ಗಾಲ್ವಾನ್ ಕಣಿವೆ ಯಲ್ಲಿ ನಡೆದ ಸಂಘರ್ಷದ ಬಳಿಕ ವಶಕ್ಕೆ ಪಡೆದಿದ್ದ 10 ಭಾರತೀಯ ಯೋಧರನ್ನ ಚೀನಾ ಸೇನೆಯು ಒಪ್ಪಂದದ ಮೇರೆಗೆ ಬಿಡುಗಡೆ ಮಾಡಿದ್ದಾಗಿ ರಾಷ್ಟ್ರೀಯ ಸುದ್ದಿ ಮಾಧ್ಯಮ ʼದಿ ಹಿಂದೂʼ ಹಾಗೂ ʼದಿ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ. ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷದ ವಾಸ್ತವ ಮಾಹಿತಿಯನ್ನ ನೀಡುವಂತೆ ವಿಪಕ್ಷಗಳು ಕೇಳುತ್ತಿದ್ದಂತೆ, ಇಂತಹದ್ದೊಂದು ಸುದ್ದಿಯನ್ನ ರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸಿವೆ. ನಿನ್ನೆಯಷ್ಟೇ ಮಾಹಿತಿ ನೀಡಿದ್ದ ಸೇನಾ ಅಧಿಕಾರಿಗಳು ಯಾವೊಬ್ಬ ಸೇನಾ ಸಿಬ್ಬಂದಿಯೂ ಚೀನಾ ವಶದಲ್ಲಿಲ್ಲ ಎಂದಿದ್ದರು. ಆದರೆ ಗಾಯಾಳಾಗಿರುವ 76 ಮಂದಿ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು.ಭಾರತೀಯ
Also Read: ಚೇತರಿಸಿಕೊಳ್ಳುತ್ತಿರುವ ವೀರ ಯೋಧರು; ವಾರದೊಳಗಾಗಿ ಮತ್ತೆ ಕರ್ತವ್ಯಕ್ಕೆ ಹಾಜರ್!
ಹೀಗೆ ಬಿಡುಗಡೆಯಾದ ಯೋಧರಲ್ಲಿ ಒಬ್ಬರು ಲೆಫ್ಟಿನೆಂಟ್ ಕರ್ನಲ್, ಮೂವರು ಮೇಜರ್ ಗಳು ಸೇರಿದ್ದಾಗಿಯೂ ವರದಿ ತಿಳಿಸಿದೆ. ಗುರುವಾರ ಸಂಜೆ ಮೇಜರ್ ಜನರಲ್ ಮಟ್ಟದ ಮಾತುಕತೆ ನಡೆದು ಒಪ್ಪಂದದ ಬಳಿಕ 10 ಯೋಧರನ್ನ ಬಿಡುಗಡೆಗೊಳಿಸಿದ್ದಾಗಿ ಸೇನಾ ಮೂಲಗಳನ್ನೇ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದಾವೆ. ಸೋಮವಾರ ಸಂಜೆ ಸಂಘರ್ಷ ನಡೆದ ಬಳಿಕ ಇವರನ್ನ ವಶಕ್ಕೆ ಪಡೆಯಲಾಗಿತ್ತು, ಸತತ ಮೂರು ಸುತ್ತಿನ ಮಾತುಕತೆ ಬಳಿಕ ಮೂರು ದಿನಗಳ ನಂತರ ಇವರನ್ನ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಗೊಂಡ ಯೋಧರನ್ನ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಯಾವುದೇ ದೌರ್ಜನ್ಯ ನಡೆದಿಲ್ಲ ಎನ್ನಲಾಗಿದೆ.
ಆದರೆ ಇದೀಗ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾಹೋ ಲಿಜಿಯಾನ್ ಇಂತಹದ್ದೊಂದು ಆರೋಪ ಅಲ್ಲಗಳೆದಿದ್ದಾರೆ. ಭಾರತೀಯ ಮಾಧ್ಯಮಗಳಲ್ಲಿ ಬಂದ ವರದಿ ಕುರಿತು ಪ್ರಶ್ನಿಸಿದಾಗ ಲಿಜಿಯಾನ್, “ಚೀನಾ ಯಾವೊಬ್ಬ ಭಾರತೀಯ ಸೇನಾ ಸಿಬ್ಬಂದಿಯನ್ನೂ ವಶಕ್ಕೆ ಪಡೆದಿರಲಿಲ್ಲ” ಎಂದಿದ್ದಾರೆ. ಇದರಿಂದಾಗಿ ಸುದ್ದಿಯ ವಾಸ್ತವ ಸಂಗತಿ ಕುರಿತು ಗೊಂದಲವೂ ಹುಟ್ಟು ಹಾಕಿವೆ.
China has not seized any Indian personnel, Chinese Foreign Ministry spokesperson Zhao Lijian told a daily press briefing on Friday in response to a question about the China-India border situation: China's CGTN pic.twitter.com/ujfIluRKd4
— ANI (@ANI) June 19, 2020
ಕಳೆದ ಸೋಮವಾರ (ಜೂನ್ 15) ರಂದು ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಬಳಿಕ ಭಾರತೀಯ 20 ಯೋಧರು ಹುತಾತ್ಮರಾಗಿ, 76 ಮಂದಿ ಗಾಯಗೊಂಡಿದ್ದರು. ಏಕಾಏಕಿ ನುಗ್ಗಿ ಬಂದ ಚೀನಿ ಸೈನಿಕರು ಮಾರಕಾಯುಧಗಳಿಂದ ದಾಳಿ ನಡೆಸಿದ್ದರು. ಭಾರತ ತೋರಿದ ಪ್ರತಿರೋಧದಿಂದಾಗಿ ಚೀನಾ ಕಡೆಯಿಂದಲೂ 45 ರಷ್ಟು ಮಂದಿ ಸಾವು-ನೋವು ಕಾಣುವಂತಾಗಿತ್ತಾದರೂ, ಅದನ್ನ ಎಲ್ಲೂ ಚೀನಾ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಇಷ್ಟಾಗುತ್ತಲೇ ಕಳೆದ ಒಂದೂವರೆ ತಿಂಗಳಿನಿಂದ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನ ಸ್ಥಿತಿ ಬಗ್ಗೆ ವಿಪಕ್ಷಗಳು ಪ್ರಶ್ನಿಸುತ್ತಲೇ ಇದ್ದವು. ಆದರೆ ವಿದೇಶಿ ನೀತಿಗಳಲ್ಲಿ ಸಾಕಷ್ಟು ಪರಿಣಿತ ಅಂದ್ಕೊಂಡಿದ್ದ ನರೇಂದ್ರ ಮೋದಿ ಮೇಲೆ ದೇಶದ ಜನತೆಗೆ ಭರವಸೆ ಇತ್ತಾದರೂ, ಇದೀಗ ಆ ಭರವಸೆಯೇ ಕಳಚಿ ಬೀಳುವಂತಾಗಿದೆ. ಕಳೆದ ಒಂದೇ ವಾರದಲ್ಲಿ ನೆರೆಯ ಮೂರು ರಾಷ್ಟ್ರಗಳು ಒಂದಲ್ಲ ಒಂದು ರೀತಿಲ್ಲಿ ಭಾರತಕ್ಕೆ ಆಘಾತ ನೀಡುವ ಪ್ರಯತ್ನ ಮಾಡುತ್ತಿದೆ. ಇತ್ತ ವಾಯುವ್ಯ ಭಾಗದಲ್ಲಿರುವ ಪಾಕಿಸ್ತಾನ ಕಳೆದ ಒಂದು ವಾರದಲ್ಲಿ ಕದನ ವಿರಾಮ ಉಲ್ಲಂಘಿಸುವ ಪ್ರಯತ್ನ ಮಾಡಿದೆ. ಇತ್ತ ದೇಶದ ಈಶಾನ್ಯ ಭಾಗದತ್ತವಿರುವ ನೇಪಾಳ, ಭಾರತ ಪ್ರದೇಶಗಳನ್ನೊಳಗೊಂಡ ನೂತನ ಭೂಪಟ ತಿದ್ದುಪಡಿ ಮಸೂದೆಯನ್ನ ಸಂಸತ್ ನಲ್ಲಿ ಅಂಗೀಕರಿಸಿತು. ಇನ್ನೂ ಚೀನಾ.. ಇದಂತೂ ಪ್ರತಿ ಬಾರಿಯೂ ಕಾಲ್ಕೆರೆದು ಜಗಳಕ್ಕೆ ಬರುತ್ತಲೇ ಇದ್ದು, ಕಳೆದ ಸೋಮವಾರವಂತೂ ಭಾರತೀಯ ಯೋಧರನ್ನ ಏಕಾಏಕಿ ದಾಳಿ ನಡೆಸಿ ಹತ್ಯೆಗೈದಿದೆ.
ಇನ್ನಾದರೂ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾಹಿತಿ ನೀಡಿ ಅಂತಾ ರಾಹುಲ್ ಗಾಂಧಿ ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ರಕ್ಷಣಾ ಸಚಿವರು ಮೌನವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಕ್ಕ ಮಟ್ಟಿಗೆ ಪ್ರತೀಕಾರ ತೀರಿಸುವ ಭರವಸೆ ನೀಡಿದ್ದಾರೆ. ಆದರೆ ಸಂಘರ್ಷ ಏರ್ಪಡುತ್ತಿದ್ದ ಜೂನ್ ತಿಂಗಳಿನಲ್ಲಿಯೇ 1126 ಕೋಟಿ ರೂಪಾಯಿಯ ಒಪ್ಪಂದವೊಂದಕ್ಕೆ ಚೀನಾ ಕಂಪೆನಿಗೆ ಮೋದಿ ಸರಕಾರ ಅನುಮತಿ ನೀಡಿದೆ. ಇನ್ನೊಂದೆಡೆ ದೇಶಾದ್ಯಂತ ಜನ ಚೀನಾ ಸರಕುಗಳ ಬಹಿಷ್ಕಾರ ನಡೆಸುವ ಮಾತನ್ನಾಡುತ್ತಿದ್ದಾರೆ.

ಆದರೆ ಗಾಲ್ವಾನ್ ಕಣಿವೆ ಸಂಬಂಧ ಉದ್ವಿಗ್ನ ಸ್ಥಿತಿ ಇನ್ನೂ ಮುಂದುವರೆದಿದೆ. ರಾಜತಾಂತ್ರಿಕ ಮಾತುಕತೆಗಳು ಸಾಕಷ್ಟು ಪರಿಣಾಮ ಬೀರುತ್ತಿಲ್ಲ. ಚೀನಾದ ಸಾಮ್ರಾಜ್ಯಶಾಹಿ ಧೋರಣೆಯಿಂದ ಅನಗತ್ಯ ಸಂಘರ್ಷಗಳು ಏರ್ಪಡುವ ಆತಂಕವೂ ಇದೆ. ಆದರೆ ಕರೋನಾ ಹಾಗೂ ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಕಂಗಾಲಾಗಿರುವ ಭಾರತಕ್ಕೆ ಇದೀಗ ಬೇಕಿರುವುದು ಶಾಂತಿಯೇ ಹೊರತು, ಯುದ್ಧವಲ್ಲ. ಇನ್ನೊಂದೆಡೆ ಚೀನಾ ಸರಕುಗಳ ಬಹಿಷ್ಕಾರಕ್ಕೆ ಕೇಂದ್ರ ಸರಕಾರವೇ ಬೆಂಬಲವಿದ್ದು, ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಕಾರಣ, ದೇಶದಲ್ಲಿ ಚೀನಾ ಸರಕುಗಳಿಗೆ ಪರ್ಯಾಯ ವಸ್ತುಗಳು ಇನ್ನೂ ಉತ್ಪಾದನಾ ಹಂತಕ್ಕೆ ಬಂದೇ ಇಲ್ಲ.
ಇನ್ನೂ ಭಾರತೀಯ ಯೋಧರ ಅಮಾನುಷ ಹತ್ಯೆಗೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನವದೆಹಲಿ ಹಾಗೂ ವಾಷಿಂಗ್ಟನ್ ನಡುವಿನ ರಾಜಕೀಯ ಹಾಗೂ ರಕ್ಷಣಾ ಸಂಬಂಧವನ್ನ ಸ್ಮರಿಸಿಕೊಂಡಿದ್ದಾರೆ.
We extend our deepest condolences to the people of India for the lives lost as a result of the recent confrontation with China. We will remember the soldiers' families, loved ones, and communities as they grieve.
— Secretary Pompeo (@SecPompeo) June 19, 2020
ಒಟ್ಟಿನಲ್ಲಿ ಗಡಿ ಬಿಕ್ಕಟ್ಟು ಶಮನಗೊಳಿಸಲು ಪ್ರಧಾನ ಮಂತ್ರಿ ತೆಗೆದುಕೊಳ್ಳುವ ನಿರ್ಧಾರ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಆದರೆ ಅದು ಆದಷ್ಟು ಶೀಘ್ರವಾಗಿ ಆಗಬೇಕಾದ ಜರೂರತ್ತು ದೇಶಕ್ಕಿದೆ ಅನ್ನೋದನ್ನ ಆಡಳಿತ ಪಕ್ಷ ಅರ್ಥೈಸಿಕೊಳ್ಳಬೇಕಿದೆ.