ಒಂದು ಕಡೆ ಕೈಮೀರಿ ಹೋಗುತ್ತಿರುವ ಕರೋನಾ ಸೋಂಕು ರಾಜ್ಯವನ್ನು ಬೆಚ್ಚಿಬೀಳಿಸುತ್ತಿದ್ದರೆ, ಮತ್ತೊಂದು ಕಡೆ ಸೋಂಕಿನಿಂದ ಸಾವನ್ನಪ್ಪಿದವರ ಮೃತ ದೇಹಗಳ ಸಂಸ್ಕಾರದ ವಿಷಯದಲ್ಲಿ ಸ್ಥಳೀಯ ಆಡಳಿತಗಳ ಆಘಾತಕಾರಿ ವರಸೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಲ್ಲಿ ಜೆಸಿಬಿ ಬಳಸಿ ಎಂಟು ಕೋವಿಡ್ ಸೋಂಕಿತ ಮೃತರ ಶವಗಳನ್ನು ಎಳೆದೊಯ್ದು, ಒಂದೇ ಗುಂಡಿಗೆ ಹಾಕಿ ಮಣ್ಣು ಮುಚ್ಚಿದ ಹೇಯ ಘಟನೆಯ ಬೆನ್ನಲ್ಲೇ, ಯಾದಗಿರಿ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಕೂಡ ಅದೇ ರೀತಿಯ ಅಮಾನುಷ ಘಟನೆಗಳು ವರದಿಯಾಗಿವೆ.
ಬಳ್ಳಾರಿ ಘಟನೆಯ ಹಿನ್ನೆಲೆಯಲ್ಲಿ ಶವ ಸಂಸ್ಕಾರದ ಹೊಣೆ ಹೊತ್ತಿದ್ದ ಸಿಬ್ಬಂದಿಯನ್ನು ಅಮಾನತು ಮಾಡಿ, ಬದಲಿ ಸಿಬ್ಬಂದಿಯನ್ನು ಆ ಕಾರ್ಯಕ್ಕೆ ನೇಮಿಸಲಾಗಿದೆ ಎನ್ನಲಾಗಿದೆ. ಸ್ವತಃ ಸಿಎಂ ಯಡಿಯೂರಪ್ಪ ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಆದರೆ, ಆ ಘಟನೆಯ ಬೆನ್ನಲ್ಲೇ ಯಾದಗಿರಿ ಜಿಲ್ಲೆಯ ಹೊನಗೇರಾ ಗ್ರಾಮದಲ್ಲಿ ಕೋವಿಡ್-19ಗೆ ಬಲಿಯಾದ 48 ವರ್ಷದ ವ್ಯಕ್ತಿಯೊಬ್ಬರ ಮೃತ ದೇಹವನ್ನು ಹಗ್ಗ ಕಟ್ಟಿ ಎಳೆದೊಯ್ದು ಗುಂಡಿಗೆ ಹಾಕಿ ಜೆಸಿಬಿಯಿಂದ ಮಣ್ಣು ಮುಚ್ಚಿದ ಘಟನೆ ನಡೆದಿದೆ. ಸ್ಥಳೀಯರು ಗ್ರಾಮದ ಸ್ಮಶಾನದಲ್ಲಿ ಸೋಂಕಿತನ ಮೃತ ದೇಹ ಹೂಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಸಂಸ್ಕಾರಕ್ಕೆ ನಿಯೋಜಿತರಾಗಿದ್ದವರು ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಘಟನೆಯ ತನಿಖೆಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಧ್ಯದಲ್ಲೇ ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಅಂತಹದ್ದೇ ಮತ್ತೊಂದು ಹೀನಾಯ ಘಟನೆಯ ವೀಡಿಯೋ ವೈರಲ್ ಆಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಜೂ.17ರಂದು ಮೃತಪಟ್ಟಿದ್ದ ಚನ್ನಗಿರಿ ತಾಲೂಕಿನ ಕರೋನಾ ಸೋಂಕಿತ 56 ವರ್ಷದ ಮಹಿಳೆಯ ಶವವನ್ನು ಜೆಸಿಬಿ ಯಂತ್ರದಲ್ಲಿ ಕಸದಂತೆ ಎತ್ತಿಕೊಂಡು ಹೋಗಿ ಗುಂಡಿಗೆ ಹಾಕಿ ಮಣ್ಣು ಮುಚ್ಚಿದ ದೃಶ್ಯಾವಳಿಯ ವೀಡಿಯೋ ಅದು ಎನ್ನಲಾಗಿದೆ. ಶವ ಸಂಸ್ಕಾರಕ್ಕೆ ನಿಯೋಜಿತವಾಗಿದ್ದ ಸಿಬ್ಬಂದಿಯ ಕಣ್ಣೆದುರಲ್ಲೇ ಅವರದೇ ಉಸ್ತುವಾರಿಯಲ್ಲಿ ಈ ಘಟನೆ ನಡೆದಿದೆ. ರುದ್ರಭೂಮಿಯವರೆಗೆ ಮುಕ್ತಿವಾಹಿನಿ ವಾಹನದಲ್ಲಿ ಶವ ತಂದು, ಬಳಿಕ ಆ ವಾಹನದಿಂದ ಜೆಸಿಬಿ ಯಂತ್ರದ ಮೂಲಕ ಶವ ಎತ್ತಿಕೊಂಡು ಹೋಗಿ ಗುಂಡಿಗೆ ಹಾಕಿ ಮಣ್ಣು ಮುಚ್ಚಲಾಗಿದೆ. ಈ ಸಂದರ್ಭದಲ್ಲಿ ಚನ್ನಗಿರಿ ಸಿಪಿಐ, ತಹಶೀಲ್ದಾರ್, ತಾಲೂಕು ವೈದ್ಯಾಧಿಕಾರಿ ಸೇರಿದಂತೆ ಹಲವು ತಾಲೂಕು ಮಟ್ಟದ ಅಧಿಕಾರಿಗಳೂ ಹಾಜರಿದ್ದರು, ಅವರ ಕಣ್ಣೆದುರಲ್ಲೇ ಇಂತಹ ಹೀನಾಯ ಘಟನೆ ನಡೆದಿದೆ ಎನ್ನಲಾಗಿದೆ.
ಪ್ರಮುಖವಾಗಿ ಕೋವಿಡ್-19 ಸೋಂಕು ನಿಯಂತ್ರಣದ ವಿಷಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ತಳಮಟ್ಟದ ಸಿಬ್ಬಂದಿಗೆ ಸೋಂಕು ಹರಡುವಿಕೆಯ ಕುರಿತ ತಪ್ಪುತಿಳಿವಳಿಕೆಗಳು ಮತ್ತು ವೈರಾಣು ಸೋಂಕಿನ ಕುರಿತ ಅನಗತ್ಯ ಭಯವೇ ಇಂತಹ ಹೇಯ ಘಟನೆಗಳಿಗೆ ಕಾರಣ ಎಂಬುದು ನಿರ್ವಿವಾದ. ಸರ್ಕಾರದ ಮಟ್ಟದಲ್ಲಿ ಕೋವಿಡ್-19 ನಿರ್ವಹಣೆಗಾಗಿ ರಚನೆಯಾಗಿರುವ ಉನ್ನತ ಮಟ್ಟದ ಕಾರ್ಯಪಡೆಗಳು, ಆರೋಗ್ಯ ಇಲಾಖೆ, ಸ್ಥಳೀಯ ಜಿಲ್ಲಾಮಟ್ಟದ ಕಾರ್ಯಪಡೆಗಳು ಮತ್ತು ಜಿಲ್ಲಾಡಳಿತಗಳು ಸೋಂಕಿನ ಕುರಿತ ಸರಿಯಾದ ತಿಳಿವಳಿಕೆ ಮೂಡಿಸುವಲ್ಲಿ ಎಷ್ಟು ವಿಫಲವಾಗಿವೆ ಎಂಬುದಕ್ಕೆ ಈ ಸಾಲುಸಾಲು ಘಟನೆಗಳು ನಿದರ್ಶನ.
ಕರೋನಾ ವೈರಸ್ ದಾಳಿಯ ಆರಂಭದ ದಿನಗಳಲ್ಲಿ ಚೆನ್ನೈ ಮತ್ತು ಕೊಲ್ಕತ್ತಾದಲ್ಲಿ ವೈದ್ಯರ ಶವ ಸಂಸ್ಕಾರಕ್ಕೆ ಸ್ಥಳೀಯರು ಅಡ್ಡಿಪಡಿಸಿದ ಘಟನೆಗಳು ವರದಿಯಾಗಿದ್ದವು. ಆ ಬಳಿಕ ರಾಜ್ಯದ ಮಂಗಳೂರಿನಲ್ಲಿಯೂ ಕೋವಿಡ್ ಸೋಂಕಿತ ಮಹಿಳೆಯೊಬ್ಬರ ಶವ ಸಂಸ್ಕಾರದಕ್ಕೆ ಸ್ಥಳೀಯ ಬಿಜೆಪಿ ಶಾಸಕರ ನೇತೃತ್ವದ ಗುಂಪು ಭಾರೀ ಪ್ರತಿಭಟನೆ ನಡೆಸಿ ರಾತ್ರಿಯಿಡೀ ಸಂಸ್ಕಾರಕ್ಕೆ ಅವಕಾಶ ನೀಡದೇ, ಕೊನೆಗೆ ಸ್ಥಳೀಯ ಆಡಳಿತ ಪಕ್ಕದ ಗ್ರಾಮವೊಂದರಲ್ಲಿ ಕ್ರಿಯಾವಿಧಿ ಪೂರೈಸಿದ ಘಟನೆ ಕೂಡ ನಡೆದಿತ್ತು. ಆ ಎಲ್ಲಾ ಪ್ರಕರಣಗಳ ಬಳಿಕವೂ ಜನರಲ್ಲಿ ಇರುವ ಪೂರ್ವಗ್ರಹ, ತಪ್ಪುತಿಳಿವಳಿಕೆ ಮತ್ತು ಅನಗತ್ಯ ಭಯವನ್ನು ಹೋಗಲಾಡಿಸುವಲ್ಲಿ ಆಡಳಿತ ಮತ್ತು ಮಾಧ್ಯಮಗಳ ವೈಫಲ್ಯಕ್ಕೆ ಇದೀಗ ಈ ಸರಣಿ ಘಟನೆಗಳು ಕೂಡ ಸಾಕ್ಷಿಯಾಗಿವೆ.
ಕೊವಿಡ್-19 ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯ ದೇಹದಿಂದ ವೈರಾಣುಗಳು ಹರಡುತ್ತವೆಯೇ? ದೇಹವನ್ನು ಎಲ್ಲಾ ಮುಂಜಾಗ್ರತೆಯೊಂದಿಗೆ ಸಂಪೂರ್ಣ ಸುರಕ್ಷಿತ ಸಾಧನ-ಸಲಕರಣೆಗಳೊಂದಿಗೆ ಸುತ್ತಿ, ಮುಚ್ಚಿಟ್ಟಿದ್ದರೂ ವೈರಾಣು ಪ್ರಸರಣ ಸಾಧ್ಯವೆ? ಮೃತ ವ್ಯಕ್ತಿಯ ದೇಹದಲ್ಲಿ ವೈರಾಣು ಜೀವಂತವಾಗಿ ಇರುತ್ತದೆಯೇ? ಇದ್ದರೆ ಎಷ್ಟು ಸಮಯದವರೆಗೆ ಸಕ್ರಿಯವಾಗಿರುತ್ತದೆ? ಮೃತ ದೇಹಗಳನ್ನು ಸಂಸ್ಕಾರ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರದ ಕೋವಿಡ್-19 ಮಾರ್ಗದರ್ಶಿ ಸೂಚನೆಗಳು ನೀಡಿರುವ ಮಾನದಂಡಗಳೇನು? ಆ ಮಾನದಂಡಗಳಲ್ಲಿ ಮೃತ ದೇಹವನ್ನು ನಿರ್ವಹಿಸಲು ನೀಡಿರುವ ಮಾರ್ಗಸೂಚಿ ಏನು? ಎಂಬ ಬಗ್ಗೆ ಜಿಲ್ಲಾಡಳಿತಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಎಷ್ಟು ಅಜ್ಞಾನ ಮತ್ತು ಅವಜ್ಞೆ ಹೊಂದಿದ್ದಾರೆ ಎಂಬುದಕ್ಕೂ ಈ ಘಟನೆಗಳು ನಿದರ್ಶನವಾಗಿವೆ.
ಹಾಗಾದರೆ ನಿಜಕ್ಕೂ ಕೋವಿಡ್-19 ಸೋಂಕಿತರ ಮೃತ ದೇಹದ ನಿರ್ವಹಣೆಯ ವಿಷಯದಲ್ಲಿ ಜನಸಾಮಾನ್ಯರು ಮತ್ತು ನಿಯೋಜಿತ ಸಿಬ್ಬಂದಿ ತಿಳಿದುಕೊಳ್ಳಬೇಕಿರುವುದು ಏನು? ಎಂಬ ಕುತೂಹಲ ಸಹಜ. ಆ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೋವಿಡ್-19 ಕುರಿತ ಪರಿಣಿತರು ನೀಡಿರುವ ಸಲಹೆ-ಸೂಚನೆಗಳನ್ನು ಗಮನಿಸುವುದಾದರೆ; ಹಲವು ವಿಷಯಗಳಲ್ಲಿ ನಮ್ಮಲ್ಲಿ ತಪ್ಪು ಕಲ್ಪನೆಗಳು ಮತ್ತು ಅನಗತ್ಯ ಭಯ ಇರುವುದು ಗೊತ್ತಾಗದೇ ಇರದು. ಅದರಲ್ಲೂ ಮುಖ್ಯವಾಗಿ ಇಂತಹ ಸೂಕ್ಷ್ಮ ವಿಷಯದಲ್ಲಿ ಜನರಲ್ಲಿ ಅರಿವು ಮೂಡಿಸಬೇಕಾದ ಮಾಧ್ಯಮಗಳು(ಟಿವಿ ಮಾಧ್ಯಮ) ಅಂತಹ ಹೊಣೆಗಾರಿಕೆ ಮರೆತು ಸೋಂಕಿನ ಬಗ್ಗೆ ಊಹಾಪೋಹ ಮತ್ತು ಭೀತಿ ಹರಡುವುದರಲ್ಲೇ ನಿರತವಾಗಿರುವಾಗ ಇಂತಹ ಭೀತಿ ಮತ್ತು ಭ್ರಮೆಗಳು ಸಹಜ ಕೂಡ!
ವಾಸ್ತವವಾಗಿ ಕೋವಿಡ್-19ರ ಸೋಂಕಿತರ ಮೃತ ದೇಹಗಳ ನಿರ್ವಹಣೆಯ ಕುರಿತ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರದ ಆರೋಗ್ಯ ಇಲಾಖೆಗಳು ಹಲವು ಸುತ್ತಿನ ಸುತ್ತೋಲೆಗಳನ್ನು, ಮಾರ್ಗಸೂಚಿಗಳನ್ನು ಹೊರಡಿಸಿವೆ. ಆ ಸೂಚನೆಗಳ ಪ್ರಕಾರ, ‘ಮೃತ ದೇಹವನ್ನು ಸಂಪೂರ್ಣ ಸುರಕ್ಷಿತವಾದ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿ, ಸೀಲ್ ಮಾಡಿದ ಸ್ಥಿತಿಯಲ್ಲಿ ಇಡಬೇಕು. ಜೊತೆಗೆ ಪ್ಲಾಸ್ಟಿಕ್ ಬ್ಯಾಗಿನ ಹೊರಭಾಗವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು. ಮೃತ ದೇಹದಿಂದ ಯಾವುದೇ ರೀತಿಯಲ್ಲೂ ವೈರಾಣು ಹರಡುವುದಿಲ್ಲ. ಆದರೆ, ಒಂದು ವೇಳೆ ಶವಪರೀಕ್ಷೆಯ ವೇಳೆ ಶ್ವಾಸಕೋಶದ ದ್ರವ ಹೊರಚೆಲ್ಲಿದ್ದರೆ ಅದರಿಂದ ಕೆಲ ಸಮಯದವರೆಗೆ ವೈರಾಣು ಹರಡುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಶವ ಸಂಸ್ಕಾರ ನಿರ್ವಹಿಸಬಹುದು. ಶವವನ್ನು ಮುಟ್ಟಬಾರದು, ದೂರದಿಂದಲೇ ಸಂಬಂಧಿಕರು ನೋಡಬಹುದು. ಸಂಬಂಧಿಕರ ದರ್ಶನಕ್ಕೆ ಮುಖ ಭಾಗದಲ್ಲಿ ಬ್ಯಾಗ್ ತೆಗೆದೂ ಅವಕಾಶ ನೀಡಬಹುದು. ಹೂ, ಹಾರ ಹಾಕಬಹುದು, ಶವ ಸ್ಪರ್ಶಿಸದೆ, ನಿಗದಿತ ಅಂತರದಲ್ಲಿ ನಡೆಸುವ ಶವ ಸಂಸ್ಕಾರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಬಹುದು’. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಚ್ 15ರ ಮಾರ್ಗಸೂಚಿ ಕೂಡ ಇದನ್ನೆ ಸ್ಪಷ್ಟಪಡಿಸಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯ ಮಾರ್ಗಸೂಚಿಗಳು ಕೂಡ ಇದನ್ನೇ ಹೇಳಿದ್ದು, ‘ಈ ಕರೋನಾ ವೈರಾಣು ಮೃತ ದೇಹಗಳಿಂದ ಹರಡುವುದಿಲ್ಲ. ಕೇವಲ ಶ್ವಾಸಕೋಶದಲ್ಲಿ ಇರುವ ವೈರಾಣು, ವ್ಯಕ್ತಿ ಉಸಿರಾಡುವಾಗ ಹೊರಹೊಮ್ಮುವ ಸೂಕ್ಷ್ಮ ದ್ರವಹನಿ(ಡ್ರಾಪ್ಲೆಟ್ಸ್)ಗಳ ಮೂಲಕ ಮಾತ್ರ ಹರಡುತ್ತದೆ. ಕೆಮ್ಮುವುದು, ಸೀನುವುದು ಕೂಡ ವೈರಾಣು ಹರಡುವ ವಿಧಾನ. ಆದರೆ, ಸತ್ತ ವ್ಯಕ್ತಿಯ ಉಸಿರಾಟ ಕ್ರಿಯೆಯೇ ಮೊದಲು ನಿಂತುಹೋಗುವುದರಿಂದ ಆತನ ಬಾಯಿ, ಮೂಗು, ಕಣ್ಣಿನ ಮೂಲಕ ವೈರಾಣು ಹೊರಬರುವುದಿಲ್ಲ. ಹಾಗಾಗಿ ಮೃತ ದೇಹಗಳ ಸಂಸ್ಕಾರ, ಸಾಗಣೆಯ ವಿಷಯದಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಿ ಮುಂಜಾಗ್ರತೆ ವಹಿಸಿದರೆ ಯಾವುದೇ ಭಯ ಬೇಡ’ ಎಂದು ಹೇಳಿದೆ.
ಕೋವಿಡ್ ರೋಗಿಗಳ ಶವಸಂಸ್ಕಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟಿಗೆ ಮುಂಬೈ ಮಹಾನಗರ ಪಾಲಿಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಕೂಡ, ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನೇ ಉಲ್ಲೇಖಿಸಿ, ‘ಶವಗಳಿಂದ ಕೋವಿಡ್-19 ವೈರಾಣು ಸೋಂಕು ಹರಡುವುದಿಲ್ಲ’ ಎಂದು ಹೇಳಿದೆ.
ಕರೋನಾ ಸೋಂಕಿತರ ಶವಗಳ ವಿಷಯದಲ್ಲಿ ದೇಶದ ಉದ್ದಗಲಕ್ಕೂ ವಿಚಿತ್ರ ಭಯ ಮತ್ತು ತಪ್ಪು ತಿಳಿವಳಿಕೆ ತೀರಾ ಅಮಾನುಷ ವರ್ತನೆಗಳಿಗೆ ಕಾರಣವಾಗಿದೆ. ವೈದ್ಯಕೀಯ ಸಿಬ್ಬಂದಿಯೂ ಸೇರಿದಂತೆ ಸೋಂಕಿತರ ಮೃತ ಶರೀರವನ್ನು ಸ್ಮನಾಶಗಳಲ್ಲಿ ಅಂತ್ಯ ಸಂಸ್ಕಾರ ಮಾಡಲು ಸ್ಥಳೀಯರು ವಿರೋಧಿಸುವುದರಿಂದ ಹಿಡಿದು, ಸ್ವತಃ ಶವ ನಿರ್ವಹಣೆಗೆ ನಿಯೋಜಿತರಾದ, ತರಬೇತಾದ ಸಿಬ್ಬಂದಿಯೇ ಶವಗಳನ್ನು ಹೀನಾಯವಾಗಿ ನಿರ್ವಹಿಸುವ ಬಳ್ಳಾರಿ, ಚನ್ನಗಿರಿ, ಯಾದಗಿರಿಯಂತಹ ಘಟನೆಗಳವರೆಗೆ ತೀರಾ ನಾಗರಿಕ ಸಮಾಜವೇ ತಲೆತಗ್ಗಿಸುವಂತ ಮತ್ತು ವಿಜ್ಞಾನವೇ ಬೆಚ್ಚುವಂತಹ ವರ್ತನೆಗಳು ನಡೆಯುತ್ತಿವೆ.
ಆ ಹಿನ್ನೆಲೆಯಲ್ಲಿ ನೋಡಿದರೆ, ಕೆಲವು ದಿನಗಳ ಹಿಂದೆ ‘ದ ಹಿಂದೂ’ನಲ್ಲಿ ಪ್ರಕಟವಾಗಿದ್ದ ಒಂದು ವಿಶ್ಲೇಷಣೆ ಅತ್ಯಂತ ಸಕಾಲಿಕ. ಕೊಲ್ಕತ್ತಾದ ಮಾಲಿಕ್ಯುಲಾರ್ ಬಯೋಲಜಿಸ್ಟ್ ಅನಿರ್ಬನ್ ಮಿತ್ರಾ ಅವರ ಆ ವಿಶ್ಲೇಷಣೆಯ ಪ್ರಕಾರ, ‘ಜೀವಕೋಶವೇ ಇರದ, ಕೇವಲ ಆರ್ ಎನ್ ಎ ಜೀವತಂತು ಹೊಂದಿರುವ ಕೋವಿಡ್ ವೈರಾಣು, ಸಕ್ರಿಯವಾಗಬೇಕಾದರೆ, ಅದಕ್ಕೆ ಮನುಷ್ಯ ಅಥವಾ ಇನ್ನಾವುದೇ ಪ್ರಾಣಿಯ ಜೀವಕೋಶದ ಆಶ್ರಯ ಬೇಕು. ಜೀವ ಕೋಶದ ಆಶ್ರಯವಿಲ್ಲದ ವೈರಾಣು, ಎಲ್ಲಾ ಮಾಹಿತಿ ಹೊಂದಿದ್ದರೂ ಅದನ್ನು ಸಕ್ರಿಯಗೊಳಿಸಲಾಗದ ಪೆನ್ ಡ್ರೈವ್ ಇದ್ದಂತೆ. ಕಂಪ್ಯೂಟರಿಗೆ ಸಂಪರ್ಕಿಸದೆ ಪೆನ್ ಡ್ರೈವ್ ಹೇಗೆ ನಿಷ್ಪ್ರಯೋಜಕವೋ ಹಾಗೇ ಈ ವೈರಸ್ ಕೂಡ ಬೇರೊಂದು ಜೀವಿಯ ಜೀವಕೋಶದ ಸಂಪರ್ಕವಿಲ್ಲದೆ ನಿಷ್ಕ್ರಿಯ. ಜೀವಕೋಶದಲ್ಲಿ ಮೈಟೋಕಾಂಡ್ರಿಯಾ ಉತ್ಪಾದಿಸುವ ಎಟಿಪಿ ಶಕ್ತಿ ಬಳಸಿಕೊಂಡು ಈ ವೈರಾಣು ಸಕ್ರಿಯವಾಗುತ್ತದೆ ಮತ್ತು ಸಂತಾನೋತ್ಪತ್ತಿ ಮಾಡುತ್ತದೆ. ಆ ಮೂಲಕ ಅದು ಮನುಷ್ಯನ ದೇಹದಲ್ಲಿ ಸ್ಫೋಟಕ ಪ್ರಮಾಣದಲ್ಲಿ ಹೆಚ್ಚುತ್ತದೆ’.
ಆದರೆ, ‘ಮೃತ ವ್ಯಕ್ತಿಯಲ್ಲಿ ಜೀವಕೋಶಗಳು ಸಾಯುವುದರಿಂದ, ಅಲ್ಲಿ ಎಟಿಪಿ ಶಕ್ತಿ ಉತ್ಪಾದನೆ ಕೂಡ ನಿಂತುಹೋಗುತ್ತದೆ. ಆಗ ಸ್ವಿಚ್ ಆಫ್ ಆದ ಕಂಪ್ಯೂಟರಿನಲ್ಲಿ ಪೆನ್ ಡ್ರೈವ್ ಕೂಡ ನಿಷ್ಕ್ರಿಯಗೊಳ್ಳುವಂತೆ ವೈರಾಣು ಕೂಡ ಸತ್ತುಹೋಗುತ್ತದೆ. ಅಷ್ಟಾಗಿಯೂ ಕೆಲವು ವೈರಾಣುಗಳು ಸತ್ತ ಜೀವಕೋಶಗಳಿಂದ ಹೊರಬಂದರೂ, ಮುಖ್ಯವಾಗಿ ಶ್ವಾಸಕೋಶದ ದ್ರವಕಣಗಳ ಮೂಲಕ ಮಾತ್ರ ಈ ವೈರಾಣು ದೇಹದಿಂದ ಹೊರಬರುವುದರಿಂದ, ಮೃತ ವ್ಯಕ್ತಿ ಉಸಿರಾಡುವ, ಕೆಮ್ಮುವ ಅಥವಾ ಸೀನುವ ಪ್ರಮೇಯವೇ ಇಲ್ಲದ್ದರಿಂದ ಅವು ದೇಹದಿಂದ ಹೊರಬರಲಾರವು. ವ್ಯಕ್ತಿ ಮೃತಪಟ್ಟ ನಂತರ ದೇಹದ ವಿವಿಧ ಭಾಗಗಳಲ್ಲಿ, ಅಥವಾ ಶವಪರೀಕ್ಷೆಯ ವೇಳೆ ಶ್ವಾಸಕೋಶದ ದ್ರವ ಹೊರಹೊಮ್ಮಿದರೆ ವೈರಾಣು ಹರಡುವ ಸಾಧ್ಯತೆ ಇದೆ(ಕೆಲ ಸಮಯದವರೆಗೆ). ಹಾಗಾಗಿಯೇ ಮೃತ ದೇಹಗಳನ್ನು ಸುರಕ್ಷಿತವಾಗಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಇರಿಸಲಾಗುತ್ತದೆ. ಆದರೆ, ಹಾಗಾಗಿ ಮೃತ ದೇಹವನ್ನು ಕೈಯಿಂದ ಸ್ಪರ್ಶಿಸದೆ ನಿಭಾಯಿಸುವುದರಿಂದ ಯಾವುದೇ ಅಪಾಯವಿಲ್ಲ ಎಂದು ಅನಿರ್ಬನ್ ಅಭಿಪ್ರಾಯಪಟ್ಟಿದ್ದಾರೆ.