ಭಾರತದ ಶತ್ರುರಾಷ್ಟ್ರ ಯಾವುದು? ಅನ್ನೋ ಪ್ರಶ್ನೆ ಕೇಳಿದರೆ ತಕ್ಷಣವಾಗಿ ನೀಡೋ ಉತ್ತರ ಅದು ಪಾಕಿಸ್ತಾನ.. ಆದರೆ ಈಗ ಅದು ಚೀನಾದತ್ತ ಹೊರಳಿದೆ. ಹಾಗಂತ ಪಾಕಿಸ್ತಾನವನ್ನ ದಶಕಗಳಿಂದ ನಾವು ಶತ್ರುಗಳಂತೆ ನೋಡಲು ಕಾರಣವಿದೆ. ಅದರ ವರ್ತನೆಗಳು, ಭಯೋತ್ಪಾದನೆ ಪ್ರೇರಿತ ಚಟುವಟಿಕೆಗಳು ಪಾಕಿಸ್ತಾನವನ್ನ ಸದಾ ಅಪರಾಧಿ ಸ್ಥಾನದಲ್ಲಿಯೇ ನಿಲ್ಲಿಸುತ್ತದೆ. ಆದರೆ ಚೀನಾ ಅದಕ್ಕಿಂತಲೂ ಭಯಾನಕ ಅನ್ನೋದನ್ನ ದೇಶವನ್ನಾಳಿದ ಕಾಂಗ್ರೆಸ್ ಆಗಲೀ, ಬಿಜೆಪಿ ಆಗಲೀ ಇದುವರೆಗೂ ನೆನಪಿಸಿಕೊಂಡೇ ಇಲ್ಲ. ಆದರೆ ಭಾರತದ ಪಾಲಿಗೆ ಚೀನಾ ಬಹುದೊಡ್ಡ ಬೆದರಿಕೆ ಆಗಿರಲಿದೆ ಅಂತಾ ಈ ಹಿಂದೆಯೇ ಈ ಸಮಾಜವಾದಿ ಶ್ರೇಷ್ಠ ನಾಯಕರು ಉಲ್ಲೇಖಿಸಿದ್ದರು. ಆದರೆ ಅವರ ಹೇಳಿಕೆಯನ್ನ ಯಾರೂ ಗಂಭೀರವಾಗಿ ತೆಗೆದುಕೊಂಡೇ ಇರಲಿಲ್ಲ. ಪರಮಾಣು ಅಣ್ವಸ್ತ್ರ ಹೊಂದಿರುವ ಚೀನಾ ಜೊತೆ ಆರ್ಥಿಕ ಹಾಗೂ ಪ್ರಾಂತ್ಯ ವಿಚಾರವಾಗಿ ಯಾವ ರೀತಿಯಾಗಿ ವ್ಯವಹರಿಸಬೇಕು ಅನ್ನೋದೆ ಗೊತ್ತಾಗದ ರೀತಿಯಲ್ಲಿ ಭಾರತ ಚೀನಾದ ಜೊತೆಗೆ ಬೆರೆತುಕೊಂಡಿತ್ತು. ಆದರೆ ಚೀನಾ ಇದೀಗ ಭಾರತದ ಜೊತೆಗೆ ಲಡಾಖ್ ನಲ್ಲಿ ಹುಟ್ಟುಹಾಕಿರುವ ಘರ್ಷಣೆ ಸಣ್ಣ ಸಮಸ್ಯೆಯಾಗಿ ಉಳಿದಿಲ್ಲ. ಗಡಿ ವಿಚಾರವಾಗಿ ದೇಶದ ಯೋಧರ ಬಲಿಯನ್ನೇ ಪಡೆದಿದೆ.
ಈ ದೇಶ ಕಂಡ ಶ್ರೇಷ್ಠ ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಕೆಲವು ಬಾರಿ ಆಗಿನ ಪ್ರಧಾನಿ ಆಗಿದ್ದ ಜವಹರಲಾಲ್ ನೆಹರೂ ಅವರಿಗೆ ಚೀನಾ ಸ್ನೇಹತ್ವದ ಬಗ್ಗೆ ಎಚ್ಚರಿಕೆಯನ್ನ ನೀಡಿದ್ದರು. ಆದರೆ 1950 ರಲ್ಲಿ ಚೀನಾ ಟಿಬೆಟ್ ವಶಪಡಿಸಿಕೊಳ್ಳುತ್ತಲೇ ಭಾರತ ಹಾಗೂ ಚೀನಾ ʼಹಿಂದೀ ಚೀನಿ ಭಾಯಿ ಭಾಯಿʼ ಅಂತಾ ಸಂಭ್ರಮಪಟ್ಟಿದ್ದವು. ಲೋಹಿಯಾ ಭಾರತ-ಪಾಕಿಸ್ತಾನ ಒಕ್ಕೂಟವನ್ನ ಹೆಚ್ಚು ಬಯಸುತ್ತಿದ್ದರು. ಮಾತ್ರವಲ್ಲದೇ 1964 ರ ಏಪ್ರಿಲ್ ನಲ್ಲಿ ದೀನ್ ದಯಾಳ್ ಉಪಾಧ್ಯಾಯರ ಜೊತೆ ಸೇರಿ ಜಂಟಿ ಹೇಳಿಕೆಯನ್ನೂ ನೀಡಿದ್ದರು. ಮಾತ್ರವಲ್ಲದೇ ಲೋಹಿಯಾ ಅವರು ಚೀನಾದ ಬೆದರಿಕೆ ಬಗ್ಗೆ ಹೆಚ್ಚು ತಲೆಗೆಡಿಸಿಕೊಂಡಿದ್ದರು. ನೆಹರೂ ಅವರಿಗೆ ಚೀನಾದಿಂದ ಆಗಬಹುದಾದ ಅಪಾಯದ ಬಗ್ಗೆಯೂ ತಿಳಿಸಿದ್ದರು. ಆದರೆ ಅವರ ಎಚ್ಚರಿಕೆಯನ್ನ ನಿರ್ಲಕ್ಷಿಸಲಾಗಿತ್ತು. ಮಾತ್ರವಲ್ಲದೇ 1956 ಹಾಗೂ 1960 ರಲ್ಲಿ ನೆಹರೂ ಅವರು ಚೀನಾ ಅಧ್ಯಕ್ಷ ಚೋ ಎನ್ ಲೈ ಅವರನ್ನ ಸ್ವಾಗತಿಸಿದ್ದರು. ಆದರೆ ಅದಾಗ್ಯೂ 1962 ರಲ್ಲಿ ಭಾರತ ಚೀನಾದಿಂದ ದಾಳಿಯನ್ನ ಎದುರಿಸಬೇಕಾಯಿತು. 1962 ರ ಯುದ್ಧದ ಬಳಿಕ 2020ರ ವರೆಗೆ ಇನ್ನಿಬ್ಬರು ಸಮಾಜವಾದಿ ಪಕ್ಷ ನಾಯಕ ಮುಲಾಯಂ ಸಿಂಗ್ ಯಾದವ್ ಹಾಗೂ ಜಾರ್ಜ್ ಫೆರ್ನಾಂಡಿಸ್ (ಕೇಂದ್ರದ ಮಾಜಿ ರಕ್ಷಣಾ ಸಚಿವ) ಚೀನಾದ ಅಪ್ರಾಮಾಣಿಕತೆ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರು. ಮುಲಾಯಂ ಸಿಂಗ್ ಅವರು ಇತ್ತೀಚೆಗಿನ ವರುಷಗಳಲ್ಲೂ ಆ ಎಚ್ಚರಿಕೆಯನ್ನ ದೇಶವನ್ನ ಆಳುವ ಸರಕಾರಕ್ಕೆ ನೀಡಿದ್ದರು.

ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡಿಸ್ ಕೂಡಾ ಇಂತಹದ್ದೇ ಎಚ್ಚರಿಕೆ ನೀಡಿದ್ದರು. ಟಿಬೆಟ್ ಅನ್ನ ಚೀನಾ ವಶಪಡಿಸಿಕೊಂಡಿರುವುದನ್ನ ಭಾರತ ಸಹಿಸಬಾರದು ಅನ್ನೋ ಸಂದೇಶವನ್ನ ಆಳುವ ಸರಕಾರಗಳಿಗೆ ನೀಡಿದ್ದರು. 1998 ರಲ್ಲಿ ರಕ್ಷಣಾ ಸಚಿವರಾದ ಸಮಯದಲ್ಲಿ ರಕ್ಷಣಾ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ ಪತ್ರಕರ್ತ ಕರಣ್ ಥಾಪರ್ ನಡೆಸಿದ ಸಂದರ್ಶನದಲ್ಲೂ ಅವರು ಚೀನಾದಿಂದ ಭವಿಷ್ಯದಲ್ಲಿ ಎದುರಾಗುಬಹುದಾದ ಬೆದರಿಕೆ ಬಗ್ಗೆಯೇ ಹೆಚ್ಚು ಜಾಗೃತರಾಗಿದ್ದರು ಅನ್ನೋದು ಸ್ಪಷ್ಟವಾಗುತ್ತದೆ. “ಹಿಮಾಲಯದಲ್ಲಿನ ಪ್ರಾಬಲ್ಯವನ್ನ ಕಡಿಮೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಯಲ್ಲ. ಹಾಗೆ ಮಾಡಿದ್ದಲ್ಲಿ ಅದು ಭವಿಷ್ಯದಲ್ಲಿ ಹೆಚ್ಚಿನ ಸಮಸ್ಯೆ ಹುಟ್ಟು ಹಾಕುತ್ತವೆ” ಎಂದಿದ್ದರು. ಅಲ್ಲದೇ ಭಾರತೀಯ ರಾಜಕೀಯವು ಚೀನಾ ಅವಶ್ಯಕತೆಗಳನ್ನ ಪ್ರಶ್ನಿಸುವ ವಿಚಾರದಲ್ಲಿ ಹಿಂದೇಟು ಹಾಕುತ್ತಾರೆ ಎಂದಿದ್ದರು.
ಜಾರ್ಜ್ ಫೆರ್ನಾಂಡಿಸ್ ಹಾಗೂ ಮುಲಾಯಂ ಸಿಂಗ್ ಯಾದವ್, ಈ ಇಬ್ಬರೂ ನಾಯಕರು ಚೀನಾದೊಂದಿಗಿನ ವಿದೇಶಾಂಗ ನೀತಿಯನ್ನ ಮರುಪರಿಶೀಲಿಸುವಂತೆ ಆಗ್ರಹಿಸುತ್ತಲೇ ಬಂದಿದ್ದರು. ಜಾರ್ಜ್ ಫೆರ್ನಾಂಡಿಸ್ ಅವರು 2019 ರ ಜನವರಿಯಲ್ಲಿ ನಿಧನರಾದರು.
ಇನ್ನು ಪಾಕಿಸ್ತಾನಕ್ಕೆ ಹೋಲಿಸಿದರೆ ಚೀನಾ ಆರ್ಥಿಕವಾಗಿ ಹಾಗೂ ರಕ್ಷಣಾ ಬಲದಲ್ಲೂ ಅತ್ಯಂತ ಹೆಚ್ಚು ಬಲಾಢ್ಯವಾಗಿದೆ. ಅಲ್ಲದೇ ಚೀನಾದ ಇತಿಹಾಸದಲ್ಲೇ ಅವುಗಳ ಸಾಮ್ರಾಜ್ಯಶಾಹಿ ನೀತಿ ಈ ಹಿಂದೆಯೇ ಬಯಲಾಗಿತ್ತು. ಆದ್ದರಿಂದ ಇಂತಹ ರಾಷ್ಟ್ರದ ಜೊತೆಗಿನ ವಿದೇಶಾಂಗ ವ್ಯವಹಾರದ ಬಗ್ಗೆ ಅತೀ ಜಾಗರೂಕತೆ ವಹಿಸುವಂತೆ ಸಮಾಜವಾದಿ ನಾಯಕರು ಪದೇ ಪದೇ ಎಚ್ಚರಿಕೆ ಕೊಟ್ಟಿದ್ದರೂ, ದೇಶವನ್ನ ಆಳಿರುವ ಕಾಂಗ್ರೆಸ್ ಆಗಲೀ, ಬಿಜೆಪಿ ಆಗಲೀ ಅದನ್ನ ಅಷ್ಟೊಂದು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಅದರಲ್ಲೂ ಹಲವು ದೇಶಗಳನ್ನ ಸುತ್ತಿ ಬಂದ ಪ್ರಧಾನಿ ನರೇಂದ್ರ ಮೋದಿ ಕೂಡಾ ಚೀನಾದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಇತ್ತ ಪಾಕಿಸ್ತಾನ ಬಗ್ಗು ಬಡಿಯುವ ಮಾತುಗಳನ್ನ ಹೇಳುತ್ತಲೇ ʼರಾಷ್ಟ್ರೀಯತೆʼ ಉದ್ದೀಪನಗೊಳಿಸುತ್ತಿದ್ದರು. ಜೊತೆಗೆ ʼಹಿಂದುತ್ವʼದ ಮೇಲೆ ರಾಜಕೀಯ ಮಾಡುತ್ತಾ ಬಂದ ಮೋದಿ ಅವರಿಗೆ ಪಾಕಿಸ್ತಾನದ ಮೇಲಿನ ಎರಡು ಸರ್ಜಿಕಲ್ ಸ್ಟ್ರೈಕ್ ಗಳು ಸಾಕಷ್ಟು ರಾಜಕೀಯವಾಗಿಯೂ ಲಾಭ ತಂದುಕೊಟ್ಟಿದೆ. ಆದರೆ ಅದೇ ಸಮಯಕ್ಕೆ ಚೀನಾದೊಂದಿಗಿನ ವ್ಯವಹಾರದ ಬಗ್ಗೆ ಹೆಚ್ಚಾಗಿ ಹಿಂತಿಸಲೇ ಇಲ್ಲ.

ಪಾಕಿಸ್ತಾನ ಸ್ವತಂತ್ರಗೊಳ್ಳುತ್ತಲೇ ಶತ್ರುರಾಷ್ಟ್ರವಾಗಿ ಭಾರತಕ್ಕೆ ಬಳವಳಿಯಾಗಿ ಬಂದ ರಾಷ್ಟ್ರ. ಆದರೆ ಚೀನಾ ಕೂಡಾ ಭಾರತ ಸ್ವತಂತ್ರಗೊಳ್ಳುತ್ತಲೇ ಸಿಕ್ಕ ಶತ್ರು ರಾಷ್ಟ್ರ ಅನ್ನೋದನ್ನ ದೇಶವಾಳಿದ ರಾಜಕಾರಣಿಗಳು ಮರೆತಂತಿದೆ. 1962 ರಲ್ಲಿಯೇ ಚೀನಾ ಭಾರತ ಮೇಲೆ ದಾಳಿ ಮಾಡಿ ಕೆಲವು ಪ್ರಾಂತ್ಯಗಳನ್ನ ವಶಕ್ಕೆ ಪಡೆದುಕೊಂಡಿದೆ. ಆದರೆ ಈವರೆಗೂ ಆ ವಿಚಾರದಲ್ಲಿ ಯಾವೊಬ್ಬ ದೇಶದ ಪ್ರಧಾನ ಮಂತ್ರಿಗಳು ಧ್ವನಿ ಎತ್ತಿಯೇ ಇಲ್ಲ. 1979ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಚೀನಾಕ್ಕೂ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇನ್ನು ಕಳೆದ ಆರು ವರುಷಗಳಿಂದ ʼಮೇಕ್ ಇನ್ ಇಂಡಿಯಾʼ, ʼಮೇಡ್ ಇನ್ ಇಂಡಿಯಾʼ ಅನ್ನೋ ಘೊಷವಾಕ್ಯದ ಜೊತೆಗೇ ಅಧಿಕಾರ ನಡೆಸುತ್ತಾ ಬಂದ ನರೇಂದ್ರ ಮೋದಿ ಅವರು 18 ಬಾರಿ ಕ್ಸಿ ಜಿನ್ ಪಿಂಗ್ ಅವರನ್ನ ವಿವಿಧ ಸಂದರ್ಭಗಳಲ್ಲಿ ಭೇಟಿಯಾಗಿದ್ದಾರೆ. ಹಾಗೆಲ್ಲ ದ್ವಿಪಕ್ಷೀಯ ವ್ಯವಹಾರಗಳ ಬಗ್ಗೆ ಚೆನ್ನಾಗಿಯೇ ಮಾತುಕತೆ ನಡೆದಿದೆ. 2017ರ ವರೆಗೆ 12 ಸಾವಿರ ಕೋಟಿ ರೂಪಾಯಿ ತನಕವಿದ್ದ ಚೀನಾ ಬಂಡವಾಳ. 2017ರ ವೇಳೆಗೆ 60ಸಾವಿರ ಕೋಟಿ ರೂಪಾಯಿಗೆ ಏರಿದೆ. ಪ್ರಸ್ತುತ ಇದು 2 ಲಕ್ಷ ಕೋಟಿ ತಲುಪುವ ಅಂದಾಜು ಕೂಡಾ ಹಾಕಲಾಗಿದೆ.
ಇದೀಗ ಚೀನಾ ಜೊತೆಗಿನ ವ್ಯವಹಾರದ ಬಗ್ಗೆ ಸರಕಾರ ಮರುಪರಿಶೀಲಿಸಲು ಮುಂದಾಗಿದೆ. ಚೀನಾದ ಸರಕುಗಳ ಬಹಿಷ್ಕಾರಕ್ಕೆ ಮುನ್ನುಡಿ ಬರೆದಿದೆ. ಸಮಾಜವಾದಿ ನಾಯಕರಾದ ರಾಮ್ ಮನೋಹರ್ ಲೋಹಿಯಾ, ಜಾರ್ಜ್ ಫೆರ್ನಾಂಡಿಸ್, ಮುಲಾಯಂ ಸಿಂಗ್ ಯಾದವ್ ರಂತಹ ಹೇಳಿಕೆಗಳ ಬಗ್ಗೆಯೂ ಆಡಳಿತ ಪಕ್ಷ ಮತ್ತೊಮ್ಮೆ ಪುನರ್ ಮಂಥನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ