ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲವು ನಿರ್ಣಯ ತೆಗೆದುಕೊಳ್ಳಲಾಗಿದೆ.
ನಿರ್ಣಯದಂತೆ ಕೋವಿಡ್ 19 ಸೋಂಕಿತ ರೋಗಿಗಳನ್ನು ಶೀಘ್ರವಾಗಿ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಲು (ಸೆಂಟ್ರಲೈಜ್ ಬೆಡ್ ಅಲೋಕೇಷನ್ ಸಿಸ್ಟಂ) ತಂತ್ರಾಂಶವನ್ನು ಜಾರಿಗೊಳಿಸಲಾಗುತ್ತದೆ.
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಗಳನ್ನು 250ಕ್ಕೆ ಹೆಚ್ಚಿಸಲು ಮತ್ತು ಕೋವಿಡ್‌ನಿಂದ ಮೃತರಾದ ದೇಹಗಳನ್ನು ಸಾಗಿಸಲು ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ. ಆಂಬ್ಯುಲೆನ್ಸ್ ಇರುವ ಸ್ಥಳವನ್ನು ಗುರುತಿಸಲು ಮತ್ತು ಅವುಗಳ ಚಲನವಲನಗಳ ಸಲುವಾಗಿ ಪೊಲೀಸ್ ಕಂಟ್ರೋಲ್ ರೂಂ ವೈರ್‌ಲೆಸ್ ಸೇವೆಯನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ಕೋವಿಡ್ 19 ರ ನಿಯಂತ್ರಣದಲ್ಲಿ ಕೆಲಸ ಮಾಡುವ ಎಲ್ಲಾ ನೋಡಲ್ ಅಧಿಕಾರಿಗಳ ವಿವರಗಳನ್ನು ಪತ್ರಿಕೆಗಳ ಜಾಹೀರಾತು ಮೂಲಕ ಸಾರ್ವಜನಿಕರಿಗೆ ಪ್ರಚುರಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಅಲ್ಲದೆ ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ಆಯುಕ್ತರ ಮೇಲೆ ಇರುವ ಕೆಲಸದ ಹೊರೆಯನ್ನು ಕಡಿಮೆ ಗೊಳಿಸಲು ಬಿಬಿಎಂಪಿ ಯಲ್ಲಿ 8 ವಲಯಗಳ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಕೆಲಸ ಗಳನ್ನು ನೀಡಲು ಮತ್ತು ಅವರ ಜೊತೆ ಕೆಲಸ ಮಾಡಲು ಕೆಎಎಸ್ ಅಧಿಕಾರಿಗಳನ್ನು ನಿಯೋಜಿಸುವಂತೆ ನಿರ್ಧರಿಸಲಾಗಿದೆ.
ವೈದ್ಯರ ಕೊರತೆ ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಎಎಸ್‌ಐ ವೈದ್ಯರನ್ನು ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಲು ಮತ್ತು ಪರೀಕಾರ್ತಿ ತಹಶೀಲ್ದಾರ್‌ಗಳನ್ನು ಕೋವಿಡ್ ಆಸ್ಪತ್ರೆಗಳು/ಕೇರ್ ಸೆಂಟರ್‌ಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ಹಾಕಲು ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಲಭ್ಯವಿರುವ ಕಲ್ಯಾಣ ಮಂಟಪಗಳು, ಹಾಸ್ಟೆಲ್‌ಗಳು ಹಾಗೂ ಇನ್ನಿತರೆ ಸಂಸ್ಥೆಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಮೀಸಲಿಡಲು ಹಾಗೂ ರೈಲ್ವೆ ಇಲಾಖೆಯಿಂದ ಬೆಡ್‌ಗಳಿರುವ ಕೋಚ್ ಪಡೆಯಲು ಅಗತ್ಯ ಇರುವ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕೋವಿಡ್‌ನಿಂದ ಮೃತರಾದವರ ಅಂತ್ಯಕ್ರಿಯೆಯನ್ನು ನಡೆಸಲು ಪ್ರತ್ಯೇಕ ತಂಡ ಗಳನ್ನು ರಚಿಸುವುದು ಹಾಗೂ ಅಂತ್ಯಕ್ರಿಯೆ ಸಲುವಾಗಿ ಇನ್ನೂ ಹೆಚ್ಚಿನ ಜಾಗಗಳನ್ನು ಗುರುತಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಮೆಡಿಕಲ್ ಕಾಲೇಜ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳ ಪೈಕಿ ಶೇ.50 ರಷ್ಟನ್ನು ಕೋವಿಡ್ ರೋಗಿಗಳ ಸಲುವಾಗಿ ಮೀಸಲಿಡಲು ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಲಾಗಿದೆ.