ಜೂನ್ 25ರಿಂದ SSLC ಪರೀಕ್ಷೆ ಆರಂಭ ಆಗುತ್ತಿದೆ. ರಾಜ್ಯ ಸರ್ಕಾರವೂ ನಾವು ಪರೀಕ್ಷೆ ನಡೆಸುವುದಕ್ಕೆ ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಅದರಲ್ಲೂ ಶಿಕ್ಷಣ ಸಚಿವ ಸುರೇಶ್ ಕುಮಾರ್, ಹಠಕ್ಕೆ ಬಿದ್ದವರಂತೆ ತಜ್ಞರ ಸಲಹೆಯನ್ನು ಧಿಕ್ಕರಿಸಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಪರೀಕ್ಷೆ ಬರೆಯುವ ವೇಳೆ ಏನಾಗುತ್ತೋ ಏನೋ ಎನ್ನುವ ಆತಂಕದಲ್ಲಿದ್ದಾರೆ. ಆದರೆ, ಸರ್ಕಾರ ಮಾತ್ರ ಪೋಷಕರ ಹಿತ ಕಾಪಾಡುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಸುರೇಶ್ ಕುಮಾರ್ ಕಿವಿ ಹಿಂಡುವ ಕೆಲಸ ಮಾಡಿಲ್ಲ. ಆದರೆ ಆರ್ ಅಶೋಕ್ SSLC ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವರ ಜೊತೆಗೆ ಚರ್ಚೆ ಮಾಡುತ್ತೇವೆ ಎಂದಿರುವುದು SSLC ಮಾಡಬೇಕೋ ಬೆಡವೋ ಎನ್ನುವುದು ಇನ್ನೂ ಕೂಡ ಸರ್ಕಾರದ ಮಟ್ಟದಲ್ಲೇ ಗೊಂದಲದಲ್ಲಿದೆ ಎನ್ನುವುದನ್ನು ಸಾಬೀತು ಮಾಡುವಂತಿದೆ.
ಸರ್ಕಾರ ಹಾಗೂ ಶಿಕ್ಷಣ ಸಚಿವರಿಗೆ ಎಚ್ಚರಿಕೆ..!
SSLC ಪರೀಕ್ಷೆ ಬಗ್ಗೆ ಸುರುವಾಗಿರುವ ಆತಂಕದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ, ಸರ್ಕಾರದ ಕಟು ನಿರ್ಧಾರವನ್ನು ವಿರೋಧಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಗುರುವಾರದಿಂದ ರಾಜ್ಯದ್ಯಂತ SSLC ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ, ತನ್ನ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು. ಪರೀಕ್ಷೆ ನಡೆಸಲೇಬೇಕು ಎಂದಾದರೆ ಅಕ್ಟೋಬರ್ ತಿಂಗಳವರೆಗೆ ಕಾಯ್ದು ನಡೆಸಲಿ ಎಂದಿದ್ದಾರೆ. ಕರೋನಾ ಸೋಂಕು ಏರುಗತಿಯಲ್ಲಿ ಸಾಗುತ್ತಿದ್ದು, ಸಾವು ನಗಾರಿ ಬಾರಿಸುತ್ತಿರುವ ಇಂತಹ ಆತಂಕದ ಸಂದರ್ಭದಲ್ಲಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಪರೀಕ್ಷಾ ಸಿಬ್ಬಂದಿ ಸೇರಿದಂತೆ 24 ಲಕ್ಷ ಮಂದಿಯ ಜೀವ ಮತ್ತು ಭವಿಷ್ಯದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಕರೋನಾ ಸೋಂಕು ಸಮುದಾಯಕ್ಕೆ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಪಂಜಾಬ್ ರಾಜ್ಯದಲ್ಲಿ SSLC ಪರೀಕ್ಷೆಯನ್ನು ರದ್ದುಪಡಿಸಿ, ಈ ಹಿಂದಿನ ಪರೀಕ್ಷಗಳ ಆಧಾರದಲ್ಲಿ ಉತ್ತೀರ್ಣಗೊಳಿಸಲಾಗಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು. ಪರೀಕ್ಷೆಗಳನ್ನು ನಡೆಸಲೇಬೇಕು ಎಂದು ಹಠಕ್ಕೆ ಬಿದ್ದು ಅವಘಢಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ನೇರಹೊಣೆ ಎಂದು ಎಚ್ಚರಿಕೆ ನೀಡುತ್ತಿದ್ದೇನೆ. ಈ ಬಗ್ಗೆ ಸರ್ಕಾರ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.
ಏನಾದರೂ ಅವಗಡಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡುತ್ತೇನೆ. ಸರ್ಕಾರ ಈ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು.
4/4— H D Kumaraswamy (@hd_kumaraswamy) June 23, 2020
ಶಿಕ್ಷಣ ಸಚಿವರ ಹಠ, ಸಿಎಂಗೂ ಪೀಕಲಾಟ..!
ಜೂನ್ 25 ರಿಂದ ಆರಂಭವಾಗುತ್ತಿರುವ SSLC ಪರೀಕ್ಷೆ ನಡೆಸಬಾರದು ಎಂದು ರಾಜ್ಯಾದ್ಯಂತ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳೂ ಕೂಡ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿವೆ. ಈ ಬಗ್ಗೆ ಶಿಕ್ಷಣ ತಜ್ಞರೂ ಕೂಡ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವುದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ದಿಗಿಲುಗೊಳ್ಳುವಂತೆ ಮಾಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ಬ್ಲೂ ಪ್ರಿಂಟ್ (ನೀಲಿ ನಕ್ಷೆ) ಕೊಡಿ ಎಂದು ಶಿಕ್ಷಣ ಸಚಿವ ಸಚಿವ ಸುರೇಶ್‌ಕುಮಾರ್ ಬಳಿ ಕೇಳಿದ್ದಾರೆ.
ಒಂದು ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದೂವರೆ ಗಂಟೆ ಮೊದಲೆ ಏಕೆ ಪ್ರವೇಶ ಮಾಡಬೇಕು..? ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜವಾಬ್ದಾರಿ ಹೇಗೆ ತೆಗೆದುಕೊಳ್ಳಲಾಗಿದೆ..? ಪರೀಕ್ಷೆ ಮುಗಿದ ಬಳಿಕ ಪರೀಕ್ಷಾ ಕೇಂದ್ರಗಳಲ್ಲಿ ಇಲಾಖೆ ಏನು ಮಾಡುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆ ಉಚಿತ ಬಸ್ ವ್ಯವಸ್ಥೆ ಮಾಡಿದೆ. ಇನ್ನೂ ಯಾವ್ಯಾವ ಇಲಾಖೆಗಳು ಶಿಕ್ಷಣ ಇಲಾಖೆಗೆ ಸಾಥ್ ನೀಡುತ್ತಿವೆ..? ಈ ಬಗ್ಗೆ ಸಂಪೂರ್ಣ ಬ್ಲೂ ಪ್ರಿಂಟ್ (ನೀಲಿ ನಕ್ಷೆ) ಸಿದ್ಧಪಡಿಸಿ ಸಿಎಂ ಕಚೇರಿಗೆ ಕಳುಹಿಸಿಕೊಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದು ಬಿಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಇದೀಗ ರಾಜ್ಯದಲ್ಲಿ ಕರೋನಾ ಸೋಂಕು ಉತ್ತುಂಗದ ಕಡೆಗೆ ಸಾಗುತ್ತಿದೆ. ಕರೋನಾ ಯಾರಿಗೆ ಬಂದಿದೆ ಎಂದು ತಪಾಸಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸಾಮೂಹಿಕವಾಗಿ ಎಲ್ಲರಿಗೂ ತಪಾಸಣೆ ನಡೆಸಿದರೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿಯೂ ಸರ್ಕಾರಕ್ಕಿದೆ. ಅದೇ ಕಾರಣದಿಂದಾಗಿ ಕೇವಲ ಸೋಂಕಿನ ಲಕ್ಷಣ ಇದ್ದವರನ್ನು ಮಾತ್ರ ತಪಾಸಣೆ ಮಾಡುತ್ತಿದೆ. ಆದರೂ ಲಾಕ್‌ಡೌನ್ ತೆರವು ಮಾಡಿದ ಬಳಿಕ ಸೋಂಕಿನ ಪ್ರಮಾಣ ದೀಢೀರ್ ಏರಿಕೆ ಆಗುತ್ತಿದೆ. ಸರ್ಕಾರ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುತ್ತಿದ್ದರೂ ಸೋಂಕು ಮತ್ತು ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಆಗುತ್ತಲೇ ಇದೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ತೇಪೆ ಹಾಕುವ ಹೇಳಿಕೆ ಕೊಡುತ್ತಾ ಕಾಲ ಕಳೆಯುತ್ತಿದೆ.

ದ್ವಿತೀಯ ಪಿಯುಸಿ ಒಂದೇ ಒಂದು ವಿಷಯದ ಪರೀಕ್ಷೆಯನ್ನು ಕಳೆದ ವಾರ ನಡೆಸಿತ್ತು. ಆದರೆ ಎಲ್ಲಾ ವಿದ್ಯಾರ್ಥಿಗಳು ಗುಂಪುಗೂಡಿದ್ದರು, ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇರಲಿಲ್ಲ. ಕೆಲವು ಕಡೆ ಸ್ಯಾನಿಟೈಸರ್ ವ್ಯವ್ಯಸ್ಥೆಯೂ ಇರಲಿಲ್ಲ. ಸೋಂಕು ಬಂದಿದ್ದ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಾಳೆ ಎನ್ನುವ ಸುದ್ದಿ ಜನರ ಆತಂಕಕ್ಕೆ ಕಾರಣವಾಗಿತ್ತು.
ಕಳೆದ 3 ತಿಂಗಳಿಂದ ಕರೋನಾ ಸಂಕಷ್ಟದಲ್ಲಿ ವಿದ್ಯಾರ್ಥಿಗಳು ಓದುವುದನ್ನು ನಿಲ್ಲಿಸಿದ್ದಾರೆ. ಇದೀಗ ಏಕಾಏಕಿ ಪರೀಕ್ಷೆ ನಡೆಸಿದರೆ ಉತ್ತೀರ್ಣ ಆಗುವುದೇ ಕಷ್ಟ ಎನ್ನಲಾಗುತ್ತಿದೆ. ಕಳೆದ ತಿಂಗಳು ವೇಳಾಪಟ್ಟಿ ಬಿಡುಗಡೆಯಾದ ವೇಳೆ 10 ದಿನಗಳ ಕಾಲ ಬ್ರಿಡ್ಜ್ ಕೋರ್ಸ್ ಮಾಡುತ್ತೇವೆ ಎಂದಿದ್ದ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್, ಶಾಲೆಯಲ್ಲೇ ಗುಂಪು ಗುಂಪಾಗಿ ಸೇರಿದರೆ ಇಕ್ಕಟ್ಟಿಗೆ ಸಿಲುಕುವ ಭೀತಿಯಿಂದ ಅಧಿಕೃತ ಆದೇಶ ಮಾಡದೆ, ಕೇವಲ ಅನಧಿಕೃತವಾಗಿ ಶಾಲೆಗಳನ್ನು ತೆರೆದು ಪಾಠ ಮಾಡಿಸಿದ್ದಾರೆ. ಎಲ್ಲಾ ಶಾಲೆಗಳಲ್ಲೂ ಶಿಕ್ಷಕರುಗಳು ಮಕ್ಕಳಿಗೆ ಪಾಠ ಮಾಡಿದ್ದಾರೆ. ಅದರಲ್ಲಿ ಕೆಲವು ಕಡೆ ಸೋಷಿಯಲ್ ಡಿಸ್ಟೆನ್ಸ್ ಇದ್ದರೆ, ಇನ್ನೂ ಕೆಲವು ಕಡೆ ಸಾಮಾಜಿಕ ಅಂತರ ಮಾಯವಾಗಿತ್ತು. ಇನ್ನೂ ಮನೆಗೆ ನಡೆದು ಹೋಗುವಾಗ ಸಾಮಾಜಿಕ ಅಂತರ ಮರೆತ ಮಕ್ಕಳು ಕೈ ಕೈ ಹಿಡಿದು ಹೆಜ್ಜೆ ಹಾಕಿದ್ದವು.
ಪರೀಕ್ಷೆ ಬರೆಯುವ ಮನಸ್ಥಿತಿಯಲ್ಲಿ ಮಕ್ಕಳಿಲ್ಲ. ಇದೇ ಆತಂಕದಲ್ಲಿರುವ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದ ಹಾಗೆ ಒಟ್ಟುಗೂಡಿ ಚರ್ಚೆ ನಡೆಸುವುದು ಸಾಮಾನ್ಯ. ಮಕ್ಕಳಲ್ಲಿ ಯಾರಾದರೂ ಒಬ್ಬರಿಗೆ ಸೋಂಕು ಇದ್ದರೂ ನೂರಾರು ಮಕ್ಕಳು ಸಂಕಷ್ಟಕ್ಕೆ ಸಿಲುಕುವುದು ಕಟ್ಟಿಟ್ಟ ಬುತ್ತಿ. ಅದಷ್ಟೇ ಅಲ್ಲ ಮಕ್ಕಳು ಮನೆಯವರ ಜೊತೆ ಬೆರೆಯುವುದರಿಂದ ಹಳ್ಳಿಗಳಿಗೂ ನೆರವಾಗಿ ಸೋಂಕು ಹರಡಲು ಅನುಕೂಲ ಆಗುತ್ತದೆ. ಇನ್ನೂ ಕರೋನಾ ಸೋಂಕು ಹೆಚ್ಚಾಗಿರುವ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಆಂಧ್ರ ಹಾಗೂ ತೆಲಂಗಾಣ, ಕೇರಳದ ಮಕ್ಕಳು ಸಹ ಕರ್ನಾಟಕದಲ್ಲಿ ಓದುತ್ತಿದ್ದು, ಪರೀಕ್ಷೆ ಬರೆಯುವುದಕ್ಕೆ ಆಗಮಿಸುತ್ತಾರೆ. ಒಂದು ವೇಳೆ ಸೋಂಕು ಹರಡಿದರೆ ಸಚಿವರು ಜವಾಬ್ದಾರಿಯೋ..? ಸರ್ಕಾರ ಜವಾಬ್ದಾರಿಯೋ ಎನ್ನುವುದನ್ನು ಮೊದಲು ಬಹಿರಂಗ ಮಾಡಬೇಕಿದೆ.
ಸಾಮಾಜಿಕ ಅಂತರ ಸೇರಿದಂತೆ ಮುಂಜಾಗ್ರತಾ ಕ್ರಮ ಎಂದು ಸಚಿವ ಸುರೇಶ್ ಕುಮಾರ್ ಹೇಳುತ್ತಿದ್ದಾರೆ. ಅದು ಸತ್ಯವೂ ಇರಬಹುದು. ಆದರೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗಿಂತಲೂ ಹೆಚ್ಚಿನ ಜ್ಞಾನ ಇರುತ್ತದೆ ಆದರೂ ಸಾಮಾಜಿಕ ಅಂತರವಿರಲಿಲ್ಲ. ಇನ್ನೂ ಎಸ್‌ಎಸ್‌ಎಲ್‌ಸಿ ವಿಧ್ಯಾರ್ಥಿಗಳ ಕಥೆ..? ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಪರೀಕ್ಷೆಗೆ ತಡೆ ಕೊಟ್ಟಿಲ್ಲ ಎನ್ನುವ ಏಕೈಕ ಕಾರಣಕ್ಕೆ ಪರೀಕ್ಷೆ ನಡೆಸಿ ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸಿದರೆ ಸಚಿವ ಜೀವಮಾನ ಪೂರ್ತಿ ಸಂಕಷ್ಟಕ್ಕೆ ಗುರಿಯಾಗಬೆಕಾಗುತ್ತದೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದರೆ ಒಳಿತು. ಇನ್ನೂ ಒಂದು ದಿನದ ಅವಕಾಶವಿದ್ದ ಪರೀಕ್ಷೆ ಮುಂದೂಡಿಕೆ ಅಥವಾ ರದ್ದು ಎರಡಲ್ಲಿ ಒಂದನ್ನು ಆಯ್ಕೆ ಮಾಡಬೆಕಿದೆ.