ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸುವುದೇ ಆರ್ಥಿಕ ಸುಧಾರಣೆ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾವಿಸಿದಂತಿದೆ. HAL, ವಿಮಾನ ನಿಲ್ದಾಣಗಳು, LIC ಮುಂತಾದ ಪ್ರಮುಖ ಸಾರ್ವಜನಿಕ ವಲಯ ಉದ್ದಿಮೆಗಳನ್ನು ಖಾಸಗೀಕರಣ ಮಾಡಿ ಬಂಡವಾಳ ಶಾಹಿಗಳ ಬೊಕ್ಕಸ ತುಂಬಿಸಲು ಅನುವು ಮಾಡಿಕೊಡುವ ಕೇಂದ್ರ ನಿಜಾರ್ಥದಲ್ಲಿ ಬಡ ಭಾರತೀಯರನ್ನು ಬಂಡವಾಳಶಾಹಿಗಳ ಮರ್ಜಿನಲ್ಲಿಡುತ್ತಿದೆ.
ಕಳೆದ ಅರವತ್ತು ವರ್ಷಗಳಲ್ಲಿ ಭಾರತವನ್ನಾಳಿದ ಸರ್ಕಾರಗಳು ಯಾವ ಅಭಿವೃದ್ಧಿಯನ್ನೂ ಮಾಡಲಿಲ್ಲ ಎಂದು ಹೇಳುತ್ತಾ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ಹಿಂದಿನ ಸರ್ಕಾರಗಳು ಪ್ರಾರಂಭಿಸಿರುವ ಸಾರ್ವಜನಿಕ ವಲಯಗಳನ್ನೆಲ್ಲಾ ಶ್ರೀಮಂತ ಉದ್ದಿಮೆದಾರರ ಕಾಲಬುಡದಲ್ಲಿಡುತ್ತಿದೆ.
ಇನ್ನೇನು BSNL ಕೂಡಾ ಖಾಸಗೀಕರಣಗೊಳ್ಳುವ ಸುದ್ದಿ ಇರುವ ಬೆನ್ನಿನಲ್ಲೇ 2003 ರ ವಿದ್ಯುಚ್ಛಕ್ತಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆ ಇರಿಸಿದೆ. ಸರ್ಕಾರ ಅಂದುಕೊಂಡಂತೆ ಈ ಕಾಯ್ದೆಗೆ ತಿದ್ದುಪಡಿ ತಂದರೆ ವಿದ್ಯುಚ್ಛಕ್ತಿ ಮಂಡಳಿಯೂ ಖಾಸಗಿಯವರ ಪಾಲಾಗುತ್ತದೆ. ಈ ಕಾಯ್ದೆಯ ಪ್ರಕಾರ ಇದುವರೆಗೂ ರಾಜ್ಯ ಸರ್ಕಾರಗಳಿಗೆ ವಿದ್ಯುಚ್ಛಕ್ತಿ ಮಂಡಳಿಯ ಮೇಲಿರುವ ಅಧಿಕಾರ ಇನ್ನುಮುಂದೆ ಕಳೆದುಕೊಳ್ಳಲಿದೆ.
ಒಂದು ದೇಶ- ಒಂದು ಭಾಷೆ, ಏಕರೂಪಿ ನಾಗರಿಕ ಸಂಹಿತೆ ಮುಂತಾದ ಅಜೆಂಡಾಗಳನ್ನು ಹೊಂದಿರುವ ಬಿಜೆಪಿ ದೇಶದ ಬಹುತ್ವವನ್ನು ನಾಶಪಡಿಸುವುದಲ್ಲದೆ, ಕ್ರಮೇಣ ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯನ್ನೂ ಕಸಿದುಕೊಳ್ಳುತ್ತಿದೆ. ಜಿಎಸ್ಟಿ ಮುಖಾಂತರ ರಾಜ್ಯಕ್ಕೆ ತೆರಿಗೆ ಮೇಲಿರುವ ಹಕ್ಕನ್ನೂ, ಅಧಿಕಾರವನ್ನೂ ಕಿತ್ತುಕೊಂಡಿರುವ ಕೇಂದ್ರ, ಸದ್ಯ ರಾಜ್ಯಗಳು ತನ್ನ ವ್ಯಾಪ್ತಿಯಲ್ಲಿ ಯೋಜನೆ ರೂಪಿಸಲೂ ಕೇಂದ್ರವನ್ನೇ ಅವಲಂಬಿಸುವಂತೆ ಮಾಡಿದೆ. ಒಕ್ಕೂಟ ವ್ಯವಸ್ಥೆಯ ಪ್ರಕಾರ ರಾಜ್ಯಗಳಿಗೂ ಅದರದೇ ಆದ ವ್ಯಾಪ್ತಿ ಹಾಗೂ ಅಧಿಕಾರಗಳಿವೆ. ಮೋದಿಯವರ ಭಂಡ ಹಾಗೂ ಏಕಪಕ್ಷೀಯ ನಿರ್ಧಾರಗಳಿಂದ ಒಕ್ಕೂಟ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ.
“ಸಂವಿಧಾನ ಬದಲಾಯಿಸುತ್ತೇವೆ” ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಭಾರತದ ಅತ್ಯುಚ್ಛ ಸಂವಿಧಾನಕ್ಕೆ ಸವಾಲು ಹಾಕುತ್ತಿರುವಾಗ, ಬಿಜೆಪಿ ಸರ್ಕಾರ ಒಂದೊಂದೇ ಕಾಯ್ದೆಗಳನ್ನು ತಿದ್ದುಪಡಿ ಅಥವಾ ಮಾರ್ಪಡಿಸುತ್ತಾ ಬರುತ್ತಿದೆ. ಆರ್ಥಿಕ ಕುಸಿತ ಎದುರಿಟ್ಟುಕೊಂಡು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಒಂದೊಂದಾಗಿ ಕಾರ್ಮಿಕ ಪರವಾಗಿರುವ ಕಾನೂನುಗಳನ್ನು ರದ್ದುಪಡಿಸಿ, ಬಂಡವಾಳ ಶಾಹಿಗಳ ಲಾಬಿಗೆ ದಾರಿ ಮಾಡಿಕೊಡುತ್ತದೆ. 2003ರ ವಿದ್ಯುಚ್ಛಕ್ತಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದನ್ನೂ ಈ ಆಯಾಮಗಳಿಂದ ಗಮನಿಸಿದಾಗ ಕೇಂದ್ರದ ಅಜೆಂಡಾಗಳು ಒಂದಕ್ಕೊಂದು ಬೆಸೆದುಕೊಂಡಿರುವುದು ಮೇಲ್ನೋಟಕ್ಕೇ ಕಾಣಿಸುತ್ತವೆ.
ಸದ್ಯ ಕೇಂದ್ರ ಉದ್ದೇಶಿಸಿರುವ 2003ರ ವಿದ್ಯುಚ್ಛಕ್ತಿ ಕಾಯ್ದೆಯ ತಿದ್ದುಪಡಿಗಳ ಮೂಲಕ ರಾಜ್ಯ ಸರ್ಕಾರಗಳ ಅಧಿಕಾರ ಮತ್ತು ಹಕ್ಕುಗಳನ್ನು ಕಸಿದು, ರಾಜ್ಯ ಸರ್ಕಾರದ ನಿಯಂತ್ರಣದಿಂದ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಕಿತ್ತುಕೊಂಡು ತನ್ನ ಅಧಿಕಾರ ವ್ಯಾಪ್ತಿಗೆ ತರಲು ಹೊರಟಿದೆ. ಇದು ಒಕ್ಕೂಟ ವ್ಯವಸ್ಥೆಗೆ ಹೇಗೆ ವಿರುದ್ಧವೋ ಅಷ್ಟೇ ರೈತರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೂ ಹೊರೆಯಾಗಲಿದೆ. ರೈತರು ಹಾಗೂ ಆರ್ಥಿಕ ಹಿಂದುಳಿದ ವರ್ಗದವರಿಗೆ ಸರ್ಕಾರಗಳು ಹಲವು ಸಬ್ಸಿಡಿಗಳನ್ನು ಮತ್ತು ಯೋಜನೆಗಳನ್ನು ನೀಡುತ್ತಿದೆ. ಕಾಯ್ದೆ ತಿದ್ದುಪಡಿಯಿಂದ ಈ ಸಹಾಯ ಧನವನ್ನು ತೆಗೆದು ಹಾಕಲಾಗುತ್ತದೆ ಎಂದು ಕರ್ನಾಟಕ ವಿದ್ಯುತ್ ಮಂಡಳಿ ನೌಕರರ ಸಂಘಗಳ ಒಕ್ಕೂಟ ಮುಖ್ಯಮಂತ್ರಿಗಳಿಗೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಬರೆದ ಪತ್ರದಲ್ಲಿ ಹೇಳಿಕೊಂಡಿದೆ.
ಕಾಯ್ದೆ ತಿದ್ದುಪಡಿಯಿಂದ ರಾಜ್ಯ ಸರ್ಕಾರದ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಕಂಪೆನಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುವ ಆತಂಕ ವ್ಯಕ್ತ ಪಡಿಸಿರುವ ನೌಕರರ ಸಂಘಗಳ ಒಕ್ಕೂಟ ಇದು ಈ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಗಳಿಗೂ ಮಾರಕವಾಗುತ್ತದೆ ಎಂದಿದೆ. ಈ ತಿದ್ದುಪಡಿಯಲ್ಲಿ ಸನ್ನದುದಾರರ ಪರವಾಗಿ ಫ್ರಾಂಚೈಸಿಗಳು ವಿದ್ಯುತ್ ವಿತರಣೆ ಮಾಡಬಹುದಾಗಿದೆ. ಇದು ವಿತರಣಾ ಕಂಪೆನಿಗಳನ್ನು ಖಾಸಗೀಕರಣಗೊಳಿಸುವುದೇ ಆಗಿದೆ. ಇದರಿಂದ ರಾಜ್ಯದ ಗ್ರಾಹಕರುಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಲಿವೆ ಎಂದು ಸಂಘಗಳ ಒಕ್ಕೂಟ ಹೇಳಿದೆ.
ಈಗಾಗಲೇ ಭಾರತದ ಗಯಾ, ಕಾನ್ಪುರ್, ಗ್ವಾಲಿಯರ್, ಔರಾಂಗಾಬಾದ್ ಮುಂತಾದ ನಗರಗಳಲ್ಲಿ ವಿದ್ಯುತ್ ವಿತರಣಾ ಕ್ಷೇತ್ರದ ಖಾಸಗೀಕರಣ ಮಾಡಿದೆ, ಈ ಪದ್ಧತಿಯು ಅಲ್ಲಿ ವಿಫಲವಾಗಿದೆ. ಈ ಪ್ರಸ್ತಾವಿತ ತಿದ್ದುಪಡಿಯು ರಾಜ್ಯಕ್ಕೆ ಮತ್ತು ರಾಜ್ಯದ ಜನತೆಗೆ ಮಾರಕವಾಗಿರುವುದರಿಂದ ಇದನ್ನು ಅವಶ್ಯವಾಗಿ ಕೈ ಬಿಡಬೇಕೆಂದು ವಿದ್ಯುತ್ ಮಂಡಳಿ ನೌಕರರ ಸಂಘಗಳ ಒಕ್ಕೂಟ ಆಗ್ರಹಿಸಿದೆ.

ಪ್ರಸ್ತುತ ವಿದ್ಯುಚ್ಛಕ್ತಿಯನ್ನು ರೈತರುಗಳಿಗೆ ಉಚಿತವಾಗಿ ನೀಡುತ್ತಿರುವುದರಿಂದ ರಾಷ್ಟ್ರೀಯ ಕೃಷಿ ಉತ್ಪಾದನೆಯು ಉತ್ತುಂಗದಲ್ಲಿದೆ. ಡಿಬಿಟಿ (DBT)ಯನ್ನು ರೈತರು ನಿಜವಾದ ವಿದ್ಯುತ್ ಬಳಕೆಯ ಮೇಲೆ ನಿರ್ಧರಿಸಬೇಕಾಗಿರುವುದರಿಂದ ಮತ್ತು ವಿದ್ಯುತ್ ಶುಲ್ಕವನ್ನು ರೈತರು ಪಾವತಿಸಿದ ನಂತರವೇ ಅವರ ಖಾತೆಗೆ ಎರಡರಿಂದ ಮೂರು ತಿಂಗಳ ಅವಧಿಯ ನಂತರದಲ್ಲಿ ಸಹಾಯ ಧನವನ್ನು ಜಮೆ ಮಾಡಲಾಗುತ್ತದೆ. ಸಹಾಯಧನವನ್ನು ತೆಗೆದುಹಾಕಿದರೆ, ರೈತರುಗಳು ವಿದ್ಯುತ್ ಶುಲ್ಕವನ್ನು ಪಾವತಿಸುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಅವರುಗಳ ಪಂಪ್ ಸೆಟ್’ಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಮತ್ತು ಇದರಿಂದಾಗಿ ಬೆಳೆಗಳು ಹಾಳಾಗುತ್ತವೆ. ಹಾಗಾಗಿ ರೈತರುಗಳಿಗೆ ವಿದ್ಯುತ್ತನ್ನು ಕೊಡದೇ ಇರುವಾಗ ಅವರಿಗೆ ಸಹಾಯಧನ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ನೇರವಾಗಿ ರಾಷ್ಟ್ರೀಯ ಕೃಷಿ ಉತ್ಪಾದನೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ರೈತರು ವಿದ್ಯುತ್ ಶುಲ್ಕವನ್ನು ಪಾವತಿಸದೇ ಇದ್ದರೆ ವಿದ್ಯುತ್ ನಿಲುಗಡೆಯಿಂದಾಗಿ ಅವರು ಬೆಳೆದ ಬೆಳೆಗಳು ಹಾಳಾಗುತ್ತವೆ ಮತ್ತು ಅವರುಗಳಿಗೆ ಸಹಾಯಧನವು ಸಹ ಸಿಗುವುದಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ರೈತರುಗಳಿಗೆ ಉಚಿತ ವಿದ್ಯುತ್ ಇದ್ದರೂ ಸಹ ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾಗಿ ಸರಿಯಾದ ಮೌಲ್ಯ ಸಿಗುತ್ತಿಲ್ಲ ಮತ್ತು ಡಿಬಿಟಿ ಅಳವಡಿಸಿದರೆ, ಆಗ ರೈತರ ಆತ್ಮಹತ್ಯೆ ಪ್ರಕರಣಗಳು ಕ್ಷಿಪ್ರ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಅದಲ್ಲದೆ ಈ ತಿದ್ದುಪಡಿಯು ಗಂಭೀರ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಹೊಂದಿರುವುದರಿಂದ ಉದ್ದೇಶಿತ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿಯ ಬಳಿ ಮನವಿ ನೀಡಲಾಗಿದೆ.

ಅಷ್ಟೇ ಅಲ್ಲದೆ ವಿದ್ಯುತ್ ಮಂಡಳಿಯ ಮೇಲೆ ರಾಜ್ಯ ತನ್ನ ಸ್ವಾಯತ್ತತೆ ಕಳೆದುಕೊಂಡರೆ ರಾಜ್ಯ ವಿದ್ಯುತ್ ನಿಯಂತ್ರಣ ಮಂಡಳಿಯಲ್ಲಿ ಹೊರ ರಾಜ್ಯದವರು ಸದಸ್ಯರಾಗಿ, ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಅವರಿಗೆ ರಾಜ್ಯದ ವಿದ್ಯುತ್ ಕ್ಷೇತ್ರದ ಜಟಿಲತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿರುವುದಿಲ್ಲ. ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಹೊರ ರಾಜ್ಯದ ಮೆನೇಜರುಗಳಿರುವ ಪರಿಣಾಮ ನಾವು ನೋಡುತ್ತಿದ್ದೇವೆ.
ವಿದ್ಯುತ್ ಕ್ಷೇತ್ರದಲ್ಲಿ ದೇಶದಾದ್ಯಂತ ಸುಮಾರು 25 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಪ್ರಸ್ತಾವಿತ ತಿದ್ದುಪಡಿಗಳಲ್ಲಿ ನೌಕರರುಗಳಿಗೆ ಯಾವ ಭದ್ರತೆಯನ್ನೂ ಉಲ್ಲೇಖಿಸಿಲ್ಲ. ಇದರಿಂದ ಅವರ ಭವಿಷ್ಯ ತೂಗುಗತ್ತಿಯ ಮೇಲೆ ನಿಂತಿದೆ. ಖಾಸಗಿ ಉದ್ದಿಮೆದಾರರಿಗೆ ವಿದ್ಯುತ್ ಕ್ಷೇತ್ರವನ್ನು ನೀಡುವುದರಿಂದ ಕಾರ್ಮಿಕರಿಗೆ ದುಡಿಮೆ ಜಾಸ್ತಿ ನೀಡಿ, ವೇತನ ಕಡಿಮೆ ನೀಡುವ ಸಾಧ್ಯತೆ ಇದೆಯೆಂದು ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ.ಆರ್. ರಾಮಕೃಷ್ಣಯ್ಯ “ಪ್ರ್ರತಿಧ್ವನಿ” ಬಳಿ ಹೇಳಿದ್ದಾರೆ.
ಮೊದಲೇ ಆರ್ಥಿಕ ಕುಸಿತದಲ್ಲಿರುವ ಭಾರತಕ್ಕೆ ಕರೋನಾ ಮತ್ತು ಲಾಕ್ಡೌನ್ ಇನ್ನಷ್ಟು ಹೊಡೆತ ನೀಡಿದೆ. ಆರ್ಥಿಕ ಸುಧಾರಣೆಗೆಂದು ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ ಈಗಾಗಲೇ ಹಲವು ಮುಖ್ಯ ಕಾರ್ಮಿಕ ಕಾನೂನುಗಳನ್ನು ರದ್ದು ಪಡಿಸಿವೆ. ಇದರಿಂದ ಖಾಸಗಿ ಉದ್ದಿಮೆದಾರರಿಗೆ ಭಾರೀ ಲಾಭವಾಗಲಿದೆ. ಬಿಎಸ್ವೈ ನೇತೃತ್ವದ ಕರ್ನಾಟಕ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿಸುವ ತಯಾರಿಯಲ್ಲಿದೆ.
ಈಗ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದರಿಂದ ಆ ವಲಯದಲ್ಲಿ ಉದ್ಯೋಗ ಮಾಡುವ ನೌಕರರಿಗೆ, ಕೃಷಿಕರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಭಾರೀ ಸಂಕಷ್ಟ ಎದುರಾಗಲಿದೆ. ವಿದ್ಯುತ್ ಮಂಡಳಿಯ ಮೇಲಿನ ರಾಜ್ಯ ಸರ್ಕಾರದ ಸ್ವಾಯತ್ತತೆಯು ಕಳೆದುಕೊಳ್ಳುವುದರಿಂದ ವಿದ್ಯುತ್ ಮಂಡಳಿಯಲ್ಲೂ ಕೇಂದ್ರ ಸಂಪೂರ್ಣ ನಿಯಂತ್ರಣ ಹೊಂದುತ್ತದೆ. ಕೇಂದ್ರ ಸರ್ಕಾರ ತರುತ್ತಿರುವ ಹೊಸ-ಹೊಸ ನಿಯಮಗಳು, ತಿದ್ದುಪಡಿಗಳು ಒಕ್ಕೂಟ ವ್ಯವಸ್ಥೆಯ ಬುನಾದಿಯನ್ನು ಶಿಥಿಲಗೊಳಿಸುತ್ತಿವೆ.






