ರಂಗಾರೆಡ್ಡಿ ಜಿಲ್ಲೆಯ ಗಂಧಾಮ್ಗುದದಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸಿಸುತ್ತಿರುವ ಖಾಜಾ ಮಿಯಾ ಎಂಬವರು ಹೃದಯಾಘಾತದಿಂದ ಇತ್ತೀಚೆಗೆ ಮರಣಹೊಂದಿದ್ದರು. ಕರೋನಾ ಸೋಂಕಿನಿಂದ ಮೃತಪಟ್ಟಿರಬಹುದೆಂಬ ಶಂಕೆಯಲ್ಲಿ ಹಾಗೂ ಸೋಂಕು ಹರಡಬಹುದೆಂಬ ಆತಂಕದಲ್ಲಿ ಸ್ಥಳೀಯ ದಫನ ಭೂಮಿಯ ಮೇಲ್ವಿಚಾರಕರು ದಫನ ಮಾಡಲು ನಿರಾಕರಿಸಿದ್ದಾರೆ.
ಈ ವಿಚಾರ ತೆಲಂಗಾಣ ರಾಷ್ಟ್ರ ಸಮಿತಿಯ ಸ್ಥಳೀಯ ಕಾರ್ಪೋರೇಟರ್ ಗಮನಕ್ಕೆ ಬಂದಿದ್ದು, ಅವರ ಮಧ್ಯಪ್ರವೇಶದೊಂದಿಗೆ ಹಿಂದೂ ಸ್ಮಶಾನವೊಂದರಲ್ಲಿ ದಫನಗೊಳಿಸಲಾಯಿತು.
ಈ ಕುರಿತು ಮಾತನಾಡಿದ ಸ್ಥಳೀಯ ಮುಖಂಡ ಸಂದೀಪ್, ದಫನಗೊಳಿಸಲು ಅವಕಾಶ ಕೋರಿ ನಾವು ಕೆಲವು ಸ್ಥಳಗಳಿಗೆ ಭೇಟಿ ನೀಡಿದೆವು, ಆದರೆ ಅಲ್ಲಿ ನಮಗೆ ಪ್ರವೇಶ ನಿರಾಕರಿಸಲಾಯಿತು, ಕೊನೆಗೆ ಒಂದು ದಫನ ಭೂಮಿಗೆ ತೆರಳಿದಾಗ ಅಲ್ಲಿ ಮೃತ ವ್ಯಕ್ತಿ ಆಂದ್ರ- ತೆಲಂಗಾಣ ಗಡಿ ಸಮೀಪದ ನಿವಾಸಿಯಾದ್ದರಿಂದ ಆ ಭಾಗದಲ್ಲಿಯೇ ದಫನಗೊಳಿಸಬೇಕೆಂದು ಸೂಚಿಸಲಾಯಿತೆಂದು ಹೇಳಿದ್ದಾರೆ.
ಮೃತರು ಬಡ ಕುಟುಂಬದ ಹಿನ್ನಲೆಯಿರುವವರು. ಈ ಲಾಕ್ಡೌನ್ ಸಂಧರ್ಭದಲ್ಲಿ ಅಲ್ಲಿವರೆಗೆ ಪ್ರಯಾಣಿಸಲು ಸಾದ್ಯವಿಲ್ಲವೆಂದು ಮಾನವೀಯ ಆಧಾರದಲ್ಲಿ ಮನವಿ ಮಾಡಿದಾಗ್ಯೂ ಅವರು ಕೇಳಲಿಲ್ಲ. ಕೊನೆಗೆ ನಮ್ಮ ಕಾರ್ಪೊರೇಟರ್ ಮೃತದೇಹವನ್ನು ಹಿಂದೂ ರುಧ್ರಭೂಮಿಯಲ್ಲಿ ಮಣ್ಣು ಮಾಡುವ ಕುರಿತು ಮೃತರ ಕುಟುಂಬದೊಂದಿಗೆ ಮಾತನಾಡಿದ್ದಾರೆ. ಕುಟುಂಬಸ್ಥರಿಗೆ ಹಿಂದೂ ಸ್ಮಶಾನದಲ್ಲಿ ದಫನಗೊಳಿಸುವ ಕುರಿತು ತಕರಾರಿರಲಿಲ್ಲ. ಹಾಗಾಗಿ ಹಿಂದೂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿದೆವು ಎಂದು ಸಂದೀಪ್ ಹೇಳಿದ್ದಾರೆ.
Also Read: ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!
ಪತ್ರಕರ್ತರೊಂದಿಗೆ ಮಾತನಾಡಿದ ಖಾಜಾ ಅವರ ಮಗ ಮಹಮ್ಮದ್ ಭಾಷಾ, ತಮ್ಮ ತಂದೆ ಹೃದಯಾಘಾತದಿಂದ ಮರಣವನ್ನಪ್ಪಿದ್ದು, ಎಲ್ಲಿಯೂ ನಮಗೆ ದಫನಗೊಳಿಸಲು ಸ್ಥಳ ನೀಡಲಿಲ್ಲ, ಕೊನೆಗೆ ಸ್ಥಳೀಯ ಮುಖಂಡರ ಮಧ್ಯ ಪ್ರವೇಶದೊಂದಿಗೆ ಅವರಿಗೆ ಅಂತಿಮ ವಿಧಿ ನೆರವರಿಸಲಾಯಿತೆಂದು ಹೇಳಿದು.
ಅಮಾನವೀಯ ಘಟನೆಯನ್ನು ಖಂಡಿಸಿದ ಮುಸ್ಲಿಂ ವಿಧ್ವಾಂಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಘಟನೆ ಮುಸ್ಲಿಂ ರಕ್ಷಕರೆಂದು ಬಿಂಬಿಸಿಕೊಳ್ಳುವ ನಾಯಕರಿಗೆ ಹಾಗೂ ವಿಧ್ವಾಂಸರಿಗೆ ನಾಚಿಕೆಗೇಡು, ತಕ್ಷಣವೇ ಕಮಿಟಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಚಾರಣೆ ಮುಗಿಯುವವರೆಗೆ ಎಲ್ಲರನ್ನೂ ಅಮಾನತುಗೊಳಿಸಬೇಕೆಂದು ತಹ್ರೀಕ್ ಮುಸ್ಲಿಂ ಶಾಬಾನ್ ಸಂಘಟನೆ ವಕ್ಫ್ ಬೋರ್ಡ್ ಅಧ್ಯಕ್ಷರಿಗೆ ಪತ್ರ ಬರೆದಿದೆ.
ವಿಷಯ ಅರಿತು ಸಹಾಯಕ್ಕೆ ಧಾವಿಸಿದ ಸ್ಥಳೀಯ TRS ಕಾರ್ಯಕರ್ತ ಹಾಗೂ ಕಾರ್ಪೊರೇಟರ್ ಚಂದ್ರಶೇಖರ್ಗೆ ನಾವು ಈ ವೇಳೆಯಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದು ಸಂಘಟನೆ ಹೇಳಿದೆ.
ಇದೊಂದು ನಾಚಿಕೆಗೇಡಿನ ಘಟನೆಯಾಗಿದ್ದು, ವಕ್ಫ್ ಬೋರ್ಡಿಗೆ ತೆಲಂಗಾಣದಲ್ಲಿ ಸಾಕಷ್ಟು ಜಮೀನಿದೆ, ಆದರೂ ಒಬ್ಬ ಮುಸ್ಲಿಮ್ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸ್ಥಳಾವಕಾಶವಿಲ್ಲದಾಗಿದೆಯೇ? ವಕ್ಫ್ ಬೋರ್ಡ್ ಇಂತಹ ಅವ್ಯವಸ್ಥೆಗಳಿಗೆ ಕಡಿವಾಣ ಹಾಕಲು ಹೆಲ್ಪ್ಲೈನ್ ಪ್ರಾರಂಭಿಸಬೇಕೆಂದು ಮಜ್ಲಿಸ್ ಬಚಾವೋ ತಹ್ರೀಕ್ನ ಅಮ್ಜಾದ್ ಉಲ್ಲಾ ಖಾನ್ ಹೇಳಿದ್ದಾರೆ.
ಘಟನೆಯ ಕುರಿತು ಮಾತನಾಡಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮದ್ ಸಲೀಂ ನಾವು ಇಂತಹ ಘಟನೆಗಳನ್ನು ಸಹಿಸುವುದಿಲ್ಲ, ವಕ್ಫ್ ಬೋರ್ಡ್ ಅಧೀನದಲ್ಲಿರುವ ಜಾಗಗಳೆಲ್ಲವೂ ಮುಸ್ಲಿಮರಿಗೆ ತೆರೆದಿರುತ್ತವೆ. ಅಲ್ಲಿ ಮರಣ ಹೊಂದಿದವರನ್ನು ಉಚಿತವಾಗಿ ಅಂತ್ಯಸಂಸ್ಕಾರ ಮಾಡಬಹುದೆಂದು ಹೇಳಿದ್ದಾರೆ.