ಲಾಕ್ಡೌನ್ ಸಂದರ್ಭದಲ್ಲಿ ಎಲ್ಲಾ ಸಂಸ್ಥೆಗಳು ನಷ್ಟ ಅನುಭವಿಸಿದ್ದರೂ, ಪಾರ್ಲೆ-ಜಿ ಬಿಸ್ಕಿಟ್ ಮಾತ್ರ ಎಂದೂ ಕಂಡಿರದ ಲಾಭವನ್ನು ಪಡೆದಿತ್ತು. ಕಳೆದ ಒಂದೆರಡು ವರ್ಷಗಳಿಂದ ನಷ್ಟದಲ್ಲಿದ್ದ ಪಾರ್ಲೆ ಕಂಪೆನಿ ಮುಂಬೈನಲ್ಲಿದ್ದ ತನ್ನ 87 ವರ್ಷ ಹಳೆಯ ಕಾರ್ಖಾನೆಯನ್ನು ಮುಚ್ಚಿತ್ತು. ಅಂತಹ ಸಂದರ್ಭದಲ್ಲಿ ಲಾಕ್ಡೌನ್ ಹೇರಿದ್ದು ಪಾರ್ಲೆ ಕಂಪೆನಿಗೆ ಮಾತ್ರ ವರವಾಗಿ ಪರಿಣಮಿಸಿತ್ತು. ಕಂಪೆನಿಯ ಇತಿಹಾಸದಲ್ಲೇ ಅತೀ ಹೆಚ್ಚು ಮಾರಾಟವಾದ ದಾಖಲೆಯನ್ನು ಬರೆದಿತ್ತು.
ಪಾರ್ಲೆ-ಜಿ ಬಹಳಷ್ಟು ಜನರ ಪಾಲಿಗೆ ಒಂದು ಹೊತ್ತಿನ ಊಟ. ಕಡಿಮೆ ಬೆಲೆಯಲ್ಲಿ ದೊರಕುವುದರಿಂದ ಬಡವರ ಪಾಲಿನ ನಿಜವಾದ ಬಂದು ಎಂದು ಹೇಳಬಹುದು. ಲಾಕ್ಡೌನ್ ಸಂದರ್ಭದಲ್ಲಿ ಪಾರ್ಲೆ-ಜಿ ಯಾಕೆ ದಾಖಲೆಯ ಮಾರಾಟ ಖಂಡಿತು ಎಂಬ ಪ್ರಶ್ನೆಗೆ ಈ ಉತ್ತರ ನೀಡಬಹುದು. ಅದರಲ್ಲೂ, ತುತ್ತು ಅನ್ನಕ್ಕಾಗಿ ಪರದಾಡುವ ಸಮಯದಲ್ಲಿ ದೇವರಂತೆ ಬಡವರಿಗೆ ಕಂಡಿದ್ದು ಪಾರ್ಲೆ-ಜಿ.
ಮಾರ್ಚ್ 24 ಭಾರತದ ಬಹಳಷ್ಟು ಬಡ ಕುಟುಂಬಗಳಿಗೆ ಶಾಕ್ ನೀಡಿದ ದಿನ. ಕೇವಲ ನಾಲ್ಕು ಗಂಟೆಗಳ ಕಾಲಾವಕಾಶ ನೀಡಿ ಭಾರತದಾದ್ಯಂತ ಲಾಕ್ಡೌನ್ ಹೇರುವ ನಿರ್ಧಾರ ಕೈಗೊಂಡಿದ್ದರು ಭಾರತದ ಪ್ರಧಾನ ಮಂತ್ರಿಗಳು. ಕರೋನಾ ಸೋಂಕು ಐನೂರರ ಆಸುಪಾಸಿನಲ್ಲಿದ್ದ ಸಮಯವದು. ವಿಶ್ವದ ಯಾವುದೇ ದೇಶದಲ್ಲಿ ಹೇರದ ಅತ್ಯಂತ ಕಠೀಣವಾದ ಲಾಕ್ಡೌನ್ ಎಂದೇ ಬಿಂಬಿಸಲಾಗಿತ್ತು. ಇಂತಹ ಸಮಯದಲ್ಲಿ ಎದೆ ಒಡೆದು ಕುಳಿತವರು ಕಾರ್ಮಿಕ ವರ್ಗ. ದಿನಗೂಲಿ ಮಾಡಿ ಎರಡು ಹೊತ್ತಿನ ಊಟ ಮಾಡುತ್ತಿದ್ದವರಿಗೆ ಲಾಕ್ಡೌನ್ ಎಂಬ ಪೆಡಂಭೂತ ವಕ್ಕರಿಸಿದ್ದು, ಅವರ ಜೀವನವನ್ನು ಹೈರಾಣಾಗಿಸಿತ್ತು.
ಉಣ್ಣಲು ಕಾಸಿಲ್ಲ, ಕಾಸು ಮಾಡಲು ಕೆಲಸವಿಲ್ಲ. ಇಂತಹ ಸಮಯದಲ್ಲಿ ಹೊಟ್ಟೆಗೆ ಹಿಟ್ಟು ಎಲ್ಲಿಂದ ತರುವುದು ಎಂಬ ಯೋಚನೆ ಎಂಥಹವರನ್ನೂ ದಂಗುಬಡಿಸುತ್ತೆ. ಹಲವಾರು ಜನರು ಸ್ವ ಇಚ್ಚೆಯಿಂದ ಊಟದ ವ್ಯವಸ್ಥೆ ಮಾಡಿದರು ನಿಜ. ಆದರೆ, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಮಾಡಿದಷ್ಟು ಸೇವೆ ಭಾರತದ ಬೆನ್ನೆಲುಬಾಗಿರುವ ಹಳ್ಳಿಗಳಲ್ಲಿ ನಡೆಯಿತೇ? ಎಷ್ಟು ಜನ ಬಡವರಿಗೆ ಸರಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು? ಎಷ್ಟು ಜನರು ಹೊಟ್ಟೆ ತುಂಬಾ ಉಂಡು ಸಮಾಧಾನದಿಂದ ಬದುಕಿದರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟಸಾಧ್ಯ. ಇಂತಹ ಹೊತ್ತಿನಲ್ಲಿ ಕೈ ಹಿಡಿದದ್ದು ಪಾರ್ಲೆ-ಜಿಯಂತಹ ಬಿಸ್ಕಿಟ್ ಕಂಪೆನಿಗಳು.
ಭಾರತದಲ್ಲಿ ವ್ಯಕ್ತಿಯೋರ್ವ ಏನು ತಿನ್ನುತ್ತಾನೆ? ಎಲ್ಲಿ ತಿನ್ನುತ್ತಾನೆ? ಎಂಬುದನ್ನು ನೋಡಿದರೆ ಆ ವ್ಯಕ್ತಿಯ ಕುಲ ಗೋತ್ರ ಹೇಳಬಹುದು. ಅವನು ಯಾವ ಭಾಗದವನು, ಅವನ ಆದಾಯವೆಷ್ಟು ಎಂದು ಅಂದಾಜಿಸಬಹುದು. ಆದರೆ, ಪಾರ್ಲೆ-ಜಿ ಭಾರತದಾದ್ಯಂತ ಹಬ್ಬಿರುವಂತದ್ದು. ಯಾರು ಬೇಕಾದರೂ, ಎಲ್ಲಿ ಬೇಕಾದರೂ ಖರೀದಿಸಿ ತಿನ್ನಬಹುದು. ಅದು ಕೂಡ ತನ್ನ ಜಾತಿ, ಕುಲ – ಗೋತ್ರ, ಆದಾಯವನ್ನು ಬಹಿರಂಗಪಡಿಸದೇ.
ಮೊದಲೆರಡು ಲಾಕ್ಡೌನ್ನ ಅನುಭವ ಎಲ್ಲರಿಗೂ ಸಮವಾಗಿ ಆಗಿಲ್ಲ. ಶ್ರೀಮಂತರು ಮತ್ತು ಮೇಲ್ಮಧ್ಯಮ ವರ್ಗದವರಿಗೆ ಲಾಕ್ಡೌನ್ ಬಿಸಿ ಅಷ್ಟೇನು ತಟ್ಟಲಿಲ್ಲ. ಮನೆಯಲ್ಲಿ ಶೇಖರಿಸಿಟ್ಟಿದ್ದ ಧಾನ್ಯಗಳ ದಾಸ್ತಾನು ಹೊರ ತೆಗೆಯುವ ಸವಲತ್ತು ಅವರಿಗಿತ್ತು. ಆದರೆ, ಕೆಳ-ಮಧ್ಯಮ ವರ್ಗ ಮತ್ತು ಬಡವರಿಗೆ ಮಾತ್ರ ಲಾಕ್ಡೌನ್ನ ನಿಜವಾದ ಬಿಸಿ ತಟ್ಟಿತ್ತು. ವಲಸೆ ಕಾರ್ಮಿಕರಿಗೆ ಹಾಗೂ ಬಡವರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಯಿತು.
ಒಟ್ಟಿನಲ್ಲಿ, ಲಾಕ್ಡೌನ್ ಭಾರತದಲ್ಲಿರುವ ಹಸಿವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿತು. ನೂರಾರು ಅಡಿಗಳ ಮೂರ್ತಿ ತಣಿಸಲಾಗದ ಹಸಿವನ್ನು ಕೇವಲ 5 ರೂಪಾಯಿಯ ಬಿಸ್ಕಿಟ್ ತಣಿಸಿತು. ಸಾವಿರಾರು ಕೋಟಿ ಖರ್ಚು ಮಾಡಿ ಖರೀದಿಸಲ್ಪಟ್ಟ ಜನನಾಯಕರು ಠುಸ್ಸಾದರೂ, ಎಂದಿಗೂ ಬಡವರ ಬಂದು ಎಂದು ಅನ್ನಿಸಿಕೊಂಡಿರುವ ಪಾರ್ಲೆ-ಜಿ ಕೈ ಬಿಡಲಿಲ್ಲ. ಸಂಕಷ್ಟದಲ್ಲಿ ಕಂಪೆನಿ ಲಾಭ ಮಾಡಿಕೊಂಡಿತು ಎನ್ನುವ ವಾದ ಇದ್ದರೂ, ಅದೇ ಕಂಪೆನಿಯಿಂದ ಹೊಟ್ಟೆ ತಣಿಸಿಕೊಂಡ ಬಡವರ ಸಂತೋಷಕ್ಕಿಂತ ಹೆಚ್ಚೇನು ಇರಲಿಕ್ಕಿಲ್ಲ ಬಿಡಿ.