ನವದೆಹಲಿ: ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ (PMGKP) ಅಡಿಯಲ್ಲಿ ಧಾನ್ಯ ಪಡೆಯಲು ಅರ್ಹರಾಗಿರುವ ಸುಮಾರು 14.5 ಕೋಟಿ ಜನರಿಗೆ ಮೇ ತಿಂಗಳ ಪಡಿತರ ಸಿಗಲಿಲ್ಲ ಎಂದು ಜೂನ್ 3 ರಂದು ಕೇಂದ್ರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ಇದರಲ್ಲಿ 6.4 ಕೋಟಿ ಮಂದಿಗೆ ಏಪ್ರಿಲ್ನಲ್ಲಿ ನೀಡಬೇಕಾದ ಧಾನ್ಯಗಳನ್ನು ಇನ್ನೂ ನೀಡಲಾಗಿಲ್ಲ ಎಂದು ಅಂಕಿ ಅಂಶಗಳು ತೋರಿಸುತ್ತವೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ (NFSA) ಪಡಿತರ ಚೀಟಿಗಳನ್ನು ಹೊಂದಿರುವ 20 ಕೋಟಿ ಫಲಾನುಭವಿಗಳಿಗೆ, ಏಪ್ರಿಲ್ನಲ್ಲಿ PMGKP ಅಡಿಯಲ್ಲಿ ಪಡೆಯಬೇಕಿದ್ದ ಹೆಚ್ಚುವರಿ 5 ಕೆ.ಜಿ ಆಹಾರ ಧಾನ್ಯ ಇನ್ನೂ ತಲುಪಿಲ್ಲ ಎಂದು ದಿ ವೈರ್ ಸುದ್ದಿತಾಣ ವರದಿ ಮಾಡಿತ್ತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ PMGKPಯನ್ನು ಘೋಷಿಸಿದಾಗ, 80 ಕೋಟಿ ಫಲಾನುಭವಿಗಳಿಗೆ 5 ಕಿಲೋಗ್ರಾಂಗಳಷ್ಟು ಹೆಚ್ಚುವರಿ ಧಾನ್ಯವನ್ನು(ಗೋಧಿ ಅಥವಾ ಅಕ್ಕಿ) ನೀಡಲಾಗುವುದು ಎಂದು ಹೇಳಿದ್ದರು. ಸಾಮಾನ್ಯ ಪಡಿತರ ಹಂಚಿಕೆಯ ಜೊತೆಗೆ ಹೆಚ್ಚುವರಿ 5 ಕಿಲೋಗ್ರಾಂಗಳಷ್ಟು ಆಹಾರ ಧಾನ್ಯವನ್ನು ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ಉಚಿತವಾಗಿ ನೀಡಬೇಕಿತ್ತು. ಪಡಿತರ ಚೀಟಿ ಹೊಂದಿರುವ ಮನೆಗಳಿಗೆ ತಿಂಗಳಿಗೆ 1 ಕಿಲೋಗಳಷ್ಟು ದ್ವಿದಳ ಧಾನ್ಯಗಳನ್ನು ಮೂರು ತಿಂಗಳವರೆಗೆ ಉಚಿತವಾಗಿ ವಿತರಿಸಲಾಗುವುದು ಎಂದು ಅವರು ಘೋಷಿಸಿದ್ದರು.
ಏಪ್ರಿಲ್ನಲ್ಲಿ, PMGKP ಅಡಿಯಲ್ಲಿ ನೀಡಲಾಗುವ ಹೆಚ್ಚುವರಿ 5 ಕೆ.ಜಿ ಧಾನ್ಯವು 73 ಕೋಟಿ ಫಲಾನುಭವಿಗಳನ್ನು ತಲುಪಿದೆ, ಆದರೆ ಸುಮಾರು 6.4 ಕೋಟಿ ಜನರು ಇನ್ನೂ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯ ಪ್ರಯೋಜನವನ್ನು ಪಡೆಯಲಿಲ್ಲ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.