ಕೋವಿಡ್ -19 ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗಿನ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಬೆಂಗಳೂರು ಪೊಲೀಸರು ಒಪ್ಪಿಗೆಯಿಲ್ಲದೆ ಫೋಟೋ ತೆಗೆಯುವುದರಿಂದ ಅನಗತ್ಯ ತೊಂದರೆ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.
“ಕೋವಿಡ್ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ಜನರು ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆಯುತ್ತಿದ್ದಾರೆ ಅಲ್ಲದೆ ಮಾಧ್ಯಮಗಳೂ ಅದನ್ನು ಪ್ರಸಾರಿಸುತ್ತಿದೆ. ಒಪ್ಪಿಗೆಯಿಲ್ಲದೆ ಯಾವುದೇ ಫೋಟೋ ತೆಗೆಯುವಂತಿಲ್ಲ” ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಕರೋನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅವರ ಫೋಟೋ ತೆಗೆಯುವುದು ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಅನೇಕ ರೋಗಿಗಳ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ, ಇಂತಹ ಕೃತ್ಯಗಳು ತಮ್ಮ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ ಎಂದು ರೋಗಿಗಳು ದೂರಿರುವುದಾಗಿ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.

ಕೋವಿಡ್ ಪಾಸಿಟಿವ್ ರೋಗಿಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯುವುದು ಅವರ ಗೌಪ್ಯತೆಯ ಮೇಲೆ ಮಾಡುವ ಅತಿಕ್ರಮಣವೆಂದು ರೋಗಿಗಳು ದೂರು ನೀಡಿದ್ದಾರೆ. ಫೋಟೋ ಹಾಗೂ ವೀಡಿಯೋ ಚಿತ್ರೀಕರಿಸಿ ಪ್ರಸಾರ ಮಾಡುವುದರಿಂದ ರೋಗಿಗಳು ಅವಮಾನಕ್ಕೊಳಗಾಗುತ್ತಿದ್ದಾರೆ ಎಂದು ರಾವ್ ತಿಳಿಸಿದ್ದಾರೆ.
ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. “ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಥವಾ ಕಾನೂನು ಕ್ರಮ ತೆಗೆದುಕೊಳ್ಳಲು ನಾನು ನನ್ನ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ರಾವ್ ಹೇಳಿದ್ದಾರೆ.