ರಾಷ್ಟ್ರೀಯ ಭದ್ರತೆಯ ಕಾರಣದಿಂದ ಈಗಾಗಲೇ ಚೀನಾದ 59 ಮೊಬೈಲ್ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಎಲ್ಲಾ ಹೆದ್ದಾರಿ ಯೋಜನೆಗಳಲ್ಲಿ ಚೈನಾ ಮೂಲದ ಕಂಪೆನಿಗಳಿಗೆ ನಿರ್ಬಂಧ ಹೇರುವುದಾಗಿ ಹೇಳಿದ್ದಾರೆ. ಜಂಟಿ ಸಂಸ್ಥೆಗಳೂ ಇದರಿಂದ ಹೊರತಲ್ಲ ಎಂದಿದ್ದಾರೆ.
ಗಲ್ವಾನ್ ಸಂಘರ್ಷದ ಬಳಿಕ ಚೀನಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮನಸ್ಸು ಮಾಡಿರುವ ಭಾರತ ಸರ್ಕಾರ ಎಲ್ಲಾ ರೀತಿಯ ಮೈಕ್ರೋ, ಸಣ್ಣ ಹಾಗೂ ಮಧ್ಯಮ ಎಂಟರ್ಪ್ರೈಸಸ್ ಗಳಲ್ಲಿ ಚೀನಾ ಕಂಪೆನಿಗಳ ಅನುಪಸ್ಥಿತಿ ಇರುವಂತೆ ನೋಡಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಚೀನಾ ಕಂಪೆನಿಗಳಿಗೆ ರಸ್ತೆ ನಿರ್ಮಾಣಕ್ಕಾಗಿ ಅನುಮತಿ ನೀಡುವುದಿಲ್ಲ. ಚೀನಿ ಕಂಪೆನಿಗಳು ಜಂಟಿ ಸಂಸ್ಥೆಯ ಮೂಲಕ ಬಂದರೂ ನಾವು ಅದಕ್ಕೆ ಅನುಮತಿ ನೀಡುವುದಿಲ್ಲವೆಂಬ ಧೃಡವಾದ ನಿರ್ಧಾರ ಕೈಗೊಂಡಿದ್ದೇವೆಂದು ಸಚಿವ ಗಡ್ಕರಿ ಹೇಳಿದ್ದಾರೆ.
BSNL ಹಾಗೂ MTNL ಕೂಡಾ ಚೀನಾ ಕಂಪೆನಿಗಳನ್ನು ಬಹಿಷ್ಕರಿಸಲು ಹೊರಟಿದ್ದು, 4G ಅಪ್ಗ್ರೇಡ್ ಮಾಡುವ ಟೆಂಡರ್ಗಳನ್ನು ಟೆಲಿಕಾಂ ಇಲಾಖೆಯ ನಿರ್ದೇಶನದ ಮೇರೆಗೆ ರದ್ದುಗೊಳಿಸಿದೆ. ಮುಂದಿನ ಎರಡು ವಾರಗಳಲ್ಲಿ ಹೊಸ ಟೆಂಡರ್ ಕರೆಯಬಹುದು ಎಂದು ಮೂಲಗಳು ತಿಳಿಸಿವೆ. ಸದ್ಯ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ಚೀನಾ ಮೂಲದ ಹುವೈ ಮತ್ತು ZTE ಕಂಪೆನಿಗಳಿಗೆ ಇದರಿಂದ ಭಾರೀ ಹಿನ್ನಡೆಯಾಗಲಿದೆ.
Also Read: ದೇಶದ ಕಣ್ಗಾವಲು ಮಾರುಕಟ್ಟೆಯಲ್ಲಿ ಇನ್ನೂ ಮುಂಚೂಣಿಯಲ್ಲಿರುವ ಚೀನಾದ ಆ್ಯಪ್ಗಳು