ಕರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬೈಕುಲ್ಲಾ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತೆಯರಾದ ಸುಧಾ ಭಾರದ್ವಾಜ್ ಮತ್ತು ಶೋಮಾ ಸೇನ್ ಅವರನ್ನು ಬಿಡುಗಡೆ ಮಾಡಬೇಕು ಎಂದು ದೇಶದ 600ಕ್ಕೂ ಹೆಚ್ಚು ಮಂದಿ ಖ್ಯಾತನಾಮರು ಆಗ್ರಹಿಸಿದ್ದಾರೆ.
ಬೈಕುಲ್ಲಾ ಜೈಲಿನ ವೈದ್ಯರಿಗೆ ಕರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಕೂಡಲೇ ಈ ಕ್ರಮಕೈಗೊಳ್ಳುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಇಂದಿರಾ ಜೈಸಿಂಗ್, ರೊಮಿಲಾ ಥಾಪರ್, ನ್ಯಾ. ಪಿ ಬಿ ಸಾವಂತ್, ಬೃಂದಾ ಕಾರಟ್, ಮಲ್ಲಿಕಾ ಸಾರಾಭಾಯ್, ಅರುಣಾ ರಾಯ್, ತೀಸ್ತಾ ಸೆಟಲ್ವಾಡ್, ಬಿನಾಯಕ್ ಸೇನ್, ತುಷಾರ್ ಗಾಂಧಿ, ಜೋಯಾ ಹಸನ್ ಸೇರಿದಂತೆ 656 ಮಂದಿ ವಿವಿಧ ಕ್ಷೇತ್ರಗಳ ಉದಾರವಾದಿ ಜನಪರ ವ್ಯಕ್ತಿಗಳು ದನಿ ಎತ್ತಿವೆ.
ರಾಷ್ಟ್ರೀಯ ಮಹಿಳಾ ಆಯೋಗ ಕಳೆದ ಏಪ್ರಿಲ್ ನಲ್ಲಿಯೇ ದೇಶದ ಎಲ್ಲಾ ಮಹಿಳಾ ಬಂಧಿಖಾನೆಗಳಲ್ಲಿ ಇರುವ ವಿಚಾರಣಾಧೀನ ಕೈದಿಗಳನ್ನು ಕೂಡಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಆ ಮೂಲಕ ಜೈಲುಗಳಲ್ಲಿ ದಟ್ಟಣೆ ಕಡಿಮೆ ಮಾಡುವ ಮೂಲಕ ಕರೋನಾ ಹರಡುವ ಅಪಾಯದಿಂದ ಜೈಲುಗಳನ್ನು ಪಾರುಮಾಡಬೇಕು ಎಂದು ಹೇಳಿತ್ತು. ಜೊತೆಗೆ ಇದೀಗ ಮುಂಬೈನ ಬೈಕುಲ್ಲಾ ಜೈಲಿನ ವೈದ್ಯರಿಗೇ ಈಗ ಕರೋನಾ ದೃಢಪಟ್ಟಿದೆ. ಆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಜೈಲುಗಳಲ್ಲಿ ಇರುವ ವಿಚಾರಣಾಧೀನ ಕೈದಿಗಳ ಬಿಡುಗಡೆಯ ನಿಟ್ಟಿನಲ್ಲಿ ರಚಿಸಲಾಗಿರುವ ನ್ಯಾಯಮೂರ್ತಿ ಎ ಎ ಸಯೀದ್ ನೇತೃತ್ವದ ಉನ್ನತಮಟ್ಟದ ಸಮಿತಿ ಸುಧಾ ಭಾರದ್ವಾಜ್ ಮತ್ತು ಶೋಮಾ ಸೇನ್ ಅವರನ್ನೂ ಬಿಡುಗಡೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಗಣ್ಯರು ಸಮಿತಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಜೈಲುಗಳಲ್ಲಿ ಕರೋನಾ ಸೋಂಕು ತಡೆಯುವ ಉದ್ದೇಶದಿಂದ ಜೈಲುಗಳನ್ನು ದಟ್ಟಣೆಮುಕ್ತಗೊಳಿಸಲು ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ನ್ಯಾ. ಸಯೀದ್ ಅವರ ಸಮಿತಿ ಹೇಳಿಕೆ ನೀಡಿರುವುದನ್ನು ಸ್ವಾಗತಿಸುವುದಾಗಿ ಹೇಳಿರುವ ಗಣ್ಯರು, ಹೀಗೆ ವಿಚಾರಣಾಧೀನ ಕೈದಿಗಳ ಬಿಡುಗಡೆಯ ವೇಳೆ, ಆ ಮಾನವೀಯ ನೆಲೆಯ ನಿರ್ಧಾರ ಎಲ್ಲರಿಗೂ ಅನ್ವಯವಾಗುವಂತೆ ನೋಡಿಕೊಳ್ಳಬೇಕು. ರಾಜಕೀಯ ಕೈದಿಗಳನ್ನು ಸೇರಿ, ಎಲ್ಲಾ ಬಗೆಯ ಅಪರಾಧ ಹಿನ್ನೆಲೆಯವರನ್ನೂ ಈ ವಿಷಯದಲ್ಲಿ ಸಮಾನವಾಗಿ ಪರಿಗಣಿಸಬೇಕು. ಯಾವುದೇ ತಾರತಮ್ಯ ಮಾಡದೇ ಎಲ್ಲಾ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದೂ ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬೈಕುಲ್ಲಾ ಜೈಲಿನಲ್ಲಿ ಕರೋನಾ ಹರಡಿರುವ ವರದಿಗಳ ಹಿನ್ನಲೆಯಲ್ಲಿ ಗಣ್ಯರು ಈ ಮನವಿ ಸಲ್ಲಿಸಿದ್ದು, ಎಲ್ಲಾ ವಿಚಾರಣಾಧೀನ ಕೈದಿಗಳ ಜೀವವೂ ಅಮೂಲ್ಯ. ಅದರಲ್ಲೂ ಸೋಂಕಿಗೆ ಸುಲಭವಾಗಿ ಬಲಿಯಾಗಬಹುದಾದ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು, ವಯಸ್ಕರು ಮತ್ತು ನಿಶಕ್ತರನ್ನು ಆದ್ಯತೆಯ ಮೇಲೆ ಪರಿಗಣಿಸಬೇಕಿದೆ ಎಂದು ಸಮಿತಿಗೆ ಒತ್ತಾಯಿಸುವುದಾಗಿ ಹೇಳಿರುವ ಗಣ್ಯರು, ವಿಶೇಷವಾಗಿ ಸುಧಾ ಮತ್ತು ಶೋಮಾ ಅವರ ಅನಾರೋಗ್ಯ ಮತ್ತು ವಯಸ್ಸಿನ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.
“ಕಾನೂನು ಪ್ರಕಾರ, ಆರೋಪ ಸಾಬೀತಾಗದ ಎಲ್ಲಾ ವಿಚಾರಾಧೀನ ಕೈದಿಗಳು ಅಮಾಯಕರೇ. ವಿಶೇಷ ಕಾನೂನಿನಡಿ ಬಂಧಿತರಾದವರು ಕೂಡ ಇದಕ್ಕೆ ಹೊರತಲ್ಲ. ಹಾಗಾಗಿ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್ ಅಡಿ ಬಂಧಿತರಾದವರಂತೆಯೇ ಈ ಕಾಯ್ದೆಯಡಿ ಬಂಧಿತರಿಗೂ ಈ ವಿನಾಯ್ತಿ ಮತ್ತು ಔದಾರ್ಯ ತೋರಬೇಕಿದೆ” ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
“ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣಗಳ ಅಡಿ 2018ರ ಆಗಸ್ಟ್ 28ರಂದು ಬಂಧಿತರಾಗಿರುವ 58 ವರ್ಷದ ಸುಧಾ ಭಾರದ್ವಾಜ್ ಅವರಿಗೆ ಹೈಪರ್ ಟೆನ್ಷನ್, ಮಧುಮೇಹ, ಅಸ್ತಮಾ, ಟ್ಯುಬರ್ಕ್ಯುಲೊಸಿಸ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿವೆ. ಅದೇ ಪ್ರಕರಣದಡಿ 2018ರ ಜೂನ್ 6ರಂದು ಬಂಧಿತರಾಗಿರುವ 62 ವರ್ಷ ವಯಸ್ಸಿನ ಶೋಮಾ ಸೇನ್ ಅವರಿಗೂ ಇಂತಹದ್ದೇ ಗಂಭೀರ ಆರೋಗ್ಯ ಸಮಸ್ಯೆಗಳಿದ್ದು, ಅವರು ಅಧಿಕ ರಕ್ತದೊತ್ತಡ, ಸಂಧಿವಾತ, ಗ್ಲೂಕೊಮಾ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರಿಬ್ಬರೂ ಕರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುವ ಅಪಾಯಕಾರಿ ಗುಂಪಿನ ಜನರಲ್ಲಿ ಸೇರಿದ್ದಾರೆ. ಜೊತೆಗೆ ಇಬ್ಬರೂ ಈವರೆಗೆ ವಿಚಾರಣಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ಅವರಿಗೆ ವಿಧಿಸಿರುವ ನಿರ್ಬಂಧ ಮತ್ತು ಕಾನೂನುಗಳನ್ನು ತಪ್ಪದೇ ಪಾಲಿಸಿದ್ದಾರೆ. ಜಗತ್ತಿನಾದ್ಯಂತ ಜೈಲುಗಳಲ್ಲಿ ಕರೋನಾ ಹಿನ್ನೆಲೆಯಲ್ಲಿ ಹಲವು ಮಾನವೀಯ ರಿಯಾಯ್ತಿ ಮತ್ತು ವಿನಾಯ್ತಿಗಳನ್ನು ಪಾಲಿಸಲಾಗುತ್ತಿದೆ. ವಿಚಾರಣಾಧೀನ ಕೈದಿಗಳನ್ನು ಅವರ ಮೇಲಿನ ಪ್ರಕರಣಗಳ ಹಿನ್ನೆಲೆ, ಗಂಭೀರತೆಯನ್ನು ಬದಿಗೊತ್ತಿ ಮಾನವೀಯ ನೆಲೆಯ ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಈ ಇಬ್ಬರು ಸಾಮಾಜಿಕ ಹೋರಾಟಗಾರರನ್ನು ಕೂಡ ಅದೇ ನೆಲೆಯ ಮೇಲೆ ಬಿಡುಗಡೆ ಮಾಡಬೇಕು” ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ವಿಷಯದಲ್ಲಿ ನಿಷ್ಪಕ್ಷಪಾತಿ ಮತ್ತು ಉದಾರವಾದಿ ನಿಲುವು ತಳೆಯುವ ಮೂಲಕ ಸಮಿತಿ, ಮಾನವೀಯ ಮಾದರಿಯ ನಡೆ ಅನುಸರಿಸಬೇಕು ಮತ್ತು ಎಲ್ಲಾ ವಿಚಾರಣಾಧೀನ ಕೈದಿಗಳ ಜೀವ ಅಮೂಲ್ಯ ಎಂಬುದನ್ನು ಸಾರಬೇಕು ಎಂದೂ ಹೇಳಿರುವ ವಿಚಾರವಾದಿಗಳು, ಮಹಾರಾಷ್ಟ್ರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ಸಂಜಯ್ ಚಹಾಂದೆ ಹಾಗೂ ಡಿಜಿಪಿ ಎಸ್ ಎನ್ ಪಾಂಡೆ ಅವರಿಗೂ ಮನವಿ ಮಾಡಿದ್ದಾರೆ.
ಭೀಮಾ ಕೋರೆಗಾಂವ್ ಗಲಭೆಗೆ ಸಂಬಂಧಿಸಿದಂತೆ ಎಲ್ಗಾರ್ ಪರಿಷತ್ ಸಂಪರ್ಕದೊಂದಿಗೆ ಸಂಚು ರೂಪಿಸಿದ ಆರೋಪದ ಮೇಲೆ ಸುಧಾ ಮತ್ತು ಶೋಮಾ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಕರೋನಾ ಸೋಂಕು ತಗಲುವ ಅಪಾಯವಿರುವುದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಸೇನ್ ಅವರ ಸಲ್ಲಿಸಿದ್ದ ಮೇಲ್ಮನವಿಯನ್ನು ಕಳೆದ ಮಾರ್ಚಿನಲ್ಲಿ ಮುಂಬೈ ಹೈಕೋರ್ಟ್ ವಜಾ ಮಾಡಿತ್ತು.
ಇದೇ ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಪ್ರಕರಣದ ವಿಚಾರಣೆ ನಡೆಸುತ್ತಿರುವ ಎನ್ ಐಎ ಕಚೇರಿಯಲ್ಲಿ ಶರಣಾಗಿರುವ ವಿಚಾರವಾದಿ ಮತ್ತು ಉಪನ್ಯಾಸಕ ಪ್ರೊ ಆನಂದ್ ತೇಲ್ತುಂಬ್ದೆ ಅವರ ಬಿಡುಗಡೆಗೂ ಆಗ್ರಹಿಸಿ ಕಳೆದ ಅವರ ದೇಶದ ಪ್ರಮುಖ ವಿಚಾರವಾದಿಗಳು, ಸಾಹಿತಿ- ಕಲಾವಿದರು, ಹೋರಾಟಗಾರರು ಆನ್ ಲೈನ್ ಅಭಿಯಾನ ನಡೆಸಿದ್ದರು. ಇಡೀ ಪ್ರಕರಣದ ತನಿಖೆಯಲ್ಲಿ ಎನ್ ಐಎ ನಡೆ ಮತ್ತು ಮಹಾರಾಷ್ಟ್ರ ಪೊಲೀಸರು ಹಿಂದಿನ ಬಿಜೆಪಿ ಸರ್ಕಾರದ ಆಣತಿಯಂತೆ ನಡೆಸಿದ ತನಿಖೆಯ ಬಗ್ಗೆಯೇ ದೇಶದ ಉದ್ದಗಲಕ್ಕೆ ಹಲವು ಅನುಮಾನಗಳು, ಶಂಕೆಗಳು ವ್ಯಕ್ತವಾಗಿದ್ದವು. ಪ್ರಮುಖವಾಗಿ ಅತ್ಯಾಧುನಿಕ ಸ್ಪೈ ಬಗ್ ಬಳಕೆ ಮೂಲಕ ಆರೋಪಿತರ ಕಂಪ್ಯೂಟರಿನ ಮತ್ತು ಇಮೇಲ್ ಮಾಹಿತಿಗಳನ್ನು ತಿರುಚಿ, ಅವರ ವಿರುದ್ಧ ನಕಲಿ ಸಾಕ್ಷ್ಯಗಳನ್ನು ಸೃಷ್ಟಿ ಮಾಡಿದ ಆರೋಪ ಕೂಡ ಮಹಾರಾಷ್ಟ್ರ ಪೊಲೀಸರ ವಿರುದ್ಧ ಕೇಳಿಬಂದಿತ್ತು.
ಇಡೀ ದೇಶದ ಗಮನ ಸೆಳೆದಿದ್ದ ಈ ಪ್ರಕರಣ, ಸದ್ಯ ಮಹಾರಾಷ್ಟ್ರ ಪೊಲೀಸರಷ್ಟೇ ಅಲ್ಲದೆ, ಸ್ವತಃ ಎನ್ ಐಎಯ ತನಿಖೆಯ ವಿಶ್ವಾಸಾರ್ಹತೆಯನ್ನು ಪಣಕ್ಕಿಟ್ಟಿದೆ. ಆ ಹಿನ್ನೆಲೆಯಲ್ಲಿ 650ಕ್ಕೂ ಹೆಚ್ಚು ಮಂದಿ ವಿವಿಧ ಕ್ಷೇತ್ರದ ಗಣ್ಯರು, ಸಾಮಾಜಿಕ ಕಾಳಜಿಯ ವ್ಯಕ್ತಿಗಳು ಇದೀಗ ಸುಧಾ ಭಾರದ್ವಾಜ್ ಮತ್ತು ಶೋಮಾ ಸೇನ್ ಅವರ ಬಿಡುಗಡೆಗೆ ಮಾಡಿರುವ ಮನವಿ ಕೂಡ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.