ಅಮಿತ್ ಶಾ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಎಲ್ಲರಿಗೂ ಕೋವಿಡ್-19 ಪರೀಕ್ಷೆ ನಡೆಸಬೇಕು ಇದು ಎಲ್ಲರ ಹಕ್ಕು ಎಂದು ಹೇಳಿರುವ ಕಾಂಗ್ರೆಸ್ ಸೋಂಕು ಬಾಧಿತ ಕುಟುಂಬಕ್ಕೆ ಹಾಗೂ ಕಂಟೈನ್ಮೆಂಟ್ ಝೋನ್ನಲ್ಲಿರುವ ಪ್ರತಿ ಕುಟುಂಬಕ್ಕೂ ತಲಾ ಹತ್ತು ಸಾವಿರದಂತೆ ಸರ್ಕಾರ ನೀಡಬೇಕು ಎಂದು ಹೇಳಿದೆ. ಅಲ್ಲದೆ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ತಾತ್ಕಾಲಿಕ ನಿವಾಸಿ ವೈದ್ಯರನ್ನಾಗಿ ನಿಯೋಜಿಸಬೇಕೆಂದೂ ಭಾರತದ ಪುರಾತನ ರಾಷ್ಟ್ರೀಯ ಪಕ್ಷ ಸಲಹೆ ನೀಡಿದೆ.
ದೆಹಲಿ ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನಲೆಯಲ್ಲಿ ಸರಣಿ ಸಭೆ ನಡೆಸಿರುವ ಶಾ, ಮೊದಲಿಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಾಯಿಜಲ್, ಬಳಿಕ ಅರವಿಂದ್ ಕೇಜ್ರೀವಾಲ್, ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹಾಗೂ ಮೇಯರ್ ಮತ್ತು ಇನ್ನಿತರ ಮುನ್ಸಿಪಲ್ ಉನ್ನತ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದಾರೆ.
ಚರ್ಚೆಯ ಬಳಿಕ ಟ್ವೀಟ್ ಮಾಡಿರುವ ಗೃಹ ಮಂತ್ರಿ, ಕಂಟೈನ್ಮೆಂಟ್ ಝೋನ್ನಲ್ಲಿರುವ ಪ್ರತಿಯೊಬ್ಬರ ಸಮಗ್ರ ಕೋವಿಡ್ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ನಡೆಸುವ ಕೋವಿಡ್ ಪರೀಕ್ಷೆಯ ಸಂಖ್ಯೆ ದ್ವಿಗುಣವಾಗಲಿದೆ, ಆರು ದಿನಗಳೊಳಗೆ ಮೂರು ಪಟ್ಟು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ ರಾಜಧಾನಿಯಲ್ಲಿ ಕೋವಿಡ್ ವಿರುದ್ಧದ ಹೋರಾಟ ಕ್ಷಮತೆ ಹೆಚ್ಚಿಸಲು ನಾಲ್ವರು ಐಎಎಸ್ ಅಧಿಕಾರಿಗಳನ್ನು ರಾಜಧಾನಿಗೆ ವರ್ಗಾಯಿಸುವಂತೆ ಗೃಹ ಮಂತ್ರಿ ಆದೇಶ ನೀಡಿದ್ದಾರೆ.