ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೂನ್ 16 ರ ಸಂಜೆ ಐದು ಗಂಟೆಗೆ ಹೊರಡಿಸಿದ ಕರೋನಾ ಸೋಂಕಿನ ಅಂಕಿ ಅಂಶದ ಪ್ರಕಾರ ಕಳೆದ 24 ಗಂಟೆಗಳಲ್ಲಿ 317 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಒಟ್ಟು ಕಂಡು ಬಂದ ಕರೋನಾ ಸೋಂಕಿತರ ಸಂಖ್ಯೆ 7,530 ಕ್ಕೇರಿದೆ.
ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ಹೆಚ್ಚಿನ ಪ್ರಕರಣಗಳಲ್ಲಿ 72 ಪ್ರಕರಣಗಳು ವಿದೇಶದಿಂದ ಹಾಗೂ 104 ಪ್ರಕರಣಗಳು ಹೊರರಾಜ್ಯದಿಂದ ಹಿಂತಿರುಗಿರುವವರಲ್ಲಿ ಪತ್ತೆಯಾಗಿರುತ್ತದೆ.
ಇಂದು 322 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದುವರೆಗೂ ರಾಜ್ಯದಲ್ಲಿ 4,456 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯವಾಗಿರುವ 2976 ಪ್ರಕರಣಗಳಲ್ಲಿ 2902 ಮಂದಿ ಕರೋನಾ ಸೋಂಕಿತರಿಗೆ ಗೊತ್ತುಪಡಿಸಿದ ಸಾಮಾನ್ಯ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿರುವ 72 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ರಾಜ್ಯದಲ್ಲಿ ಕರೋನಾ ಸೋಂಕಿನಿಂದಾಗಿ ಇಂದು 7 ಮಂದಿ ಅಸುನೀಗಿದ್ದು ಇದುವರೆಗೂ ಒಟ್ಟು 94 ಮಂದಿ ಅಸುನೀಗಿದ್ದಾರೆಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ವಿಶ್ವದಲ್ಲಿ ದಾಖಲಾಗಿರುವ ಒಟ್ಟು ಕರೋನಾ ಸೋಂಕಿತರಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಭಾರತದಲ್ಲಿ ಇಂದು ಮತ್ತೆ 11,502 ಪ್ರಕರಣಗಳು ಕಂಡುಬಂದಿದೆ. ದೇಶದಲ್ಲಿ ದಾಖಲಾದ ಒಟ್ಟು ಕರೋನಾ ಪ್ರಕರಣಗಳ ಸಂಖ್ಯೆ 3 ಲಕ್ಷದ 43 ಸಾವಿರ ತಲುಪಿದೆ. ದೇಶದಲ್ಲಿ 1 ಲಕ್ಷ 80 ಸಾವಿರಕ್ಕಿಂತಲೂ ಅಧಿಕ ಮಂದಿ ಕರೋನಾ ಸೋಂಕಿನಿಂದ ಮುಕ್ತರಾಗಿದ್ದಾರೆ. ಇಂದು 325 ಮಂದಿ ಮೃತ ಪಟ್ಟಿದ್ದು ಸಾವಿನ ಸಂಖ್ಯೆ 9,900 ತಲುಪಿದೆ.
ವಿಶ್ವಾದ್ಯಂತ ಸರಿ ಸುಮಾರು 78 ಲಕ್ಷ ಜನರಿಗೆ ಸೋಂಕಿರುವ ಕರೋನಾ ವೈರಸ್ 4 ಲಕ್ಷದ 32 ಸಾವಿರ ಮಂದಿಯನ್ನು ಬಲಿ ಪಡೆದುಕೊಂಡಿದೆ.