ಗೆ ತೆರಳುತ್ತಿದ್ದರು. ಮೂತ್ರಪಿಂಡದ ನೋವಿನಿಂದ ಬಳಲುತ್ತಿದ್ದ ಯುವತಿಯನ್ನು ಕರೋನಾ ರೋಗ ಲಕ್ಷಣವೆಂದು ಭಾವಿಸಿದ ಸಹಪ್ರಯಾಣಿಕರು, ಯುವತಿಯನ್ನು ತಕ್ಷಣವೇ ಬಸ್ಸಿನಿಂದ ಕೆಳಗಿಳಿಸಬೇಕೆಂದು ಕಂಡಕ್ಟರ್‌ನ ಬಳಿ ಹೇಳಿದ್ದಾರೆ.
ತನ್ನ ಮಗಳಿಗೆ ಮೂತ್ರಪಿಂಡದ ಸಮಸ್ಯೆ ಇರುವುದಾಗಿ, ಆ ನೋವಿಗೆ ಆಕೆ ಬಳಲುತ್ತಿರುವುದಾಗಿ ಯುವತಿಯ ತಾಯಿ ಪರಿಪರಿಯಾಗಿ ಬೇಡಿದ್ದರೂ, ಸಹ ಪ್ರಯಾಣಿಕರು ಹಾಗೂ ಕಂಡಕ್ಟರ್ ಮತ್ತು ಬಸ್ ಚಾಲಕ ಅದನ್ನು ಕೇಳುವ ಮನಸ್ಥಿತಿಯಲ್ಲಿರಲಿಲ್ಲ, ಅಶಕ್ತಳಾಗಿದ್ದ ಯುವತಿಯನ್ನು ಮುಟ್ಟಲು ಇಚ್ಛಿಸದ ಕಂಡಕ್ಟರ್ ಹಾಗೂ ಬಸ್ ಡ್ರೈವರ್ ಕಂಬಳಿಯಲ್ಲಿ ಸುತ್ತಿ ಬಸ್ಸಿನಿಂದ ಹೊರಗೆ ಎಸೆದಿದ್ದಾರೆ. ಎಸೆಯಲ್ಪಟ್ಟ ಅರ್ಧ ಗಂಟೆಯ ತರುವಾಯ ಯುವತಿ ರಸ್ತೆಯಲ್ಲೇ ತನ್ನ ಕೊನೆಯುಸಿರೆಳೆದ್ದಾಳೆ.

ಅದಾಗ್ಯೂ, ಮಥುರಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲು ಹಿಂದೆ ಸರಿದ ಪೋಲಿಸರು, ಇದೊಂದು ಸಹಜ ಸಾವೆಂದು ಪ್ರಕರಣದ ಗಂಭೀರತೆಯನ್ನು ತಳ್ಳಿ ಹಾಕಿದ್ದಾರೆ. ಈ ಕುರಿತು ಮಾತನಾಡಿದ ಮಥುರಾ ಪೋಲಿಸ್ ವರಿಷ್ಟಾಧಿಕಾರಿ ಗೌರವ್ ಗ್ರೋವರ್ ಸಂತ್ರಸ್ತೆಯ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ಹೃದಯಾಘಾತವೆಂದು ಉಲ್ಲೇಖಿಸಲಾಗಿದೆ ಹಾಗಾಗಿ ಇದು ಸಹಜ ಸಾವೆಂದು ಷರಾ ಬರೆಯಲಾಗಿದೆ ಎಂದಿದ್ದಾರೆ.
ನಾಗರಿಕ ಸಮಾಜ ತಲೆತಗ್ಗಿಸುವಂತಹ ಈ ಪ್ರಕರಣ ಜೂನ್ 15 ರಂದು ನಡೆದಿದ್ದು, ದೆಹಲಿ ಮಹಿಳಾ ಆಯೋಗ ಉತ್ತರ ಪ್ರದೇಶ ಪೋಲಿಸರಿಗೆ ವರದಿ ನೀಡುವಂತೆ ನೋಟಿಸ್ ಜಾರಿಗೊಳಿಸಿದ ಬಳಿಕ ಪ್ರಕರಣದ ಗಂಭೀರತೆ ಬೆಳಕಿಗೆ ಬಂದಿದೆ. ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್, ಜೂನ್ 15 ರಂದು FIR ದಾಖಲಿಸದ ಕುರಿತು ಸಂಪೂರ್ಣ ವಿವರಣೆ ಕೊಡುವಂತೆ ಮಥುರಾದ ಪೋಲಿಸ್ ವರಿಷ್ಟಾಧಿಕಾರಿಗೆ ಪತ್ರ ಬರೆದಿದ್ದಾರೆ. ತದನಂತರ ಟ್ವೀಟ್ ಮಾಡಿರುವ ಸ್ವಾತಿ ಮಳಿವಾಳ್ ಗಂಭೀರ ಸ್ವರೂಪದ ಈ ಪ್ರಕರಣದ ಮೇಲೆ ತಕ್ಷಣವೇ ಗಮನಹರಿಸಬೇಕೆಂದು ಹೇಳಿದ್ದಾರೆ. ಅಲ್ಲದೆ ಈ ಅಮಾನವೀಯ ಕೊಲೆಗೆ ಕಾರಣಕರ್ತರಾದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.